KN/Prabhupada 0168 - ದೀನ ಮತ್ತು ವಿನಮ್ರರಾಗುವ ಸಂಸ್ಕೃತಿ



Room Conversation -- February 4, 1977, Calcutta

ಪ್ರಭುಪಾದ: ನಾವು ಭಿಕ್ಷೆ ಬೇಡಬಹುದು. ಈಗಲೂ ಭಾರತದಲ್ಲಿ ಉನ್ನತ ವಿದ್ವಾಂಸ ಸನ್ಯಾಸಿಗಳು ಭಿಕ್ಷೆ ಬೇಡುತ್ತಾರೆ. ಅದನ್ನು ಅನುಮತಿಸಲಾಗಿದೆ. ಭಿಕ್ಷು. ಅವರು ಅದನ್ನು ಇಷ್ಟಪಡುತ್ತಾರೆ. ತ್ರಿದಂಡೀ-ಭಿಕ್ಷು. ಆದ್ದರಿಂದ, ವೈದಿಕ ಸಂಸ್ಕೃತಿಯಲ್ಲಿ, ಸರಿಯಾದ ವ್ಯಕ್ತಿಗೆ ಭಿಕ್ಷಾಟನೆ ಕಾನೂನುಬಾಹಿರವೂ ಅಲ್ಲ, ನಾಚಿಕೆಗೇಡಿನ ಸಂಗತಿಯೂ ಅಲ್ಲ. ಬ್ರಹ್ಮಚಾರಿಗಳಿಗೆ, ಸನ್ಯಾಸಿಗಳಿಗೆ ಭಿಕ್ಷಾಟನೆ ಅನುಮತಿಸಲಾಗಿದೆ. ಮತ್ತು ಅವರು ಅದನ್ನು ಬಹಿರಂಗವಾಗಿ ಇಷ್ಟಪಡುತ್ತಾರೆ. ತ್ರಿದಂಡೀ-ಭಿಕ್ಷು. ಭಿಕ್ಷು ಎಂದರೆ ಭಿಕ್ಷುಕ ಎಂದರ್ಥ.

ಸತ್ಸ್ವರೂಪ: ತ್ರಿದಂಡೀ-ಭಿಕ್ಷು.

ಪ್ರಭುಪಾದ: ಹೌದು. ಇಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ, ಬ್ರಹ್ಮಚಾರಿ, ಸನ್ಯಾಸಿ, ಮತ್ತು ಬ್ರಾಹ್ಮಣರಿಗೆ ಭಿಕ್ಷೆ ಬೇಡಲು ಅವಕಾಶವಿದೆ. ಅದು ವೈದಿಕ ಸಂಸ್ಕೃತಿ. ಮತ್ತು ಗೃಹಸ್ಥರು ಅವರನ್ನು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸುತ್ತಾರೆ. ಇದೇ ಸಂಬಂಧ.

ಸತ್ವರೂಪ: ಆದರೆ ಇದು ಸಂಪೂರ್ಣವಾಗಿ ವಿಭಿನ್ನವಾಗಿರುವ ಸಂಸ್ಕೃತಿಯಲ್ಲಿ ಮಾಡಿದರೆ ಏನಾಗುತ್ತದೆ?

ಪ್ರಭುಪಾದ: ಆದ್ದರಿಂದಲೇ ಹಿಪ್ಪಿಗಳಿರುವುದು. ಇದು ನಿಮ್ಮ ಸಂಸ್ಕೃತಿ — ಧರ್ಮದ ಹೆಸರಿನಲ್ಲಿ ಹಿಪ್ಪಿಗಳು ಮತ್ತು ಕೊಲೆಗಾರರನ್ನು ತಯಾರು ಮಾಡುವುದು. ಇದು ಅವರ ಸಂಸ್ಕೃತಿ. ಮತ್ತು ಗರ್ಭಪಾತ. ಏಕೆಂದರೆ ವೈದಿಕ ಸಂಸ್ಕೃತಿ ಇಲ್ಲ. ಆದ್ದರಿಂದ, ಗರ್ಭಪಾತ ಮತ್ತು ಕೊಲೆ, ಮತ್ತು ಬಾಂಬ್ ದಾಳಿಯು ಇಡೀ ವಾತಾವರಣವನ್ನು ಅಸಹ್ಯಕರವಾಗಿಸುತ್ತದೆ. ಇದು ನಿಮ್ಮ ಸಂಸ್ಕೃತಿ. ಪ್ರೊಟೆಸ್ಟೆಂಟ್ ಮತ್ತು ಕ್ಯಾಥೊಲಿಕರ ನಡುವೆ ಹೋರಾಟ, ಮತ್ತು ಬಾಂಬ್ ದಾಳಿ... ಜನರು ಭಯಭೀತರಾಗಿದ್ದಾರೆ. ಅವರು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ. ಇದು ನಿಮ್ಮ ಸಂಸ್ಕೃತಿ. ಆದರೆ ಭಿಕ್ಷಾಟನೆ ಕೆಟ್ಟದು! ಜನರನ್ನು, ಇಡೀ ಜನಸಂಖ್ಯೆಯನ್ನು ಭಯಭೀತ ಸ್ಥಿತಿಯಲ್ಲಿಡುವುದು ತುಂಬಾ ಒಳ್ಳೆಯದು, ಆದರೆ ಯಾರಾದರೂ ವಿನಮ್ರ ರೀತಿಯಲ್ಲಿ ಭಿಕ್ಷೆ ಬೇಡಿದರೆ, ಅದು ಕೆಟ್ಟದು. ಇದು ನಿಮ್ಮ ಸಂಸ್ಕೃತಿ. ವೈದಿಕ ಮಾರ್ಗವು ಬ್ರಹ್ಮಚಾರಿಗೆ ಭಿಕ್ಷೆ ಬೇಡುವ ಮೂಲಕ ವಿನಮ್ರತೆಯನ್ನು ಕಲಿಯಲು ಅನುವು ಮಾಡಿಕೊಡುತ್ತದೆ, ಭಿಕ್ಷುಕನಾಗುಲು ಅಲ್ಲ. ಬಹಳ ದೊಡ್ಡ ಕುಟುಂಬದಿಂದ ಬಂದವರರು ಸಹ ಅದನ್ನು ಅಭ್ಯಾಸ ಮಾಡುತ್ತಾರೆ. ಇದು ಭಿಕ್ಷಾಟನೆ ಅಲ್ಲ. ವಿನಮ್ರ ಮತ್ತು ದೀನರಾಗುವುದು ಹೇಗೆ ಎಂದು ಕಲಿಯಲು ಮಾಡುತ್ತಾರೆ. ಮತ್ತು ಕ್ರಿಸ್ತರು ಹೇಳಿದರು: “ವಿನಮ್ರರಿಗು ಮತ್ತು ದೀನರಿಗು ಭಗವಂತ ಲಭ್ಯವಿದ್ದಾನೆ.” ಅದು ಭಿಕ್ಷಾಟನೆಯಲ್ಲ. ಈ ಸಂಸ್ಕೃತಿ ಏನು ಎಂದು ನಿಮಗೆ ತಿಳಿದಿಲ್ಲ. ನಿಮಗೆ ನಿಮ್ಮದೇ ಆದ ಸಂಸ್ಕೃತಿ, ದೆವ್ವದ ಸಂಸ್ಕೃತಿ ಇದೆ, ತಮ್ಮ ಸ್ವಂತ ಮಗುವನ್ನು ಸಹ ಕೊಲ್ಲಲು ಸಿದ್ಧ. ಈ ವೈದಿಕ ಸಂಸ್ಕೃತಿ ಏನು ಎಂದು ನೀವು ಹೇಗೆ ಅರ್ಥಮಾಡಿಕೊಳ್ಳುವಿರಿ? ನಾನು ಸರಿಯೋ ತಪ್ಪೋ?

ಸತ್ಸ್ವರೂಪ: ನೀನು ಹೇಳಿದ್ದು ಸರಿ.

ಪ್ರಭುಪಾದ: ಹೌದು. ಪತ್ರದಲ್ಲಿ ವಿವರಿಸಿ. ನೀವು ನಾಲ್ಕನೇ ದರ್ಜೆ, ಹತ್ತನೇ ದರ್ಜೆಯ ಸಂಸ್ಕೃತಿಯನ್ನು ಹೊಂದಿದ್ದೀರಿ. ದೀನ ಮತ್ತು ವಿನಮ್ರರಾಗುವ ಸಂಸ್ಕೃತಿಯನ್ನು ನೀವು ಹೇಗೆ ಅರ್ಥಮಾಡಿಕೊಳ್ಳುವಿರಿ?

ಸತ್ಸ್ವರೂಪ: ನಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಯತ್ನಿಸುತ್ತಿದ್ದ ಜಿಲ್ಲಾ ಅಟಾರ್ನಿ, ಆದಿ ಕೇಶವ, ಅವರು ತಮ್ಮ ಕಾರ್ಯತಂತ್ರವನ್ನು ಇಲ್ಲಿ ಬಹಿರಂಗಪಡಿಸುತ್ತಾರೆ. ನಮ್ಮ ಧರ್ಮವನ್ನು ಆಚರಿಸುವ ಹಕ್ಕು ನಮಗಿದೆ ಎಂದು ಅನೇಕ ವಕೀಲರು ಹೇಳುತ್ತಾರೆ. ಇದು ಧಾರ್ಮಿಕ ಸ್ವಾತಂತ್ರ್ಯ. ಅವರು ಹೇಳುತ್ತಾರೆ...

ಪ್ರಭುಪಾದ: ಉಚಿತ... ಇದು ನಿಜವಾದ ಧರ್ಮ.

ಸತ್ಸ್ವರೂಪ: "ಆದರೆ ಇದು ಧರ್ಮದ ಪ್ರಶ್ನೆಯಲ್ಲ", ಎಂದು ಅವರು ಹೇಳಿದರು. ಅವರು ಹೇಳಿದರು, “ಮನಸ್ಸಿನ ನಿಯಂತ್ರಣಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಇದು ವೈಯಕ್ತಿಕ ಇಚ್ಛಾಶಕ್ತಿಯ ಪ್ರಶ್ನೆ. ಸರಿಯಾದ ಮನಸ್ಥಿತಿಯಲ್ಲಿರುವ ವ್ಯಕ್ತಿಯು ತನ್ನ ಮನಸ್ಸನ್ನು ನಿಯಂತ್ರಿಸಲು ಬೇರೊಬ್ಬರಿಗೆ ಅವಕಾಶ ನೀಡುವುದಿಲ್ಲ. ಸಂಮೋಹನದ ದೃಷ್ಟಿಯಿಂದ ಅದರ ಬಗ್ಗೆ ಯೋಚಿಸಿ."

ಪ್ರಭುಪಾದ: ಮನಸ್ಸಿನ ನಿಯಂತ್ರಣವೇ ಎಲ್ಲವೂ.

ಸತ್ವರೂಪ: ಏನು ಬೇಕಾದರೂ ಆಗಬಹುದು.

ಪ್ರಭುಪಾದ: ಅವರೂ ಪ್ರಯತ್ನಿಸುತ್ತಿದ್ದಾರೆ. ಈಗ ನಮ್ಮ ಜನರನ್ನು ಬಲವಂತದಿಂದ ಅಪಹರಿಸಿ ಅವರ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ರೀತಿಯ ಮನಸ್ಸಿನ ನಿಯಂತ್ರಣ. ನಮ್ಮ ಜನರ ಮನಸ್ಸು ಈಗಾಗಲೇ ನಮ್ಮ ಕಡೆ ಇದೆ, ಆದರೆ ಇವರನ್ನು ಅಪಹರಿಸಿ ಬಲವಂತವಾಗಿ ಡಿಪ್ರೊಗ್ರಾಮಿಂಗ್ ಮೂಲಕ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಮನಸ್ಸಿನ ನಿಯಂತ್ರಣವಲ್ಲವೇ? ಇಲ್ಲಿ ಅವನ ಮನಸ್ಸು ಈಗಾಗಲೇ ಕೃಷ್ಣ ಪ್ರಜ್ಞೆಯಲ್ಲಿದೆ, ಆದರೆ ಬಲವಂತದಿಂದ ನೀವು ಅವನನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದೀರಿ. ಇದು ಮನಸ್ಸಿನ ನಿಯಂತ್ರಣವಲ್ಲವೇ? ನಿಮ್ಮ ಮನಸ್ಸಿನ ನಿಯಂತ್ರಣ ಒಳ್ಳೆಯದು, ನನ್ನ ಮನಸ್ಸಿನ ನಿಯಂತ್ರಣ ಕೆಟ್ಟದ್ದಾ? ಅದು ನಿಮ್ಮ ತತ್ತ್ವ. ಯಾವುದೇ ಧೂರ್ತನಾಗಲಿ, "ನನ್ನ ಚಟುವಟಿಕೆಗಳು ಒಳ್ಳೆಯದು, ನಿಮ್ಮ ಚಟುವಟಿಕೆಗಳು ಕೆಟ್ಟವು", ಎಂದು ಹೇಳುತ್ತಾನೆ.