KN/Prabhupada 0142 - ಭೌತಿಕ ಪ್ರಕೃತಿಯ ಈ ವಧಿಸುವ ಪ್ರಕ್ರಿಯೆಯನ್ನು ನಿಲ್ಲಿಸಿ



Lecture on SB 6.1.15 -- Denver, June 28, 1975

ಮೊದಲೇ ಜನರಿಗೆ ಜೀವನದ ಗುರಿ ಏನು ಎಂದು ಅರ್ಥವಾಗುವುದಿಲ್ಲ. ಪ್ರಸ್ತುತ ಅವರಿಗೆ ಅದರ ಬಗ್ಗೆ ಚಿಂತೆಯಿಲ್ಲ. ಅವರಿಗೆ ಪಾಪದ ಜೀವನ ಮತ್ತು ಧರ್ಮನಿಷ್ಠ ಜೀವನದಲ್ಲಿ ಬೇಧವಿಲ್ಲ. ನಾವು ಈ ವಿಷಯಗಳನ್ನು ನಂಬದಿರಬಹುದು, ಆದರೆ ಈ ವಿಷಯಗಳು ವಾಸ್ತವ. ನೀವು ಒಂದು ರೋಗಕ್ಕೆ ತುತ್ತಾದರೆ ಅದು ಹೊರಬರುತ್ತದೆ. ನೀವು ನಂಬುತ್ತೀರೋ ಇಲ್ಲವೋ, ಅದು ಮುಖ್ಯವಲ್ಲ. ಇಲ್ಲಿ ನಮ್ಮ ವೈದ್ಯರಿದ್ದಾರೆ. ನೀವು ಯಾವುದಾದರೂ ರೋಗಕ್ಕೆ ತುತ್ತಾಗಿದ್ದರೆ, ಅದು ಹೊರಬರುತ್ತದೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ, ನಾವು ಅನೇಕ ಸಾಂಕ್ರಾಮಿಕ ಗುಣಗಳಿಗೆ ತುತ್ತಾಗಿದ್ದೇವೆ. ಮೂರು ಗುಣಗಳಿವೆ - ಸತ್ವಗುಣ, ರಜೋಗುಣ, ತಮೋಗುಣ, ಮತ್ತು ನಮ್ಮ ಸೋಂಕಿನ ಪ್ರಕಾರ, ನಾವು ವಿವಿಧ ರೀತಿಯ ದೇಹವನ್ನು ಸ್ವೀಕರಿಸಬೇಕು. ಕರ್ಮಣಾ ದೈವ-ನೇತ್ರೇಣ (ಶ್ರೀ.ಭಾ 3.31.1). ನಮ್ಮಲ್ಲಿ ಪ್ರತಿಯೊಬ್ಬರೂ, ನಾವು ಭೌತಿಕ ಪ್ರಕೃತಿಯ ವಿಧಾನಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮತ್ತು ಆ ಗುಣಗಳೊಡನೆ ನಮ್ಮ ಸಂಬಂಧದ ಆಧಾರದ ಮೇಲೆ ನಾವು ಒಂದು ನಿರ್ದಿಷ್ಟ ರೀತಿಯ ದೇಹವನ್ನು ಸ್ವೀಕರಿಸಬೇಕು, ತಥಾ ದೇಹಾಂತರ ಪ್ರಾಪ್ತಿಃ (ಭ.ಗೀ 2.13). ದುರದೃಷ್ಟವಶಾತ್, ಈ ಪ್ರಕೃತಿಯ ವಿಜ್ಞಾನವನ್ನು, ಹೇಗೆ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿವೆ ಎಂಬುದನ್ನು ಕಲಿಯಲು ಯಾವುದೆ ವಿಜ್ಞಾನವಿಲ್ಲ, ಕಾಲೇಜು ಇಲ್ಲ, ಮತ್ತು ವಿಶ್ವವಿದ್ಯಾಲಯವಿಲ್ಲ. ಪ್ರಕೃತೇ ಕ್ರಿಯಮಾಣಾಣಿ ಗುಣೈಃ ಕಾರ್ಮಣಿ ಸರ್ವಶಃ (ಭ.ಗೀ 3.27).

ಹಾಗಾಗಿ ಈ ಸಾಂಕ್ರಾಮಿಕ ಸ್ಥಿತಿಯ ಕಾರಣದಿಂದ ನಾವು ಈ ಭೌತಿಕ ಪ್ರಪಂಚದಲ್ಲಿದ್ದೇವೆ. ಇದು ನಮ್ಮ ಸಮಸ್ಯೆ. ಮತ್ತು ನಾವು ಸಾಯಬೇಕು. ಅದು ಸತ್ಯ. "ನಾನು ಸಾವನ್ನು ನಂಬುವುದಿಲ್ಲ", ಎಂದು ನೀವು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಸಾವು ಇರಲೇಬೇಕು. ನೀನು ಸಾಯಲೇಬೇಕು. ಆದ್ದರಿಂದ, ಈ ರೀತಿಯಾಗಿ ನಮ್ಮ ಜೀವನ ಸಾಗುತ್ತಿದೆ. ಆದ್ದರಿಂದ, ಮಾನವ ಜನ್ಮದಲ್ಲಿ ನಾವು ಇದನ್ನು ಸರಿಪಡಿಸಬಹುದು. ಇದು ಕೃಷ್ಣ ಪ್ರಜ್ಞೆಯ ಪ್ರಕ್ರಿಯೆ. ನಾವು ಪ್ರಕೃತಿಯ ತ್ರಿಗುಣಗಳೊಂದಿಗೆ ನಮ್ಮ ನಿರಂತರ ಒಡನಾಟವನ್ನು ಸರಿಪಡಿಸಿಕೊಂಡರೆ... ಮತ್ತು ಈ ಒಡನಾಟದ ಪರಿಣಾಮವಾಗಿ, ನಾವು ಒಂದು ದೇಹವನ್ನು ಸ್ವೀಕರಿಸುತ್ತೇವೆ, ಸಾಯುತ್ತೇವೆ, ಮತ್ತು ಇನ್ನೊಂದು ದೇಹವನ್ನು ಸ್ವೀಕರಿಸುತ್ತೇವೆ, ಮತ್ತೆ ಸಾಯುತ್ತೇವೆ. ಈ ವ್ಯವಹಾರವನ್ನು ನಿಲ್ಲಿಸಬಹುದು. ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ (ಭ.ಗೀ 15.6). ಹೇಗಾದರೂ ಸರಿ, ನೀವು ಮನೆಗೆ ಹಿಂತಿರುಗಲು, ಭಗವದ್ಧಾಮಕ್ಕೆ ಮರಳಲು ಯೋಗ್ಯರಾದರೆ, ಯದ್ ಗತ್ವಾ, ಆಗ ನೀವು ಮತ್ತೆ ಈ ಭೂಮಿಗೆ ಹಿಂತಿರುಗಬೇಕಾಗಿಲ್ಲ. ಆದರೆ ಈ ಭೌತಿಕ ಬದ್ಧಜೀವನ ಸದಾ ಶೋಚನೀಯ ಎಂದು ಅವರಿಗೆ ಅರ್ಥವಾಗುವುದಿಲ್ಲ. "ಇದು ತುಂಬಾ ಚೆನ್ನಾಗಿದೆ", ಎಂದು ಅವರು ಒಪ್ಪಿಕೊಂಡಿದ್ದಾರೆ. ಪ್ರಾಣಿಗಳು. ಕಸಾಯಿಖಾನೆ, ಜಾನುವಾರು ಗೋದಾಮಿನಲ್ಲಿ ಪ್ರಾಣಿಗಳಂತೆ, ಅನೇಕ ಪ್ರಾಣಿಗಳಿವೆ, ಅವುಗಳು ಕೊಲ್ಲಲ್ಪಡುತ್ತವೆ. ಎಲ್ಲರಿಗೂ ಗೊತ್ತು. ಪ್ರಾಣಿಗಳಿಗೂ ಗೊತ್ತು. ಆದರೆ ಅವುಗಳ ಪ್ರಾಣಿ ಗುಣದಿಂದಾಗಿ, ಅವು ಏನನ್ನೂ ಮಾಡಲು ಸಾಧ್ಯವಿಲ್ಲ. ಅಂತೆಯೇ, ನಮ್ಮನ್ನು ಕೂಡ ಈ ಭೌತಿಕ ಪ್ರಪಂಚದ ಕಸಾಯಿಖಾನೆಗೆ ನೂಕಲಾಗಿದೆ. ಇದನ್ನು ಮೃತ್ಯುಲೋಕ ಎಂದು ಕರೆಯಲಾಗುತ್ತದೆ. ತನ್ನನ್ನು ವಧಿಸಲಾಗುವುದು ಎಂದು ಎಲ್ಲರಿಗೂ ತಿಳಿದಿದೆ. ಇಂದು ಅಥವಾ ನಾಳೆ, ಅಥವಾ ಐವತ್ತು ವರ್ಷಗಳ ನಂತರ, ಅಥವಾ ನೂರು ವರ್ಷಗಳ ನಂತರ, ಅವನು ವಧಿಸಲ್ಪಡುತ್ತಾನೆ ಎಂದು ಎಲ್ಲರಿಗೂ ತಿಳಿದಿದೆ. ಅವನು ಸಾಯುತ್ತಾನೆ. ಸಾವು ಎಂದರೆ ವಧೆ. ಯಾರೂ ಸಾಯಲು ಬಯಸುವುದಿಲ್ಲ. ಪ್ರಾಣಿ ಕೂಡ ಸಾಯಲು ಇಷ್ಟಪಡುವುದಿಲ್ಲ. ಆದರೆ ಅವರನ್ನು ಬಲವಂತವಾಗಿ ಕೊಲ್ಲಲಾಗುತ್ತದೆ. ಇದನ್ನು ವಧೆ ಎನ್ನುತ್ತಾರೆ. ಹಾಗೆಯೇ, ಯಾರು ಸಾಯಲು ಬಯಸುತ್ತಾರೆ? ಯಾರೂ ಸಾಯಲು ಬಯಸುವುದಿಲ್ಲ. ಆದರೆ ಪ್ರಕೃತಿಯ ನಿಯಮದ ಪ್ರಕಾರ ಅವನನ್ನು ಕೊಲ್ಲಬೇಕು. ಅದೇ ಕಸಾಯಿಖಾನೆ. ಇಡೀ ಭೌತಿಕ ಪ್ರಪಂಚವು ಕಸಾಯಿಖಾನೆ. ನಾವು ಅದನ್ನು ಅರಿತುಕೊಳ್ಳಬೇಕು. ಮತ್ತು ಇದನ್ನು ಮೃತ್ಯುಲೋಕ ಎನ್ನತ್ತಾರೆ. ಇದೇ ಸಮಸ್ಯೆ. ಆದರೆ ಪ್ರಾಣಿಗಳಂತೆ ಅವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರಾಣಿ, ಅದು ತುಂಬಾ ಗಂಭೀರವಾಗಿ ಆಲೋಚಿಸುವುದಿಲ್ಲ. ಮತ್ತು ಅದು ಸಾಯುತ್ತದೆ ಎಂದು ತಿಳಿದಿದ್ದರೂ ಸಹ, ಯಾವುದೇ ಕ್ರಮ ಕೈಗೊಳ್ಳಲು ಅಸಮರ್ಥ.

ಆದ್ದರಿಂದ, ನಮ್ಮ ಸ್ಥಾನವು ಹಾಗಿದೆ. ಮೃತ್ಯು-ಸಂಸಾರ-ಸಾಗರಾತ್, ತೇಷಾಂ ಅಹಂ ಅನುಕಂಪಾರ್ಥಂ ಅಹಂ ಅಜ್ಞಾನಜಂ ತಮಃ ತೇಷಾಂ ಅಹಂ ಸಮುದ್ಧರ್ತಾ ಮೃತ್ಯು-ಸಂಸಾರ-ಸಾಗರಾತ್ (ಭ.ಗೀ 12.7). ಆದ್ದರಿಂದ ನಾವು ನಮ್ಮ ಸ್ಥಾನವನ್ನು ಅರ್ಥಮಾಡಿಕೊಳ್ಳಬೇಕು. ಯಾರೂ ಸಾಯಲು ಬಯಸುವುದಿಲ್ಲ, ಆದರೆ ಅವನನ್ನು ಕೊಲ್ಲಲಾಗುತ್ತದೆ. ಮತ್ತೆ ಅವನಿಗೆ ಇನ್ನೊಂದು ಅವಕಾಶ, ಇನ್ನೊಂದು ದೇಹವನ್ನು ನೀಡಲಾಗುತ್ತದೆ. ಮತ್ತೆ ಅವನನ್ನು ಕೊಲ್ಲಲಾಗುತ್ತದೆ. ಇದು ಪ್ರಕೃತಿಯ ನಿಯಮಗಳು, ಹೀಗೆ ನಡೆಯುತ್ತಿವೆ. ದೈವೀ ಹಿ ಎಷಾ ಗುಣಮಯೀ ಮಮ ಮಾಯಾ ದುರತ್ಯಯಾ (ಭ.ಗೀ 7.14). ಭೌತಿಕ ಪ್ರಕೃತಿಯ ಈ ವಧಿಸುವ ಪ್ರಕ್ರಿಯೆಯನ್ನು ಹೇಗೆ ನಿಲ್ಲಿಸುವುದು ಎಂದು ನಾವು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಅದು ಬುದ್ಧಿವಂತಿಕೆ. ಇಲ್ಲವಾದರೆ, ಬೆಕ್ಕುಗಳು ಮತ್ತು ನಾಯಿಗಳಂತೆ ಸಂತೋಷವಾಗಿರಲು, "ಓಹ್, ನಾನು ತುಂಬಾ ಚೆನ್ನಾಗಿ ತಿನ್ನುತ್ತಿದ್ದೇನೆ ಮತ್ತು ಜಿಗಿಯುತ್ತಿದ್ದೇನೆ. ಸಾಯಲು ನಾನು ಹೆದರುವುದಿಲ್ಲ," ಅದು ಉತ್ತಮ ಬುದ್ಧಿವಂತಿಕೆಯಲ್ಲ. ಪ್ರಕೃತಿಯ ಈ ಕೊಲ್ಲುವ ಪ್ರಕ್ರಿಯೆಯನ್ನು ಹೇಗೆ ನಿಲ್ಲಿಸುವುದು ಎಂಬುದು ಬುದ್ಧಿವಂತಿಕೆ. ಅದು ಬುದ್ಧಿವಂತಿಕೆ. ಅದನ್ನು ಚರ್ಚಿಸಲಾಗುತ್ತಿದೆ.

ಹಾಗಾಗಿ ಯಾರು ಬೇಕಾದರೂ ಭಕ್ತಿ ಸೇವೆಯಿಂದ ವಧೆ ಪ್ರಕ್ರಿಯೆಯಿಂದ ಹೊರಬರಬಹುದು. ಅದನ್ನು ಇಲ್ಲಿ ಹೇಳಲಾಗಿದೆ, ಕೇಚಿತ್ ಕೇವಲಯಾ ಭಕ್ತ್ಯಾ (ಶ್ರೀ.ಭಾ 6.1.15). ಕೇಚಿತ್. ಅದು ಸರ್ವೇ ಸಾಮಾನ್ಯವಲ್ಲ. ಬಹಳ ವಿರಳವಾಗಿ ಒಬ್ಬರು ಕೃಷ್ಣ ಪ್ರಜ್ಞೆಗೆ ಬರುತ್ತಾರೆ. ಕೇಚಿತ್ ಕೇವಲಯಾ ಭಕ್ತ್ಯಾ. ಕೇವಲ ಭಕ್ತಿ ಸೇವೆಯಿಂದ, ವಧೆ ಮಾಡುವ ಈ ಅಪಾಯಕಾರಿ ಸ್ಥಿತಿಯಿಂದ ಹೊರಬರಬಹುದು. ಕೇಚಿತ್ ಕೇವಲಯಾ ಭಕ್ತ್ಯಾ. ಮತ್ತು ಅವರು ಯಾರು? ವಾಸುದೇವ ಪರಾಯಣಾಃ, ಕೃಷ್ಣನ ಭಕ್ತರು. ಕೃಷ್ಣನ ಹೆಸರು ವಾಸುದೇವ. ಅವನು ವಸುದೇವನ ಮಗ; ಆದ್ದರಿಂದ ಆತನ ಹೆಸರು ವಾಸುದೇವ. ಆದ್ದರಿಂದ, ವಾಸುದೇವ- ಪರಾಯಣಾಃ. ಪರಾಯಣಾಃ ಅಂದರೆ "ನಮ್ಮ ಅಂತಿಮ ಗುರಿ ವಾಸುದೇವ, ಇನ್ನೇನೂ ಇಲ್ಲ." ಅವರನ್ನು ವಾಸುದೇವ-ಪರಾಯಣಾಃ. ಎಂದು ಕರೆಯಲಾಗುತ್ತದೆ. ವಾಸುದೇವ-ಪರಾಯಣಾಃ, ಅಘಂ ಧುನ್ವಂತಿ. ಅಘಂ ಎಂದರೆ ಭೌತಿಕ ಮಾಲಿನ್ಯ. ನಾವು ಯಾವಾಗಲೂ ಭೌತಿಕ ಮಾಲಿನ್ಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಹಾಗಾದರೆ ನಾವು ವಾಸುದೇವ-ಪರಾಯಣರಾದಾರೆ... ವಾಸುದೇವ ಸರ್ವಂ ಇತಿ ಸ ಮಹಾತ್ಮಾ ಸುದುರ್ಲಭಃ (ಭ.ಗೀ 7.19), ಅದೇ ವಿಷಯ. ಇಲ್ಲಿ ಅದು ಕೇಚಿತ್ ಎಂದು ಹೇಳುತ್ತದೆ — ಅಂದರೆ ಬಹಳ ಅಪರೂಪ. ಮತ್ತು ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ವಾಸುದೇವ ಸರ್ವಂ ಇತಿ ಸ ಮಹಾತ್ಮಾ ಸುದುರ್ಲಭಃ. ಸುದುರ್ಲಭಃ, ಬಹಳ ಅಪರೂಪ.