KN/Prabhupada 0158 - ತಾಯಿಯನ್ನು ಕೊಲ್ಲುವ ನಾಗರಿಕತೆ



Lecture on SB 5.5.3 -- Stockholm, September 9, 1973

ನೂನಂ ಪ್ರಮತ್ತಃ ಕುರುತೇ ವಿಕರ್ಮ (ಶ್ರೀ.ಭಾ 5.5.4). ವಿಕರ್ಮ ಎಂದರೆ ನಿಷೇಧಿತ, ದುಷ್ಕರ್ಮಗಳು. ಮೂರು ರೀತಿಯ ಕರ್ಮಗಳಿವೆ: ಕರ್ಮ, ವಿಕರ್ಮ, ಮತ್ತು ಅಕರ್ಮ. ಕರ್ಮ ಎಂದರೆ ನಿಯೋಜಿತ ಕರ್ತವ್ಯಗಳು. ಅದು ಕರ್ಮ. ‘ಸ್ವ-ಕರ್ಮಣಾ’ದಂತೆ. ಭಗವದ್ಗೀತೆಯಲ್ಲಿ: ಸ್ವ-ಕರ್ಮಣಾ ತಮ್ ಅಭ್ಯರ್ಚ್ಯ (ಭ.ಗೀ 18.46). ಎಲ್ಲರಿಗೂ ನಿಯೋಜಿತ ಕರ್ತವ್ಯಗಳಿವೆ. ಆ ವೈಜ್ಞಾನಿಕ ತಿಳುವಳಿಕೆ ಎಲ್ಲಿದೆ? ಇರಲೇ ಬೇಕು... ಮಾನವ ಸಮಾಜದ ವೈಜ್ಞಾನಿಕ ವಿಭಜನೆ ಬಗ್ಗೆ ನಾನು ಮೊನ್ನೆ ಹೇಳಿದ. ಅತ್ಯಂತ ಬುದ್ಧಿವಂತ ವರ್ಗದವರನ್ನು ಬ್ರಾಹ್ಮಣರಾಗಲು ತರಬೇತಿ ನೀಡಬೇಕು. ಕಡಿಮೆ, ಸ್ವಲ್ಪ ಕಡಿಮೆ ಬುದ್ಧಿವಂತರಿಗೆ ನಿರ್ವಾಹಕರಾಗಲು ತರಬೇತಿ ನೀಡಬೇಕು. ಇನ್ನೂ ಕಡಿಮೆ ಬುದ್ಧಿವಂತರನ್ನು ವ್ಯಾಪಾರಿಗಳು, ಕೃಷಿಕರು, ಮತ್ತು ಗೋರಕ್ಷಕರಾಗಲು ತರಬೇತಿ ನೀಡಬೇಕು. ಆರ್ಥಿಕ ಅಭಿವೃದ್ಧಿಗೆ ಗೋಸಂರಕ್ಷಣೆ ಅತ್ಯಾಗತ್ಯ. ಆದರೆ ಇದು ಈ ಕಿಡಿಗೇಡಿಗಳಿಗೆ ಗೊತ್ತಿಲ್ಲ. ಆದರೆ ಈಗಿನ ಆರ್ಥಿಕ ಅಭಿವೃದ್ಧಿಯು ಗೋಹತ್ಯೆಯಿಂದ ಆಗುತ್ತಿದೆ. ನೋಡಿ, ಧೂರ್ತರ ನಾಗರಿಕತೆ. ವ್ಯಸನ ಪಡಬೇಡಿ. ಇದು ಶಾಸ್ತ್ರ. ನಾನು ಪಾಶ್ಚಿಮಾತ್ಯ ನಾಗರಿಕತೆಯನ್ನು ಟೀಕಿಸುತ್ತಿದ್ದೇನೆ ಎಂದು ಭಾವಿಸಬೇಡಿ. ಇದು ಶಾಸ್ತ್ರದ ವಾಕ್ಕು. ಬಹಳ ಅನುಭವಿಯಾದ ವಾಕ್ಕು.

ಎಷ್ಟೋ ಆರ್ಥಿಕ ಅಭಿವೃದ್ಧಿ ಪ್ರತಿಪಾದಕರು ಇದ್ದಾರೆ, ಆದರೆ ಆರ್ಥಿಕ ಅಭಿವೃದ್ಧಿಯ ಅಂಶಗಳಲ್ಲಿ ಗೋಸಂರಕ್ಷಣೆ ಒಂದಾಗಿದೆ ಎಂದು ಅವರಿಗೆ ತಿಳಿದಿಲ್ಲ. ಈ ಧೂರ್ತರಿಗೆ ಅದು ಗೊತ್ತಿಲ್ಲ. ಗೋಹತ್ಯೆ ಉತ್ತಮ ಕಾರ್ಯವೆಂದು ಅವರು ಭಾವಿಸುತ್ತಿದ್ದಾರೆ. ಅದು ಸುಳ್ಳು. ಆದುದರಿಂದ, ಕುರುತೇ ವಿಕರ್ಮ. ಕೇವಲ ನಾಲಿಗೆಯ ಅಲ್ಪ ತೃಪ್ತಿಗೋಸ್ಕರ. ಹಾಲಿನಿಂದ ನೀವು ಅದೇ ಪ್ರಯೋಜನವನ್ನು ಪಡೆಯಬಹುದು, ಆದರೆ ಇವರು ದುಷ್ಟರು, ಹುಚ್ಚರಾಗಿರುವ ಕಾರಣ ಹಾಲು ಕುಡಿಯುವುದಕ್ಕಿಂತ ಹಸುವಿನ ರಕ್ತವನ್ನು ಕುಡಿಯುವುದು ಉತ್ತಮ ಎಂದು ಭಾವಿಸುತ್ತಾರೆ. ಹಾಲು ರಕ್ತದ ರೂಪಾಂತರವು ಎಂದು ಎಲ್ಲರಿಗೂ ತಿಳಿದಿದೆ. ಎಲ್ಲರಿಗೂ ಗೊತ್ತು. ಮನುಷ್ಯರಂತೆ, ತಾಯಿಯು ಮಗು ಹುಟ್ಟಿದ ತಕ್ಷಣ... ಮಗು ಹುಟ್ಟುವ ಮುನ್ನ ತಾಯಿಯ ಎದೆಯಲ್ಲಿ ಹಾಲಿನ ಒಂದು ಹನಿಯೂ ಇರುವುದಿಲ್ಲ. ನೋಡಿ. ಚಿಕ್ಕ ಹುಡುಗಿಯಲ್ಲಿ, ಎದೆಯಲ್ಲಿ ಹಾಲು ಇರುವುದಿಲ್ಲ. ಆದರೆ ಮಗು ಹುಟ್ಟಿದ ತಕ್ಷಣ ಹಾಲು ಬರುತ್ತದೆ. ತಕ್ಷಣವೇ, ಸ್ವಯಂಪ್ರೇರಿತವಾಗಿ. ಇದು ದೇವರ ವ್ಯವಸ್ಥೆ. ಏಕೆಂದರೆ ಮಗುವಿಗೆ ಆಹಾರ ಬೇಕು. ದೇವರ ವ್ಯವಸ್ಥೆ ಹೇಗಿದೆ ನೋಡಿ. ಆದರೂ ಆರ್ಥಿಕ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇವೆ. ದೇವರ ಮತ್ತು ಪ್ರಕೃತಿಯ ಆರ್ಥಿಕ ಕಾರ್ಯಕ್ರಮ ಎಷ್ಟು ಚೆನ್ನಾಗಿದೆ ನೋಡಿ. ಒಂದು ಮಗು ಹುಟ್ಟಿದ ತಕ್ಷಣ ತಾಯಿಯು ಹಾಲು ಕುಡಿಸಲು ಸಿದ್ಧವಾಗುತ್ತಾಳೆ. ಇದೇ ಆರ್ಥಿಕ ಅಭಿವೃದ್ಧಿ ಎಂದರೆ. ಹಾಗಾಗಿ, ಅದೇ ಹಾಲನ್ನು ಹಸು ನೀಡುತ್ತದೆ. ಅವಳು ನಿಜವಾಗಿಯೂ ತಾಯಿ, ಆದರೆ ಈ ಧೂರ್ತ ನಾಗರಿಕತೆಯು ತಾಯಿಯನ್ನು ಕೊಲ್ಲುತ್ತಿದೆ. ತಾಯಿಯನ್ನು ಕೊಲ್ಲುವ ನಾಗರಿಕತೆ. ನೋಡಿ. ನಿಮ್ಮ ಜೀವನದ ಆರಂಭದಲ್ಲಿ ನೀವು ನಿಮ್ಮ ತಾಯಿಯ ಎದೆಯನ್ನು ಹೀರುತ್ತೀರಿ, ಆದರೆ ಅವಳು ವಯಸ್ಸಾದಾಗ, "ತಾಯಿ ನಿಷ್ಪ್ರಯೋಜಕ ಹೊರೆ, ಅವಳ ಕತ್ತನ್ನು ಕತ್ತರಿಸು", ಎಂದು ನೀವು ಭಾವಿಸಿದರೆ ಅದು ನಾಗರಿಕತೆಯೇ?