KN/Prabhupada 0173 - ನಾವು ಎಲ್ಲರ ಸ್ನೇಹಿತರಾಗಲು ಬಯಸುತ್ತೇವೆ



Lecture on SB 1.7.6 -- Vrndavana, April 23, 1975

ಆದ್ದರಿಂದ, ನಾವು ಕೃಷ್ಣನ ಬಗ್ಗೆ ಭಗವದ್ಗೀತೆ ಅಥವಾ ಶ್ರೀಮದ್-ಭಾಗವತದಿಂದ ಜ್ಞಾನವನ್ನು ಪಡೆಯಬೇಕು. ಕೃಷ್ಣೇ ಪರಮ-ಪುರುಷೇ ಭಕ್ತಿರ್ ಉತ್ಪದ್ಯತೇ. ನೀವು ಶ್ರೀಮದ್-ಭಾಗವತವನ್ನು ಕೇಳಿದರೆ... ಸಹಜವಾಗಿ, ಕೃಷ್ಣನ ಮೂಲ ತತ್ವ ಅಥವಾ ಪರಿಪೂರ್ಣತೆಯ ಮೂಲ ತತ್ವ ಯಾವುದು ಎಂದು ನಿಮಗೆ ಅರ್ಥವಾಗದಿದ್ದರೆ... ಅದನ್ನು ಶ್ರೀಮದ್-ಭಾಗವತದಲ್ಲಿ ಪ್ರಾರಂಭದಲ್ಲಿ ಹೇಳಲಾಗಿದೆ. ಧರ್ಮಃ ಪ್ರೋಜ್ಜಿತ-ಕೈತವಃ ಅತ್ರ ಪರಮೋ ನಿರ್ಮತ್ಸರಾಣಾಮ್ (ಶ್ರೀ.ಭಾ 1.1.2). ಇಲ್ಲಿ ಶ್ರೀಮದ್-ಭಾಗವತದಲ್ಲಿ ತಥಾಕಥಿತ ನಿರ್ಮಿತ ಧಾರ್ಮಿಕ ವ್ಯವಸ್ಥೆಯನ್ನು ಹೊರಹಾಕಲಾಗಿದೆ. ಇದು ಪರಮಹಂಸರಿಗೆ ಸಂಬಂಧಿಸಿದ್ದು. ನಿರ್ಮತ್ಸರಾಣಾಮ್. ‘ನಿರ್ಮತ್ಸರ’ ಎಂದರೆ ಅಸೂಯೆ ಪಡದವನು. ಆದ್ದರಿಂದ, ನಮ್ಮ ಹೊಟ್ಟೆಕಿಚ್ಚು, ಅಸೂಯೆ ಕೃಷ್ಣನಿಂದಲೇ ಶುರುವಾಗಿದೆ. ನಾವು ಕೃಷ್ಣನನ್ನು ಒಪ್ಪುವುದಿಲ್ಲ. ಬಹುಮಟ್ಟಿಗೆ ಅವರು ಹೇಳುವುದೇನೆಂದರೆ, "ಕೃಷ್ಣ ಮಾತ್ರ ಏಕೆ ಪರಮಪುರುಷನಾಗಿರಬೇಕು? ಇನ್ನೂ ಅನೇಕರಿದ್ದಾರೆ." ಅದು ಅಸೂಯೆ. ಆದ್ದರಿಂದ, ನಮ್ಮ ಅಸೂಯೆಯು ಕೃಷ್ಣನಿಂದ ಪ್ರಾರಂಭವಾಗಿದೆ, ಮತ್ತು ಆದ್ದರಿಂದ ಅದು ಹಲವಾರು ರೀತಿಯಲ್ಲಿ ವಿಸ್ತರಿಸಿದೆ. ಹೀಗೆ, ನಮ್ಮ ಸಾಮಾನ್ಯ ಜೀವನದಲ್ಲೂ ನಾವು ಅಸೂಯೆಪಡುತ್ತೇವೆ. ನಾವು ನಮ್ಮ ಸ್ನೇಹಿತರ ಬಗ್ಗೆ ಅಸೂಯೆಪಡುತ್ತೇವೆ, ನಮ್ಮ ತಂದೆ, ನಮ್ಮ ಮಗನ ಬಗ್ಗೆ ಕೂಡ ಅಸೂಯೆಪಡುತ್ತೇವೆ, ಇತರರ ಬಗ್ಗೆ ಏನು ಹೇಳುವುದು – ಉದ್ಯಮಿಗಳು, ರಾಷ್ಟ್ರ, ಸಮಾಜ, ಸಮುದಾಯ – ಕೇವಲ ಅಸೂಯೆ. ಮತ್ಸರತಾ. "ಅವನು ಯಾಕೆ ಮುಂದುವರಿಯಬೇಕು?" ನಾನು ಅಸೂಯೆ ಪಡುತ್ತೇನೆ. ಇದು ಭೌತಿಕ ಸ್ವಭಾವ.

ಆದ್ದರಿಂದ, ಒಬ್ಬನು ಕೃಷ್ಣನನ್ನು ಅರ್ಥಮಾಡಿಕೊಂಡಾಗ, ಅವನು ಕೃಷ್ಣ ಪ್ರಜ್ಞೆಯುಳ್ಳವನಾಗುತ್ತಾನೆ. ಅವನು ಅನಸೂಯನಾಗುತ್ತಾನೆ, ಇನ್ನೆಂದೂ ಅಸೂಯೆಪಡುವುದಿಲ್ಲ. ಅವನು ಸ್ನೇಹಿತನಾಗಲು ಬಯಸುತ್ತಾನೆ. ಸುಹೃದಃ ಸರ್ವ-ಭೂತಾನಮ್ (ಭ.ಗೀ 5.29). ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನ ಎಂದರೆ ನಾವು ಎಲ್ಲರ ಸ್ನೇಹಿತರಾಗಲು ಬಯಸುತ್ತೇವೆ ಎಂದರ್ಥ. ಅವರು ಕೃಷ್ಣಪ್ರಜ್ಞೆಯಿಲ್ಲದೆ ನರಳುತ್ತಿರುವ ಕಾರಣ, ನಾವು ಈ ಕೃಷ್ಣಪ್ರಜ್ಞೆಯನ್ನು ಬೋಧಿಸಲು ಮನೆ ಮನೆಗೆ, ನಗರದಿಂದ ನಗರಕ್ಕೆ, ಹಳ್ಳಿಯಿಂದ ಹಳ್ಳಿಗೆ, ಪಟ್ಟಣದಿಂದ ಪಟ್ಟಣಕ್ಕೆ ಹೋಗುತ್ತಿದ್ದೇವೆ. ಮತ್ತು ಕೃಷ್ಣನ ಅನುಗ್ರಹದಿಂದ ನಾವು ಬುದ್ಧಿವಂತ ವರ್ಗದ ಜನರ ಗಮನವನ್ನು ಸೆಳೆಯುತ್ತಿದ್ದೇವೆ. ಹಾಗಾಗಿ, ಅಸೂಯೆ ಪಡದಿರುವ ಈ ಪ್ರಕ್ರಿಯೆಯನ್ನು ನಾವು ಮುಂದುವರೆಸಿದರೆ... ಅದು ಪಶುಗಳ ಸ್ವಭಾವ, ನಾಯಿಯ ಸ್ವಭಾವ, ಹಂದಿಯ ಸ್ವಭಾವ. ಮಾನವ ಸ್ವಭಾವವು ಪರ-ದುಃಖ-ದುಃಖೀ ಆಗಿರಬೇಕು. ಇತರರನ್ನು ಶೋಚನೀಯ ಸ್ಥಿತಿಯಲ್ಲಿ ನೋಡಿದರೆ ನಮಗೆ ತುಂಬಾ ದುಃಖವಾಗಬೇಕು. ಎಲ್ಲರೂ ಕೃಷ್ಣಪ್ರಜ್ಞೆಯ ಕೊರತೆಯಿಂದ ಬಳಲುತ್ತಿದ್ದಾರೆ. ಅವರ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸುವುದೇ ನಮ್ಮ ಏಕೈಕ ವ್ಯವಹಾರವಾಗಿದೆ. ಇದರಿಂದ, ಇಡೀ ಜಗತ್ತು ಆನಂದಮಯವಾಗುತ್ತದೆ. ಅನರ್ಥ ಉಪಶಮಮ್ ಸಾಕ್ಷಾದ್ ಭಕ್ತಿ-ಯೋಗಂ ಅಧೋಕ್ಷಜೆ, ಲೋಕಸ್ಯ ಅಜಾನತಃ (ಶ್ರೀ.ಭಾ 1.7.6). ಜನರಿಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ. ಆದ್ದರಿಂದ, ನಾವು ಈ ಚಳುವಳಿಯನ್ನು ಮುಂದುವರಿಸಬೇಕು. ಲೋಕಸ್ಯಾಜಾನ್..., ವಿದ್ವಾಂಶ್ ಚಕ್ರೆ ಸಾತ್ವತ-ಸಂಹಿತಾಮ್ (ಶ್ರೀ.ಭಾ 1.7.6). ಶ್ರೀಮದ್-ಭಾಗವತ. ಆದ್ದರಿಂದ, ಕೃಷ್ಣ ಪ್ರಜ್ಞೆ ಆಂದೋಲನದ ಇನ್ನೊಂದು ಹೆಸರು ಭಾಗವತ-ಧರ್ಮ. ಭಾಗವತ-ಧರ್ಮ. ಅದನ್ನು ನಾವು ಒಪ್ಪಿಕೊಂಡರೆ ಇಡೀ ಮಾನವ ಸಮಾಜವೇ ಸುಖವಾಗಿರುತ್ತದೆ.

ತುಂಬಾ ಧನ್ಯವಾದಗಳು. (ಅಂತ್ಯ)