KN/Prabhupada 0149 - ನಮ್ಮ ಪರಮಪಿತಾ ಯಾರೆಂದು ತಿಳಿಯುವುದೆ ಈ ಕೃಷ್ಣ ಪ್ರಜ್ಞೆ ಆಂದೋಲನೆ



Tenth Anniversary Address -- Washington, D.C., July 6, 1976

ಆದ್ದರಿಂದ, ಈ ಕೃಷ್ಣ ಪ್ರಜ್ಞೆ ಆಂದೋಲನದ ಮುಖ್ಯ ಗುರಿ ಏನೆಂದರೆ ನಮ್ಮ ಪರಮಪಿತಾ ಯಾರು ಎಂದು ತಿಳಿದುಕೊಳ್ಳುವುದು. ಪರಮಪಿತಾ. ಅದೇ ಈ ಚಳುವಳಿಯ ಸಾರವಾಗಿದೆ. ನಮ್ಮ ತಂದೆ ಯಾರೆಂದು ನಮಗೆ ತಿಳಿಯದಿದ್ದರೆ, ಅದು ಅವಮಾನಕರವಾದ ಸ್ಥಿತಿ. ಭಾರತದಲ್ಲಿ ಇದೊಂದು ಪದ್ಧತಿ. ಯಾರಾದರೂ ತನ್ನ ತಂದೆಯ ಹೆಸರನ್ನು ಹೇಳಲು ಸಾಧ್ಯವಾಗದಿದ್ದರೆ, ಅವನು ಗೌರವಾನ್ವಿತನಲ್ಲ. ಮತ್ತು ನ್ಯಾಯಾಲಯದ ಪದ್ಧತಿಯಂತೆ ನಿಮ್ಮ ಹೆಸರನ್ನು ಬರೆಯುವಾಗ, ನಿಮ್ಮ ತಂದೆಯ ಹೆಸರನ್ನು ಬರೆಯಬೇಕು. ಭಾರತೀಯ ವೈದಿಕ ವ್ಯವಸ್ಥೆಯಂತೆ ಅವನ ಸ್ವಂತ ಹೆಸರು, ಅವನ ತಂದೆಯ ಹೆಸರು, ಮತ್ತು ಅವನ ಹಳ್ಳಿಯ ಹೆಸರನ್ನು ಬರೆಯಬೇಕು. ಈ ಮೂರು ಒಟ್ಟಿಗೆ ಸೇರಿಕೊಂಡವು. ಈ ವ್ಯವಸ್ಥೆಯು ಇತರ ದೇಶಗಳಲ್ಲಿ ಪ್ರಚಲಿತದಲ್ಲಿರಬಹುದು, ಆದರೆ ಭಾರತದಲ್ಲಿ ಇದುವೆ ವ್ಯವಸ್ಥೆ. ಮೊದಲ ಹೆಸರು ಅವನ ಸ್ವಂತ ಹೆಸರು, ಎರಡನೆಯ ಹೆಸರು ಅವನ ತಂದೆಯ ಹೆಸರು, ಮತ್ತು ಮೂರನೆಯ ಹೆಸರು ಅವನು ಹುಟ್ಟಿದ ಹಳ್ಳಿ ಅಥವಾ ದೇಶ. ಇದು ವ್ಯವಸ್ಥೆ. ಆದ್ದರಿಂದ ತಂದೆಯ..., ನಾವು ತಂದೆಯನ್ನು ತಿಳಿದಿರಬೇಕು. ಇದುವೆ ಕೃಷ್ಣ ಪ್ರಜ್ಞೆಯ ಚಳುವಳಿ. ನಾವು ನಮ್ಮ ತಂದೆಯನ್ನು ಮರೆಯುವುದು ಸರಿಯಲ್ಲ. ಮತ್ತು ಎಂತಾ ತಂದೆ? ಪರಂ ಬ್ರಹ್ಮ ಪರಂ ಧಾಮ (ಭ.ಗೀ 10.12). ಅತ್ಯಂತ ಶ್ರೀಮಂತ. ಮಕ್ಕಳಿಗೆ ಆಹಾರ ಕೂಡ ನೀಡಲಾಗದ ಬಡ ತಂದೆಯಲ್ಲ. ಅಂತ ತಂದೆ ಅಲ್ಲ. ಏಕೋ ಯೋ ಬಹೂನಾಂ ವಿದಧಾತಿ ಕಾಮಾನ್. ಆ ತಂದೆಯು ಎಷ್ಟು ಶ್ರೀಮಂತನೆಂದರೆ ಅವನೆ ಕೋಟ್ಯಾಂತರ ಜೀವರಾಶಿಗಳಿಗೆ ಆಹಾರ ನೀಡುತ್ತಿದ್ದಾನೆ. ಆಫ್ರಿಕಾದಲ್ಲಿ ಲಕ್ಷಾಂತರ ಆನೆಗಳಿವೆ. ಅವನು ಅವುಗಳಿಗೆ ಆಹಾರವನ್ನು ನೀಡುತ್ತಿದ್ದಾನೆ. ಮತ್ತು ಈ ಕೋಣೆಯೊಳಗೆ ಒಂದು ರಂಧ್ರವಿದೆ, ಅಲ್ಲಿ ಲಕ್ಷಾಂತರ ಇರುವೆಗಳು ಇರಬಹುದು. ಅವುಗಳಿಗೂ ಆಹಾರವನ್ನು ನೀಡುತ್ತಿದ್ದಾನೆ. ಏಕೋ ಯೋ ಬಹೂನಾಂ ವಿದಧಾತಿ ಕಾಮಾನ್. ನಿತ್ಯೋ ನಿತ್ಯಾನಾಂ ಚೇತನಶ್ ಚೇತನಾನಾಮ್ (ಕಠ ಉಪನಿಷದ್ 2.2.13). ಇವು ವೈದಿಕ ಮಾಹಿತಿ.

ಆದ್ದರಿಂದ, ಮಾನವ ಜೀವನದ ಉದ್ದೇಶ ನಮ್ಮ ತಂದೆ ಯಾರು, ಅವನ ಕಾನೂನು ಏನು, ದೇವರು ಯಾರು, ಅವನೊಂದಿಗೆ ನಮ್ಮ ಸಂಬಂಧ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಇದು ವೇದಾಂತ. ವೇದಾಂತ ಎಂದರೆ ಅಸಂಬದ್ಧವಾಗಿ ಮಾತನಾಡುವುದು ಮತ್ತು ತಂದೆಯೊಂದಿಗೆ ಸಂಬಂಧವಿಲ್ಲದಿರುವುದು ಎಂದು ಅರ್ಥವಲ್ಲ. ಶ್ರಮ ಏವ ಹಿ ಕೇವಲಮ್. ನಿಮ್ಮ ತಂದೆ ಯಾರು ಎಂದು ನಿಮಗೆ ಗೊತ್ತಿಲ್ಲದಿದ್ದರೆ...

ಧರ್ಮಃ ಸ್ವಾನುಷ್ಠಿತಃ ಪುಮ್ಸಾಂ
ವಿಷ್ವಕ್ಸೇನ-ಕಥಾಸು ಯಃ
ನೋತ್ಪಾದಯೇದ್‌ ಯದಿ ರತಿಂ
ಶ್ರಮ ಏವ ಹಿ ಕೇವಲಂ
(ಶ್ರೀ.ಭಾ 1.2.8)

ಇದು ಬೇಕಾಗಿಲ್ಲ. ಮತ್ತು ಕೃಷ್ಣ ಹೇಳುತ್ತಾನೆ, ವೇದೈಶ್ಚ ಸರ್ವೈರ್ ಅಹಮ್ ಏವ ವೇದ್ಯಃ (ಭ.ಗೀ 15.15). ನೀವು ವೇದಾಂತಿಗಳಾಗುತ್ತೀರಿ, ಅದು ತುಂಬಾ ಒಳ್ಳೆಯದು. ವೇದಾಂತದ ಪ್ರಾರಂಭದಲ್ಲಿ ಸರ್ವವೂ ಪರಮಸತ್ಯನಿಂದ ಶೃಷ್ಟಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಅಥಾತೋ ಬ್ರಹ್ಮ ಜಿಜ್ಞಾಸಾ. ಇದೇ ಪ್ರಾರಂಭ. ಸಂಪೂರ್ಣ ಸತ್ಯವನ್ನು ಅರ್ಥಮಾಡಿಕೊಳ್ಳುವುದೆ ಈ ಮಾನವ ಜೀವನದ ಉದ್ದೇಶ, ಜಿಜ್ಞಾಸಾ. ಪರಮ ಸತ್ಯ ಯಾರು ಎಂದು ವಿಚಾರಿಸಬೇಕು. ಅದೇ ಮಾನವ ಜೀವನ. ಸಂಪೂರ್ಣ ಸತ್ಯವನ್ನು ಕಂಡುಹಿಡಿಯುವುದು. ಆದ್ದರಿಂದ, ಮುಂದಿನ ಸೂತ್ರವು ಸಂಪೂರ್ಣ ಸತ್ಯವು ಎಲ್ಲದಕ್ಕೂ ಮೂಲವೆಂದು ತಕ್ಷಣವೇ ಹೇಳುತ್ತದೆ. ಮತ್ತು ಎಲ್ಲವೂ ಎಂದರೇನು? ಎರಡು ವಿಷಯಗಳು: ಚರ ಮತ್ತು ಅಚರ. ಪ್ರಾಯೋಗಿಕ ಅನುಭವ. ಅವುಗಳಲ್ಲಿ ಕೆಲವು ಸಜೀವವಾಗಿವೆ ಮತ್ತು ಕೆಲವು ನಿರ್ಜೀವವಾಗಿವೆ. ಎರಡು ವಿಷಯಗಳು. ಈಗ ನಾವು ಪ್ರಭೇದಗಳನ್ನು ವಿಸ್ತರಿಸಬಹುದು. ಅದು ಬೇರೆ. ಆದರೆ ಎರಡು ವಿಷಯಗಳಿವೆ. ಆದ್ದರಿಂದ, ಈ ಎರಡು ವಸ್ತುಗಳು, ಚರ ಮತ್ತು ಅಚರಗಳಿಗೆ ನಿಯಂತ್ರಕನಿದ್ದಾನೆ. ಹಾಗಾದರೆ ನಾವು ಈಗ ವಿಚಾರಿಸಬೇಕಾಗಿರುವುದು ಏನೆಂದರೆ ಚರ ಮತ್ತು ಅಚರವಾದ ಈ ಎರಡು ವಸ್ತುಗಳ ಮೂಲ ಯಾವುದು ಎಂದು. ಇದನ್ನು ಶ್ರೀಮದ್ ಭಾಗವತದಲ್ಲಿ ವಿವರಿಸಲಾಗಿದೆ - ಜನ್ಮಾದಿ ಅಸ್ಯ ಯತೋ ಅನ್ವಯಾದ್ ಇತರತಶ್ ಚಾರ್ತೇಷ್ವ್ ಅಭಿಜ್ಞಾಃ (ಶ್ರೀ.ಭಾ 1.1.1). ಇದು ವಿವರಣೆ.

ಎಲ್ಲದರ ಆದಿಮೂಲ ಅಭಿಜ್ಞಾಃ. ಹೇಗೆ? ಅನ್ವಯಾದ್ ಇತರತಶ್ ಚಾರ್ಥೇಷು.‌ ನಾನು ಏನನ್ನಾದರೂ ಸೃಷ್ಟಿಸಿದರೆ, ನನಗೆ ಅದರ ಪ್ರತಿಯೊಂದು ವಿವರವು ತಿಳಿದಿರುತ್ತದೆ. ಅನ್ವಯಾದ್, ನೇರವಾಗಿ ಅಥವಾ ಪರೋಕ್ಷವಾಗಿ, ನನಗೆ ತಿಳಿದಿರುತ್ತದೆ. ನಾನು ಏನನ್ನಾದರೂ ತಯಾರಿಸಿದರೆ... ನನಗೆ ಯಾವುದಾದರು ವಿಶೇಷ ಅಡುಗೆ ತಿಳಿದಿದ್ದರೆ, ಅದನ್ನು ಹೇಗೆ ಮಾಡಬೇಕೆಂದು ನನಗೆ ಎಲ್ಲಾ ವಿವರಗಳು ತಿಳಿದಿರುತ್ತದೆ. ಅದು ಮೂಲ. ಆದ್ದರಿಂದ, ಆ ಮೂಲವು ಕೃಷ್ಣ. ಕೃಷ್ಣ ಹೇಳುತ್ತಾನೆ, ವೇದಾಹಂ ಸಮತೀತಾನಿ: (ಭ.ಗೀ 7.26) "ನಾನು ಎಲ್ಲವನ್ನೂ ತಿಳಿದಿದ್ದೇನೆ - ಭೂತ, ವರ್ತಮಾನ, ಮತ್ತು ಭವಿಷ್ಯ.” ಮತ್ತಃ ಸರ್ವಂ ಪ್ರವರ್ತತೇ. ಅಹಮ್ ಆದಿರ್ ಹಿ ದೇವಾನಾಮ್ (ಭ.ಗೀ 10.2). ಸೃಷ್ಟಿ ಸಿದ್ಧಾಂತದ ಪ್ರಕಾರ... ಸಿದ್ಧಾಂತವಲ್ಲ, ಸತ್ಯ. ಬ್ರಹ್ಮವಿಷ್ಣು ಮಹೇಶ್ವರ. ಇವುರು ಪ್ರಧಾನ ದೇವತೆಗಳು. ವಿಷ್ಣುವೇ ಮೂಲ. ಅಹಮ್ ಆದಿರ್ ಹಿ ದೇವಾನಾಮ್. ಸೃಷ್ಟಿಯಲ್ಲಿ ಮೊದಲು ಮಹಾ-ವಿಷ್ಣು. ಮಹಾವಿಷ್ಣುವಿನಿಂದ ಗರ್ಭೋದಕಶಾಯಿ ವಿಷ್ಣು. ಗರ್ಭೋದಕಶಾಯಿ ವಿಷ್ಣುವಿನ ವಿಸ್ತರಣೆಯಾದ ಕ್ಷೀರೋದಕಶಾಯಿ ವಿಷ್ಣು ಬರುತ್ತಾನೆ, ಮತ್ತು ಅವನಿಂದ ಬ್ರಹ್ಮನು ಜನಿಸುತ್ತಾನೆ. ಬ್ರಹ್ಮನು ಗರ್ಭೋದಕಶಾಯಿ ವಿಷ್ಣುವಿನ ನಾಭಿಕಮಲದ ಮೇಲೆ ಹುಟ್ಟುತ್ತಾನೆ, ನಂತರ ಅವನು ರುದ್ರನಿಗೆ ಜನ್ಮ ನೀಡುತ್ತಾನೆ. ಇದು ಸೃಷ್ಟಿಯ ವಿವರಣೆ. ಆದ್ದರಿಂದ, ಕೃಷ್ಣನು ʼಅಹಮ್ ಆದಿರ್ ಹಿ ದೇವಾನಾಮ್ʼ ಎನ್ನುತ್ತಾನೆ. ಅವನು ವಿಷ್ಣುವಿನ ಮೂಲವೂ ಕೂಡ, ಏಕೆಂದರೆ ಶಾಸ್ತ್ರದಲ್ಲಿ ಹೇಳಲಾಗಿದೆ, ಕೃಷ್ಣಸ್ ತು ಭಗವಾನ್ ಸ್ವಯಂ (ಶ್ರೀ.ಭಾ 1.3.28). ಶ್ರೀ ಕೃಷ್ಣನು ದೇವೋತ್ತಮ ಪರಮಪುರುಷನು. ಮತ್ತು ಕೃಷ್ಣನ ಮೊದಲ ವಿಸ್ತರಣೆ ಬಲದೇವ. ನಂತರ ಅವನಿಂದ ಚತುರ್-ವ್ಯೂಹ - ವಾಸುದೇವ, ಸಂಕರ್ಷಣ, ಅನಿರುದ್ಧ, ಹಾಗೆ. ನಂತರ ನಾರಾಯಣ. ನಾರಾಯಣನಿಂದ ಎರಡನೇ ಚತುರ್-ವ್ಯೂಹ, ಮತ್ತು ಎರಡನೇ ಚತುರ್-ವ್ಯೂಹದಿಂದ ಸಂಕರ್ಷಣ, ಮಹಾ-ವಿಷ್ಣು. ಈ ರೀತಿಯಲ್ಲಿ ನೀವು ಶಾಸ್ತ್ರಗಳನ್ನು ಕಲಿಯಬೇಕು. ಶಾಸ್ತ್ರದಲ್ಲಿ ಹೇಳುವಂತೆ, ಕೃಷ್ಣಸ್ ತು ಭಗವಾನ್ ಸ್ವಯಂ ಎಂದು ನೀವು ನಿಜವಾಗಿ ಕಾಣುವಿರಿ. ಮತ್ತು ಕೃಷ್ಣ ಹೇಳುತ್ತಾನೆ, ಅಹಮ್ ಆದಿರ್ ಹಿ ದೇವಾನಾಮ್ (ಭ.ಗೀ 10.2). ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ (ಭ.ಗೀ 10.8). ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭಾವನ್‌ʼ ಅನ್ನು ಅರ್ಜುನನು ಸ್ವೀಕರಿಸುತ್ತಾನೆ (ಭ.ಗೀ 10.12). ಆದ್ದರಿಂದ, ನಾವು ಶಾಸ್ತ್ರವನ್ನು ಒಪ್ಪಿಕೊಳ್ಳಬೇಕು. ಶಾಸ್ತ್ರ-ಚಕ್ಷುಷಾತಃ, ನೀವು ಶಾಸ್ತ್ರದ ಮೂಲಕ ನೋಡಬೇಕು. ಮತ್ತು ನೀವು ಶಾಸ್ತ್ರವನ್ನು ಕಲಿತರೆ, ನೀವು ಕೃಷ್ಣಸ್ ತು ಭಗವಾನ್ ಸ್ವಯಮ್ ಅನ್ನು ಕಾಣುವಿರಿ.

ಮಾನವ ಸಮಾಜಕ್ಕೆ ದೇವೋತ್ತಮ ಪರಮಪುರುಷನನ್ನು ಪರಿಚಯಿಸುವುದೆ ಈ ಕೃಷ್ಣ ಪ್ರಜ್ಞೆ ಆಂದೋಲನದ ಉದ್ದೇಶವಾಗಿದೆ. ಇದೆ ಕೃಷ್ಣ ಪ್ರಜ್ಞೆಯ ಚಳುವಳಿ. ನಾವು 1966ರಲ್ಲಿ ಈ ಚಳುವಳಿಯನ್ನು ಪ್ರಾರಂಭಿಸಿದ್ದೇವೆ, ನೋಂದಾಯಿಸಿದ್ದೇವೆ. ನಮ್ಮ ರೂಪಾನುಗ ಪ್ರಭು ಈಗಾಗಲೇ ವಿವರಿಸಿದ್ದಾರೆ. ಆದ್ದರಿಂದ ಈ ಚಳುವಳಿಯನ್ನು ಗಂಭೀರವಾಗಿ ಪರಿಗಣಿಸಿ. ಐತಿಹಾಸಿಕವಾಗಿ, ಇದನ್ನು ಕೃಷ್ಣನು ಐದು ಸಾವಿರ ವರ್ಷಗಳ ಹಿಂದೆ ಪ್ರಾರಂಭಿಸಿದನು. ಮತ್ತು ಅವನು ಅರ್ಜುನನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿ ಈ ಚಳುವಳಿಯನ್ನು ಪ್ರಾರಂಭಿಸಿದನು. ಐದು ನೂರು ವರ್ಷಗಳ ಹಿಂದೆ, ಚೈತನ್ಯ ಮಹಾಪ್ರಭುಗಳು ಮತ್ತೆ ಅದೇ ಚಳುವಳಿಯನ್ನು ಪುನರುಜ್ಜೀವನಗೊಳಿಸಿದರು. ಅವನು ಸ್ವಯಂ ಕೃಷ್ಣ. ಅದು ಹಾಗೆಯೆ ಮುಂನಡೆಯುತ್ತಿದೆ. ಇದೊಂದು ಕೇವಲ ನಿರ್ಮಿತ ಚಳುವಳಿ ಎಂದು ಭಾವಿಸಬೇಡಿ. ಇಲ್ಲ. ಇದು ಅಧಿಕೃತವಾದ ಮತ್ತು ಧರ್ಮಾಧಿಕಾರಿಗಳಿಂದ ದೃಢಪಡಿಸಿರುವ ಚಳುವಳಿಯಾಗಿದೆ. ಮಹಾಜನೋ ಯೇನ ಗತಃ ಸ ಪಂಥಾಃ (ಚೈ.ಚ ಮಧ್ಯ 17.186). ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಮಹಾಜನರಿದ್ದಾರೆ. ಆದ್ದರಿಂದ, ಕೃಷ್ಣ ಪ್ರಜ್ಞೆಯ ಆಂದೋಲನದಲ್ಲಿ ಸ್ಥಿರವಾಗಿರಿ ಮತ್ತು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಮಲ್ಲಿ ಎಷ್ಟೋ ಸಾಹಿತ್ಯಗಳು, ಅಧಿಕೃತ ಸಾಹಿತ್ಯಗಳಿವೆ. ಮತ್ತು ನಿಮ್ಮ ಜೀವನವನ್ನು ಸಫಲವಾಗಿಸಿ.

ತುಂಬ ಧನ್ಯವಾದಗಳು.