KN/Prabhupada 0166 - ಹಿಮ ಬೀಳುವುದನ್ನು ನೀವು ತಡೆಯಲು ಸಾಧ್ಯವಿಲ್ಲ



Lecture on BG 2.7-11 -- New York, March 2, 1966

ನಾವು ಯಾವಾಗಲೂ ಸಂಕಟದಲ್ಲಿದ್ದೇವೆ ಎಂಬುದನ್ನು ನಾವು ಮರೆಯಬಾರದು. ದುಃಖಗಳಲ್ಲಿ ಮೂರು ವಿಧಗಳಿವೆ. ಈ ಆರ್ಥಿಕ ಸಮಸ್ಯೆಯ ಬಗ್ಗೆ ನಾನು ಹೇಳುತ್ತಿಲ್ಲ, ಅದು ಮತ್ತೊಂದು ಸಂಕಟವೂ ಹೌದು. ಆದರೆ ವೈದಿಕ ಜ್ಞಾನದ ಪ್ರಕಾರ — ಅಥವಾ ವಾಸ್ತವಿಕವಾಗಿ — ಮೂರು ರೀತಿಯ ದುಃಖಗಳಿವೆ. ದೇಹ ಮತ್ತು ಮನಸ್ಸಿಗೆ ಸೇರಿದ ಒಂದು ರೀತಿಯ ಸಂಕಟ... ಈಗ, ನನಗೆ ಸ್ವಲ್ಪ ತಲೆನೋಯುತ್ತಿದೆ, ಈಗ ನಾನು ತುಂಬಾ ಬೆಚ್ಚಗಿದ್ದೇನೆ, ನನಗೆ ತುಂಬಾ ಚಳಿಯಾಗುತ್ತಿದೆ, ಹೀಗೆ ಅನೇಕ ದೈಹಿಕ ನೋವುಗಳಿವೆ. ಅಂತೆಯೇ, ನಮಗೆ ಮನಸ್ಸಿನ ದುಃಖಗಳಿವೆ. ಇಂದು ನನ್ನ ಮನಸ್ಸು ಶಾಂತವಾಗಿಲ್ಲ. ಯಾರೋ ನನ್ನನ್ನು ನಿಂದಿಸಿದರು. ಆದ್ದರಿಂದ, ನಾನು ಬಳಲುತ್ತಿದ್ದೇನೆ. ಅಥವಾ ನಾನು ಎನೋ ವಸ್ತು, ಅಥವಾ ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ, ಇತ್ಯಾದಿ ಅನೇಕ ವಿಷಯಗಳು ಇರಬಹುದು. ಆದ್ದರಿಂದ, ಇವು ದೇಹ ಮತ್ತು ಮನಸ್ಸಿನ ದುಃಖಗಳು. ಅದರ ನಂತರ ಪ್ರಕೃತಿಯಿಂದ ದುಃಖಗಳು. ಇದು ‘ಅಧಿದೈವಿಕ’, ಇದರ ಮೇಲೆ ನಮಗೆ ನಿಯಂತ್ರಣವಿಲ್ಲ. ಆದರೆ ಪ್ರತಿಯೊಂದು ಸಂಕಟದ ಮೇಲೆ ನಮಗೆ ನಿಯಂತ್ರಣವಿಲ್ಲ, ವಿಶೇಷವಾಗಿ... ಭಾರಿ ಹಿಮಪಾತವಿದೆ ಎಂದು ಭಾವಿಸೋಣ. ಇಡೀ ನ್ಯೂಯಾರ್ಕ್ ನಗರವು ಹಿಮದಿಂದ ತುಂಬಿದಾಗ ನಾವೆಲ್ಲರೂ ಅನಾನುಕೂಲತೆಗೆ ಒಳಗಾಗುತ್ತೇವೆ. ಅದೊಂದು ರೀತಿಯ ಯಾತನೆ. ಅದರ ಮೇಲೆ ನಮಗೆ ಯಾವುದೇ ನಿಯಂತ್ರಣವಿಲ್ಲ. ಹಿಮ ಬೀಳುವುದನ್ನು ನೀವು ತಡೆಯಲು ಸಾಧ್ಯವಿಲ್ಲ. ನೋಡಿದಿರ? ಶೀತ ಗಾಳಿಯನ್ನು ನೀವು ನಿಲ್ಲಿಸಲು ಸಾಧ್ಯವಿಲ್ಲ. ಇದನ್ನು ‘ಅಧಿದೈವಿಕ’ ದುಃಖ ಎಂದು ಕರೆಯಲಾಗುತ್ತದೆ. ಮನಸ್ಸಿನ ಯಾತನೆ ಮತ್ತು ದೇಹದ ಯಾತನೆಯನ್ನು ‘ಅಧ್ಯಾತ್ಮಿಕ’ ಎಂದು ಕರೆಯಲಾಗುತ್ತದೆ. ಮತ್ತು ಇನ್ನೊಂದು ದುಃಖವಿದೆ, ‘ಅಧಿಭೌತಿಕ’, ಅಂದರೆ ಇತರ ಜೀವಿಗಳ ದಾಳಿ — ನನ್ನ ಶತ್ರುಗಳು, ಕೆಲವು ಪ್ರಾಣಿಗಳು, ಹುಳಗಳು, ಇತ್ಯಾದಿ. ಆದ್ದರಿಂದ, ಈ ಮೂರು ರೀತಿಯ ದುಃಖಗಳು ಯಾವಾಗಲೂ ಇರುತ್ತವೆ. ಯಾವಾಗಲೂ. ಆದರೆ ಈ ಎಲ್ಲಾ ನೋವುಗಳು ನಮಗೆ ಬೇಕಿಲ್ಲ. ಈ ಪ್ರಶ್ನೆ ಬಂದಾಗ...

ಈಗ ಇಲ್ಲಿ ಅರ್ಜುನ, "ಇದು ಯುದ್ಧ, ಶತ್ರುಗಳೊಂದಿಗೆ ಹೋರಾಡುವುದು ನನ್ನ ಕರ್ತವ್ಯ, ಆದರೆ ಅವರು ನನ್ನ ಸಂಬಂಧಿಕರಾಗಿರುವುದರಿಂದ ದುಃಖವಾಗುತ್ತಿದೆ", ಎಂದು ತಿಳಿದಿದ್ದಾನೆ. ಅವನು ಅದನ್ನು ಅನುಭವಿಸುತ್ತಿದ್ದಾನೆ. ಆದ್ದರಿಂದ, ನಾವು ಯಾವಾಗಲೂ ದುಃಖದಲ್ಲಿದ್ದೇವೆ, ಆದರೆ ಈ ಎಲ್ಲಾ ಕಷ್ಟಗಳನ್ನು ನಾವು ಬಯಸುವುದಿಲ್ಲ ಎಂಬ ಸತ್ಯದ ಬಗ್ಗೆ ಮನುಷ್ಯನು ಜಾಗೃತನಾಗದಿದ್ದರೆ... ಈ ಪ್ರಶ್ನೆ... ಅಂತಹ ವ್ಯಕ್ತಿಯು ಪ್ರಜ್ಞೆಯಲ್ಲಿರುವಾಗ ಆಧ್ಯಾತ್ಮಿಕ ಗುರುವನ್ನು ಸಂಪರ್ಕಿಸಬೇಕಾಗುತ್ತದೆ. ನೋಡಿದಿರ? ಅವನು ಎಲ್ಲಿಯವರೆಗೆ ಪ್ರಾಣಿಗಳಂತೆ ಇರುತ್ತಾನೋ, ಯಾವಾಗಲೂ ದುಃಖದಲ್ಲಿದ್ದಾನೆಂದು ಅವನು ತಿಳಿಯುವುದಿಲ್ಲವೋ, ಅಲ್ಲಿಯವರೆಗು ಅವನು ಕಾಳಜಿ ವಹಿಸುವುದಿಲ್ಲ, ಮತ್ತು ಪರಿಹರಿಸಲು ಬಯಸುವುದಿಲ್ಲ. ಆದರೆ ಇಲ್ಲಿ ಅರ್ಜುನನು ಬಳಲುತ್ತಿದ್ದಾನೆ, ಅದನ್ನು ಪರಿಹರಿಸಲು ಬಯಸುತ್ತಿದ್ದಾನೆ. ಆದ್ದರಿಂದ, ಅವನು ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸಿದನು. ಆದ್ದರಿಂದ, ನಾವು ನಮ್ಮ ಕಷ್ಟಗಳ ಬಗ್ಗೆ ಜಾಗೃತರಾದಾಗ, ನಾವು ದುಃಖದ ಪರಿಸ್ಥಿತಿಯ ಬಗ್ಗೆ ಎಚ್ಚರಗೊಳ್ಳುತ್ತೇವೆ... ದುಃಖವಿದೆ. ದುಃಖದ ವಿಸ್ಮರಣೆ ಅಥವಾ ಅಜ್ಞಾನಕ್ಕೆ ಅರ್ಥವಿಲ್ಲ. ದುಃಖವಿದೆ. ಆದರೆ ಒಬ್ಬನು ತನ್ನ ದುಃಖಕ್ಕೆ ಪರಿಹಾರವನ್ನು ಕಂಡುಹಿಡಿಯಲು ತೀವ್ರಾಸಕ್ತನಾಗಿದ್ದರೆ, ಆಧ್ಯಾತ್ಮಿಕ ಗುರುವಿನ ಅಗತ್ಯವಿರುತ್ತದೆ. ಅರ್ಜುನನಿಗೆ ಈಗ ಆಧ್ಯಾತ್ಮಿಕ ಗುರುವಿನ ಅಗತ್ಯವಿದೆ. ಇದು ಸ್ಪಷ್ಟವಾಗಿದೆಯೇ? ಹೌದು. ಸಂಕಟವಿದೆ. ಅದಕ್ಕೆ ಯಾವುದೇ ಶಿಕ್ಷಣದ ಅಗತ್ಯವಿಲ್ಲ, ಸ್ವಲ್ಪ ಚಿಂತನೆ, "ನನಗೆ ಈ ಎಲ್ಲಾ ಕಷ್ಟಗಳು ಬೇಕಾಗಿಲ್ಲ, ಆದರೆ ನಾನು ಬಳಲುತ್ತಿದ್ದೇನೆ. ಏಕೆ? ಯಾವುದಾದರೂ ಪರಿಹಾರವಿದೆಯೇ? ಇದೆಯಾ...?" ಆದರೆ ಪರಿಹಾರವಿದೆ. ಈ ಎಲ್ಲಾ ಧರ್ಮಗ್ರಂಥಗಳು, ಈ ಎಲ್ಲಾ ವೈದಿಕ ಜ್ಞಾನ, ಎಲ್ಲವೂ... ಮತ್ತು ವೈದಿಕ ಜ್ಞಾನ ಮಾತ್ರವಲ್ಲ... ಈಗ... ಓಹ್, ನೀವು ಶಾಲೆಗೆ ಏಕೆ ಹೋಗುತ್ತಿದ್ದೀರಿ? ನೀವು ಕಾಲೇಜಿಗೆ ಏಕೆ ಹೋಗುತ್ತಿದ್ದೀರಿ? ನೀವು ವೈಜ್ಞಾನಿಕ ಶಿಕ್ಷಣವನ್ನು ಏಕೆ ಪಡೆಯುತ್ತಿದ್ದೀರಿ? ನೀವು ಕಾನೂನು ಶಿಕ್ಷಣವನ್ನು ಏಕೆ ಪಡೆಯುತ್ತಿದ್ದೀರಿ? ಈ ಎಲ್ಲವೂ ನಮ್ಮ ದುಃಖಗಳನ್ನು ಕೊನೆಗೊಳಿಸುವ ಉದ್ದೇಶದಿಂದೆ. ಯಾವುದೇ ಸಂಕಟವಿಲ್ಲದಿದ್ದರೆ, ಯಾರೂ ಶಿಕ್ಷಣವನ್ನು ಪಡೆಯುತ್ತಿರಲಿಲ್ಲ. ನೋಡಿದಿರ? ಆದರೆ ಅವನು "ನಾನು ವಿದ್ಯಾವಂತನಾದರೆ, ನಾನು ವೈದ್ಯನಾದರೆ, ಅಥವಾ ವಕೀಲನಾದರೆ, ಅಥವಾ ಎಂಜಿನಿಯರ್ ಆದರೆ ಸಂತೋಷವಾಗಿರುತ್ತೇನೆ", ಎಂದು ಯೋಚಿಸುತ್ತಾನೆ. ಸಂತೋಷ, ಅದೇ ಅಂತಿಮ ಗುರಿ. "ನನಗೆ ಒಳ್ಳೆಯ ಕೆಲಸ, ಸರ್ಕಾರಿ ಕೆಲಸ ಸಿಗುತ್ತದೆ. ನಾನು ಸಂತೋಷವಾಗಿರುತ್ತೇನೆ."

ಆದ್ದರಿಂದ, ಸಂತೋಷವು ನಮ್ಮ ಎಲ್ಲ ಪರಿಶ್ರಮಗಳ ಅಂತಿಮ ಗುರಯಾಗಿದೆ. ಆದರೆ ಈ ದುಃಖಗಳ ತಗ್ಗಿಸುವಿಕೆ ತಾತ್ಕಾಲಿಕ. ನಿಜವಾದ ದುಃಖವು ನಮ್ಮ ಈ ಭೌತಿಕ ಅಸ್ತಿತ್ವ, ಈ ಮೂರು ರೀತಿಯ ಸಂಕಟಗಳಿಂದ ಉಂಟಾಗುತ್ತದೆ. ಆದ್ದರಿಂದ, ಒಬ್ಬನು ತನ್ನ ದುಃಖದ ಬಗ್ಗೆ ಜಾಗೃತನಾಗಿ, ಈ ದುಃಖವನ್ನು ಪರಿಹರಿಸಲು ಬಯಸಿದಾಗ, ಆಧ್ಯಾತ್ಮಿಕ ಗುರುವಿನ ಅಗತ್ಯವಿರುತ್ತದೆ. ಈಗ, ನೀವು ನಿಮ್ಮ ಕಷ್ಟಗಳನ್ನು ಪರಿಹರಿಸಲು, ಎಲ್ಲಾ ನೋವುಗಳನ್ನು ಕೊನೆಗೊಳಿಸಲು, ಒಬ್ಬ ವ್ಯಕ್ತಿಯನ್ನು ಸಂಪರ್ಕಿಸಲು ಬಯಸಿದರೆ, ಯಾವ ರೀತಿಯಾದ ವ್ಯಕ್ತಿಯನ್ನು ನೀವು ಭೇಟಿಯಾಗಬೇಕು? ಆ ಆಯ್ಕೆ ಇರಬೇಕು. ನೀವು ಆಭರಣ, ವಜ್ರ, ಮತ್ತು ಬಹಳ ಬೆಲೆಬಾಳುವ ವಸ್ತುವನ್ನು ಖರೀದಿಸಲು ದಿನಸಿ ಅಂಗಡಿಗೆ ಹೋದರೆ... ಇದು ಎಂತಹ ಅಜ್ಞಾನ — ನೀವು ಮೋಸ ಹೋಗುತ್ತೀರಿ. ನೀವು ಮೋಸ ಹೋಗುತ್ತೀರಿ. ಕನಿಷ್ಠ ನೀವು ಆಭರಣ ಅಂಗಡಿಗೆ ಹೋಗಬೇಕು. ಆಭರಣ ಅಂಗಡಿ. ಅಷ್ಟಾದರು ಜ್ಞಾನವನ್ನು ಹೊಂದಿರಬೇಕು.