KN/Prabhupada 0127 - ವಿಚಿತ್ರ ಪದ್ಧತಿಗಳಿಂದ ಒಂದು ಮಹಾನ್ ಸಂಸ್ಥೆ ಹಾಳಾಯಿತು
Lecture on SB 1.2.11 -- Vrndavana, October 22, 1972
ಆಗ... ನನ್ನ ಗುರು ಮಹಾರಾಜರು ಹೇಳುತ್ತಿದ್ದರು, “ಕೃಷ್ಣನನ್ನು ನೋಡಲು ಪ್ರಯತ್ನಿಸಬೇಡಿ; ಕೃಷ್ಣ ನಿಮ್ಮನ್ನು ನೋಡುವಂತೆ ಏನಾದರೂ ಮಾಡಿ." ಅದೇ ಬೇಕಾಗಿರುವುದು. . ನೀವು ಕೃಷ್ಣನ ಗಮನ ಸ್ವಲ್ಪ ಸೆಳೆಯಲು ಸಾಧ್ಯವಾದರೆ, ಯತ್ ಕಾರುಣ್ಯ-ಕಟಾಕ್ಷ-ವೈಭವವತಾಂ... ಪ್ರಬೋಧಾನಂದ ಸರಸ್ವತೀ ಹೇಳುತ್ತಾರೆ, ನೀವು ಕೃಷ್ಣನ ಗಮನವನ್ನು ಹೇಗಾದರೂ ಸ್ವಲ್ಪ ಸೆಳೆಯಲು ಸಾಧ್ಯವಾದರೆ ನಿಮ್ಮ ಜೀವನವು ಯಶಸ್ವಿಯಾಗುತ್ತದೆ ಎಂದು. ತಕ್ಷಣ. ಆದರೆ ಸೆಳೆಯುವುದು ಹೇಗೆ? ಭಕ್ತ್ಯಾ ಮಾಮ್ ಅಭಿಜಾನಾತಿ (ಭ.ಗೀ 18.55). ಕೃಷ್ಣನಿಗೆ ಕೇವಲ ಸೇವೆಮಾಡುವ ಮೂಲಕ. ಆಧ್ಯಾತ್ಮಿಕ ಗುರುವು ಆದೇಶಿಸಿದಂತೆ ಸೇವೆಯನ್ನು ಸಲ್ಲಿಸಿ, ಕೃಷ್ಣನಿಗೆ ಸೇವೆ ಸಲ್ಲಿಸಿ. ಏಕೆಂದರೆ ಆಧ್ಯಾತ್ಮಿಕ ಗುರುವು ಕೃಷ್ಣನ ಪ್ರತಿನಿಧಿ. ನಾವು ಕೃಷ್ಣನನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಿಲ್ಲ. ಯಸ್ಯ ಪ್ರಸಾದಾದ್ ಭಗವತ್-ಪ್ರಸಾದಃ. ನೀವು ಕೃಷ್ಣನ ಪ್ರತಿನಿಧಿಯಾದ ಉತ್ತಮ ಆಧ್ಯಾತ್ಮಿಕ ಗುರುವನ್ನು ಹೊಂದಿದ್ದರೆ, ಅದು ತುಂಬಾ ಕಷ್ಟವಲ್ಲ. ಎಲ್ಲರೂ ಕೃಷ್ಣನ ಪ್ರತಿನಿಧಿಯಾಗಬಹುದು. ಹೇಗೆ? ನೀವು ಕೃಷ್ಣನ ಸಂದೇಶವನ್ನು ಯಾವುದೇ ಕಲಬೆರಕೆ ಇಲ್ಲದೆ ಸರಳವಾಗಿ ಪ್ರಚಾರಿಸುವುದರ ಮೂಲಕ. ಅಷ್ಟೇ.
ಚೈತನ್ಯ ಮಹಾಪ್ರಭು ಹೇಳಿದಂತೆಯೇ, ಆಮಾರ ಆಜ್ಞಾಯ ಗುರು ಹನಾ (ಚೈ.ಚ ಮಧ್ಯ 7.128), "ನೀನು ನನ್ನ ಆದೇಶದ ಪ್ರಕಾರ ಆಧ್ಯಾತ್ಮಿಕ ಗುರುವಾಗು." ಆದ್ದರಿಂದ ನೀವು ಚೈತನ್ಯ ಮಹಾಪ್ರಭುರವರ, ಕೃಷ್ಣನ, ಆದೇಶವನ್ನು ನಿರ್ವಹಿಸಿದರೆ ನೀವು ಗುರುಗಳಾಗುತ್ತೀರಿ. ಆಮಾರ ಆಜ್ಞಾಯ ಗುರು ಹನಾ. ದುರದೃಷ್ಟವಶಾತ್, ನಾವು ಆಚಾರ್ಯರ ಆದೇಶವನ್ನು ನಿರ್ವಹಿಸಲು ಬಯಸುವುದಿಲ್ಲ. ನಾವು ನಮ್ಮದೇ ಆದ ಪದ್ದತಿಗಳನ್ನು ತಯಾರಿಸುತ್ತೇವೆ. ವಿಚಿತ್ರವಾದ ಪದ್ದತಿಗಳಿಂದ ಒಂದು ದೊಡ್ಡ ಸಂಸ್ಥೆ ಹೇಗೆ ಹಾಳಾಯಿತು ಎಂದು ನಮಗೆ ಪ್ರಾಯೋಗಿಕ ಅನುಭವವಿದೆ. ಆಧ್ಯಾತ್ಮಿಕ ಗುರುವಿನ ಆದೇಶವನ್ನು ನಿರ್ವಹಿಸದೆ, ಅವರು ಏನೇನೋ ತಯಾರಿಸಿದರು, ಮತ್ತು ಇಡೀ ಸಂಸ್ಥೆಯೇ ಹಾಳಾಗಿಹೋಯಿತು. ಆದ್ದರಿಂದ ವಿಶ್ವನಾಥ ಚಕ್ರವರ್ತ ಠಾಕುರರವರು ಆಧ್ಯಾತ್ಮಿಕ ಗುರುವಿನ ನುಡಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಾರ. ವ್ಯವಸಾಯಾತ್ಮಿಕಾ ಬುದ್ದಿರ್ ಏಕೇಹ ಕುರು-ನಂದನ (ಭ.ಗೀ 2.41). ನೀವು ಆಧ್ಯಾತ್ಮಿಕ ಗುರುವಿನ ಆದೇಶಕ್ಕೆ ಬದ್ಧರಾದರೆ, ಅದೂ ನಿಮ್ಮ ಸ್ವಂತ ಅನುಕೂಲ ಅಥವಾ ಅನಾನುಕೂಲವನ್ನು ಲೆಕ್ಕಿಸದೆ, ಆಗ ನೀವು ಪರಿಪೂರ್ಣರಾಗುತ್ತೀರಿ.
- ಯಸ್ಯ ದೇವೇ ಪರಾ ಭಕ್ತಿರ್
- ಯಥಾ ದೇವೇ ತಥಾ ಗುರೌ
- ತಸ್ಯೈತೆ ಕಥಿತಾ ಹಿ ಅರ್ಥಾಃ
- ಪ್ರಕಾಶಂತೇ ಮಹಾತ್ಮನಃ
- (ಶ್ವೇ. ಉ 6.23)
ಇದು ಎಲ್ಲಾ ಅಧಿಕಾರಿಗಳ ದೃಢೀಕರಣವಾಗಿದೆ. ಕೃಷ್ಣನ ನಿಷ್ಠಾವಂತ ಪ್ರತಿನಿಧಿಯ ಆದೇಶವನ್ನು ನಾವು ಬಹಳ ನಿಷ್ಠೆಯಿಂದ ನಿರ್ವಹಿಸಬೇಕಾಗಿದೆ. ಆಗ ನಮ್ಮ ಜೀವನ ಯಶಸ್ವಿಯಾಗುತ್ತದೆ. ಆಗ ನಾವು ಕೃಷ್ಣನನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬಹುದು. ವದಂತಿ ತತ್ ತತ್ವ-ವಿದಸ್ ತತ್ವಂ (ಶ್ರೀ.ಭಾ 1.2.11). ನಾವು ಕೇಳಬೇಕಾಗಿರುವುದು ತತ್ವ-ವಿತ್ ಅವರಿಂದ, ನಾಮಮಾತ್ರಕ್ಕೆ ವಿದ್ವಾಂಸರು ಮತ್ತು ರಾಜಕಾರಣಿಗಳು ಎಂದು ಅನಿಸಿಕೊಂಡವರಿಂದಲ್ಲ. ಇಲ್ಲ. ಸತ್ಯ ತಿಳಿದಿರುವವನಿಂದ ನೀವು ಕೇಳಬೇಕು. ಮತ್ತು ನೀವು ಆ ತತ್ವಕ್ಕೆ ಬದ‍್ಧರಾದರೆ, ನೀವು ಎಲ್ಲವನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತೀರಿ.
ತುಂಬಾ ಧನ್ಯವಾದಗಳು.