KN/Prabhupada 1071 - ನಾವು ಭಗವಂತನೊಡನೆ ಸಂಗ ಮಾಡಿದರೆ, ಅವನೊಡನೆ ಸಹಕರಿಸಿದರೆ, ಆಗ ನಾವು ಸುಖವಾಗಿರುತ್ತೇವೆ



660219-20 - Lecture BG Introduction - New York

ನಾವು ಕೃಷ್ಣನ ಹೆಸರನ್ನು ಹೇಳಿದಾಗ ಯಾವುದೇ ಒಂದು ಪಂಥದವರು ಕೊಟ್ಟಿರುವ ಹೆಸರನ್ನು ಹೇಳುತ್ತಿಲ್ಲ. ಕೃಷ್ಣ ಎಂದರೆ ಅತ್ಯುನ್ನತ ಆನಂದ. ಭಗವಂತನೇ ಎಲ್ಲಾ ಆನಂದದ ಸಾಗರ, ಎಲ್ಲಾ ಆನಂದದ ಭಂಡಾರ ಎಂದು ಧೃಢಪಡಿಸಿದೆ. ನಾವೆಲ್ಲ ಆನಂದಕ್ಕಾಗಿ ಹಾತೊರೆಯುತ್ತಿದ್ದೇವೆ. ಆನಂದಮಯೋಭ್ಯಾಸಾತ್ (ವೇದಾಂಥ ಸೂತ್ರ 1.1.12). ಭಗವಂತನು ಹಾಗೂ ಜೀವಿಗಳು ಪ್ರಜ್ನಾಭರಿತರು. ನಮ್ಮ ಪ್ರಜ್ಞೆ ಆನಂದವನ್ನು ಅರಸುತ್ತದೆ. ಭಗವಂತನು ಸದಾ ಆನಂದಮಯನು. ನಾವು ಭಗವಂತನೊಂದಿಗೆ ಸೇರಿದರೆ, ಅವನೊಡನೆ ಸಹಕರಿಸಿದರೆ, ಮತ್ತು ಅವನ ಸಹವಾಸದಲ್ಲಿ ಭಾಗಿಗಳಾದರೆ ನಾವು ಆನಂದರಾಗಿರುತ್ತೇವೆ. ಭಗವಂತನು ಆನಂದಮಯವಾದ ತನ್ನ ಲೀಲೆಗಳನ್ನು ವೃಂದಾವನದಲ್ಲಿ ತೋರಲು ಈ ಮರ್ತ್ಯ ಜಗತ್ತಿಗೆ ಇಳಿದು ಬರುತ್ತಾನೆ. ಶ್ರೀ ಕೃಷ್ಣನು ವೃಂದಾವನದಲ್ಲಿರುವಾಗ ಅವನ ಗೋಪ ಸ್ನೇಹಿತರೊಡನೆ, ಅವನ ಸಖಿಯರೊಡನೆ, ವೃಂದಾವನದ ಇತರ ಸಹವಾಸಿಗಳೊಡನೆ ಮತ್ತು ಗೋವುಗಳೊಡನೆ ಅವನ ಲೀಲೆಗಳು ಮತ್ತು ಅವನ ಗೋಚರಣ ಲೀಲೆಗಳು ಆನಂದಮಯವಾಗಿದ್ದವು. ಇಡೀ ವೃಂದಾವನದ ಜನತೆ ಕೃಷ್ಣನ ಹಿಂದೆ ಇದ್ದರು. ಅವರಿಗೆ ಕೃಷ್ಣನ ಬಿಟ್ಟು ಬೇರೇನೂ ತಿಳಿದಿರಲಿಲ್ಲ್ಲ. ಆದರೆ ಶ್ರೀ ಕೃಷ್ಣನು ತನ್ನ ತಂದೆ ನಂದ ಮಹಾರಾಜನು ದೇವತೆಯಾದ ಇಂದ್ರನನ್ನು ಪೂಜೆ ಮಾಡಬಾರದೆಂದು ನಿರ್ಬಂದಿಸಿದನು. ಏಕೆಂದರೆ ಜನರು ದೇವೋತ್ತಮ ಪರಮ ಪುರುಷನನ್ನು ಬಿಟ್ಟು ಯಾವ ದೇವತೆಯನ್ನೂ ಪೂಜಿಸಬಾರದೆಂದು ತೋರಿಸಲು ಕೃಷ್ಣನು ಬಯಸಿದ. ಏಕೆಂದರೆ ಜೀವನದ ಕಟ್ಟಕಡೆಯ ಗುರಿ ಭಗವಂತನ ನಿವಾಸಕ್ಕೆ ಹಿಂದಿರುಗುವುದು. ಕೃಷ್ಣನ ಧಾಮವನ್ನು ಭಗವದ್ಗೀತೆಯ 15ನೇ ಅಧ್ಯಾಯದ 6ನೇ ಶ್ಲೋಕದಲ್ಲಿ ವರ್ಣಿಸಿದೆ. ನಾ ತದ್ ಭಾಸಯತೆ ಸೂರ್ಯೋ ನಾ ಶಶಾಂಕೋ ನಾ ಪಾವಕಃ ಯಾದ್ ಗತ್ವಾ ನಾ ನಿವರ್ತಾಂತೆ ತದ್ ಧಾಮ ಪರಮಂ ಮಮ ಆಧ್ಯಾತ್ಮಿಕ ಆಕಾಶದ ವರ್ಣನೆ ಇಲ್ಲಿದೆ. ನಮಗೆ ಆಕಾಶ ಎಂದರೆ ಐಹಿಕ ಪರಿಕಲ್ಪನೆ ಇದೆ. ಆದ್ದರಿಂದ ನಾವು ಸೂರ್ಯ, ಚಂದ್ರ, ನಕ್ಷತ್ರಗಳು ಈ ರೀತಿ ಯೋಚಿಸುತ್ತೇವೆ ಆದರೆ ಆಧ್ಯಾತ್ಮಿಕ ಆಕಾಶಕ್ಕೆ ಸೂರ್ಯನ ಅಗತ್ಯವಿಲ್ಲ. ನಾ ತದ್ ಭಾಸಯತೆ ಸೂರ್ಯೋ ನಾ ಶಶಾಂಕೋ ನಾ ಪಾವಕಃ ಆ ಆಧ್ಯಾತ್ಮಿಕ ಆಕಾಶಕ್ಕೆ ಚಂದ್ರನ ಅಗತ್ಯವೂ ಇಲ್ಲ. ನಾ ಪಾವಕಃ ಎಂದರೆ ಬೆಳಕಿಗಾಗಿ ವಿದ್ಯುತ್ತಿನ ಅಥವಾ ಬೆಂಕಿಯ ಅಗತ್ಯವೂ ಇಲ್ಲ. ಏಕೆಂದರೆ ಆಧ್ಯಾತ್ಮಿಕ ಆಕಾಶವು ಬ್ರಹ್ಮಜ್ಯೋತಿಯಿಂದ ಪ್ರಜ್ವಲಿಸುತ್ತಿದೆ. ಬ್ರಹ್ಮಜ್ಯೋತಿ, ಯಸ್ಯ ಪ್ರಭ (ಬ್ರಹ್ಮ ಸಂಹಿತೆ 5.40) ಎಂದರೆ ಭಗವಂತನಿಂದ ಹೊರಸೂಸುತ್ತಿರುವ ಕಿರಣಗಳು. ಈಗ ಜನರು ಇತರ ಗ್ರಹಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಭಗವಂತನ ಧಾಮವನ್ನು ಅರ್ಥಮಾಡಿಕೊಳ್ಳುವುದು ಕಷ್ಠವಿಲ್ಲ. ಆಧ್ಯಾತ್ಮಿಕ ಆಕಾಶದಲ್ಲಿ ಭಗವಂತನ ಧಾಮವನ್ನು ಗೋಲೋಕ ಎನ್ನುತ್ತಾರೆ. ಬ್ರಹ್ಮ ಸಂಹಿತೆಯಲ್ಲಿ ಹೀಗೆ ಹೇಳಿದ್ದಾರೆ. ಗೋಲೋಕ ಏವ ನಿವಸತಿ ಅಖಿಲಾತ್ಮ ಭೂತೋ (ಬ್ರ ಸಂ 5.37) ಭಗವಂತನು ನಿರಂತರವಾಗಿ ತನ್ನ ನಿವಾಸವಾದ ಗೋಲೋಕದಲ್ಲಿದ್ದರೂ ಅವನು ಅಖಿಲಾತ್ಮ ಭೂತಃ, ಅವನನ್ನು ಇಲ್ಲಿಂದಲೇ ತಲುಪಬಹುದು. ಇದಕ್ಕಾಗಿ ತನ್ನ ನಿಜ ರೂಪವಾದ ಸಚ್ಚಿದಾನಂದ ವಿಗ್ರಹವನ್ನು ತೋರಿಸಲು ಇಳಿದು ಬರುತ್ತಾನೆ. ಆದ್ದರಿಂದ ನಾವು ಕಲ್ಪನೆ ಮಾಡಿಕೊಳ್ಳುವ ಅಗತ್ಯವಿಲ್ಲ.