KN/Prabhupada 0162 - ಕೇವಲ ಭಗವದ್ಗೀತೆಯ ಸಂದೇಶವನ್ನು ಒಯ್ಯಿರಿ



Press Interview -- October 16, 1976, Chandigarh

ಪ್ರಭುಪಾದ: ಆತ್ಮದ ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಭಾರತದಲ್ಲಿ ನಮಗೆ ಅಪಾರವಾದ ವೈದಿಕ ಸಾಹಿತ್ಯವಿದೆ. ಮತ್ತು ಮಾನವ ಜನ್ಮದಲ್ಲಿ, ನಮ್ಮ ಜೀವನದ ಆಧ್ಯಾತ್ಮಿಕ ಭಾಗದ ಬಗ್ಗೆ ಕಾಳಜಿ ವಹಿಸದಿದ್ದರೆ, ನಾವು ಆತ್ಮಹತ್ಯೆ ಮಾಡಿಕೊಂಡಂತೆ. ಇದುವೇ ಭಾರತದಲ್ಲಿ ಜನಿಸಿದ ಎಲ್ಲಾ ಮಹಾನ್ ವ್ಯಕ್ತಿಗಳ ಪ್ರಸ್ತಾಪವಾಗಿದೆ. ಆಚಾರ್ಯರು... ಇತ್ತೀಚಿನ... ಹಿಂದೆ, ವ್ಯಾಸದೇವ ಮತ್ತು ಇತರರಂತಹ ಮಹಾನ್ ಆಚಾರ್ಯರು ಇದ್ದರು. ದೇವಲ. ಬಹುತೇಕ ಆಚಾರ್ಯರು. ಮತ್ತು ಇತ್ತೀಚೆಗೆ, ಒಂದು ಸಾವಿರದ ಐನೂರು ವರ್ಷಗಳ ಒಳಗೆ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ವಿಷ್ಣು ಸ್ವಾಮಿ, ಮತ್ತು ಐದು ನೂರು ವರ್ಷಗಳಲ್ಲಿ ಭಗವಾನ್ ಚೈತನ್ಯ ಮಹಾಪ್ರಭುಗಳಂತಹ ಅನೇಕ ಆಚಾರ್ಯರು ಇದ್ದರು.

ಈ ಆಧ್ಯಾತ್ಮಿಕ ಜ್ಞಾನದ ಬಗ್ಗೆ ಅವರು ನಮಗೆ ಅನೇಕ ಸಾಹಿತ್ಯಗಳನ್ನು ನೀಡಿದ್ದಾರೆ. ಆದರೆ ಈಗಿನ ಕಾಲದಲ್ಲಿ ಈ ಆಧ್ಯಾತ್ಮಿಕ ಜ್ಞಾನವನ್ನು ನಿರ್ಲಕ್ಷಿಸಲಾಗಿದೆ. ಆದ್ದರಿಂದ, ಇಡೀ ಜಗತ್ತಿಗೆ ಚೈತನ್ಯ ಮಹಾಪ್ರಭುಗಳ ಸಂದೇಶವೇನೆಂದರೆ ನೀವು ಪ್ರತಿಯೊಬ್ಬರೂ ಗುರುಗಳಾಗಿ, ಆಧ್ಯಾತ್ಮಿಕ ಗುರುಗಳಾಗಿರಿ, ಎಂಬುದು. ಹಾಗಾದರೆ, ಪ್ರತಿಯೊಬ್ಬರೂ ಆಧ್ಯಾತ್ಮಿಕ ಗುರುಗಳಾಗುವುದು ಹೇಗೆ? ಆಧ್ಯಾತ್ಮಿಕ ಗುರುವಾಗುವುದು ಸುಲಭದ ಕೆಲಸವಲ್ಲ. ಒಬ್ಬನು ಬಹಳ ಕಲಿತ ವಿದ್ವಾಂಸನಾಗಿರಬೇಕು ಮತ್ತು ಸ್ವಯಂ ಮತ್ತು ಎಲ್ಲದರ ಸಂಪೂರ್ಣ ಸಾಕ್ಷಾತ್ಕಾರವನ್ನು ಹೊಂದಿರಬೇಕು. ಆದರೆ ಚೈತನ್ಯ ಮಹಾಪ್ರಭುಗಳು ನಮಗೆ ಒಂದು ಸಣ್ಣ ಸೂತ್ರವನ್ನು ನೀಡಿದ್ದಾರೆ. ನೀವು ಭಗವದ್ಗೀತೆಯ ಬೋಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಮತ್ತು ನೀವು ಭಗವದ್ಗೀತೆಯ ಉದ್ದೇಶವನ್ನು ಬೋಧಿಸಿದರೆ, ನೀವು ಗುರುಗಳಾಗುತ್ತೀರಿ. ಬಂಗಾಳಿಯಲ್ಲಿ ಬಳಸಲಾಗುವ ನಿಖರವಾದ ಪದಗಳು, ಯಾರೇ ದೇಖ, ತಾರೆ ಕಹ ಕೃಷ್ಣ-ಉಪದೇಶ (ಚೈ.ಚ ಮಧ್ಯ 7.128) ಎಂದು ಹೇಳಲಾಗುತ್ತದೆ. ಗುರುವಾಗುವುದು ತುಂಬಾ ಕಷ್ಟದ ಕೆಲಸ, ಆದರೆ ನೀವು ಭಗವದ್ಗೀತೆಯ ಸಂದೇಶವನ್ನು ಹೊತ್ತು ನೀವು ಭೇಟಿಯಾಗುವ ವ್ಯಕ್ತಿಗಳ ಮನವೊಲಿಸಲು ಪ್ರಯತ್ನಿಸಿದರೆ, ನೀವು ಗುರುವಾಗುತ್ತೀರಿ. ಆದ್ದರಿಂದ, ನಮ್ಮ ಈ ಕೃಷ್ಣ ಪ್ರಜ್ಞೆಯ ಆಂದೋಲನವು ಇರುವುದೇ ಈ ಉದ್ದೇಶಕ್ಕಾಗಿ. ನಾವು ಭಗವದ್ಗೀತೆಯನ್ನು ಯಥಾರೂಪ, ಯಾವುದೇ ತಪ್ಪು ವ್ಯಾಖ್ಯಾನವಿಲ್ಲದೆ ಪ್ರಸ್ತುತಪಡಿಸುತ್ತಿದ್ದೇವೆ.