KN/Prabhupada 0181 - ನಾನು ಭಗವಂತನೊಂದಿಗೆ ನಿಕಟ ಸಂಬಂಧ ಹೊಂದಿದ್ದೇನೆ



Evening Darsana -- August 9, 1976, Tehran

ಪ್ರಭುಪಾದ: ಮೊದಲನೆಯದಾಗಿ, ಆಧ್ಯಾತ್ಮಿಕ ತರಬೇತಿ ಎಂದರೆ, "ನಾನು ಭಗವಂತನೊಂದಿಗೆ ನಿಕಟ ಸಂಬಂಧ ಹೊಂದಿದ್ದೇನೆ" ಎಂಬ ನಂಬಿಕೆ ನಿಮಗಿರಬೇಕು. ನೀವು ಈ ನಂಬಿಕೆಯನ್ನು ಪಡೆಯದ ಹೊರತು, ಆಧ್ಯಾತ್ಮಿಕ ತರಬೇತಿಯ ಪ್ರಶ್ನೆಯೇ ಇಲ್ಲ. "ದೇವರು ದೊಡ್ಡವನು, ಅವನು ತನ್ನ ಮನೆಯಲ್ಲಿಯೇ ಇರಲಿ, ನಾನು ನನ್ನ ಮನೆಯಲ್ಲಿಯೇ ಇರುತ್ತೇನೆ" ಎಂದು ನೀವು ತೃಪ್ತರಾಗಿ ಉಳಿದರೆ, ಅದು ಪ್ರೀತಿಯಲ್ಲ. ನೀವು ದೇವರನ್ನು ಹೆಚ್ಚು ಹೆಚ್ಚು ನಿಕಟವಾಗಿ ತಿಳಿದುಕೊಳ್ಳಲು ಉತ್ಸುಕರಾಗಿರಬೇಕು. ತದನಂತರ ಮುಂದಿನ ಹಂತವು, ದೇವರ ವ್ಯವಹಾರದಲ್ಲಿ ನಿರತರಾಗಿರುವ ಜನರೊಂದಿಗೆ ನೀವು ಸಹವಾಸಮಾಡಿ ದೇವರ ಕುರಿತು ತಿಳಿದುಕೊಳ್ಳುವುದು ಎಂಬುದು. ಅವರಿಗೆ ಬೇರೆ ಯಾವುದೇ ವ್ಯವಹಾರವಿಲ್ಲ. ನಾವು ಜನರಿಗೆ ತರಬೇತಿ ನೀಡುತ್ತಿರುವಂತೆಯೇ, ಅವರು ಕೇವಲ ದೇವರ ವ್ಯವಹಾರದಲ್ಲಿ ತೊಡಗಿರುತ್ತಾರೆ. ಅವರಿಗೆ ಬೇರೆ ಯಾವುದೇ ವ್ಯವಹಾರವಿಲ್ಲ. ಜನರು ದೇವರ ಬಗ್ಗೆ ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಹೇಗೆ ಅದರ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಅನೇಕ ರೀತಿಯಲ್ಲಿ ಯೋಜಿಸುತ್ತಾರೆ. ಆದುದರಿಂದ, ಭಗವಂತನಲ್ಲಿ ದೃಢನಿಶ್ಚಯವಿರುವ ಮತ್ತು ಆತನ ಜ್ಞಾನವನ್ನು ಲೋಕದಾದ್ಯಂತ ಹರಡಲು ಪ್ರಯತ್ನಿಸುತ್ತಿರುವ ಅಂತಹ ವ್ಯಕ್ತಿಗಳೊಂದಿಗೆ ನಾವು ಸಹವಾಸಮಾಡಬೇಕು. ನೀವು ಅವರೊಂದಿಗೆ ಬೆರೆಯಬೇಕು, ಸಹವಾಸ ಮಾಡಬೇಕು. ಮೊದಲನೆಯದಾಗಿ, "ಈ ಜನ್ಮದಲ್ಲಿ ನಾನು ದೇವರ ಬಗ್ಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆ" ಎಂಬ ನಂಬಿಕೆಯನ್ನು ನೀವು ಹೊಂದಿರಬೇಕು. ನಂತರ ದೇವರ ವ್ಯವಹಾರದಲ್ಲಿ ನಿರತರಾಗಿರುವ ವ್ಯಕ್ತಿಗಳೊಂದಿಗೆ ಸಹವಾಸ ಮಾಡಿರಿ. ನಂತರ ಅವರು ಹೇಗೆ ವರ್ತಿಸುತ್ತಾರೋ ಹಾಗೆಯೇ ನೀವು ವರ್ತಿಸುತ್ತೀರಿ. ಆಗ ಭೌತಿಕ ಜೀವನದ ಬಗ್ಗೆ ನಿಮ್ಮ ತಪ್ಪು ಕಲ್ಪನೆ ಕೊನೆಗೊಳ್ಳುತ್ತದೆ. ಆಗ ನಿಮಲ್ಲಿ ಸಮರ್ಪಣೆ ಬೆಳೆಯುತ್ತದೆ. ಆಗ ನಿಮಗೆ ರುಚಿ ತಿಳಿಯುತ್ತದೆ. ಈ ರೀತಿಯಾಗಿ ನೀವು ದೇವರ ಪ್ರೀತಿಯನ್ನು ಬೆಳೆಸಿಕೊಳ್ಳುವಿರಿ.

ಅಲಿ: ನನಗೆ ಈಗಾಗಲೇ ನಂಬಿಕೆ ಇದೆ.

ಪ್ರಭುಪಾದ: ಅದನ್ನು ಹೆಚ್ಚಿಸಬೇಕು. ಪ್ರಾಥಮಿಕ ನಂಬಿಕೆಯಿರುವುದು ತುಂಬಾ ಒಳ್ಳೆಯದು, ಆದರೆ ಆ ನಂಬಿಕೆಯನ್ನು ಇನ್ನೂ ಹೆಚ್ಚಿಸದ ಹೊರತು, ಪ್ರಗತಿ ಇರುವುದಿಲ್ಲ.

ಪರಿವ್ರಾಜಾಚಾರ್ಯ: ಆ ನಂಬಿಕೆಯನ್ನು ಕಳೆದುಕೊಳ್ಳುವ ಅಪಾಯವಿದೆ.

ಪ್ರಭುಪಾದ: ಹೌದು, ನೀವು ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸದಿದ್ದರೆ ಮತ್ತು ಪ್ರಗತಿಪರವಾಗಿ ಮುಂದುವರಿಯದಿದ್ದರೆ, ನಿಮಗಿರುವ ಕಿಂಚಿತ್ತು ನಂಬಿಕೆಯೂ ಕ್ಷೀಣಿಸುವ ಅಪಾಯವಿದೆ.