KN/Prabhupada 0183 - ಮಾನ್ಯ ಗೂಬೆರವರೆ, ದಯವಿಟ್ಟು ನಿಮ್ಮ ಕಣ್ಣುಗಳನ್ನು ತೆರೆದು ಸೂರ್ಯನನ್ನು ನೋಡಿ



Lecture on SB 6.1.37 -- San Francisco, July 19, 1975

“ಇಲ್ಲಿದ್ದೇನೆ. ನಾನು ಬಂದಿದ್ದೇನೆ", ಎಂದು ಭಗವಂತ ಪ್ರಚಾರ ಮಾಡುತ್ತಿದ್ದಾನೆ. ಪರಿತ್ರಾಣಾಯ ಸಾಧುನಾಂ ವಿನಾಶಾಯ ಚ ದುಷ್ಕೃತಾಂ (ಭ.ಗೀ 4.8). "ನಿಮಗೆ ನೆರವು ನೀಡಲು ನಾನು ನಿಮ್ಮ ಮುಂದೆ ಕಾಣಿಸಿಕೊಂಡಿದ್ದೇನೆ.” ಪರಿತ್ರಾಣಾಯ ಸಾಧೂನಾಂ. “ನೀವು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ, ಆದ್ದರಿಂದ ನಾನು ಬಂದಿದ್ದೇನೆ. ನಾನು ಪ್ರತ್ಯಕ್ಷವಾಗಿದ್ದೇನೆ. ಭಗವಂತ ನಿರಾಕಾರ ಎಂದು ಏಕೆ ಯೋಚಿಸುತ್ತಿದ್ದೀರಿ? ಇಲ್ಲಿ ನಾನು, ಕೃಷ್ಣ, ಸ್ವರೂಪದಲ್ಲಿರುವೆ. ನೋಡಿ, ನನ್ನ ಕೈಯಲ್ಲಿ ನನ್ನ ಕೊಳಲು ಇದೆ. ನಾನು ಹಸುಗಳನ್ನು ತುಂಬಾ ಇಷ್ಟಪಡುತ್ತೇನೆ. ನಾನು ಹಸು, ಋಷಿ, ಮತ್ತು ಬ್ರಹ್ಮ, ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತೇನೆ ಏಕೆಂದರೆ ಅವರೆಲ್ಲರೂ ವಿಭಿನ್ನ ದೇಹಗಳನ್ನು ಹೊಂದಿರುವ ನನ್ನ ಮಕ್ಕಳು.” ಕೃಷ್ಣ ಆಡುತ್ತಿದ್ದಾನೆ. ಕೃಷ್ಣ ಮಾತನಾಡುತ್ತಿದ್ದಾನೆ. ಆದರೂ, ಈ ದುಷ್ಟರು ಕೃಷ್ಣನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದರಲ್ಲಿ ಕೃಷ್ಣನ ತಪ್ಪೇನು? ಇದು ನಮ್ಮ ತಪ್ಪು. ಅಂಧ. ಗೂಬೆಯಂತೆ. ಸೂರ್ಯನ ಬೆಳಕನ್ನು ನೋಡಲು ಗೂಬೆ ಎಂದಿಗೂ ಕಣ್ಣು ತೆರೆಯುವುದಿಲ್ಲ. ಇದು ನಿಮಗೆ ತಿಳಿದಿದೆಯೇ, ಗೂಬೆ? ಅವುಗಳು ಕಣ್ಣು ತೆರೆಯುವುದಿಲ್ಲ. ಆದಾಗ್ಯೂ ನೀವು, "ಮಾನ್ಯ ಗೂಬೆರವರೆ, ದಯವಿಟ್ಟು ನಿಮ್ಮ ಕಣ್ಣುಗಳನ್ನು ತೆರೆದು ಸೂರ್ಯನನ್ನು ನೋಡಿ," ಎಂದರೆ "ಇಲ್ಲ, ಸೂರ್ಯನಿಲ್ಲ, ನಾನು ನೋಡುವುದಿಲ್ಲ" ಎಂದು ಹೇಳುತ್ತದೆ (ನಗು). ಇದು ಗೂಬೆ ನಾಗರಿಕತೆ. ಆದ್ದರಿಂದ, ನೀವು ಈ ಗೂಬೆಗಳೊಂದಿಗೆ ಹೋರಾಡಬೇಕು. ನೀವು ತುಂಬಾ ಬಲಶಾಲಿಯಾಗಿರಬೇಕು, ವಿಶೇಷವಾಗಿ ಸನ್ಯಾಸಿಗಳು. ನಾವು ಗೂಬೆಗಳೊಂದಿಗೆ ಹೋರಾಡಬೇಕಾಗಿದೆ. ಇದರಿಂದ ಬಲವಂತವಾಗಿ, ಯಂತ್ರದಿಂದ ಅವರ ಕಣ್ಣು ತೆರೆಸಬೇಕಿದೆ (ನಗು). ಹೀಗೆ ನಡೆಯುತ್ತಿದೆ. ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನವು ಎಲ್ಲಾ ಗೂಬೆಗಳ ವಿರುದ್ಧದ ಹೋರಾಟವು.

ಹಾಗಾಗಿ ಇಲ್ಲಿ ಒಂದು ಸವಾಲು ಇದೆ: ಯೂಯಂ ವೈ ಧರ್ಮ-ರಾಜಸ್ಯ ಯದಿ ನಿರ್ದೇಶ-ಕಾರಿಣಃ (ಶ್ರೀ.ಭಾ 6.1.38). ನಿರ್ದೇಶ-ಕಾರಿಣಃ. ಸೇವಕ ಎಂದರೆ ಅವರಿಗೆ ಯಜಮಾನನ ಆದೇಶಗಳನ್ನು ಪಾಲಿಸುವುದಕ್ಕಿಂತ ಎರಡನೇ ಆಯ್ಕೆ ಇಲ್ಲ. ಆದ್ದರಿಂದ, ನಿರ್ದೇಶ-ಕಾರಿಣಃ. ಅವರು ವಾದಿಸಲು ಸಾಧ್ಯವಿಲ್ಲ. ಇಲ್ಲ. ಪ್ರತಿ ಆದೇಶವನ್ನು ಪಾಲಿಸಲಾಗುತ್ತದೆ. ಹಾಗಾಗಿ ಯಾರಾದರೂ... ಅವನು ನಿರೀಕ್ಷಿಸುತ್ತಿದ್ದಾನೆ... ನನಗನ್ನಿಸುತ್ತದೆ... ಇಲ್ಲಿ ವಿಷ್ಣುದೂತರನ್ನು ಉಲ್ಲೇಖಿಸಲಾಗಿದೆ, ವಾಸುದೇವೋಕ್ತ-ಕಾರಿಣಃ. ಅವರೂ ಸೇವಕರೇ. ಆದುದರಿಂದ ಉಕ್ತ ಎಂದರೆ ವಾಸುದೇವನು ಯಾವ ಆದೇಶವನ್ನು ನೀಡಿದನೋ ಅದನ್ನು ಅವರು ಪಾಲಿಸುತ್ತಾರೆ. ಹಾಗೆಯೇ ಯಮದೂತರು ಯಮರಾಜನ ಸೇವಕರು. ಅವರನ್ನು ಕೂಡ ನಿರ್ದೇಶ-ಕಾರಿಣಃ ಎಂದು ಸಂಬೋಧಿಸಲಾಗಿದೆ: “ನೀವು ನಿಜವಾಗಿ ಯಮರಾಜನ ಸೇವಕರಾಗಿದ್ದರೆ, ನೀವು ಅವನ ನಿರ್ದೇಶನದಂತೆ ವರ್ತಿಸುತ್ತೀರಿ, ಹಾಗಾದರೆ ನೀವು ಧರ್ಮ ಮತ್ತು ಅಧರ್ಮ ಯಾವುದು ಎಂದು ತಿಳಿದಿರಬೇಕು.” ಆದ್ದರಿಂದ, ಅವರು ನಿಜವಾಗಿಯೂ ಯಮರಾಜನ ಪ್ರಾಮಾಣಿಕ ಸೇವಕರು, ಅದರಲ್ಲಿ ಯಾವುದೇ ಸಂದೇಹವಿಲ್ಲ. ಈಗ ಅವರು ಈ ರೀತಿಯಾಗಿ ತಮ್ಮ ಪರಿಚಯವನ್ನು ನೀಡುತ್ತಿದ್ದಾರೆ, ಯಮದೂತ ಊಚುಃ ವೇದ-ಪ್ರಣಿಹಿತೋ ಧರ್ಮಃ (ಶ್ರೀ.ಭಾ 6.1.40), ಎಂದು ತಕ್ಷಣವೇ ಉತ್ತರಿಸಿದರು. “ಧರ್ಮ ಎಂದರೇನು?", ಎಂಬುದು ಪ್ರಶ್ನೆಯಾಗಿತ್ತು. ತಕ್ಷಣ ಉತ್ತರಿಸಿದರು. ಅವರಿಗೆ ಧರ್ಮ ಏನೆಂದು ತಿಳಿದಿದೆ. ವೇದ-ಪ್ರಣಿಹಿತೋ ಧರ್ಮಃ: “ಧರ್ಮ ಎಂದರೆ ವೇದಗಳಲ್ಲಿ ವಿವರಿಸಿರುವುದು.” ನೀವು ಧರ್ಮವನ್ನು ರಚಿಸಲು ಸಾಧ್ಯವಿಲ್ಲ. ವೇದ, ಮೂಲ ಜ್ಞಾನ, ವೇದ ಎಂದರೆ ಜ್ಞಾನ. ವೇದ-ಶಾಸ್ತ್ರ. ಆದ್ದರಿಂದ, ಸೃಷ್ಟಿಯ ಕಾಲದಲ್ಲಿ ವೇದವನ್ನು ಬ್ರಹ್ಮನಿಗೆ ನೀಡಲಾಯಿತು. ವೇದ... ಆದುದರಿಂದ, ಇದನ್ನು ಅಪೌರುಷೇಯ ಎಂದು ಕರೆಯುತ್ತಾರೆ; ಅದನ್ನು ತಯಾರಿಸಲಾಗಿಲ್ಲ. ಅದನ್ನು ಶ್ರೀಮದ್-ಭಾಗವತದಲ್ಲಿ ವಿವರಿಸಲಾಗಿದೆ, ತೇನೆ ಬ್ರಹ್ಮ ಹೃದಾ ಆದಿ-ಕವಯೇ (ಶ್ರೀ.ಭಾ 1.1.1). ಬ್ರಹ್ಮ, ಬ್ರಹ್ಮ ಎಂದರೆ ವೇದ. ವೇದಗಳ ಇನ್ನೊಂದು ಹೆಸರು ಬ್ರಹ್ಮ, ಆಧ್ಯಾತ್ಮಿಕ ಜ್ಞಾನ, ಅಥವಾ ಎಲ್ಲಾ ಜ್ಞಾನ, ಬ್ರಹ್ಮ. ತೇನೇ ಬ್ರಹ್ಮ ಆದಿ-ಕವಯೇ ಹೃದಾ. ಹಾಗಾಗಿ ಆಧ್ಯಾತ್ಮಿಕ ಗುರುಗಳಿಂದ ವೇದಾಧ್ಯಯನ ಮಾಡಬೇಕು.

ಆದ್ದರಿಂದ, ವೇದಗಳನ್ನು ಅರ್ಥಮಾಡಿಕೊಂಡ ಮೊದಲ ಜೀವಿ ಬ್ರಹ್ಮ ಎಂದು ಹೇಳಲಾಗುತ್ತದೆ. ಹಾಗಾದರೆ ಅವನು ಹೇಗೆ ಅರ್ಥಮಾಡಿಕೊಂಡನು? ಶಿಕ್ಷಕ ಯರು? ಬೇರೆ ಯಾವುದೇ ಜೀವಿ ಇಲ್ಲ. ಅವನು ವೇದಗಳನ್ನು ಹೇಗೆ ಅರ್ಥಮಾಡಿಕೊಂಡನು? ಆ ಗುರುವು ಕೃಷ್ಣ. ಅವನು ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾನೆ. ಈಶ್ವರಃ ಸರ್ವ ಭೂತಾನಾಂ ಹೃದ್-ದೇಶೇ ಅರ್ಜುನ ತಿಷ್ಠತಿ (ಭ.ಗೀ 18.61). ಅವನು ಹೃದಯದಿಂದ ಕಲಿಸುತ್ತಾನೆ. ಆದ್ದರಿಂದ ಕೃಷ್ಣನು ಕಲಿಸುತ್ತಾನೆ-ಅವನು ತುಂಬಾ ಕರುಣಾಮಯಿ - ಚೈತ್ಯ-ಗುರುವಿನಂತೆ ಹೃದಯದಿಂದ, ಮತ್ತು ಅವನು ತನ್ನ ಪ್ರತಿನಿಧಿಯನ್ನು ಕೂಡ ಹೊರಗಿನಿಂದ ಕಳುಹಿಸುತ್ತಾನೆ. ಚೈತ್ಯ-ಗುರು ಮತ್ತು ಗುರು, ಎರಡೂ ರೀತಿಯಲ್ಲಿ ಕೃಷ್ಣ ಪ್ರಯತ್ನಿಸುತ್ತಿದ್ದಾನೆ. ಕೃಷ್ಣ ತುಂಬಾ ಕರುಣಾಮಯಿ. ವೇದಗಳು ಮಾನವ ನಿರ್ಮಿತ ಪುಸ್ತಕಗಳಲ್ಲ. ವೇದ, ಅಪೌರುಷೇಯ. ಅಪೌರುಷೇಯ ಎಂದರೆ ನಿರ್ಮಿತವಲ್ಲ... ವೇದಗಳನ್ನು ನಾವು ಸಾಮಾನ್ಯ ಮಾನಸಿಕ ಊಹೆಯ ಪುಸ್ತಕವಾಗಿ ತೆಗೆದುಕೊಳ್ಳಬಾರದು. ಇಲ್ಲ. ಇದು ಪರಿಪೂರ್ಣ ಜ್ಞಾನ. ಇದು ಪರಿಪೂರ್ಣ ಜ್ಞಾನ. ಮತ್ತು ಯಾವುದೇ ಕಲಬೆರಕೆ ಅಥವಾ ತಪ್ಪು ವ್ಯಾಖ್ಯಾನ ಇಲ್ಲದೆ ಯಥಾರೂಪವಾಗಿ ಸ್ವೀಕರಿಸಬೇಕು. ಇದು ಭಗವಂತನಿಂದ ಹೇಳಲ್ಪಟ್ಟಿದೆ. ಆದ್ದರಿಂದ, ಭಗವದ್ಗೀತೆಯೂ ವೇದವೇ. ಇದು ಕೃಷ್ಣನಿಂದ ಮಾತನಾಡಲ್ಪಟ್ಟಿದೆ. ಆದ್ದರಿಂದ, ನೀವು ಯಾವುದೇ ಸೇರ್ಪಡೆ, ಬದಲಾವಣೆ ಮಾಡಲು ಸಾಧ್ಯವಿಲ್ಲ. ನೀವು ಅದನ್ನು ಹಾಗೆಯೇ ತೆಗೆದುಕೊಳ್ಳಬೇಕು. ಆಗ ನೀವು ಸರಿಯಾದ ಜ್ಞಾನವನ್ನು ಪಡೆಯುತ್ತೀರಿ.