KN/Prabhupada 0177 - ಕೃಷ್ಣ ಪ್ರಜ್ಞೆಯು ಒಂದು ಸನಾತನ ಸತ್ಯ

Revision as of 01:59, 21 June 2023 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0177 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 1.15.28 -- Los Angeles, December 6, 1973

ನಾವು ನಿಕಟ ಸಂಬಂಧವನ್ನು ಹೊಂದಿದ್ದೇವೆ. ಆದ್ದರಿಂದ, ನಾವು ದೇವರೊಂದಿಗಿನ ಅಥವಾ ಕೃಷ್ಣನೊಂದಿಗಿನ ನಮ್ಮ ನಿಕಟ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಸ್ಥಿತಿಗೆ ಬಂದಾಗ, ಅದನ್ನು ಸ್ವರೂಪ-ಸಿದ್ಧಿ ಎಂದು ಕರೆಯಲಾಗುತ್ತದೆ. ಸ್ವರೂಪ-ಸಿದ್ಧಿ ಎಂದರೆ ಪರಿಪೂರ್ಣತೆಯ ಸಾಕ್ಷಾತ್ಕಾರ, ಸ್ವರೂಪ-ಸಿದ್ಧಿ. ಆದ್ದರಿಂದ, ಇಲ್ಲಿ ಸೂತ ಗೋಸ್ವಾಮಿ “ಸೌಹಾರ್ದೇನ ಗಾಢೇನ, ಶಾಂತ” ಎಂದು ಹೇಳುತ್ತಾರೆ. ಹಳೆಯ ಸ್ನೇಹಿತ ಇನ್ನೊಬ್ಬ ಹಳೆಯ ಸ್ನೇಹಿತನನ್ನು ಭೇಟಿಯಾದರೆ, ಅವರು ತುಂಬಾ ಸಂತೋಷಪಡುತ್ತಾರೆ. ಅಂತೆಯೇ, ಕಳೆದುಹೋದ ಮಗುವನ್ನು ತಂದೆ ಭೇಟಿಯಾದರೆ, ಅವನು ತುಂಬಾ ಸಂತೋಷಪಡುತ್ತಾನೆ ಮತ್ತು ಮಗುವೂ ಸಂತೋಷಪಡುತ್ತದೆ. ಗಂಡ ಮತ್ತು ಹೆಂಡತಿ ಬೇರ್ಪಟ್ಟು ಮತ್ತೆ ಭೇಟಿಯಾದರೆ ಅವರು ತುಂಬಾ ಸಂತೋಷಪಡುತ್ತಾರೆ. ಅದು ಸ್ವಾಭಾವಿಕ. ಯಜಮಾನ ಮತ್ತು ಸೇವಕನು ಅನೇಕ ವರ್ಷಗಳ ನಂತರ ಮತ್ತೆ ಭೇಟಿಯಾದರೆ ತುಂಬಾ ಸಂತೋಷಪಡುತ್ತಾರೆ. ಕೃಷ್ಣನೊಂದಿಗೆ ನಮಗೆ ಅನೇಕ ರೀತಿಯ ಸಂಬಂಧವಿದೆ — ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ, ಮತ್ತು ಮಾಧುರ್ಯ. ಶಾಂತ ಎಂದರೆ ತಟಸ್ಥ ಎಂದರ್ಥ, ಪರಮಾತ್ಮನನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ. ದಾಸ್ಯ ಎಂದರೆ ಒಂದು ಹೆಜ್ಜೆ ಮುಂದುವರಿಯುವುದು. ನಾವು "ದೇವರು ದೊಡ್ಡವನು" ಎಂದು ಹೇಳುವುದು. ಅದು ‘ಶಾಂತ’, ದೇವರ ಹಿರಿಮೆಯನ್ನು ಮೆಚ್ಚುವುದು. ಆದರೆ ಅದರಲ್ಲಿ ಯಾವುದೇ ಕ್ರಿಯೆ ಇಲ್ಲ. ಆದರೆ ನೀವು ಒಂದು ಹೆಜ್ಜೆ ಮುಂದುವರಿದಾಗ, "ದೇವರು ದೊಡ್ಡವನು. ನಾನು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ, ಮತ್ತು ಸ್ನೇಹ, ಪ್ರೀತಿ… ಬೆಕ್ಕುಗಳು, ನಾಯಿಗಳನ್ನು ಪ್ರೀತಿಸುತ್ತಿದ್ದೇನೆ. ಹಾಗಿರುವಾಗ ಎಲ್ಲರಿಗಿಂತ ಶ್ರೇಷ್ಠನಾದವವನನ್ನು ಏಕೆ ಪ್ರೀತಿಸಬಾರದು?" ಅದನ್ನು ದಾಸ್ಯ ಎನ್ನಲಾಗುತ್ತದೆ. ಭಗವಂತ ಶ್ರೇಷ್ಠನು ಎಂದು ಕೇವಲ ಭಾವಿಸಿದರೆ ಸಾಕು ಅದು ಉತ್ತಮ. ಆದರೆ ನೀವು ಸ್ವಯಂಪ್ರೇರಣೆಯಿಂದ ಮುಂದುವರಿಯುವಾಗ, "ಈಗ, ಆ ಶ್ರೇಷ್ಠನ ಸೇವೆಯನ್ನು ಏಕೆ ಮಾಡಬಾರದು?" ಸೇವೆಯಲ್ಲಿ ತೊಡಗಿರುವವರು, ಕೆಳಮಟ್ಟದ ಸೇವೆಯಿಂದ ಉನ್ನತ ಸೇವೆಗೆ ಬದಲಾಗಲು ಪ್ರಯತ್ನಿಸಲು ಬಯಸುತ್ತಾರೆ. ಸೇವೆ ಇದೆ. ಆದರೆ ಉತ್ತಮ ಸೇವೆಗಾಗಿ ಸರ್ಕಾರಿ ಕೆಲಸನ್ನು ಪಡೆಯುತ್ತಾರೆ. ಇದು ಉತ್ತಮ ಎಂದು ಅವರ ಭಾವನೆ. ಅಂತೆಯೇ, ಆ ಶ್ರೇಷ್ಠನ ಸೇವೆ ಮಾಡಲು ನಾವು ಬಯಸಿದಾಗ ಅದು ನಮಗೆ ಶಾಂತಿಯುತ ಜೀವನವನ್ನು ನೀಡುತ್ತದೆ. ಅದೇ ಶಾಂತ, ದಾಸ್ಯ.

ನಂತರ ಸ್ನೇಹದಿಂದ ಸೇವೆ. ಯಜಮಾನನಿಗೆ ಸೇವಕ ಸೇವೆ ಮಾಡುತ್ತಾನೆ, ಆದರೆ ಸೇವಕನು ತುಂಬಾ ಆಪ್ತನಾದಾಗ ಸೇವೆ ಸ್ನೇಹವಾಗುತ್ತದೆ. ನಾನು ಅಂತಹ ಪ್ರಸಂಗವನ್ನು ಕಲ್ಕತ್ತಾದಲ್ಲಿ ಕಣ್ಣಾರೆ ನೋಡಿದ್ದೇನೆ. ಡಾ. ಬೋಸ್ ಅವರ ಚಾಲಕ ಅವರ ಆಪ್ತ ಸ್ನೇಹಿತನಾಗಿದ್ದನು. ಅವರು ಕಾರಿನಲ್ಲಿ ಕುಳಿತಾಗ, ಅವರ ಕಾರಿನ ಚಾಲಕನೊಂದಿಗೆ ತನ್ನ ಮನಸ್ಸಿನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಆದ್ದರಿಂದ, ಈ ಚಾಲಕ ಅವರ ಆಪ್ತ ಸ್ನೇಹಿತನಾದನು. ಚಾಲಕನೊಂದಿಗೆ ಎಲ್ಲಾ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಕೆಲವೊಮ್ಮೆ ಹಾಗೆ ಆಗುತ್ತದೆ. ಸೇವಕನು ತುಂಬಾ ಆಪ್ತನಾದರೆ, ಯಜಮಾನನು ತನ್ನ ಮನಸ್ಸನ್ನು ತೆರೆದಿಡುತ್ತಾನೆ. ಏನು ಮಾಡಬೇಕೆಂಬುದರ ಬಗ್ಗೆ ಅವನೊಂದಿಗೆ ಚರ್ಚಿಸುತ್ತಾನೆ. ಆದ್ದರಿಂದ, ಇದನ್ನು ಸ್ನೇಹದ ನೆಲೆ ಎನ್ನಲಾಗುತ್ತದೆ. ಮತ್ತು ಇನ್ನೂ ಮುಂದುವರಿದರೆ... ತಂದೆ ಮತ್ತು ಮಗ, ತಾಯಿ ಮತ್ತು ಮಗನೊಂದಿಗಿನ ಸಂಬಂಧದಂತೆ. ಇದನ್ನು ವಾತ್ಸಲ್ಯ ಎಂದು ಕರೆಯಲಾಗುತ್ತದೆ. ಅಂತಿಮವಾಗಿ, ವೈವಾಹಿಕ ಪ್ರೀತಿ. ಆದ್ದರಿಂದ, ಈ ರೀತಿಯಾಗಿ ನಾವು ಒಂದಲ್ಲ ಒಂದು ರೀತಿಯಲ್ಲಿ ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದೇವೆ. ಪೂಜ್ಯಭಾವನೆಯಲ್ಲಿ, ಗುಲಾಮಗಿರಿಯಲ್ಲಿ, ಸ್ನೇಹಿತನಾಗಿ, ತಂದೆಯ ವಾತ್ಸಲ್ಯದಲ್ಲಿ, ಅಥವಾ ವೈವಾಹಿಕ ಪ್ರೇಮಿಯಾಗಿ. ಆದ್ದರಿಂದ, ನಾವು ಅದನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಮತ್ತು ನೀವು ಅವುಗಳಲ್ಲಿ ಯಾವುದಾದರೂ ಒಂದು ಅನ್ಯೋನ್ಯತೆಯನ್ನು ಪುನರುಜ್ಜೀವನಗೊಳಿಸಿದ ತಕ್ಷಣ ನಾವು ಸಂತೋಷಪಡುತ್ತೇವೆ, ಏಕೆಂದರೆ ಅದು ಶಾಶ್ವತವಾದದ್ದು. ಇನ್ನೊಂದು ಉದಾಹರಣೆ... ಬೆರಳು, ದೇಹದಿಂದ ಬೇರ್ಪಟ್ಟಿರುವವರೆಗು ಅದು ಸಂತೋಷವಾಗಿರುವುದಿಲ್ಲ. ಅದನ್ನು ದೇಹಕ್ಕೆ ಸೇರಿಸಿದ ತಕ್ಷಣ ಸಂತೋಷಪಡುತ್ತದೆ. ಅಂತೆಯೇ, ನಮಗೆ ಕೃಷ್ಣನೊಂದಿಗೆ ಶಾಶ್ವತ ಸಂಬಂಧವಿದೆ. ಈಗ ನಾವು ಬೇರ್ಪಟ್ಟಿದ್ದೇವೆ, ಆದರೆ ನಾವು ಮತ್ತೆ ಅವನೊಂದಿಗೆ ಸೇರಿದ ಕೂಡಲೇ ನಾವು ‘ಯೇನಾತ್ಮ ಸುಪ್ರಸೀದತಿ’ ಆಗುತ್ತೇವೆ.

ಆದ್ದರಿಂದ, ನಿಮ್ಮ ಮೂಲ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಲು ಕೃಷ್ಣ ಪ್ರಜ್ಞೆ ಆಂದೋಲನವು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಅದು ಈಗಾಗಲೇ ಇದೆ, ನಿತ್ಯ-ಸಿದ್ಧ ಕೃಷ್ಣ-ಭಕ್ತಿ. ನಮ್ಮ ಕೃಷ್ಣಪ್ರಜ್ಞೆಯು ಶಾಶ್ವತವಾದ ಒಂದು ಸತ್ಯ. ಇಲ್ಲದಿದ್ದರೆ, ಮೂರು ಅಥವಾ ನಾಲ್ಕು ವರ್ಷಗಳ ಹಿಂದೆ, ನೀವು ಯುರೋಪಿಯನ್ ಮತ್ತು ಅಮೆರಿಕನ್ ಹುಡುಗ-ಹುಡುಗಿಯರಿಗೆ ಕೃಷ್ಣ ಎಂದರೇನು ಎಂದು ತಿಳಿದಿರಲಿಲ್ಲ. ನೀವು ಕೃಷ್ಣನಿಗೆ ಏಕೆ ಅಷ್ಟೊಂದು ಆತ್ಮೀಯವಾಗಿದ್ದೀರಿ? ನೀವು ಕೃಷ್ಣನಿಗೆ ಆತ್ಮೀಯರಾಗದ ಹೊರತು, ಈ ದೇವಾಲಯದಲ್ಲಿ ಅಥವಾ ಕೃಷ್ಣನ ಮಹಿಮೆಯನ್ನು ಸಾರಲು ನಿಮ್ಮ ಅಮೂಲ್ಯವಾದ ಸಮಯವನ್ನು ತ್ಯಾಗ ಮಾಡಲು ಸಾಧ್ಯವಿಲ್ಲ. ನೀವು ಕೃಷ್ಣನ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡಿದ್ದೀರಿ. ಇಲ್ಲದಿದ್ದರೆ, ಯಾರೂ ಸಮಯವನ್ನು ವ್ಯರ್ಥ ಮಾಡುವಷ್ಟು ಮೂರ್ಖರಲ್ಲ. ಇಲ್ಲ. ಅದು ಹೇಗೆ ಸಾಧ್ಯ? ಕೃಷ್ಣ ಭಾರತೀಯ, ಕೃಷ್ಣ ಹಿಂದೂ ಎಂದು ಕೆಲವರು ಹೇಳಬಹುದು. ಹಾಗಾದರೆ, ಕ್ರೈಸ್ತರು ಏಕೆ ಆಸಕ್ತರಾಗಿದ್ದಾರೆ? ಅವರು ಹಿಂದೂಗಳೇ? ಇಲ್ಲ. ಕೃಷ್ಣನು ಹಿಂದೂವೂ ಅಲ್ಲ, ಮುಸಲ್ಮಾನನೂ ಅಲ್ಲ, ಕ್ರಿಶ್ಚಿಯನ್ನನೂ ಅಲ್ಲ. ಕೃಷ್ಣ ಕೃಷ್ಣನೇ. ಮತ್ತು ನೀವು ಕೃಷ್ಣನ ಭಾಗಾಂಶ. "ನಾನು ಹಿಂದೂ", "ನಾನು ಮುಸ್ಲಿಂ", "ನಾನು ಕ್ರಿಶ್ಚಿಯನ್", "ನಾನು ಅಮೆರಿಕನ್," "ನಾನು ಭಾರತೀಯ" — ಇವೆಲ್ಲವೂ ಕೇವಲ ಪದನಾಮಗಳು. ವಾಸ್ತವದಲ್ಲಿ ನಾನು ಆತ್ಮ, ಅಹಂ ಬ್ರಹ್ಮಾಸ್ಮಿ. ಮತ್ತು ಕೃಷ್ಣನು ಪರಬ್ರಹ್ಮ, ಪರಮ್ ಬ್ರಹ್ಮ ಪರಮ್ ಧಾಮ ಪವಿತ್ರಂ ಪರಮಂ ಭವಾನ್ (ಭ.ಗೀ 10.12).

ಆದ್ದರಿಂದ, ನಾವು ಕೃಷ್ಣನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದೇವೆ. ಅದು ಶಾಶ್ವತ ಸತ್ಯ. ಅದನ್ನು ನಾವು ಕೇವಲ ಪುನರುಜ್ಜೀವನಗೊಳಿಸಬೇಕು. ಶ್ರವಣಾದಿ-ಶುದ್ಧ-ಚಿತ್ತೆ ಕರಯೇ ಉದಯ (ಚೈ.ಚ ಮಧ್ಯ 22.107). ನಾವು ಸೃಷ್ಟಿಸಬೇಕು. ಒಬ್ಬ ಯುವಕ ಯುವತಿಯನ್ನು, ಯುವತಿ ಯುವಕನನ್ನು ಪ್ರೀತಿಸಲು ಬಯಸುವುದು ಸಹಜ. ಮತ್ತು ಅವರು ಭೇಟಿಯಾದಾಗ, ಅದು ಪುನರುಜ್ಜೀವನಗೊಳ್ಳುತ್ತದೆ. ಇದೊಂದು ಹೊಸ ಹೇರಿಕೆಯಲ್ಲ. ಈಗಾಗಲೆ ಇದೆ. ಅವರು ಆಕಸ್ಮಿಕವಾಗಿ, ಅಥವಾ ಹೇಗಾದರೂ ಸರಿ, ಸಂಪರ್ಕದಲ್ಲಿದ್ದರೆ ಪ್ರೀತಿಯ ಪ್ರವೃತ್ತಿ ಹೆಚ್ಚಾಗುತ್ತದೆ. ಪ್ರೀತಿ ಹೆಚ್ಚುತ್ತದೆ. ಆದ್ದರಿಂದ, ಕೃಷ್ಣನೊಂದಿಗಿನ ನಮ್ಮ ಸಂಬಂಧ ಸಹಜವಾದದ್ದು. ಅದು ಅಸಹಜವಲ್ಲ. ನಿತ್ಯ-ಸಿದ್ಧ. ನಿತ್ಯಸಿದ್ಧ ಎಂದರೆ ಅದು ಶಾಶ್ವತ ಸತ್ಯ. ಅದು ಕೇವಲ ಮುಚ್ಚಿಕೊಂಡಿದೆ. ಆ ಹೊದಿಕೆಯನ್ನು ತೆಗೆದುಹಾಕಬೇಕು. ಆಗ ತಕ್ಷಣವೇ ಕೃಷ್ಣನೊಂದಿಗಿನ ನಮ್ಮ ಸಹಜವಾದ ಸಂಬಂಧ ಕಾಣುತ್ತದೆ. ಅದುವೇ ಕೃಷ್ಣಪ್ರಜ್ಞೆಯ ಪರಿಪೂರ್ಣತೆ.