KN/Prabhupada 0112 - ಒಂದು ವಿಷಯವನ್ನು ಫಲಿತಾಂಶದ ಮೂಲಕ ನಿರ್ಣಯಿಸಲಾಗುತ್ತದೆ



Television Interview -- July 29, 1971, Gainesville

ಸಂದರ್ಶಕ: ಮಾನ್ಯರೇ, ನೀವು 1965ರಲ್ಲಿ ಈ ದೇಶಕ್ಕೆ ಬಂದಿರಿ, ನಿಮ್ಮ ಆಧ್ಯಾತ್ಮಿಕ ಗುರುವು ನಿಮಗೆ ನೀಡಿದ ಆದೇಶದ ಮೇರೆಗೆ. ಅಂದಹಾಗೆ, ನಿಮ್ಮ ಆಧ್ಯಾತ್ಮಿಕ ಗುರು ಯಾರು?

ಪ್ರಭುಪಾದ: ನನ್ನ ಆಧ್ಯಾತ್ಮಿಕ ಗುರುವು ಓಂ ವಿಷ್ಣುಪಾದ ಪರಮಹಂಸ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಪ್ರಭುಪಾದ.

ಸಂದರ್ಶಕ: ಈಗ ನಾವು ಮಾತನಾಡುತ್ತಿದ ಪರಂಪರೆ, ಗುರು-ಶಿಷ್ಯ ಪರಂಪರೆಯ ಬಗ್ಗೆ, ಸ್ವತಃ ಕೃಷ್ಣನವರೆಗು ಹಿಂದೋಗುವ, ನಿಮ್ಮ ಆಧ್ಯಾತ್ಮಿಕ ಗುರುವು ನಿಮ್ಮ ಪೂರ್ವಾಚಾರ್ಯರೇ?

ಪ್ರಭುಪಾದ: ಹೌದು. ಗುರು-ಶಿಷ್ಯ ಪರಂಪರೆಯು ಕೃಷ್ಣನಿಂದ ಶುರುವಾಗಿ 5,000 ವರ್ಷಗಳಿಂದ ಬರುತ್ತಿದೆ.

ಸಂದರ್ಶಕ: ನಿಮ್ಮ ಆಧ್ಯಾತ್ಮಿಕ ಗುರುವು ಇನ್ನೂ ಜೀವಂತವಾಗಿದ್ದಾರೆಯೇ?

ಪ್ರಭುಪಾದ: ಇಲ್ಲ. ಅವರು 1936ರಲ್ಲಿ ನಿಧನರಾದರು.

ಸಂದರ್ಶಕ: ಹಾಗಾದರೆ ಈ ಸಮಯದಲ್ಲಿ ಜಗತ್ತಿನೆಲೆಡೆ ನೀವು ಈ ಚಳವಳಿಯ ಮುಖ್ಯಸ್ಥರೆ? ಸರಿ ಅಲ್ಲವೇ?

ಪ್ರಭುಪಾದ: ನನಗೆ ಅನೇಕ ಇತರ ಧರ್ಮ ಸಹೋದರರಿದ್ದಾರೆ, ಆದರೆ ಮೊದಲಿನಿಂದಲೂ ಇದನ್ನು ಮಾಡಲು ನನಗೆ ಆದೇಶಿಸಲಾಯಿತು. ಹಾಗಾಗಿ, ನನ್ನ ಆಧ್ಯಾತ್ಮಿಕ ಗುರುವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಅಷ್ಟೇ.

ಸಂದರ್ಶಕ: ನಿಮ್ಮನ್ನು ಈ ದೇಶಕ್ಕೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗೆ, ಕಳುಹಿಸಲಾಯಿತು. ಇದು ನಿಮ್ಮ ಪ್ರದೇಶ. ಅಲ್ಲವೇ?

ಪ್ರಭುಪಾದ: ಇಲ್ಲ, ನನ್ನ ಪ್ರದೇಶ, ಅವರು ಹೇಳಿದೇನೆಂದರೆ, "ನೀನು ಹೋಗಿ ಈ ತತ್ವವನ್ನು ಇಂಗ್ಲೀಷ್ ತಿಳಿದಿರುವ ಸಾರ್ವಜನಿಕರಿಗೆ ತಿಳಿಸು", ಎಂದು.

ಸಂದರ್ಶಕ: ಇಂಗ್ಲೀಷ್ ಮಾತನಾಡುವ ಜಗತ್ತಿಗೆ.

ಪ್ರಭುಪಾದ: ಹೌದು. ಮತ್ತು ವಿಶೇಷವಾಗಿ ಪಾಶ್ಚಿಮಾತ್ಯ ಜಗತ್ತು. ಹೌದು. ಅವರು ನನಗೆ ಹಾಗೆ ಹೇಳಿದರು.

ಸಂದರ್ಶಕ: ಮಾನ್ಯರೇ, ನೀವು ಈ ದೇಶಕ್ಕೆ ಸುಮಾರು 15, 16 ವರ್ಷಗಳ ಹಿಂದೆ ಬಂದು ಪ್ರಾರಂಭಿಸಿದಾಗ...

ಪ್ರಭುಪಾದ: ಇಲ್ಲ, ಇಲ್ಲ, 15, 16 ವರ್ಷಗಳಲ್ಲ.

ಸಂದರ್ಶಕ: 5, 6 ವರ್ಷಗಳ ಹಿಂದೆ. ಕ್ಷಮಿಸಿ. ಪ್ರಪಂಚದ ಈ ಭಾಗಕ್ಕೆ, ಧರ್ಮದ ಕೊರತೆಯಿದೆ ಎಂಬುವ ಜಗತ್ತಿನ ಭಾಗಕ್ಕೇನು ನೀವು ಬರಲಿಲ್ಲ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಅನೇಕ ಧರ್ಮಗಳಿವೆ, ಮತ್ತು ಈ ದೇಶದಲ್ಲಿ ಜನರು, ಬಹುಸಂಖ್ಯೆಯಲ್ಲಿ ನಂಬಿರುವುದೇನೆಂದರೆ, ಅವರು ಧಾರ್ಮಿಕ ಜನರು, ದೇವರನ್ನು ನಂಬುವ ಜನರು, ಯಾವುದೋ ಒಂದು ರೀತಿಯ ಧಾರ್ಮಿಕ ಅಭಿವ್ಯಕ್ತಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಮತ್ತು ನಿಮ್ಮ ಆಲೋಚನೆಯು ಏನಾಗಿತ್ತು ಎಂದು ಯೋಚಿಸುತ್ತಿದ್ದೇನೆ. ಈಗಾಗಲೇ ಜೀವಂತ ಧಾರ್ಮಿಕ ಅಭಿವ್ಯಕ್ತಿಗೆ ನೀವು ಏನನ್ನು ಸೇರಿಸಬಹುದು ಎಂದು ನೀವು ಯೋಚಿಸುತ್ತೀರುವಿರಿ, ಈ ದೇಶಕ್ಕೆ ಬಂದು ನಿಮ್ಮದೇ ಆದ ತತ್ತ್ವಶಾಸ್ತ್ರವನ್ನು ಸೇರಿಸುವ ಮೂಲಕ?

ಪ್ರಭುಪಾದ: ಹೌದು. ನಾನು ಮೊದಲು ನಿಮ್ಮ ದೇಶಕ್ಕೆ ಬಂದಾಗ ನಾನು ಬಟ್ಲರ್ನಲ್ಲಿ ಭಾರತೀಯ ಸ್ನೇಹಿತನ ಅತಿಥಿಯಾಗಿದ್ದೆ.

ಸಂದರ್ಶಕ: ಪೆನ್ಸಿಲ್ವೇನಿಯಾದಲ್ಲಿ.

ಪ್ರಭುಪಾದ: ಪೆನ್ಸಿಲ್ವೇನಿಯಾ. ಹೌದು. ಇದು ಒಂದು ಸಣ್ಣ ಕಂಪಣವಾಗಿದ್ದರೂ, ಅಲ್ಲಿ ತುಂಬಾ ಚರ್ಚುಗಳು ಇದ್ದವು ಎಂದು ಆನಂದವಾಯಿತು.

ಸಂದರ್ಶಕ: ಎಷ್ಟೋ ಚರ್ಚುಗಳು. ಹೌದು. ಹೌದು.

ಪ್ರಭುಪಾದ: ಹೌದು. ಎಷ್ಟೋ ಚರ್ಚುಗಳು. ಮತ್ತು ನಾನು ಅಲ್ಲಿನ ಅನೇಕ ಚರ್ಚುಗಳಲ್ಲಿ ಮಾತನಾಡಿದೆ. ನನ್ನ ಅತಿಥೇಯ ಅದಕ್ಕೆ ವ್ಯವಸ್ಥೆ ಮಾಡಿದರು. ಹಾಗಾಗಿ ಯಾವುದೋ ಧಾರ್ಮಿಕ ಪ್ರಕ್ರಿಯೆಯನ್ನು ಸೋಲಿಸುವ ಉದ್ದೇಶದಿಂದ ನಾನು ಇಲ್ಲಿಗೆ ಬರಲಿಲ್ಲ. ಅದು ನನ್ನ ಉದ್ದೇಶವಾಗಿರಲಿಲ್ಲ. ನಮ್ಮ ಧ್ಯೇಯವು, ಚೈತನ್ಯ ಮಹಾಪ್ರಭುಗಳ ಧ್ಯೇಯವು, ದೇವರನ್ನು ಹೇಗೆ ಪ್ರೀತಿಸಬೇಕು ಎಂದು ಎಲ್ಲರಿಗೂ ಕಲಿಸುವುದು, ಅಷ್ಟೆ.

ಸಂದರ್ಶಕ: ಆದರೆ ಸ್ವಾಮಿಗಳೆ, ನೀವು ಯಾವ ರೀತಿಯಲ್ಲಿ ಯೋಚಿಸಿದ್ದೀರಿ, ಮತ್ತು ಇದೀಗ ಯೋಚಿಸುತ್ತಿರುವಿರಿ, ನೀವು ಮಾಡುತ್ತಿರುವ ದೇವರ ಪ್ರೀತಿಯ ಬೋಧನೆಯು ವಿಭಿನ್ನವಾದ್ದದು, ಮತ್ತು ಬಹುಶಃ ಈ ದೇಶದಲ್ಲಿ ಈಗಾಗಲೇ ನಡೆಸಲಾಗುತ್ತಿದ್ದ ದೇವರ ಪ್ರೀತಿ ಬೋಧನೆಗಳಿಗಿಂತ, ಮತ್ತು ಪಾಶ್ಚಿಮಾತ್ಯ ಜಗತ್ತಿನಲ್ಲಿ ಶತಮಾನಗಳಿಂದ ನಡೆಯುತ್ತಿರುವ ಬೋಧನೆಗಳಿಗಿಂತ ಉತ್ತಮವಾಗಿದೆಯೆಂದು?

ಪ್ರಭುಪಾದ: ಅದು ಸತ್ಯ. ಯಾಕೆಂದರೆ ನಾವು ಚೈತನ್ಯ ಮಹಾಪ್ರಭುವಿನ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇವೆ. ಅವರನ್ನು ಸ್ವೀಕರಿಸಿದ್ದೇವೆ - ವೈದಿಕ ಸಾಹಿತ್ಯದ ಅಧಿಕಾರದ ಪ್ರಕಾರ - ಅವರು ಸ್ವತಃ ಕೃಷ್ಣನೆ.

ಸಂದರ್ಶಕ: ಯಾವ ಪ್ರಭು?

ಪ್ರಭುಪಾದ: ಚೈತನ್ಯ ಮಹಾಪ್ರಭು.

ಸಂದರ್ಶಕ: ಓಹ್ ಹೌದು. ಐನೂರು ವರ್ಷಗಳ ಹಿಂದೆ ಭಾರತಕ್ಕೆ ಮರಳಿಬಂದವರು ಅವರೇ ಅಲ್ಲವೇ?

ಪ್ರಭುಪಾದ: ಹೌದು. ಆದ್ದರಿಂದ ಅವರು ಸ್ವತಃ, ಕೃಷ್ಣ, ಮತ್ತು ಕೃಷ್ಣನನ್ನು ಹೇಗೆ ಪ್ರೀತಿಸಬೇಕು ಎಂದು ಕಲಿಸುತ್ತಿದ್ದಾರೆ. ಆದ್ದರಿಂದ ಅವರ ಪ್ರಕ್ರಿಯೆಯು ಅತ್ಯಂತ ಅಧಿಕೃತವಾಗಿದೆ. ಈ ಸಂಸ್ಥೆಯಲ್ಲಿ ನೀವು ಪರಿಣತರಾಗಿರುವಂತೆಯೇ. ಯಾರಾದರೂ ಏನನ್ನಾದರೂ ಮಾಡುತ್ತಿದ್ದರೆ, ನೀವು ವೈಯಕ್ತಿಕವಾಗಿ ಅವನಿಗೆ, “ಈ ರೀತಿ ಮಾಡು”, ಎಂದು ಕಲಿಸಿದರೆ ಅದು ಹೆಚ್ಚು ಅಧಿಕೃತವಾಗಿದೆ. ಆದ್ದರಿಂದ ದೇವರ ಪ್ರಜ್ಞೆಯನ್ನು, ಸ್ವತಃ ದೇವರೇ ಬೋಧಿಸುತ್ತಿದ್ದಾನೆ. ಭಗವದ್ಗೀತೆಯಂತೆಯೇ, ಕೃಷ್ಣ ಭಗವಂತ. ಅವನು ತನ್ನ ಬಗ್ಗೆ ತಾನೆ ಮಾತನಾಡುತ್ತಿದ್ದಾನೆ. ಕೊನೆಗೆ ಅವನು, "ನನ್ನ ಬಳಿಗೆ ಶರಣಾಗು, ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ", ಎಂದು ಹೇಳುತ್ತಾನೆ. ಆದರೆ ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಆದ್ದರಿಂದ ಚೈತನ್ಯ ಮಹಾಪ್ರಭು – ಹೇಗೆ ಶರಣಾಗಬೇಕು ಎಂದು ಜನರಿಗೆ ಕಲಿಸಲು, ಕೃಷ್ಣ ಮತ್ತೆ ಚೈತನ್ಯ ಮಹಾಪ್ರಭುವಾಗಿ ಬಂದನು. ಮತ್ತು ನಾವು ಚೈತನ್ಯ ಮಹಾಪ್ರಭುವಿನ ಹೆಜ್ಜೆಗಳನ್ನು ಅನುಸರಿಸುತ್ತಿರುವ ಕಾರಣ, ಈ ವಿಧಾನವು ಎಷ್ಟು ಉತ್ಕೃಷ್ಟವಾಗಿದೆ ಎಂದರೆ, ಕೃಷ್ಣನನ್ನು ಎಂದಿಗೂ ತಿಳಿದಿಲ್ಲದ ವಿದೇಶಿಯರೂ ಸಹ ಶರಣಾಗುತ್ತಿದ್ದಾರೆ. ಈ ವಿಧಾನವು ತುಂಬಾ ಪ್ರಬಲವಾಗಿದೆ. ಆದ್ದರಿಂದ ಅದು ನನ್ನ ಉದ್ದೇಶವಾಗಿತ್ತು. "ಆ ಧರ್ಮಕ್ಕಿಂತ ಈ ಧರ್ಮವು ಉತ್ತಮವಾಗಿದೆ", ಅಥವಾ, "ನನ್ನ ಪ್ರಕ್ರಿಯೆಯು ಉತ್ತಮವಾಗಿದೆ", ಎಂದು ನಾವು ಹೇಳುವುದಿಲ್ಲ. ನಾವು ಫಲಿತಾಂಶದ ಮೂಲಕ ನೋಡಲು ಬಯಸುತ್ತೇವೆ. ಸಂಸ್ಕೃತದಲ್ಲಿ ‘ಫಲೇನ ಪರಿಚೀಯತೇ’ ಎಂಬ ಮಾತಿದೆ. ಒಂದು ವಿಷಯವನ್ನು ಫಲಿತಾಂಶದ ಮೂಲಕ ನಿರ್ಣಯಿಸಲಾಗುತ್ತದೆ.

ಸಂದರ್ಶಕ: ಒಂದು ವಿಷಯವನ್ನು ನಿರ್ಣಯಿಸಲಾಗುವುದು...?

ಪ್ರಭುಪಾದ: ಫಲಿತಾಂಶದಿಂದ.

ಸಂದರ್ಶಕ: ಓಹ್, ಹೌದು.

ಪ್ರಭುಪಾದ: ನನ್ನ ವಿಧಾನವು ತುಂಬಾ ಚೆನ್ನಾಗಿದೆ ಎಂದು ನಾನು ಹೇಳಬಹುದು. ನಿಮ್ಮ ವಿಧಾನವು ತುಂಬಾ ಚೆನ್ನಾಗಿದೆ ಎಂದು ನೀವು ಹೇಳಬಹುದು. ಆದರೆ ಫಲಿತಾಂಶದ ಮೂಲಕ ನಾವು ನಿರ್ಣಯಿಸಬೇಕಾಗಿದೆ. ಅಂದರೆ... ಭಾಗವತ ಹೇಳುವಂತೆ ಧರ್ಮದ ಆ ಪ್ರಕ್ರಿಯೆಯು ತುಂಬಾ ಒಳ್ಳೆಯದು. ಅದನ್ನು ಪಾಲಿಸಿದರೆ ಒಬ್ಬ ದೇವರ ಪ್ರೇಮಿಯಾಗುತ್ತಾನೆ.