"ಆದ್ದರಿಂದ, ನಮ್ಮ ಭಕ್ತಿ ಪ್ರಕ್ರಿಯೆಯು ದೇವರನ್ನು ವೈಯಕ್ತಿಕವಾಗಿ ನೋಡಲು ಪ್ರಯತ್ನಿಸುವುದರ ಬಗ್ಗೆ ಅಲ್ಲ. ಕರ್ಮಿಗಳಂತೆ, ಅವರು 'ನಾವು ದೇವರನ್ನು ಕಣ್ಣಾರೆ ಕಾಣಬಹುದೆ?', ಎಂದು ಸವಾಲು ಹಾಕುತ್ತಾರೆ. ಇಲ್ಲ. ಅದು ನಮ್ಮ ಪ್ರಕ್ರಿಯೆ ಅಲ್ಲ. ನಮ್ಮ ಪ್ರಕ್ರಿಯೆಯು ವಿಭಿನ್ನವಾಗಿದೆ. ಚೈತನ್ಯ ಮಹಾಪ್ರಭು ನಮಗೆ ಕಲಿಸಿದಂತೆ, ಆಶ್ಲಿಷ್ಯ ವಾ ಪಾದ-ರತಾಂ ಪಿನಷ್ತು ಮಾಮ್ ಮರ್ಮ-ಹತಾಂ ಕರೋತು ವಾ ಅದರ್ಶನಾನ್ (ಚ.ಚೈ ಅಂತ್ಯ 20.47). ಪ್ರತಿ ಭಕ್ತನೂ ಕೃಷ್ಣನನ್ನು ನೋಡಲು ಇಷ್ಟಪಡುತ್ತಾನೆ, ಆದರೆ ಚೈತನ್ಯ ಮಹಾಪ್ರಭುಗಳು, 'ನೀನು ನನ್ನ ಮನ ಮುರಿದರೂ ಸರಿ, ಜೀವನಪರ್ಯಂತ ಅಥವಾ ಶಾಶ್ವತವಾಗಿ ಕಾಣದಿದ್ದರೂ ಪರವಾಗಿಲ್ಲ, ಆದರೂ, ನೀನೇ ನನ್ನ ಆರಾಧ್ಯ ದೈವ!', ಎಂದು ನಮಗೆ ಕಲಿಸುತ್ತಾರೆ. ಅವರೇ ಪರಿಶುದ್ಧ ಭಕ್ತರು. ಒಂದು ಹಾಡು ಇದೆ, 'ನನ್ನ ಪ್ರೀತಿಯ ಪ್ರಭು, ದಯವಿಟ್ಟು ನಿನ್ನ ಕೊಳಲಿನೊಂದಿಗೆ ನೃತ್ಯ ಮಾಡುತ್ತಾ ನನ್ನ ಮುಂದೆ ಕಾಣಿಸಿಕೋ!' ಇದು ಭಕ್ತಿಯಲ್ಲ. ಇದು ಭಕ್ತಿಯಲ್ಲ. ಜನರು ಯೋಚಿಸಬಹುದು, 'ಆಹಾ, ಅವನು ಎಷ್ಟು ದೊಡ್ಡ ಭಕ್ತ, ಕೃಷ್ಣನನ್ನು ತನ್ನ ಮುಂದೆ ನರ್ತಿಸುತ್ತಾ ಬರುವಂತೆ ಬೇಡುತ್ತಿದ್ದಾನೆ', ಎಂದು. ಇದರರ್ಥ ಕೃಷ್ಣನಿಗೆ ಆದೇಶ ಮಾಡಿದ ಹಾಗೆ. ಒಬ್ಬ ಭಕ್ತನು ಏನನ್ನೂ ಆದೇಶಿಸುವುದಿಲ್ಲ, ಅಥವಾ ಕೃಷ್ಣನಿಂದ ಏನನ್ನೂ ಕೇಳುವುದಿಲ್ಲ, ಅವನು ಕೇವಲ ಪ್ರೀತಿಸುತ್ತಾನೆ. ಅದೇ ಪರಿಶುದ್ಧ ಪ್ರೀತಿ."
|