KN/Prabhupada 0145 - ನಾವು ಯಾವುದಾದರೊಂದು ತಪಸ್ಸನ್ನು ಸ್ವೀಕರಿಸಬೇಕು



Lecture on SB 3.12.19 -- Dallas, March 3, 1975

ಸ್ವಾತಂತ್ರ್ಯ ತಂತಾನೆ ಬರುವುದಿಲ್ಲ. ನೀವು ರೋಗಗ್ರಸ್ತರಾಗಿರುವಂತೆಯೇ. ನೀವು ಜ್ವರ, ಅಥವಾ ಇತರ ಯಾವುದೋ ಕಾಯಿಲೆಯಿಂದ ನೋವಿನ ಸ್ಥಿತಿಯಲ್ಲಿದ್ದೀರಿ. ಆದ್ದರಿಂದ, ನೀವು ಸ್ವಲ್ಪ ತಪಸ್ಸನ್ನು ಮಾಡಬೇಕು. ದೇಹದ ಮೇಲೆ ಒಂದು ಗುಳ್ಳೆ ಬಂದರೆ ನೀವು ಬಳಲುವಂತೆ. ಅದು ತುಂಬಾ ನೋವಾಗುತ್ತದೆ. ನಂತರ, ಅದನ್ನು ಗುಣಪಡಿಸಬೇಕಾದರೆ ನೀವು ಶಸ್ತ್ರಚಿಕಿತ್ಸೆ ಪಡೆಯಬೇಕಾಗುತ್ತದೆ. ಆದ್ದರಿಂದ, ತಪಸಾ. ಅದು ತಪಸಾ. ತಪ ಎಂದರೆ ನೋವಿನ ಸ್ಥಿತಿ, ತಪ. ತಾಪಮಾನದಂತೆ. ನಿಮ್ಮನ್ನು 110 ಡಿಗ್ರಿ ತಾಪಮಾನದಲ್ಲಿ ಇರಿಸಿದರೆ, ಅದು ನಿಮಗೆ ಅಸಹನೀಯವಾಗಿರುತ್ತದೆ. ಅದು ತುಂಬಾ ಸಂಕಟಕರ. ನಾವು ಭಾರತೀಯರು - ನಾವು ಭಾರತದಲ್ಲಿ ಜನಿಸಿದ್ದೇವೆ, ಉಷ್ಣವಲಯದ ವಾತಾವರಣ - ಆದರೂ ತಾಪಮಾನವು ನೂರಕ್ಕಿಂತ ಹೆಚ್ಚಾದಾಗ, ಅದು ಅಸಹನೀಯವಾಗುತ್ತದೆ. ಹಾಗಾದರೆ ನಿಮ್ಮ ಗತಿ ಏನು? ನೀವು ಬೇರೆ ತಾಪಮಾನದಲ್ಲಿ ಜನಿಸಿದ್ದೀರಿ. ಅಂತೆಯೇ, ನಮಗೆ ಕಡಿಮೆ ತಾಪಮಾನವನ್ನು ಸಹಿಸಲಾಗುವುದಿಲ್ಲ. ಐವತ್ತು ಡಿಗ್ರಿಗಿಂತ ಕಡಿಮೆ ಇದ್ದರೆ, ಅದು ನಮಗೆ ಅಸಹನೀಯ. ಹಾಗಾಗಿ ಬೇರೆ ಬೇರೆ ವಾತಾವರಣ, ವಿಭಿನ್ನ ತಾಪಮಾನ. ಮತ್ತು ಕೆನಡಾದಲ್ಲಿ ಶೂನ್ಯಕ್ಕಿಂತ ನಲವತ್ತು ಡಿಗ್ರಿಗಳು ಕಡಿಮೆ ಇದ್ದರೂ ಅವರು ಸಹಿಸಿಕೊಳ್ಳುತ್ತಾರೆ. ಆದ್ದರಿಂದ, ಇದು ಜೀವನದ ವಿಭಿನ್ನ ಸ್ಥಿತಿಗಳ ಮೇಲೆ ಆಧಾರವಾಗಿದೆ. ಆದರೆ ನಾವು ಹೊಂದಿಕೊಳ್ಳುತ್ತೇವೆ: ಹೆಚ್ಚಿನ ಉಷ್ಣತೆ, ಕಡಿಮೆ ತಾಪಮಾನ, ಅಧಿಕ ಶೀತ. ನಾವು ಯಾವುದೇ ರೀತಿಯ ಜೀವನಕ್ಕೆ ಹೊಂದಿಕೊಳ್ಳಲು ತರಬೇತಿ ಪಡೆಯಬಹುದು. ಆ ಸಾಮರ್ಥ್ಯ ನಮ್ಮಲ್ಲಿದೆ. ಬಂಗಾಳಿ ಗಾದೆ ಇದೆ - ಶರೀರೆ ನಾ ಮಹಾಶಯ ಯಾ ಸಹಬೆ ತಯ ಸಯ, ಅಂದರೆ, "ನೀವು ಅಭ್ಯಾಸ ಮಾಡಿದರೆ ಈ ದೇಹ ಯಾವುದೇ ಸ್ಥಿತಿಯನ್ನು ಸಹಿಸಿಕೊಳ್ಳಬಲ್ಲದು." ನೀವು ಒಂದು ನಿರ್ದಿಷ್ಟ ಸ್ಥಿತಿಯಲ್ಲಿದ್ದು, ಮತ್ತು ಅದು ಬದಲಾದರೆ, ನೀವು ಬದುಕಲೂ ಕೂಡ ಸಾಧ್ಯವಾಗದಷ್ಟು ಅಸಹನೀಯವಾಗುತ್ತದೆ ಎಂದು ಅರ್ಥವಲ್ಲ. ಇಲ್ಲ. ನೀವು ಅಭ್ಯಾಸ ಮಾಡಿದರೆ...

ಈಗಿನಂತೆ, ಯಾರೂ ಹೋಗುವುದಿಲ್ಲ. ಹಿಂದೆ ಅವರು ಹಿಮಾಲಯ ಪರ್ವತಕ್ಕೆ ಹೋಗುತ್ತಿದ್ದರು, ಮತ್ತು ಅಲ್ಲಿ ತುಂಬಾ ಶೀತವಿದೆ. ಮತ್ತು ತಪಸ್ಸು... ಅಭ್ಯಾಸವಿದೆ, ವಿಧಾನವಿದೆ: ವಿಪರೀತ ಬೇಗೆಯ ಶಾಖದಲ್ಲಿ ಸಂತರು ಅಥವಾ ಋಷಿಗಳು, ಅವರು ಸುತ್ತಲೂ ಬೆಂಕಿಯನ್ನು ಹೊತ್ತಿಸುತ್ತಾರೆ. ಆಗಲೇ ಅತೀವ ತಾಪಮಾನವಿರುತ್ತದೆ, ಮತ್ತು ಅವರು ಸುತ್ತಲೂ ಇನ್ನೂ ಬೆಂಕಿಯನ್ನು ಹೊತ್ತಿಸಿ ಧ್ಯಾನವನ್ನು ಮುಂದುವರಿಸುತ್ತಾರೆ. ಇದು ತಪಸ್ಸು. ಇವು ತಪಸ್ಸಿನ ವಿಧಾನಗಳು. ಸುಡುವ ಶಾಖವಿದೆ, ಆದರೂ ಅವರು ಈ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ತೀವ್ರವಾದ ಚಳಿ, ನೂರು ಡಿಗ್ರಿಗಿಂತ ಕಡಿಮೆ, ಮತ್ತು ಅವರು ನೀರಿನಲ್ಲಿ ಇಳಿದು ದೇಹವನ್ನು ಈ ತನಕ ಮುಳುಗಿಸಿ ಧ್ಯಾನ ಮಾಡುತ್ತಾರೆ. ಇವು ತಪಸ್ಸಿನ ವಿಧಾನಗಳು. ತಪಸ್ಯ. ಆದ್ದರಿಂದ, ದೇವರ ಸಾಕ್ಷಾತ್ಕಾರಕ್ಕಾಗಿ ಹಿಂದೆ ಜನರು ಇಂತಹ ತೀವ್ರವಾದ ತಪಸ್ಸಿಗೆ ಒಳಗಾಗುತ್ತಿದ್ದರು, ಮತ್ತು ಈಗಿನ ಕಾಲದಲ್ಲಿ ನಾವು ಅಷ್ಟು ಅಸಮರ್ಥರೆ? ಈ ನಾಲ್ಕು ತತ್ವಗಳನ್ನು ಕೂಡ ನಾವು ಸಹಿಸಲಾಗುವುದಿಲ್ಲವೇ? ಇದು ಅಷ್ಟು ಕಷ್ಟವೇ? ನಾವು ಸ್ವಲ್ಪ ತಪಸ್ಸನ್ನು ವಿಧಿಸುತ್ತಿದ್ದೇವೆ, "ಈ ವಿಷಯಗಳಲ್ಲಿ ತೊಡಗಬೇಡಿ. ಅನೈತಿಕ ಕಾಮಜೀವನ, ಮಾಂಸಸೇವನೆ, ಮದ್ಯಪಾನ, ಹಾಗು ಜೂಜಾಟ ಇಲ್ಲ. ಇವು ಕೃಷ್ಣ ಪ್ರಜ್ಞೆಯಲ್ಲಿ ಮುಂದುವರೆಯಲು ತಪಸ್ಸಿನ ವಿಧಾನಗಳು. ಇದು ತುಂಬಾ ಕಷ್ಟವೇ? ಇದು ಕಷ್ಟವಲ್ಲ. ಅತಿ ಶಿತಿಲವಾದ ನೀರಿನೊಳಗೆ ಕುತ್ತಿಗೆಯವರೆಗೆ ಹೋಗುವುದನ್ನು ಯಾರಾದರೂ ಅಭ್ಯಾಸ ಮಾಡಬಹುದಾದರೆ, ಅಕ್ರಮ ಲೈಂಗಿಕತೆ, ಮಾಂಸಾಹಾರ, ಮತ್ತು ಮಾದಕತೆಯನ್ನು ತ್ಯಜಿಸುವುದು ಅಷ್ಟು ಕಷ್ಟವೇ? "ಕಾಮಜೀವನವಿಲ್ಲ", ಎಂದು ನಾವು ಹೇಳುತ್ತಿಲ್ಲ. ಅನೈತಿಕ ಕಾಮಜೀವನವಿಲ್ಲ ಅಷ್ಟೇ. ಅದರಲ್ಲಿ ಏನು ಕಷ್ಟವಿದೆ? ಆದರೆ ಈ ಕಾಲ ಎಷ್ಟು ಪತನವಾಗಿದೆಯೆಂದರೆ ಈ ಪ್ರಾಥಮಿಕ ತಪಸ್ಸನ್ನು ಕೂಡ ನಾವು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಅದೇ ಕಷ್ಟ.

ಆದರೆ ನೀವು ದೇವರನ್ನು ಅರಿತುಕೊಳ್ಳಲು ಬಯಸಿದರೆ, ಇಲ್ಲಿ ಹೇಳಿರುವಂತೆ, ತಪಸೈವ, ತಪಸ್ಸಿನಿಂದ ಮಾತ್ರ ಇದನ್ನು ಅರಿತುಕೊಳ್ಳಬಹುದು. ಇಲ್ಲದಿದ್ದರೆ ಇಲ್ಲ. ಇಲ್ಲದಿದ್ದರೆ ಅದು ಸಾಧ್ಯವಿಲ್ಲ. ಆದ್ದರಿಂದ, ಈ ಪದವನ್ನು ಬಳಸಲಾಗಿದೆ, ತಪಸೈವ. ತಪಸಾ ಏವ: "ತಪಸ್ಸಿನಿಂದ ಮಾತ್ರ." ಬೇರೆ ಯಾವುದೇ ವಿಧಾನಗಳಿಲ್ಲ. ತಪಸಾ ಏವ ಪರಂ. ಪರಂ ಎಂದರೆ ಸರ್ವೋಚ್ಛ. ನೀವು ಪರಮಾತ್ಮನನ್ನು, ಪರಿಪೂರ್ಣನಾದವನನ್ನು ಅರಿತುಕೊಳ್ಳಲು ಬಯಸಿದರೆ, ನೀವು ನಿರ್ದಿಷ್ಟ ರೀತಿಯ ತಪಸ್ಸನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ಅದು ಸಾಧ್ಯವಿಲ್ಲ. ಪ್ರಾಥಮಿಕವಾಗಿ ಸ್ವಲ್ಪ ತಪಸ್ಸು. ಏಕಾದಶಿಯಂತೆ. ಅದು ಕೂಡ ತಪಸ್ಸಿನ ಒಂದು ವಿಧಾನ. ವಾಸ್ತವವಾಗಿ ಏಕಾದಶಿಯ ದಿನಗಳಲ್ಲಿ ನಾವು ಯಾವುದೇ ಆಹಾರವನ್ನು ತಿನ್ನುವುದಿಲ್ಲ, ನೀರನ್ನು ಕೂಡ ಕುಡಿಯುವುದಿಲ್ಲ. ಆದರೆ ನಮ್ಮ ಸಮಾಜದಲ್ಲಿ ನಾವು ಅಷ್ಟೊಂದು ಕಟ್ಟುನಿಟ್ಟಾಗಿ ಮಾಡುತ್ತಿಲ್ಲ. ನಾವು ಹೇಳುತ್ತೇವೆ, "ಏಕಾದಶಿ, ನೀವು ಆಹಾರ ಧಾನ್ಯಗಳನ್ನು ತಿನ್ನಬೇಡಿ. ಸ್ವಲ್ಪ ಹಣ್ಣು, ಹಾಲು ಸ್ವೀಕರಿಸಿ." ಇದು ತಪಸ್ಸು. ಹಾಗಾದರೆ ನಾವು ಈ ತಪಸ್ಸನ್ನು ಕೂಡ ಮಾಡಲು ಸಾಧ್ಯವಿಲ್ಲವೇ? ಇಂತ ಅತ್ಯಂತ ಸುಲಭವಾಗಿ ಕಾರ್ಯಗತಗೊಳಿಸಬಹುದಾದ ತಪಸ್ಸನ್ನು ಕೈಗೊಳ್ಳಲು ಸಿದ್ಧರಿಲ್ಲದಿದ್ದರೆ, ನಾವು ಮರಳಿ ಮನೆಗೆ, ಮರಳಿ ಭಗವದ್ಧಾಮಕ್ಕೆ ಹೋಗಲು ಹೇಗೆ ಅಪೇಕ್ಷಿಸಬಹುದು? ಇಲ್ಲ, ಅದು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ, ತಪಸೈವ, ತಪಸಾ ಏವ ಎಂದು ಹೇಳಲಾಗಿದೆ. ಏವಾ ಎಂದರೆ ಖಂಡಿತ. ನೀವು ಮಾಡಲೇಬೇಕು. ಈ ತಪಸ್ಸನ್ನು ಮಾಡುವುದರಿಂದ ನಿಮಗೆ ನಷ್ಟವೇನು? ನಿಮಗೆ ಏನೂ ನಷ್ಟವಿಲ್ಲ. ಈಗ, ಹೊರಗಿನಿಂದ ಯಾರು ಬಂದರೂ ಅವರು ನಮ್ಮ ಸಮಾಜದಲ್ಲಿ, ನಮ್ಮ ಸದಸ್ಯರು, ಹುಡುಗರು ಮತ್ತು ಹುಡುಗಿಯರನ್ನು ನೋಡುತ್ತಾರೆ. ಅವರು ಹೇಳುತ್ತಾರೆ, "ಪ್ರಕಾಶಮಾನವಾದ ಮುಖ." ಅಲ್ಲವೇ? ಅವರು ವ್ಯತ್ಯಾಸವನ್ನು ಗಮನಿಸಿದ್ದಾರೆ. ಸಾದಾ ಬಟ್ಟೆಯಲ್ಲಿ ಒಬ್ಬ ಪಾದ್ರಿ... ನಾನು ಲಾಸ್ ಏಂಜಲೀಸ್‌ನಿಂದ ಹವಾಯಿಗೆ ಹೋಗುತ್ತಿದ್ದೆ. ಒಬ್ಬ ಪಾದ್ರಿ, ಅವರು ವಿಮಾನದಲ್ಲಿ ನನ್ನ ಬಳಿಗೆ ಬಂದರು. "ನಾನು ನಿಮ್ಮೊಂದಿಗೆ ಮಾತನಾಡಬಹುದೆ?", ಎಂದು ಅವರು ನನ್ನ ಅನುಮತಿಯನ್ನು ಕೇಳಿದರು. ಹಾಗಾಗಿ ಅವರ ಮೊದಲ ಪ್ರಶ್ನೆಯೆಂದರೆ - "ನಿಮ್ಮ ಶಿಷ್ಯರು ತುಂಬಾ ಪ್ರಕಾಶಮಾನವಾಗಿದ್ದಾರೆ ಎಂದು ನಾನು ಗಮವಿಸಿದೆ. ಅದು ಹೇಗೆ ಸಾಧ್ಯವಾಯಿತು?" ಅವನು ಪ್ರಾಮಾಣಿಕ. ಹಾಗಾದರೆ ನಷ್ಟ ಎಲ್ಲಿದೆ? ಈ ಎಲ್ಲ ವಿಷಯಗಳನ್ನು, ಪಾಪದ ಚಟುವಟಿಕೆಗಳನ್ನು, ನಿರಾಕರಿಸುವುದರಿಂದ ನಮಗೆ ನಷ್ಟವಿಲ್ಲ. ನಾವು ತುಂಬಾ ಸರಳ ಜೀವನ ನಡೆಸಬಹುದು. ನಾವು ನೆಲದ ಮೇಲೆ ಕುಳಿತುಕೊಳ್ಳಬಹುದು, ನಾವು ನೆಲದ ಮೇಲೆ ಮಲಗಬಹುದು. ನಮಗೆ ಬಹಳ ಪೀಠೋಪಕರಣಗಳ ಅಗತ್ಯವಿಲ್ಲ, ಅತಿ ಸುಂದರವಾದ ಉಡುಗೆಬೇಕಿಲ್ಲ. ಆದ್ದರಿಂದ ತಪಸ್ಸಿನ ಅಗತ್ಯವಿದೆ. ನಾವು ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಯನ್ನು ಬಯಸಿದರೆ, ನಾವು ಕೆಲವು ರೀತಿಯ ತಪಸ್ಸನ್ನು ಸ್ವೀಕರಿಸಬೇಕು. ಕಲಿಯುಗದಲ್ಲಿ ನಾವು ತೀವ್ರ ತಪಸ್ಸನ್ನು ಸ್ವೀಕರಿಸಲು ಸಾಧ್ಯವಿಲ್ಲ, ಅಂದರೆ ಅತಿ ಶೀತಲ ನೀರಿನಲ್ಲಿ ಮುಳುಗಿ ಹರೇ ಕೃಷ್ಣ ಜಪಿಸುವುದು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಆದರೆ ಕನಿಷ್ಠ ತಪಸ್ಸಾದರೂ ಮಾಡಲೇಬೇಕು. ಆದ್ದರಿಂದ, ನಾವು ದೇವರ ಸಾಕ್ಷಾತ್ಕಾರದ ಬಗ್ಗೆ ಗಂಭೀರವಾಗಿದ್ದರೆ, ಕೆಲವು ರೀತಿಯ ತಪಸ್ಸನ್ನು ಮಾಡಬೇಕು ಎಂಬುದನ್ನು ನಾವು ಈ ಶ್ಲೋಕದ ಮೂಲಕ ಗಮನಿಸಬೇಕು. ಅದೇ ಬೇಕಾಗಿರುವುದು.