KN/Prabhupada 0160 - ಕೃಷ್ಣ ಪ್ರತಿಭಟಿಸುತ್ತಿದ್ದಾನೆ
Conversation at Airport -- October 26, 1973, Bombay
ಪ್ರಭುಪಾದ: ಆದ್ದರಿಂದ, ಜೀವನದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಜನರಿಗೆ ಶಿಕ್ಷಣ ನೀಡುವುದೇ ನಮ್ಮ ಕೃಷ್ಣ ಪ್ರಜ್ಞೆ ಆಂದೋಲನವಾಗಿದೆ. ಆಧುನಿಕ ಶಿಕ್ಷಣ ಮತ್ತು ನಾಗರಿಕತೆಯ ವ್ಯವಸ್ಥೆಯು ಎಷ್ಟು ಅಧಃಪತನಗೊಂಡಿದೆಯೆಂದರೆ ಜನರು ಜೀವನದ ಮೌಲ್ಯವನ್ನು ಮರೆತಿದ್ದಾರೆ. ಸಾಮಾನ್ಯವಾಗಿ, ಈ ಭೌತಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಜೀವನದ ಮೌಲ್ಯವನ್ನು ಮರೆತುಬಿಡುತ್ತಾರೆ, ಆದರೆ ಮಾನವ ಜನ್ಮವು ಜೀವನದ ಪ್ರಾಮುಖ್ಯತೆಯನ್ನು ಜಾಗೃತಗೊಳಿಸುವ ಒಂದು ಅವಕಾಶವಾಗಿದೆ. ಶ್ರೀಮದ್-ಭಾಗವತಂನಲ್ಲಿ ‘ಪರಾಭವಸ್ ತಾವದ್ ಅಬೋಧ-ಜಾತೋ ಯಾವನ್ ನ ಜಿಜ್ಞಾಸತ ಆತ್ಮ-ತತ್ತ್ವಂ’ (ಶ್ರೀ.ಭಾ 5.5.5) ಎಂದು ಹೇಳಲಾಗಿದೆ. ಎಲ್ಲಿಯವರೆಗೆ ಆತ್ಮಸಾಕ್ಷಾತ್ಕಾರದ ಪ್ರಜ್ಞೆಗೆ ಮೂರ್ಖ ಜೀವಿಯು ಎಚ್ಚರಗೊಳ್ಳುವುದಿಲ್ಲವೋ ಅಲ್ಲಿಯವರೆಗೆ, ಅವನು ಏನು ಮಾಡುತ್ತಿದ್ದರೂ ಅದು ಅವನಿಗೆ ಸೋಲು. ಜೀವಿಗಳ ಕೆಳವರ್ಗದಲ್ಲಿ ಈ ಸೋಲು ನಡೆಯುತ್ತಿದೆ, ಏಕೆಂದರೆ ಜೀವನದ ಮೌಲ್ಯವೇನು ಎಂದು ಅವರಿಗೆ ಅರ್ಥವಾಗುವುದಿಲ್ಲ. ಅವರ ಪ್ರಜ್ಞೆ ಬೆಳದಿಲ್ಲ. ಆದರೆ ಮಾನವ ಜನ್ಮದಲ್ಲೂ ಸಹ, ಅದೇ ಸೋಲು ಮುಂದುವರಿದರೆ, ಅದು ಒಂದು ಉತ್ತಮ ನಾಗರಿಕತೆ ಅಲ್ಲ. ಅದು ಪಶುಗಳ ನಾಗರಿಕತೆ. ಆಹಾರ-ನಿದ್ರಾ-ಭಯ-ಮೈಥುನಂ ಚ ಸಮಾನ್ಯಾ ಏತತ್ ಪಶುಭಿರ್ ನರಾಣಾಂ. ಜನರು ಕೇವಲ ಶಾರೀರಿಕ ಬೇಡಿಕೆಗಳಾದ ತಿನ್ನುವುದು, ನಿದ್ರೆ, ಮೈಥುನ, ಮತ್ತು ರಕ್ಷಣೆ ಎಂಬ ನಾಲ್ಕು ತತ್ವಗಳಲ್ಲಿ ತೊಡಗಿದ್ದರೆ - ಅದು ಪಶುಗಳ ಜೀವನದಲ್ಲೂ ಕಾಣಬಹುದು - ಅದು ನಾಗರಿಕತೆಯ ಪ್ರಗತಿಯಲ್ಲ. ಆದ್ದರಿಂದ, ಮಾನವ ಜೀವನದ ಜವಾಬ್ದಾರಿಯನ್ನು ತಿಳಿಯಲು ಜನರಿಗೆ ಶಿಕ್ಷಣ ನೀಡುವುದು ನಮ್ಮ ಕೃಷ್ಣಪ್ರಜ್ಞೆ ಆಂದೋಲನದ ಪ್ರಯತ್ನವಾಗಿದೆ. ಇದೇ ನಮ್ಮ ವೈದಿಕ ನಾಗರಿಕತೆ. ಜೀವನದ ಸಮಸ್ಯೆಯು ಈ ಜೀವಿತಾವಧಿಯ ಕೆಲವು ವರ್ಷಗಳ ಕಷ್ಟಗಳಲ್ಲ. ಹುಟ್ಟು, ಸಾವು, ವೃದ್ಧಾಪ್ಯ, ಮತ್ತು ರೋಗದ ಪುನರಾವರ್ತನೆಯನ್ನು ಹೇಗೆ ಪರಿಹರಿಸುವುದು ಎಂಬುದು ಜೀವನದ ನಿಜವಾದ ಸಮಸ್ಯೆಯಾಗಿದೆ.
ಇದುವೇ ಭಗವದ್ಗೀತೆಯ ಆದೇಶ: ಜನ್ಮ-ಮೃತ್ಯು-ಜರಾ-ವ್ಯಾಧಿ-ದುಃಖ-ದೋಷಾನುದರ್ಶನಂ (ಭ.ಗೀ 13.9). ಜೀವನದ ಅನೇಕ ಸಮಸ್ಯೆಗಳಿಂದ ಜನರು ನರಳುತ್ತಿದ್ದಾರೆ, ಆದರೆ ಜನನ, ಮರಣ, ವೃದ್ಧಾಪ್ಯ, ಮತ್ತು ರೋಗವನ್ನು ಹೇಗೆ ನಿಲ್ಲಿಸುವುದು ಎಂಬುದು ಜೀವನದ ನಿಜವಾದ ಸಮಸ್ಯೆಯಾಗಿದೆ. ಜನರು ನಿರ್ದಯರಾಗಿದ್ದಾರೆ. ಅವರು ಎಷ್ಟು ಮಂದ-ಬುದ್ಧಿಗಳಾಗಿದ್ದಾರೆ ಅಂದರೆ, ಅವರು ಜೀವನದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಬಹಳ ಹಿಂದೆ ಮಹಾರಾಜ ದಶರಥನು ವಿಶ್ವಾಮಿತ್ರ ಮುನಿಯನ್ನು ಕಂಡಾಗ, ಅವರನ್ನು ಹೀಗೆ ವಿಚಾರಿಸಿದನು: ಐಹಿಸ್ಟಂ ಯತ್ ತಮ್ ಪುನರ್ ಜನ್ಮ ಜಯಯ: "ಪೂಜ್ಯರೇ, ನೀವು ಸಾವನ್ನು ಗೆಲ್ಲಲು ಪ್ರಯತ್ನಿಸುತ್ತಿರುವ ಕಾರ್ಯವು ಚೆನ್ನಾಗಿ ಮುಂದುವರಿಯುತ್ತಿದ್ದೇಯೆ? ಏನಾದರೂ ಅಡೆತಡೆ ಇದೆಯೇ?" ಇದೇ ನಮ್ಮ ವೈದಿಕ ನಾಗರಿಕತೆ - ಹುಟ್ಟು, ಸಾವು, ವೃದ್ಧಾಪ್ಯ, ಮತ್ತು ರೋಗವನ್ನು ಹೇಗೆ ಗೆಲ್ಲುವುದು ಎಂಬುದು. ಆದರೆ ಆಧುನಿಕ ಕಾಲದಲ್ಲಿ ಅಂತಹ ಯಾವುದೇ ಮಾಹಿತಿ ಇಲ್ಲ, ಯಾರಿಗೂ ಆಸಕ್ತಿ ಇಲ್ಲ. ಹೆಸರಾಂತ ಪ್ರಾಧ್ಯಾಪಕರಿಗೂ ಸಹ, ಜೀವನದ ನಂತರ ಏನಿದೆ ಎಂದು ತಿಳಿದಿಲ್ಲ. ಮರಣಾನಂತರ ಜೀವನವಿದೆ ಎಂದು ಸಹ ಅವರು ನಂಬುವುದಿಲ್ಲ. ಹೀಗೆ, ಈ ಕುರುಡು ನಾಗರಿಕತೆ ಮುಂದುವರಿಯುತ್ತಿದೆ. ಜೀವನದ ಗುರಿಯು, ವಿಶೇಷವಾಗಿ ಮಾನವ ಜನ್ಮದಲ್ಲಿ, ಜೀವನದ ದೈಹಿಕ ಅಗತ್ಯಗಳಿಗಿಂತ, ಅಂದರೆ ತಿನ್ನುವುದು, ನಿದ್ರೆ, ಮೈಥುನ, ಮತ್ತು ರಕ್ಷಣೆ, ಇವುಗಳಿಂದ ಭಿನ್ನವಾಗಿದೆ ಎಂದು ಅವರಿಗೆ ಕಲಿಸಲು ನಾವು ಕಿರು ಪ್ರಯತ್ನ ಮಾಡುತ್ತಿದ್ದೇವೆ. ಭಗವದ್ಗೀತೆಯಲ್ಲಿಯೂ, ‘ಮನುಷ್ಯಾನಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ’ (ಭ.ಗೀ 7.3): ಕೋಟ್ಯಾಂತರ ಜನರಲ್ಲಿ, ಒಬ್ಬನು ತನ್ನ ಜೀವನದಲ್ಲಿ ಯಶಸ್ವಿಯಾಗಲು ಪ್ರಯತ್ನಿಸಬಹುದು", ಎಂದು ಹೇಳಲಾಗಿದೆ. ಸಿದ್ಧಯೇ, ಸಿದ್ಧಿ. ಇದು ಸಿದ್ಧಿ. ಹುಟ್ಟು, ಸಾವು, ಮುಪ್ಪು, ಮತ್ತು ರೋಗವನ್ನು ಗೆಲ್ಲುವುದು ಹೇಗೆ ಎಂಬುದು. ಮತ್ತು ‘ಮನುಷ್ಯಾನಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ’. ಆಧುನಿಕ ಸುಸಂಸ್ಕೃತ ಮನುಷ್ಯನು ತುಂಬಾ ಮಂಕಾಗಿದ್ದಾನೆ, ಅವನಿಗೆ ಸಿದ್ಧಿ ಎಂದರೇನು ಎಂದು ತಿಳಿದಿಲ್ಲ. "ನನಗೆ ಸ್ವಲ್ಪ ಹಣ ಮತ್ತು ಒಂದು ಬಂಗಲೆ ಮತ್ತು ಒಂದು ಕಾರು ಸಿಕ್ಕರೆ, ಅದು ಸಿದ್ಧಿ", ಎಂದು ಅವರು ಭಾವಿಸುತ್ತಾರೆ. ಅದು ಸಿದ್ಧಿ ಅಲ್ಲ. ನೀವು ಕೆಲವು ವರ್ಷಗಳ ಕಾಲ ತುಂಬಾ ಒಳ್ಳೆಯ ಬಂಗಲೆ, ಕಾರು, ಒಳ್ಳೆಯ ಕುಟುಂಬವನ್ನು ಪಡೆಯಬಹುದು. ಆದರೆ ಯಾವುದೇ ಕ್ಷಣದಲ್ಲಿ ಈ ವ್ಯವಸ್ಥೆ ಮುಗಿಯಬಹುದು, ಮತ್ತು ನೀವು ಮತ್ತೊಂದು ದೇಹವನ್ನು ಸ್ವೀಕರಿಸಬೇಕಾಗುತ್ತದೆ. ಅದು ನಿಮಗೆ ಗೊತ್ತಿಲ್ಲ. ಮತ್ತು ಅದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ಆದ್ದರಿಂದ, ಅವರು ಶಿಕ್ಷಣ, ನಾಗರಿಕತೆಯ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಪಟ್ಟರೂ, ಅವರು ತುಂಬಾ ಮಂದ-ಬುದ್ಧಿಯವರಾಗಿದ್ದಾರೆ. ಆದರೆ ನಾವು ಪ್ರತಿಭಟಿಸುತ್ತಿದ್ದೇವೆ. ನಾವು ಪ್ರತಿಭಟಿಸುತ್ತಿದ್ದೇವೆ. ನಾನು ಪ್ರತಿಭಟಿಸುತ್ತಿಲ್ಲ. ಕೃಷ್ಣ ಪ್ರತಿಭಟಿಸುತ್ತಿದ್ದಾನೆ.
- ನ ಮಾಂ ದುಷೃತಿನೋ ಮೂಢಾಃ
- ಪ್ರಪದ್ಯಂತೇ ನರಾಧಮಾಃ
- ಮಾಯಯಾಪಹೃತ-ಜ್ಞಾನಾ
- ಆಸುರಂ ಭಾವಂ ಆಶ್ರಿತಾಃ
- (ಭ.ಗೀ 7.15)
ಈ ಧೂರ್ತರು, ಮಾನವಕುಲದ ಅತ್ಯಂತ ಕೆಳಮಟ್ಟದವರು, ಮತ್ತು ಯಾವಾಗಲೂ ಪಾಪಕಾರ್ಯಗಳಲ್ಲಿ ನಿರತರಾಗಿರುವವರು, ಅಂತಹ ವ್ಯಕ್ತಿಗಳು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸುವುದಿಲ್ಲ. "ಇಲ್ಲ. ಅನೇಕ ವಿದ್ಯಾವಂತ ಎಂ.ಎ, ಪಿ.ಎಚ್.ಡಿ.ಗಳು ಇದ್ದಾರೆ." ಕೃಷ್ಣನು ಹೇಳುತ್ತಾನೆ, " ಮಾಯಯಾಪಹೃತ-ಜ್ಞಾನಾ". "ಮೇಲ್ನೋಟಕ್ಕೆ ಅವರು ಬಹಳ ಸುಶಿಕ್ಷಿತರು, ಆದರೆ ಅವರ ನಿಜವಾದ ಜ್ಞಾನವನ್ನು ಮಾಯಾ ಕಸಿದುಕೊಳ್ಳುತ್ತಾಳೆ." ಆಸುರಂ ಭಾವಂ ಆಶ್ರಿತಾಃ. ಈ ನಾಸ್ತಿಕ ನಾಗರಿಕತೆಯು ಬಹಳ ಅಪಾಯಕಾರಿ. ಈ ಕಾರಣಕ್ಕಾಗಿಯೇ ಜನರು ನರಳುತ್ತಿದ್ದಾರೆ. ಆದರೆ ಅವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದ್ದರಿಂದ, ಅವರನ್ನು ಕೃಷ್ಣನು ಮೂಢಾಃ, ಧೂರ್ತರು, ಎಂದು ಸಂಬೋಧಿಸಿದ್ದಾನೆ. ನ ಮಾಂ ದುಷೃತಿನೋ ಮೂಢಾಃ. ಆದ್ದರಿಂದ, ಈ ಮೂಢರನ್ನು, ಮೂಢ ನಾಗರೀಕತೆಯನ್ನು, ಆಧ್ಯಾತ್ಮಿಕ ಜೀವನದ ಬೆಳಕಿಗೆ ತರುವುದು ನಮ್ಮ ಕಿರು ಪ್ರಯತ್ನವಾಗಿದೆ. ಇದೇ ನಮ್ಮ ವಿನಮ್ರ ಪ್ರಯತ್ನ. ಆದರೆ ಈಗಾಗಲೇ ಮನುಷ್ಯಾನಾಂ ಸಹಸ್ರೇಷು (ಭ.ಗೀ 7.3): ಕೋಟ್ಯಾಂತರ ಜನರಲ್ಲಿ, ಅವರು ಅದನ್ನು ಸ್ವೀಕರಿಸಬಹುದು", ಎಂದು ಹೇಳಲಾಗಿದೆ. ‘ಮನುಷ್ಯಾನಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ’. ಆದರೆ ಇದರರ್ಥ ನಾವು ನಿಲ್ಲಿಸುತ್ತೇವೆ ಎಂದಲ್ಲ. ನನ್ನ ಶಾಲಾ, ಕಾಲೇಜು ದಿನಗಳಲ್ಲಿ, ಸರ್ ಅಶುತೋಷ್ ಮುಖರ್ಜಿ ಅವರು ವಿಶ್ವವಿದ್ಯಾಲಯದಲ್ಲಿ ಒಂದು ಉನ್ನತ ಅಧ್ಯಯನ, ಸ್ನಾತಕೋತ್ತರ ಅಧ್ಯಯನ ತರಗತಿಗಳನ್ನು ಪ್ರಾರಂಭಿಸಿದರು. ಕೇವಲ ಒಂದೋ ಎರಡೋ ವಿದ್ಯಾರ್ಥಿಗಳಿದ್ದರು, ಆದರೂ ತರಗತಿಯನ್ನು ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿತ್ತು. ಕೇವಲ ಒಂದೋ ಎರಡೋ ವಿದ್ಯಾರ್ಥಿಗಳಿದ್ದರು ಎಂದು ಪರಿಗಣಿಸಲಿಲ್ಲ. ಅದೇ ರೀತಿ ಈ ಕೃಷ್ಣ ಪ್ರಜ್ಞೆಯ ಆಂದೋಲನ ಮುಂದುವರಿಯಬೇಕು. ಮೂರ್ಖ ಜನರು ಇದನ್ನು ಅರ್ಥಮಾಡಿಕೊಳ್ಳದಿದ್ದರೂ ಅಥವಾ ಸೇರದಿದ್ದರೂ ಪರವಾಗಿಲ್ಲ. ನಾವು ನಮ್ಮ ಪ್ರಚಾರವನ್ನು ಮುಂದುವರಿಸಬೇಕು. ತುಂಬಾ ಧನ್ಯವಾದಗಳು.