KN/Prabhupada 0148 - ನಾವು ಭಗವಂತನ ಭಾಗಾಂಶ



Lecture on SB 7.6.1 -- Madras, January 2, 1976

ಸಂಬಂಧ, ಅಭಿದೇಯ, ಪ್ರಯೋಜನ, ಈ ಮೂರು ವಿಷಯಗಳು - ಅದೇ ಧರ್ಮ. ವೇದಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಂಬಂಧ, ನಮಗು ಹಾಗು ದೇವರ ಮಧ್ಯ ಏನು ಸಂಬಂಧ? ಅದಕ್ಕೆ ಸಂಬಂಧ ಎಂದು ಕರೆಯಲಾಗುತ್ತದೆ. ನಂತರ, ಅಭಿಧೇಯ. ಆ ಸಂಬಂಧಕ್ಕೆ ತಕ್ಕಂತೆ ನಾವು ನಡೆದು ಕೊಳ್ಳಬೇಕು. ಅದೇ ಅಭಿಧೇಯ. ನಾವು ಹಾಗೆ ಏಕೆ ವರ್ತಿಸಬೇಕು? ಏಕೆಂದರೆ ನಮ್ಮ ಜೀವನದ ಗುರಿಯನ್ನು ಸಾಧಿಸಲು. ಹಾಗಾದರೆ ಜೀವನದ ಗುರಿ ಏನು? ಜೀವನದ ಗುರಿ ಏನೆಂದರೆ ದೇವೋತ್ತಮ ಪರಮಪುರುಷನ ಧಾಮಕ್ಕೆ ಹಿಂತಿರುಗುವುದು. ಅದೇ ಜೀವನದ ಗುರಿ. ನಾವು ದೇವರ ಭಾಗಾಂಶ. ಭಗವಂತನು ಸನಾತನ, ಮತ್ತು ಅವನ ಧಾಮವೂ ಸನಾತನ. ಪರಸ್ ತಸ್ಮಾತ್ ತು ಭಾವೋ ʼನ್ಯೋ ʼವ್ಯಕ್ತೋ ʼವ್ಯಕ್ತಾತ್ ಸನಾತನಃ (ಭ.ಗೀ 8.20). ಶಾಶ್ವತವಾದ ಒಂದು ಜಾಗವಿದೆ. ಈ ಭೌತಿಕ ಜಗತ್ತು ಶಾಶ್ವತವಲ್ಲ, ಇದು ಭೂತ್ವಾ ಭೂತ್ವಾ ಪ್ರಲೀಯತೆ (ಭ.ಗೀ 8.19). ಇದು ಒಂದು ನಿರ್ದಿಷ್ಟ ದಿನಾಂಕದಲ್ಲಿ ವ್ಯಕ್ತವಾಗುತ್ತದೆ. ನಿನ್ನ ದೇಹ ಮತ್ತು ನನ್ನ ದೇಹದಂತೆಯೇ, ಇದು ಒಂದು ನಿರ್ದಿಷ್ಟ ದಿನಾಂಕದಂದು ವ್ಯಕ್ತವಾಗುತ್ತದೆ. ಇದು ಸ್ವಲ್ಪ ಕಾಲ ಉಳಿಯುತ್ತದೆ, ಬೆಳೆಯುತ್ತದೆ, ಕೆಲವು ಉಪ-ಉತ್ಪನ್ನವನ್ನು ನೀಡುತ್ತದೆ. ನಂತರ ನಮಗೆ ವಯಸ್ಸಾಗುತ್ತದೆ, ಕ್ಷೀಣಿಸುತ್ತೇವೆ, ನಂತರ ಮರಣ ಹೊಂದುತ್ತವೆ. ಇದನ್ನು ಷಡ್-ವಿಕಾರ ಎನ್ನಲಾಗುತ್ತದೆ. ಭೌತಿಕವಾದ ಎಲ್ಲಾ ವಸ್ತುಗಳಿಗೂ ಅನ್ವಹಿಸುತ್ತದೆ. ಷಡ್-ವಿಕಾರವಿಲ್ಲದ ಇನ್ನೊಂದು ಸ್ಥಿತಿಯಿದೆ. ಅದು ಶಾಶ್ವತ. ಅದನ್ನು ಸನಾತನ ಧರ್ಮ ಎನ್ನುತ್ತಾರೆ. ಹಾಗು ಜೀವಿ, ಜೀವಿಗಳಾದ ನಮ್ಮನ್ನು ಶಾಶ್ವತ ಎಂದು ವಿವರಿಸಲಾಗಿದೆ. ನಾ ಹನ್ಯತೇ ಹನ್ಯಮಾನೇ ಶರೀರೆ (ಭ.ಗೀ 2.20). ಭಗವಂತನನ್ನೂ ಸಹಾ ಸನಾತನ ಎಂದು ಕರೆಯಲಾಗುತ್ತದೆ. ಆದ್ದರಿಂದ, ನಮ್ಮ ನೈಜ ಪರಿಸ್ಥಿತಿ ಏನೆಂದರೆ ನಾವು ಸನಾತನ, ಕೃಷ್ಣನೂ ಸನಾತನ, ಮತ್ತು ಕೃಷ್ಣನ ವಾಸಸ್ಥಾನವೂ ಸಹ ಸನಾತನವಾದದ್ದು. ನಾವು ಯಾವಾಗ ಸನಾತನ ಧರ್ಮದ ಕಡೆಗೆ ಹೋಗುತೆವೋ ಹಾಗು ಶ್ರೇಷ್ಟ ಸನಾತನನಾದ ಕೃಷ್ಣನೊಂದಿಗೆ ಜೀವಿಸುತೀವೋ... ಮತ್ತು ನಾವು ಕೂಡ ಸನಾತನ. ಯಾವ ಒಂದು ಪ್ರಕ್ರಿಯೆಯಿಂದ ನಾವು ಈ ಉತ್ತಮ ಜೀವನೋದ್ಧೇಶವನ್ನು ಸಾಧಿಸುತ್ತೇವೋ, ಅದನ್ನು ಸನಾತನ ಧರ್ಮ ಏನ್ನುತ್ತಾರೆ. ನಾವು ಇಲ್ಲಿ ಸನಾತನ ಧರ್ಮವನ್ನು ಕಾರ್ಯಗತಗೊಳಿಸುತ್ತಿದ್ದೇವೆ.

ಸನಾತನ ಧರ್ಮ ಹಾಗೂ ಭಾಗವತ ಧರ್ಮ ಎರಡೂ ಒಂದೇ. ಭಾಗವತ, ಭಗವಾನ್. ಭಗವಾನ್ ಪದದಿಂದ ಭಾಗವತ ಬಂದಿದೆ. ಈ ಭಾಗವತ-ಧರ್ಮವನ್ನು ಚೈತನ್ಯ ಮಹಾಪ್ರಭುಗಳು ವಿವರಿಸಿದ್ದಾರೆ. ಜೀವೇರ ಸ್ವರೂಪ ಹಯ ನಿತ್ಯ ಕೃಷ್ಣ ದಾಸ (ಚ.ಚೈ ಮಧ್ಯ 20.108-109), ಎಂದು ಹೇಳುತ್ತಾರೆ. ನಾವು ಕೃಷ್ಣನ ಸನಾತನ ಸೇವಕರು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ಭೌತಿಕ ಸಂಬಂಧದಿಂದ, ಭಗವಂತನ, ಕೃಷ್ಣನ ಸೇವಕನಾಗುವ ಬದಲು ನಾವು ಇತರ ವಸ್ತುಗಳ ಸೀವಕರಾಗಿದ್ದೇವೆ, ಮಾಯೆ, ಆದುದರಿಂದ ನಾವು ಬಳಲುತ್ತಿದ್ದೇವೆ. ನಮಗೆ ತೃಪ್ತಿ ಇಲ್ಲ. ಅದು ಸಾಧ್ಯವೂ ಇಲ್ಲ. ಅದು ಸರಿಹೊಂದುವುದಿಲ್ಲ. ಹೇಗೆಂದರೆ, ನೀವು ಯಂತ್ರದಿಂದ ಒಂದು ತಿರುಪು ಮೊಳೆಯನ್ನು ತೆಗೆಯಿರಿ. ಆ ಮೊಳೆಯು ಹೇಗೋ ಬಿದ್ದು ಹೋದರೆ, ಅದಕ್ಕೆ ಯಾವ ಮೌಲ್ಯವು ಇಲ್ಲ. ಆದರೆ ಅದೇ ಮೊಳೆಯನ್ನು ನೀವು ಆ ಯಂತ್ರದೊಂದಿಗೆ ಜೋಡಿಸಿದಾಗ, ಅಥವಾ ಯಂತ್ರವು ಮೊಳೆ ಇಲ್ಲದೆ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ, ಅದು ನಿಷ್ಕ್ರಿಯವಾದ ಸ್ಥಿತಿಯಲ್ಲಿ ಇರುತ್ತದೆ. ಆಗ ನೀವು ಆ ಮೊಳೆಯನ್ನು ಹೊಂದಿಸಿ ಯಂತ್ರವನ್ನು ಚಲಾಯಿಸಿದರೆ ಆಗ ಆ ತಿರುಪು ಮೊಳೆಗೆ ಬೆಲೆ ಸಿಗುತ್ತದೆ. ಹಾಗೆಯೇ, ನಾವು ಕೃಷ್ಣನ ಭಾಗಾಂಶ. ಮಾಮೈವಾಂಶೋ ಜೀವ-ಭೂತಃ (ಭ.ಗೀ 15.7), ಎಂದು ಶ್ರೀ ಕೃಷ್ಣನು ಹೇಳುತ್ತಾನೆ. ನಾವು ಈಗ ಅವನಿಂದ ಬೀರ್ಪಟ್ಟಿದ್ದೇವೆ. ನಮ್ಮ ಪತನವಾಗಿದೆ. ಇನ್ನೊಂದು ಉದಾಹರಣೆ ಎಂದರೆ, ಬೆಂಕಿ ಹಾಗು ಬೆಂಕಿಯ ಕಿಡಿ. ಬೆಂಕಿಯ ಕಿಡಿಯನ್ನು ಬೆಂಕಿಯ ಜೊತೆ ಇರುವವರೆಗೂ ಬೆಂಕಿ ಎಂದು ಹೇಳಬಹುದು. ಆದರೆ ಬೆಂಕಿಯಿಂದ ಅದು ಬೇರ್ಪಟ್ಟ ಕೂಡಲೇ ಅದು ನಂದಿಹೋಗುತದೆ. ಅದರಲ್ಲಿ ಬೆಂಕಿಯ ಗುಣ ಉಳಿದಿಲ್ಲ. ಆದರೆ ಅದನ್ನು ಮತ್ತೆ ಬೆಂಕಿಗೆ ಹಾಕಿದರೆ, ಅದು ಬೆಂಕಿಯ ಕಿಡಿ ಆಗುತ್ತದೆ.

ನಮ್ಮ ಸ್ಥಾನವೂ ಹಾಗೆಯೆ. ಹೇಗೋ ಈ ಭೌತಿಕ ಜಗತ್ತನ್ನು ಸೇರಿದೆವು. ನಾವು ಪರಮ ಪುರುಷನ ಅತಿಸೂಕ್ಷ್ಮ ಅಂಶವಾದರೂ ಸಹ, ನಾವು ಭೌತಿಕ ಜಗತ್ತಿನಲ್ಲಿ ಇರುವುದರಿಂದ, ದೇವರೊಡನೆ ಇರುವ ಆ ಸಂಬಂಧವನ್ನು ಮರೆತು ಬಿಟ್ಟಿದ್ದೇವೆ. ಮನಃ-ಷಷ್ಥಾನೀಂದ್ರಿಯಾಣಿ ಪ್ರಕೃತಿ-ಸ್ಥಾನಿ ಕರ್ಷತಿ (ಭ.ಗೀ 15.7). ನಾವು ಪ್ರಕೃತಿಯ ನಿಯಮಗಳಿಂದ ಅನೇಕ ರೀತಿಯಾಗಿ ಬಳಲುತ್ತಿದ್ದೇವೆ. ಇಲ್ಲಿಯೂ ನಾವು ಸೇವೆ ಮಾಡುತ್ತಿದ್ದೇವೆ. ನಾವು ಶಾಶ್ವತ ಸೇವಕರು. ಆದರೆ ನಾವು ದೇವರ ಸೇವೆಯನ್ನು ತೊರೆದಿರುವುದರಿಂದ ಬೇರೆ ವಿಷಯಗಳ ಸೇವಕರಾಗಿದ್ದೇವೆ. ಆದರೆ ಯಾರಿಗೂ ತೃಪ್ತಿ ಇಲ್ಲ. ಮಾನ್ಯ ನ್ಯಾಯಾಧೀಶರು ಹೇಳಿದ ಹಾಗೆ, ಯಾರೂ ತೃಪ್ತರಾಗಲು ಸಾಧ್ಯವಿಲ್ಲ. ಅದೇ ಸತ್ಯ. ತೃಪ್ತಿ ಪಡೆಯಲು ಸಾಧ್ಯವಿಲ್ಲ. ತೃಪ್ತಿ ಪಡಲು ಸಾಧ್ಯವಿಲ್ಲ, ಏಕೆಂದರೆ ಭಗವಂತನ ಸೇವಕವಾಗಿರುವುದು ನಮ್ಮ ಸಹಜಸ್ಥಿತಿ. ಆದರೆ ಈ ಭೌತಿಕ ಜಗತ್ತಿನಲ್ಲಿ ಇತರ ವಿಷಯಗಳ ಸೇವೆಗೆ ನಮ್ಮನ್ನು ಇರಿಸಲಾಗಿದೆ. ಅದು ನಮಗೆ ಸರಿ ಹೊಂದುವುದಿಲ್ಲ. ಹಾಗಾಗಿ ನಾವು ಸೇವೆಯ ಉಪಾಯಗಳನ್ನು ಸೃಷ್ಟಿಸುತಿದ್ದೇವೆ. ಇದನ್ನು ಮಾನಸಿಕ ಕಲ್ಪನೆ ಎನ್ನುತಾರೆ. ಮನಃ-ಷಷ್ಥಾನೀಂದ್ರಿಯಾಣಿ ಪ್ರಕೃತಿ-ಸ್ಥಾನಿ ಕರ್ಷತಿ (ಭ.ಗೀ 15.7). ಒಂದು ಹೆಣಗಾಟ, ಇದು ಒಂದು ಹೆಣಗಾಟ.