KN/Prabhupada 0136 - ಗುರು ಪರಂಪರೆಯ ಮುಖಾಂತರ ಜ್ಞಾನವು ಪ್ರಸರಿಸುತ್ತದೆ
Lecture with Translator -- Sanand, December 25, 1975
ಆದ್ದರಿಂದ, ಭಗವಾನ್ ಎಂದರೆ ದೇವೋತ್ತಮ ಪರಮ ಪುರುಷ. ಸಂಪೂರ್ಣ ಸತ್ಯವನ್ನು ಮೂರು ಹಂತಗಳಲ್ಲಿ ಅರಿತುಕೊಳ್ಳಲಾಗುತ್ತದೆ: ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಬ್ದ್ಯತೇ (ಶ್ರೀ.ಭಾ 1.2.11). ಪರಮ ಸತ್ಯವನ್ನು ಆರಂಭದಲ್ಲಿ ನಿರಾಕಾರ ಬ್ರಹ್ಮನ್ ಎಂದು ಅರಿತುಕೊಳ್ಳಬಹುದು, ಇದು ಜ್ಞಾನಿಗಳ ಗುರಿ. ಮುಂದಿನದು, ಯೋಗಿಗಳ ಗುರಿಯಾದ ಪರಮಾತ್ಮ. ಮತ್ತು ಅಂತಿಮವಾಗಿ, ಪರಿಪೂರ್ಣ ಜ್ಞಾನದ ಮೂಲ ಮಾತು - ಒಬ್ಬ ವ್ಯಕ್ತಿ - ದೇವೋತ್ತಮ ಪರಮ ಪುರುಷ. ಪ್ರಮುಖ ವಿಷಯವೆಂದರೆ ದೇವೋತ್ತಮ ಪರಮ ಪುರುಷ. ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂದರೆ ಸೂರ್ಯನ ಗೋಳದಲ್ಲಿ ಅದರ ಪರಮ ಪರುಷನಾದ ಸೂರ್ಯ-ನಾರಾಯಣ, ಅಥವ ಸೂರ್ಯ ಗ್ರಹದ ಮುಖ್ಯ ವ್ಯಕ್ತಿ ಇದ್ದಂತೆ. ಅವನ ಹೆಸರನ್ನು ಭಗವದ್ಗೀತೆಯಲ್ಲಿಯು ಹೇಳಲಾಗಿದೆ - ವಿವಸ್ವಾನ್. ಭಗವಂತ ನಾಲ್ಕನೇ ಅಧ್ಯಾಯದಲ್ಲಿ ಹೇಳುತ್ತಾನೆ: ಇಮಂ ವಿವಸ್ವತೆ ಯೋಗಂ ಪ್ರೋಕ್ತವಾನ್ ಅಹಮ್ ಅವಯ್ಯಂ: (ಭ.ಗೀ 4.1), "ನಾನು ಮೊದಲು ಈ ವಿಜ್ಞಾನವನ್ನು, ಭಗವದ್ಗೀತೆಯ ಈ ಯೋಗ ಪದ್ಧತಿಯನ್ನು, ಸೂರ್ಯದೇವನಾದ ವಿವಸ್ವಾನನಿಗೆ ವಿವರಿಸಿದೆ." ವಿವಸ್ವಾನ್ ಮನವೇ ಪ್ರಾಹುರ್ ಮನುರ್ ಇಕ್ಷಾಕವೇ ಅಬ್ರವಿತ್. ಮತ್ತು ಸೂರ್ಯ ದೇವನಾದ ವಿವಸ್ವಾನ್ ಮನುವಿಗೆ ವಿವರಿಸಿದರು, ಮತ್ತು ಮನು ತನ್ನ ಮಗನಿಗೆ ವಿವರಿಸಿದನು. ಈ ರೀತಿಯಾಗಿ, ಗುರು ಪರಂಪರೆಯ ಮುಖಾಂತರ ಜ್ಞಾನವು ಪ್ರಸರಿಸುತ್ತದೆ. ಆದ್ದರಿಂದ, ನಾವು ಜ್ಞಾನದ ಬಗ್ಗೆ ಮಾತನಾಡುವಾಗ ಅದನ್ನು ವ್ಯಕ್ತಿಯಿಂದ ಕಲಿಯಬೇಕು. ಆದ್ದರಿಂದ ಭಗವಾನ್, ಪರಿಪೂರ್ಣ ಸತ್ಯವನ್ನು ಅರ್ಥಮಾಡಿಕೊಳ್ಳುವ ಮೂಲ ಮಾತು, ಅವನು ಇದನ್ನು ಭಗವದ್ಗೀತೆಯಲ್ಲಿ ಹೇಳುತ್ತಾನೆ.
ಆದ್ದರಿಂದ, ವ್ಯಾಸದೇವ ನಿರ್ದಿಷ್ಟವಾಗಿ ಇಲ್ಲಿ ಅರ್ಥೈಸುತ್ತಾರೆ - ಭಗವಾನ್ ಉವಾಚ. ಅವರು ಕೃಷ್ಣ ಉವಾಚ ಎಂದು ಹೇಳುವುದಿಲ್ಲ, ಏಕೆಂದರೆ ಕೆಲವೊಮ್ಮೆ ಕೃಷ್ಣನನ್ನು ಮೂರ್ಖರು ತಪ್ಪಾಗಿ ಗ್ರಹಿಸುತ್ತಾರೆ. ಆದ್ದರಿಂದ, ಭಗವಾನ್ ಉವಾಚ, ಈ ಪದದ ಅರ್ಥ ಅವನು ಏನು ಹೇಳಿದರೂ, ಯಾವುದೇ ದೋಷ ಅಥವ ಕೊರತೆಗಳಿಲ್ಲ ಎಂದು. ನಮ್ಮಂತಹ ಸಾಮಾನ್ಯ ವ್ಯಕ್ತಿಗಳಲ್ಲಿ ನಾಲ್ಕು ದೋಷಗಳಿವೆ: ಭ್ರಮೆ, ಪ್ರಮಾದ, ವಿಪ್ರಲಿಪ್ಸಾ, ಮತ್ತು ಕರ-ನಾಪಾಟವ. ಆದ್ದರಿಂದ, ದೇವೋತ್ತಮ ಪರಮ ಪರುಷ ಕೃಷ್ಣನಲ್ಲಿ, ಅಧವ ಆತ್ಮಜ್ಞಾನಿಯಲ್ಲಿ, ಕೃಷ್ಣನ ಸೇವಕರು, ಕೃಷ್ಣನನ್ನು ಅರ್ಥಮಾಡಿಕೊಂಡವರು, ಅವರಲ್ಲಿ ಯಾವುದೇ ನ್ಯೂನತೆಗಳಿಲ್ಲ. ಅವರು ಪರಿಪೂರ್ಣರು. ಈ ಕಾರಣಕ್ಕಾಗಿ ಕೃಷ್ಣನು ಆದೇಶವನ್ನು ನೀಡುತ್ತಾನೆ,
- ತದ್ ವಿದ್ಧಿ ಪ್ರಣಿಪಾತೇನ
- ಪರಿಪ್ರಶ್ನೇನ ಸೇವಯಾ
- ಉಪದೇಕ್ಷ್ಯಂತಿ ತದ್ ಜ್ಞಾನಂ
- ಜ್ಞಾನಿನಸ್ ತತ್ವ-ದರ್ಶಿನಃ
- (ಭ.ಗೀ 4.34)
ನಿಜವಾಗಿ ಸತ್ಯವನ್ನು ನೋಡಿದ ಅಥವ ಅರಿತುಕೊಂಡವನಿಂದ ನೀವು ಜ್ಞಾನವನ್ನು ಪಡೆಯಬೇಕು. ನಾವು ಅಂತಹ ವ್ಯಕ್ತಿಯನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ, ಯಾರೋ ಊಹಾಪೋಹಕ್ಕೆ ಒಳಗಾಗಿರುವವನ ಬಳಿ ಸಾರಿದರೆ, ನಮಗೆ ನಿಜವಾದ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಭ್ರಮಿತರಿಗೆ ದೇವರು ಎಂದರೇನು ಎಂದು ಅರ್ಥವಾಗುವುದಿಲ್ಲ. ಆದ್ದರಿಂದ, ಅವರು "ದೇವರು ಹೀಗಿದ್ದಾನೆ", "ದೇವರು ಹಾಗಿದ್ದಾನೆ, "ದೇವರು ಇಲ್ಲ," "ಯಾವುದೇ ರೂಪವಿಲ್ಲ", ಎನ್ನುತ್ತಾರೆ. ಈ ಎಲ್ಲಾ ಅಸಂಬದ್ಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ, ಏಕೆಂದರೆ ಅವು ಅಪರಿಪೂರ್ಣವಾಗಿವೆ. ಆದ್ದರಿಂದ, ಭಗವಾನ್ ಹೇಳಿದನು: ಅವಜಾನಂತಿ ಮಾಂ ಮೂಢಾ ಮಾನುಷಿಂ ತನುಮ್ ಆಶ್ರಿತಾಃ (ಭ.ಗೀ 9.11). ಆತನು ನಮ್ಮ ಕಲ್ಯಾಣಕ್ಕಾಗಿ ಮಾನವ ರೂಪದಲ್ಲಿ ಬರುವ ಕಾರಣ, ಮೂರ್ಖರು ಮತ್ತು ಧೂರ್ತರು ಆತನನ್ನು ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸುತ್ತಾರೆ. ಅಹಂ ಬೀಜ-ಪ್ರದಃ ಪಿತಾ (ಭ.ಗೀ 14.4), "ನಾನೇ ಬೀಜವನ್ನು ನೀಡುವ ತಂದೆ", ಎಂದು ಭಗವಾನ್ ಹೇಳಿದರೆ, ಆದ್ದರಿಂದ, ನಮ್ಮಲ್ಲಿ ಪ್ರತಿಯೊಬ್ಬರಿಗೂ ತನ್ನ ತಂದೆ ಒಬ್ಬ ವ್ಯಕ್ತಿ, ಮತ್ತು ತಂದೆಯ ತಂದೆಯೂ ಒಬ್ಬ ವ್ಯಕ್ತಿ, ಮತ್ತು ಅವನ ತಂದೆ ಒಬ್ಬ ವ್ಯಕ್ತಿ ಎಂದು ನಮಗೆ ತಿಳಿದಿರುವಾಗ ಪರಮ ಪುರುಷ ಅಥವ ಪರಮ ಪಿತ ಏಕೆ ನಿರಾಕಾರನಾಗಿರಬೇಕು? ಏಕೆ? ಆದ್ದರಿಂದ, ನಾವು ಭಗವಾನ್, ಪರಮ ಪುರುಷನಿಂದ, ಸಂಪೂರ್ಣ ಜ್ಞಾನವನ್ನು ಕಲಿಯಬೇಕು. ಆದ್ದರಿಂದ, ಈ ಭಗವದ್ಗೀತೆ ದೇವೋತ್ತಮ ಪರಮ ಪುರುಷ ನೀಡಿದಂತಹ ಸಂಪೂರ್ಣ ಜ್ಞಾನ. ನಾವು ಭಗವದ್ಗೀತೆಯಲ್ಲಿ ಒಂದು ಅಕ್ಷರ ಸಹ ಬದಲಾಯಿಸ ಬಾರದು. ಅದು ಮೂರ್ಖತನ. ಆದ್ದರಿಂದ, ನಮ್ಮ ಈ ಕೃಷ್ಣ ಪ್ರಜ್ಞೆ ಚಳುವಳಿ ಈ ತತ್ವವನ್ನು ಅನುಸರಿಸುತ್ತಿದೆ. ನಾವು ಯಾವುದೇ ಕಟ್ಟುಕತೆಗಳನ್ನು ತಯಾರಿಸುವುದಿಲ್ಲ. ದೇವೋತ್ತಮ ಪರಮ ಪುರುಷ ನೀಡಿರುವ ಸಂದೇಶವನ್ನು ನಾವು ಕೇವಲ ವಿತರಿಸುತ್ತೇವೆ. ಇದು ಪ್ರಾಯೇಣ ಪರಿಣಾಮಕಾರಿಯಾಗುತ್ತಿದೆ.