KN/Prabhupada 0138 - ಭಗವಂತನು ತುಂಬಾ ಕರುಣಾಮಯಿ. ನೀವು ಏನನ್ನು ಬಯಸಿದರೂ ಅವನು ಪೂರೈಸುವನು



Ratha-yatra -- Philadelphia, July 12, 1975

ಪ್ರಭುಪಾದ: ಸ್ತ್ರೀ ಮತ್ತು ಪುರುಷರೆ, ಮಹಾನ್ ನಗರವಾದ ಈ ಫಿಲಡೆಲ್ಫಿಯಾದ ನಿವಾಸಿಗಳೆ, ನಾನು ಮೊದಲು ನಿಮಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಂಬಾ ಕರುಣೆಯಿಟ್ಟು, ಉತ್ಸಾಹಿಗಳಾಗಿ ಈ ಆಂದೋಲನದಲ್ಲಿ ನೀವು ಪಾಲ್ಗೊಂಡಿರುವಿರಿ. ಹಾಗಾಗಿ ನಾನು ನಿಮಗೆ ತುಂಬಾ ಋಣಿಯಾಗಿದ್ದೇನೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಕೃಷ್ಣ ಪ್ರಜ್ಞೆ ಆಂದೋಲನವನ್ನು ಹರಡಲು ನನಗೆ ತುಂಬಾ ಸಹಾಯ ಮಾಡುತ್ತಿರುವ ಅಮೇರಿಕನ್ ಹುಡುಗರು ಮತ್ತು ಹುಡುಗಿಯರಿಗೆ ನಾನು ವಿಶೇಷವಾಗಿ ಋಣಿಯಾಗಿದ್ದೇನೆ. ಪಾಶ್ಚಾತ್ಯ ದೇಶಗಳಲ್ಲಿ ಈ ಕೃಷ್ಣ ಪ್ರಜ್ಞೆಯನ್ನು ಬೋಧಿಸಲು ನನ್ನ ಆಧ್ಯಾತ್ಮಿಕ ಗುರುವಿನಿಂದ ನನಗೆ ಆದೇಶಿಸಲಾಯಿತು. ಹಾಗಾಗಿ 1965ರಲ್ಲಿ ನಾನು ಮೊದಲು ನ್ಯೂಯಾರ್ಕ್ ಬಂದೆ.‌ ನಂತರ 1966ರಲ್ಲಿ ಈ ಸಂಸ್ಥೆಯನ್ನು ಅಧಿಕೃತವಾಗಿ ನ್ಯೂಯಾರ್ಕ್‌ನಲ್ಲಿ ನೋಂದಾಯಿಸಲಾಯಿತು, ಮತ್ತು 1967ರಿಂದ ಈ ಚಳುವಳಿ ಅಮೆರಿಕ, ಯುರೋಪ್, ಕೆನಡಾ, ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಮತ್ತು ಇಡೀ ಪ್ರಪಂಚದಾದ್ಯಂತ ಸಕ್ರಮವಾಗಿ ನಡೆಯುತ್ತಿದೆ.

ಹಾಗಾಗಿ, ಈ ಕೃಷ್ಣ ಪ್ರಜ್ಞೆ ಚಳುವಳಿಯ ಬಗ್ಗೆ ನಾನು ನಿಮಗೆ ಸ್ವಲ್ಪ ತಿಳಿಸಿತ್ತೇನೆ. ಕೃಷ್ಣ, ಈ ಪದವು ʼಸರ್ವಾಕರ್ಷಕʼ ಎಂದರ್ಥ. ಕೃಷ್ಣ ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿಗಳು, ಪಕ್ಷಿಗಳು, ಜೇನುನೊಣಗಳು, ಮರಗಳು, ಹೂವುಗಳು, ಹಣ್ಣುಗಳು, ನೀರು ಸಹ, ಪ್ರತಿ ಜೀವರಾಶಿಗೂ ಆಕರ್ಷಕವಾಗಿದ್ದಾನೆ. ಅದು ವೃಂದಾವನದ ಚಿತ್ರ. ಇದು ಭೌತಿಕ ಜಗತ್ತು. ನಮಗೆ ಆಧ್ಯಾತ್ಮಿಕ ಪ್ರಪಂಚದ ಅನುಭವವಿಲ್ಲ. ಆದರೆ ಯಾವುದು ಚೇತನ ಮತ್ತು ಯಾವುದು ಜಡ ಎಂಬುದರ ಬಗೆ ನಾವು ಒಂದು ಮಿಣುಕು ನೋಟವನ್ನು ಪಡೆಯಬಹುದು.

ಜೀವಂತ ಮನುಷ್ಯ ಮತ್ತು ಮೃತ ದೇಹದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.ಮೃತ ದೇಹ ಎಂದರೆ ದೇಹದೊಳಗಿನ ಜೀವ ಶಕ್ತಿ ಹೋದ ಕೂಡಲೇ ಅದು ಜಡ ವಸ್ತು, ನಿಷ್ಪ್ರಯೋಜಕ. ಮತ್ತು ಜೀವ ಶಕ್ತಿ ಇರುವವರೆಗು, ದೇಹವು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ, ನಾವು ಈ ದೇಹದಲ್ಲಿ ಜಡ ವಸ್ತು ಮತ್ತು ಜೀವ ಶಕ್ತಿ ಎರಡನ್ನೂ ಅನುಭವಿಸುತ್ತಿರುವಂತೆ, ಅದೇ ರೀತಿ, ಎರಡು ಲೋಕಗಳಿವೆ: ಭೌತಿಕ ಜಗತ್ತು ಮತ್ತು ಆಧ್ಯಾತ್ಮಿಕ ಜಗತ್ತು. ನಾವು, ಅಂದರೆ ಜೀವಾತ್ಮಗಳು, ನಮ್ಮಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಜಗತ್ತಿಗೆ ಸೇರಿದವರು. ನಾವು ಭೌತಿಕ ಜಗತ್ತಿಗೆ ಸೇರಿದವರಲ್ಲ. ಕಾರಣಾಂತರಗಳಿಂದ, ನಾವು ಈಗ ಈ ಭೌತಿಕ ಜಗತ್ತು ಮತ್ತು ಭೌತಿಕ ಶರೀರದೊಂದಿಗೆ ಸಂಪರ್ಕದಲ್ಲಿದ್ದೇವೆ. ಮತ್ತು ನಾವು ಶಾಶ್ವತ ಜೀವಂತ ಶಕ್ತಿಯಾಗಿದ್ದರೂ, ಈ ಭೌತಿಕ ದೇಹದೊಂದಿಗಿನ ನಮ್ಮ ಸಂಪರ್ಕದ ಕಾರಣದಿಂದಾಗಿ, ನಾವು ನಾಲ್ಕು ಕ್ಲೇಶಗಳನ್ನು ಸ್ವೀಕರಿಸಬೇಕಾಗಿದೆ: ಜನನ, ಮರಣ, ರೋಗ, ಮತ್ತು ವೃದ್ಧಾಪ್ಯ. ನಾವು ಇದನ್ನು ಅನುಭವಿಸಬೇಕಾಗಿದೆ. ಈ ಭೌತಿಕ ಜಗತ್ತಿನಲ್ಲಿ ನಾವು ಒಂದು ರೀತಿಯ ದೇಹವನ್ನು ಪಡೆಯುತ್ತಿದ್ದೇವೆ, ಮತ್ತು ಅದು ಒಂದು ನಿರ್ದಿಷ್ಟ ಹಂತದಲ್ಲಿ ಕೊನೆಗೊಳ್ಳುತ್ತದೆ. ಯಾವುದೇ ಭೌತಿಕ ವಸ್ತುವಿನ ತರಹ. ಉದಾಹರಣೆಗಾಗಿ, ನಿಮ್ಮ ಉಡುಪನ್ನು ತಗೆದುಕೊಳ್ಳಿ. ನೀವು ಒಂದು ನಿರ್ದಿಷ್ಟ ರೀತಿಯ ಉಡುಪನ್ನು ಧರಿಸಿದ್ದೀರಿ, ಆದರೆ ಅದು ಮಾಸಿದ ನಂತರ, ಅನುಪಯುಕ್ತವಾದಾಗ, ನೀವು ಅದನ್ನು ಬಿಸಾಡುತ್ತೀರಿ, ಮತ್ತು ಬೇರೊಂದು ಉಡುಪನ್ನು ಧರಿಸುತ್ತೀರಿ. ಆದ್ದರಿಂದ, ಈ ಭೌತಿಕ ದೇಹವು, ಜೀವಾತ್ಮ ಶಕ್ತಿಯ ಉಡುಗೆಯಾಗಿದೆ. ಆದರೆ ನಾವು ಈ ಭೌತಿಕ ಜಗತ್ತಿಗೆ ಲಗತ್ತಾಗಿರುವುದರಿಂದ, ನಾವು ಈ ಭೌತಿಕ ಜಗತ್ತನ್ನು ಅನುಭವಿಸಲು ಬಯಸುವುದರಿಂದ, ನಾವು ವಿಭಿನ್ನ ರೀತಿಯ ದೇಹವನ್ನು ಪಡೆಯುತ್ತೇವೆ. ಇದನ್ನು ಭಗವದ್ಗೀತೆಯಲ್ಲಿ ಯಂತ್ರವಾಗಿ ವಿವರಿಸಲಾಗಿದೆ. ವಾಸ್ತವವಾಗಿ, ಈ ದೇಹ ಒಂದು ಯಂತ್ರ. ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ:

ಈಶ್ವರಃ ಸರ್ವ-ಭೂತಾನಾಂ
ಹೃದ್-ದೇಶೇ ಅರ್ಜುನ ತಿಷ್ಠತಿ
ಭ್ರಾಮಯನ್ ಸರ್ವ-ಭೂತಾನಿ
ಯಂತ್ರಾರೂಢಾನಿ ಮಾಯಯಾ
(ಭ.ಗೀ 18.61).

ಆದ್ದರಿಂದ, ನಾವು ಜೀವಾತ್ಮಗಳು, ನಾವು ಬಯಸುತ್ತೇವೆ. "ಮನುಷ್ಯನು ಪ್ರಸ್ತಾಪಿಸುತ್ತಾನೆ; ದೇವರು ತೀರ್ಮಾನಿಸುತ್ತಾನೆ." ದೇವರು ತುಂಬಾ ಕರುಣಾಮಯಿ. ನೀವು ಏನನ್ನು ಬಯಸಿದರೂ ಅವನು ಪೂರೈಸುವನು. "ಈ ರೀತಿಯ ಭೌತಿಕ ಆಸೆಗಳು ನಿಮ್ಮನ್ನು ಎಂದಿಗೂ ತೃಪ್ತಿಪಡಿಸುವುದಿಲ್ಲ", ಎಂದು ಅವನು ಹೇಳುತ್ತಿದ್ದರೂ, ನಾವು ಬಯಸುತ್ತೇವೆ. ಆದ್ದರಿಂದ, ದೇವರು ನಮ್ಮ ವಿಭಿನ್ನ ಆಸೆಗಳನ್ನು ಪೂರೈಸಲು ವಿವಿಧ ರೀತಿಯ ದೇಹಗಳನ್ನು ಕೊಡುತ್ತಾನೆ. ಇದನ್ನು ಭೌತಿಕ, ಬದ್ಧ ಜೀವನ ಎಂದು ಕರೆಯಲಾಗುತ್ತದೆ. ಈ ದೇಹ, ಬಯಕೆಗೆ ಅನುಗುಣವಾಗಿ ದೇಹ ಬದಲಾಗುವುದನ್ನು ವಿಕಸನ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ವಿಕಾಸದಿಂದ ನಾವು ಲಕ್ಷಾಂತರ ಇತರ ದೇಹಗಳ ನಂತರ ಮಾನವ ದೇಹದ ರೂಪಕ್ಕೆ ಬರುತ್ತೇವೆ. ಜಲಜಾ ನವ-ಲಕ್ಷಾಣಿ ಸ್ಥಾವರಾ ಲಕ್ಷ-ವಿಂಶತಿ. ನಾವು ನೀರಿನಲ್ಲಿ 9,00,000 ರೂಪಗಳನ್ನು ಸ್ವೀಕರಿಸಿದ ನಂತರ ಹೊರಬರುತ್ತೇವೆ. ಅಂತೆಯೇ, ಸಸ್ಯಗಳು, ಮರಗಳು ಎಂದು 20,00,000 ರೂಪಗಳು. ಈ ರೀತಿಯಾಗಿ, ಪ್ರಕೃತಿಯ ರೀತಿಯಲ್ಲಿ, ಪ್ರಕೃತಿ ನಮ್ಮನ್ನು ಈ ಮಾನವ ಜೀವನದ ರೂಪಕ್ಕೆ ತರುತ್ತದೆ, ಕೇವಲ ನಮ್ಮ ಪ್ರಜ್ಞೆಯನ್ನು ಅಭಿವೃದ್ಧಿಪಡಿಸಲು ಅಥವಾ ಜಾಗೃತಗೊಳಿಸಲು. ಪ್ರಕೃತಿ ನಮಗೆ ಅವಕಾಶವನ್ನು ನೀಡುತ್ತದೆ, "ಈಗ ನೀವು ಏನು ಮಾಡಲು ಬಯಸುತ್ತೀರಿ? ಈಗ ನೀವು ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದೀರಿ. ಈಗ ನೀವು ಮತ್ತೆ ವಿಕಸನ ಪ್ರಕ್ರಿಯೆಗೆ ಒಳಗಾಗಲು ಬಯಸುತ್ತೀರೋ, ಅಥವಾ ಊರ್ಧ್ವಲೋಕಗಳಿಗೆ ಹೋಗಲು ಬಯಸುತ್ತೀರೋ, ನೀವು ಭಗವಂತನಾದ ಕೃಷ್ಣನ ಹತ್ತಿರ ಹೋಗಲು ಬಯಸುತ್ತೀರೋ, ಅಥವಾ ನೀವು ಇಲ್ಲೇ ಉಳಿಯಲು ಬಯಸುತ್ತೀರೋ? ಈ ಆಯ್ಕೆಗಳಿವೆ. ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ:

ಯಾಂತಿ ದೇವ-ವ್ರತಾ ದೇವಾನ್
ಪಿತೃನ್ ಯಾಂತಿ ಪಿತೃ-ವ್ರತಾಃ
ಭೂತೇಜ್ಯಾ ಯಾಂತಿ ಭೂತಾನಿ:
ಮದ್-ಯಾಜಿನೋ ಅಪಿ ಯಾಂತಿ ಮಾಮ್
(ಭ.ಗೀ 9.25).

ಈಗ ನಿವು ಆಯ್ಕೆ ಮಾಡಿ. ನೀವು ಊರ್ಧ್ವಲೋಕಗಳಿಗೆ ಹೋಗಲು ಬಯಸಿದರೆ, ನೀವು ಹೋಗಬಹುದು. ನೀವು ಇಲ್ಲಿ ಉಳಿಯಲು ಬಯಸಿದರೆ, ಮಧ್ಯ ಲೋಕಗಳಲ್ಲಿ, ನೀವು ಹಾಗೆ ಮಾಡಬಹುದು. ಮತ್ತು ನೀವು ಅಧೋಲೋಕಗಳಿಗೆ ಹೋಗಲು ಬಯಸಿದರೆ, ನೀವು ಅದನ್ನು ಮಾಡಬಹುದು. ನೀವು ಭಗವಂತನಾದ ಕೃಷ್ಣನ ಹತ್ತಿರ ಹೋಗಲು ಬಯಸಿದರೆ ಅದನ್ನೂ ಸಹ ಮಾಡಬಹುದು. ಇದು ನಿಮ್ಮ ಆಯ್ಕೆಯಾಗಿದೆ. ಆದ್ದರಿಂದ, ಈ ಭೌತಿಕ ಪ್ರಪಂಚಕ್ಕು, ಊರ್ಧ್ವಲೋಕವಿರಲಿ ಅಥವಾ ಅಧೋಲೋಕವಿರಲಿ, ಮತ್ತು ಆಧ್ಯಾತ್ಮಿಕ ಜಗತ್ತಿಗು ನಡುವಿನ ವ್ಯತ್ಯಾಸವೇನು? ಆಧ್ಯಾತ್ಮಿಕ ಜಗತ್ತು ಎಂದರೆ ಭೌತಿಕ ಪರಿಕಲ್ಪನೆಯಿಲ್ಲ. ನಾನು ನಿಮಗೆ ಹೇಳಿದಂತೆ ಎಲ್ಲವೂ ಚೇತನ. ಮರಗಳು, ಹೂವುಗಳು, ಹಣ್ಣುಗಳು, ನೀರು, ಪ್ರಾಣಿಗಳು - ಎಲ್ಲವೂ ಆಧ್ಯಾತ್ಮಿಕ. ಅಲ್ಲಿ ಯಾವುದೇ ಸರ್ವನಾಶವಿಲ್ಲ. ಅದು ಶಾಶ್ವತ. ಆದ್ದರಿಂದ, ನೀವು ಆ ಆಧ್ಯಾತ್ಮಿಕ ಜಗತ್ತಿಗೆ ಹೋಗಲು ಬಯಸಿದರೆ, ಈ ಮಾನವ ರೂಪದಲ್ಲಿ ನೀವು ಈಗ ಈ ಅವಕಾಶವನ್ನು ಹೊಂದಬಹುದು, ಮತ್ತು ನೀವು ಈ ಭೌತಿಕ ಜಗತ್ತಿನಲ್ಲಿ ಉಳಿಯಲು ಬಯಸಿದರೆ, ನೀವು ಹಾಗೂ ಮಾಡಬಹುದು.