KN/Prabhupada 0054 - ಎಲ್ಲರು ಕೃಷ್ಣನಿಗೆ ಕೇವಲ ತೊಂದರೆ ಕೊಡುತ್ತಿದ್ದೇವೆ
ಆದ್ಧರಿಂದ, ಮಾಯಾವಾದಿಗಳು ಅಂತಿಮ ಸತ್ಯ ನಿರಾಕಾರ ಎಂದು ಸಾಭೀತು ಪಡಿಸಲು ಬಯಸುತ್ತಾರೆ. ಆದ್ದರಿಂದ ಕೃಷ್ಣ ನಿಮಗೆ ಬುದ್ಧಿಯನ್ನು ನೀಡುತ್ತಾನೆ, "ಹೌದು, ಇದನ್ನು ನೀನು ಮುಂದಿಡು. ಈ ತರ್ಕವನ್ನು, ಈ ತರ್ಕವನ್ನು, ಆ ತರ್ಕವನ್ನು ಮುಂದಿಡು". ಅಂತೆಯೇ, ಕೃಷ್ಣನು ನೀಡುತ್ತಾನೆ... ದೇವರು ಹೇಗೆ ಕೆಲಸ ಮಾಡುತ್ತಾನೆ ಎಂಬುದಕ್ಕೆ ಬಂಗಾಳಿಯಲ್ಲಿ ಒಂದು ನಾಣ್ನುಡಿ ಇದೆ, ಅದೇನೆಂದರೆ ಒಬ್ಬ ಮನುಷ್ಯ, ಗೃಹಸ್ಥ, ದೇವರಲ್ಲಿ ಬೇಡುತ್ತಾನೆ, "ನನ್ನ ಪ್ರೀತಿಯ ದೇವರೇ, ಈ ರಾತ್ರಿ ನನ್ನ ಮನೆಯಲ್ಲಿ ಯಾವುದೇ ಕಳ್ಳತನ, ದರೋಡೆ ಆಗದಿರಲಿ. ದಯವಿಟ್ಟು ನನ್ನನ್ನು ಕಾಪಾಡು". ಹೀಗೆ ಒಬ್ಬ ಮನುಷ್ಯ ಈ ರೀತಿಯಾಗಿ ಬೇಡುತ್ತಿದ್ದಾನೆ. ಇನ್ನೊಬ್ಬ ಮನುಷ್ಯ, ಕಳ್ಳನು, ಬೇಡುತ್ತಾನೆ, "ನನ್ನ ಪ್ರೀತಿಯ ದೇವರೇ, ಆ ಮನೆಯಲ್ಲಿ ಈ ರಾತ್ರಿ ನಾನು ದರೋಡೆ ಮಾಡುತ್ತೇನೆ. ಏನಾದರು ಸಿಗುವಂತೆ ದಯೆಯಿಟ್ಟು ನನಗೆ ಸಹಾಯ ಮಾಡು". ಈಗ, ಕೃಷ್ಣನ ಸ್ಥಿತಿಯೇನು? (ನಗು) ಎಲ್ಲರ ಹೃದಯದಲ್ಲಿ ಕೃಷ್ಣನಿದ್ದಾನೆ. ಆದ್ದರಿಂದ ಕೃಷ್ಣನು ಎಷ್ಟೋ ಬೇಡಿಕೆಗಳನ್ನು ಪೂರೈಸಬೇಕಾಗುತ್ತದೆ. ದರೋಡೆಕೋರ, ಕಳ್ಳ ಹಾಗು ಗೃಹಸ್ಥ, ಹೀಗೆ ಎಷ್ಟೋ ಪ್ರಾರ್ಥನೆಗಳು. ಆದ್ದರಿಂದ ಕೃಷ್ಣನ ಹೊಂದಾಣಿಕೆ… ಆದರೂ ಅವನು… ಅದು ಕೃಷ್ಣನ ಜಾಣ್ಮೆಯೆಂದರೆ, ಹೇಗೆ ಹೊಂದಿಕೊಳುತ್ತಾನೆ ಎಂಬುದು. ಎಲ್ಲರಿಗು ಸ್ವಾತಂತ್ರ್ಯ ಕೊಡುತ್ತಾನೆ. ಹಾಗು ಸೌಲಭ್ಯಗಳು ಎಲ್ಲರಿಗು ಸಿಗುತ್ತದೆ, ಆದರೆ ಸ್ವತಃ ಚಿಂತೆಯಲ್ಲಿರುತ್ತಾನೆ. ಆದ್ದರಿಂದ ಕೃಷ್ಣ ತನ್ನ ಭಕ್ತರಿಗೆ ತಿಳಿಸುತ್ತಾನೆ, “ಯಾವ ಯೋಜನೆಯನ್ನೂ ಮಾಡಬೇಡ. ಧೂರ್ತ, ಅವಿವೇಕಿ, ನನಗೆ ಕಾಟ ಕೊಡಬೇಡ. (ನಗು) ದಯವಿಟ್ಟು ನನ್ನಲ್ಲಿ ಶರಣಾಗತನಾಗು. ನನ್ನ ಯೋಜನೆಯಡಿಯಲ್ಲಿ ನಡೆ; ಸಂತೋಷವಾಗಿರುವೆ. ನೀನು ಯೋಜನೆಮಾಡುತ್ತಿದ್ದಿಯಾ, ದುಃಖ ಪಡುತ್ತಿದ್ದಿಯ; ನಾನೂ ದುಃಖ ಪಡುತ್ತೇನೆ. (ನಗು). ನಾನೂ ದುಃಖ ಪಡುತ್ತೇನೆ. ದಿನ ಹಲವಾರು ಯೋಜನೆಗಳು ಬರುತ್ತಿವೆ, ಮತ್ತು ನಾನು ಅವುಗಳನ್ನು ಪೂರೈಸಬೇಕಿದೆ.” ಆದರೆ ಅವನು ಕರುಣಾಮಯಿ. ಯೇ ಯತಾ ಮಾಮ್ ಪ್ರಪದ್ಯಂತೆ ತಾಮ್ಸ್… (ಭ.ಗೀ 4.11).
ಆದ್ದರಿಂದ ಕೃಷ್ಣನ ಭಕ್ತರನು ಬಿಟ್ಟು ಬೇರೆ ಎಲ್ಲರು ಕೃಷ್ಣನಿಗೆ ಕೊಡುವುದು ಕೇವಲ ತೊಂದರೆ, ತೊಂದರೆ, ತೊಂದರೆ… ಆದ್ದರಿಂದ ಅವರನ್ನು ದುಶ್ಕೃತಿನ ಎನ್ನುತ್ತಾರೆ. ದುಶ್ಕೃತಿನ, ಅತ್ಯಂತ ಧೂರ್ತ, ಧೂರ್ತರು. ಯಾವ ಯೋಜನೇಯೂ ಮಾಡಬೇಡ. ಕೃಷ್ಣನ ಯೋಜನೆಯನ್ನು ಸ್ವೀಕರಿಸು. ಇಲ್ಲವಾದರೆ ಕೃಷ್ಣನಿಗೆ ಕೇವಲ ತೊಂದರೆ ಕೊಟ್ಟಂತೆ. ಆದ್ದರಿಂದ ಒಬ್ಬ ಭಕ್ತ ತನ್ನ ಸಂರಕ್ಷಣೆಗೋಸ್ಕರವೂ ಕೂಡ ಬೇಡುವುದಿಲ್ಲ. ಅವನೇ ಪರಿಶುದ್ದ ಭಕ್ತ. ಅವನು ತನ್ನ ಕನಿಷ್ಠ ಸಂರಕ್ಷಣೆಗೂ ಕೂಡ ಕೃಷ್ಣನಿಗೆ ತೊಂದರೆ ಕೊಡುವುದಿಲ್ಲ. ಸಂರಕ್ಷಣೆ ಇಲ್ಲದಿದ್ದರೆ, ಅವನು ನರಳುತ್ತಾನೆ, ಉಪವಸಿಸುತ್ತಾನೆ; ಆದರು ಕೃಷ್ಣನನ್ನು ಕೇಳುವುದಿಲ್ಲ. “ಕೃಷ್ಣ, ನನಗೆ ವಿಪರೀತ ಹಸಿವು. ಸ್ವಲ್ಪ ಆಹಾರ ಕೊಡು.” ಖಂಡಿತವಾಗಿ ಕೃಷ್ಣನು ತನ್ನ ಭಕ್ತರನ್ನು ಕುರಿತು ಎಚ್ಚರದಿಂದಿರುತ್ತಾನೆ, ಆದರೆ ಕೃಷ್ಣನಿಗೆ ಯಾವ ಯೋಜನೆಯನ್ನೂ ಒಪ್ಪಿಸದಿರುವುದೇ ಭಕ್ತನ ತತ್ವವು. ಕೃಷ್ಣನು ಮಾಡಲಿ. ನಾವು ಕೇವಲ ಕೃಷ್ಣನ ಯೋಜನೆಯಂತೆ ಮಾಡೋಣ.
ನಮ್ಮ ಯೋಜನೆಯೇನು? ನಮ್ಮ ಯೋಜನೆ, ಕೃಷ್ಣ ಹೇಳುತ್ತಾನೆ, ಸರ್ವ ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರನಮ್ (ಭ. ಗೀ 18.66). ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜಿ. ಆದ್ದರಿಂದ ನಮ್ಮ ಯೋಜನೇಯೂ ಅದೇ. ನಾವು ಕೇವಲ ಕೃಷ್ಣನಿಗೋಸ್ಕರ ಪ್ರಚಾರ ಮಾಡುತ್ತಿದ್ದೇವೆ, “ನೀವು ಕೃಷ್ಣ ಪ್ರಜ್ಞಾವಂತರಾಗಿರಿ.” ನಮ್ಮ ನಿದರ್ಶನವನ್ನು ನೀಡಬೇಕು, ನಾವು ಹೇಗೆ ಕೃಷ್ಣ ಪ್ರಜ್ಞಾವಂತರಾಗುತ್ತಿದ್ದೇವೆ ಎಂದು, ಹೇಗೆ ಕೃಷ್ಣನನ್ನು ಪೂಜಿಸುತ್ತಿದ್ದೇವೆ ಎಂದು, ಹೇಗೆ ನಾವು ಕೃಷ್ಣನ ನಾಮ, ಅಲೌಕಿಕ ನಾಮವನ್ನು ಮಿಡಿಯಲು ರಸ್ತೆಗೆ ಇಳಿದಿರುವೆವು ಎಂದು. ನಾವು ಈಗ ಕೃಷ್ಣ ಪ್ರಸಾದವನ್ನು ಹಂಚುತ್ತಿರುವೆವು. ಆದಷ್ಟು ಮಟ್ಟಿಗೆ, ಜನರನ್ನು ಕೃಷ್ಣ ಪ್ರಜ್ಞಾವಂತರಾಗಲು ಆಕರ್ಷಿಸುವುದೇ ನಮ್ಮ ಕೆಲಸ. ಅಷ್ಟೆ. ಆ ಕಾರಣಕ್ಕೆ ನೀನು ಯೋಜನೆ ಮಾಡಬಹುದು ಏಕೆಂದರೆ ಅದು ಕೃಷ್ಣನ ಯೋಜನೆ. ಆದರೆ ಅದು ಕೂಡ ಕೃಷ್ಣನ ಅನುಮೋದನೆಯಿಂದ. ನೀನು ಸ್ವಂತ ತಯಾರಿಸಿದ, ಹುಟ್ಟಿಸಿಹೇಳಿದ ಯೋಜನೆ ಮಾಡಬೇಡ. ಆದ್ದರಿಂದ, ನಿಮಗೆ ಮಾರ್ಗದರ್ಶನ ಮಾಡಲು ಕೃಷ್ಣನ ಪ್ರತಿನಿಧಿಯ ಅಗತ್ಯವಿದೆ. ಅವರೇ ಆಧ್ಯಾತ್ಮಿಕ ಗುರು.
ಒಂದು ದೊಡ್ಡ ಯೋಜನೆ ಮತ್ತು ದೊಡ್ಡ ವ್ಯವಸ್ಥೆ ಇದೆ. ಆದ್ದರಿಂದ ನಾವು ಮಹಾಜನರ ಹೆಜ್ಜೆಗಳ್ಳನ್ನು ಅನುಸರಿಸಬೇಕು. ಇಲ್ಲಿ ಹೇಳಿರುವ ಹಾಗೆ, ದ್ವಾದಶೈತೆ ವಿಜಾನನೀಮೊ ಧರ್ಮಮ್ ಭಾಗವತಮ್ ಭಟಾಃ. ಅವನು ಹೇಳಿದನು, “ನಾವು ಆಯ್ಕೆಯಾದ ಮಹಾಜನಗಳು, ಕೃಷ್ಣನ ಪ್ರತಿನಿಧಿಗಳು, ಭಾಗವತ ಧರ್ಮ, ಕೃಷ್ಣ ಧರ್ಮ, ಎಂದರೇನು ಎಂದು ನಮಗೆ ತಿಳಿದಿದೆ. ದ್ವಾದಶ. ದ್ವಾದಶ. ದ್ವಾದಶ ಎಂದರೆ ಹನ್ನೆರಡು ನಾಮಗಳು, ಆಗಲೆ ಉಲ್ಲೇಖವಾಗಿದೆ: ಸ್ವಯಂಭೂರ್, ನಾರದಃ, ಶಂಭುಃ… (ಶ್ರೀ.ಭಾ 6.3.20). ನಾನು ಆಗಲೆ ವಿವರಿಸಿದ್ದೇನೆ. ಯಮರಾಜನು ಹೇಳಿದನು, “ನಾವು ಮಾತ್ರ, ಈ ಹನ್ನೆರೆಡು ಜನ, ಕೃಷ್ಣನ ಪ್ರತಿನಿಧಿಗಳು, ನಮಗೆ ಭಾಗವತ ಧರ್ಮವೇನೆಂದು ತಿಳಿದಿದೆ.” ದ್ವಾದಶೈತೆ ವಿಜಾಮಿನಃ. ವಿಜಾಮಿನಃ ಅಂದರೆ “ನಮಗೆ ತಿಳಿದಿದೆ.” ಧರ್ಮಮ್ ಭಾಗವತಮ್ ಭಟಾಃ, ಗೂಹ್ಯಮ್ ವಿಶುದ್ಧಮ್ ದುರ್ಭೊದಮ್ ಯಮ್ ಜ್ಞಾತ್ವಾಂಮೃತಮ್ ಅಶ್ನುತೆ. “ನಮಗೆ ತಿಳಿದಿದೆ.” ಆದ್ದರಿಂದ “ಮಹಾಜನೋ ಯೇನ ಗತಃ ಸ ಪಂಥಾಃ” (ಚೈ.ಚ ಮಧ್ಯ 17.186) ಎಂದು ಸೂಚಿಸಲಾಗಿದೆ. ಈ ಮಹಾಜನರು ಆದೇಶಿಸಿರುವುದೆ ಕೃಷ್ಣನನ್ನು ಅರ್ಥೈಸಿಕೊಳ್ಳಲು, ಅಥವ ಆಧ್ಯಾತ್ಮಿಕ ಮುಕ್ತಿಗೆ, ನಿಜವಾದ ದಾರಿ.
ನಾವು ಅನುಸರಿಸುವುದು ಬ್ರಹ್ಮ-ಸಂಪ್ರದಾಯ, ಮೊದಲನೇಯ ಸ್ವಯಂಭೂ. ಬ್ರಹ್ಮ. ಬ್ರಹ್ಮ, ನಂತರ ನಾರದ, ನಾರದನ ನಂತರ ವ್ಯಾಸದೇವ. ಈ ರೀತಿ, ಮಧ್ವಾಚಾರ್ಯರು, ಶ್ರೀ ಚೈತನ್ಯ ಮಹಾಪ್ರಭುಗಳು… ಹೀಗೆ. ಇಂದು, ನಾವು ಯಾರ ಹಜ್ಜೆಯ ಗುರುತನ್ನು ಅನುಸರಿಸುತ್ತೇವೋ, ಅಂದರೆ ಶ್ರೀ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಪ್ರಭುಪಾದ, ಅವರ ಜನ್ಮ ಜಯಂತಿ. ಆದ್ದರಿಂದ ಬಹಳ ಆದರದಿಂದ ಈ ತಿಥಿಯನ್ನು ಗೌರವಿಸಬೇಕು ಹಾಗು “ನಮ್ಮನ್ನು ನಿನ್ನ ಸೇವೆಯಲ್ಲಿ ತೊಡಗಿಸು” ಎಂದು ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಅವರನ್ನು ಪ್ರಾರ್ಥಿಸಬೇಕು. “ನಮಗೆ ಶಕ್ತಿ ಕೊಡು, ಯುಕ್ತಿ ಕೊಡು. ನಾವು ನಿನ್ನ ಸೇವಕನಿಂದ ಮಾರ್ಗದರ್ಶನ ಪಡೆಯುತ್ತಿದ್ದೇವೆ.” ನಾವು ಹೀಗೆ ಪ್ರಾರ್ಥಿಸಬೇಕು. ಹಾಗು ಸಾಯಂಕಾಲ ಪ್ರಸಾದ ವಿತರಣೆ ಮಾಡೋಣ.