KN/Prabhupada 0186 - ಚಿನ್ನವು ಚಿನ್ನವೇ ಆಗಿರುವಂತೆ
Lecture on BG 7.1 -- Fiji, May 24, 1975
ನಾವು ಫಿಜಿಯಲ್ಲಿ ಆಗಲಿ ಅಥವಾ ಇಂಗ್ಲೆಂಡಿನಲ್ಲಿ ಅಥವಾ ಎಲ್ಲಿಯಿದ್ದರೂ ಸಹ… ಏಕೆಂದರೆ ಕೃಷ್ಣನು ಎಲ್ಲದಕ್ಕೂ, ಎಲ್ಲೆಡೆಯೂ ಒಡೆಯನಾಗಿದ್ದಾನೆ..., ಸರ್ವಲೋಕ-ಮಹೇಶ್ವರಂ (ಭ.ಗೀ 5.29). ಫಿಜಿ ಸರ್ವಲೋಕದ ಒಂದು ಸಣ್ಣ ಭಾಗವಾಗಿದೆ. ಆದ್ದರಿಂದ, ಅವನು ಎಲ್ಲಾ ಲೋಕಗಳ ಒಡೆಯನಾಗಿದ್ದರೆ, ಅವನು ಫಿಜಿಯ ಒಡೆಯನೂ ಆಗಿದ್ದಾನೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದ್ದರಿಂದ, ಫಿಜಿಯ ನಿವಾಸಿಗಳೇ, ನೀವು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಿದರೆ ಅದೇ ಜೀವನದ ಪರಿಪೂರ್ಣತೆ. ಅದೇ ಜೀವನದ ಪರಿಪೂರ್ಣತೆ. ಕೃಷ್ಣನ ಉಪದೇಶದಿಂದ ವಿಮುಖನಾಗಬೇಡಿ. ಬಹಳ ನೇರವಾಗಿ, ಭಗವಾನ್ ಉವಾಚ, ಭಗವಾನ್ ನೇರವಾಗಿ ಮಾತನಾಡುತ್ತಿದ್ದಾನೆ. ನೀವು ಅದರ ಲಾಭವನ್ನು ಪಡೆಯುಯಿರಿ. ನೀವು ಭಗವದ್ಗೀತೆಯನ್ನು ಓದಿದರೆ ಅದರಲ್ಲಿ ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ನೀವು ಪರಿಹಾರವನ್ನು ಸ್ವೀಕರಿಸಲು ಒಪ್ಪಿದರೆ ನೀಮ್ಮ ಎಲ್ಲಾ ಸಮಸ್ಯೆಗೂ ಅದರಲ್ಲಿ ಪರಿಹಾರವಿದೆ.
ಇತ್ತೀಚಿನ ದಿನಗಳಲ್ಲಿ ಜನರು ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವು ಭಗವದ್ಗೀತೆಯಲ್ಲಿದೆ. ಕೃಷ್ಣನು ಹೇಳುತ್ತಾನೆ, ಅನ್ನಾದ್ ಭವಂತಿ ಭೂತಾನಿ: (ಭ.ಗೀ 3.14) “ಭೂತಾನಿ, ಎಲ್ಲಾ ಜೀವಿಗಳು, ಪ್ರಾಣಿ ಮತ್ತು ಮನುಷ್ಯ, ಸಾಕಷ್ಟು ಆಹಾರ ಧಾನ್ಯಗಳು ಲಭ್ಯವಿದ್ದರೆ ಯಾವುದೇ ಆತಂಕವಿಲ್ಲದೆ ಬಹಳ ಚೆನ್ನಾಗಿ ಬದುಕಬಹುದು.” ಈಗ ಇದಕ್ಕೆ ನಿಮ್ಮ ಆಕ್ಷೇಪಣೆ ಏನು? ಇದೇ ಪರಿಹಾರ. ಕೃಷ್ಣನು ಹೇಳುತ್ತಾನೆ, ಅನ್ನಾದ್ ಭವಂತಿ ಭೂತನಿ. ಆದ್ದರಿಂದ, ಇದು ಕಾಲ್ಪನಿಕವಲ್ಲ; ಇದು ಪ್ರಾಯೋಗಿಕವಾಗಿದೆ. ಮನುಷ್ಯ ಮತ್ತು ಪ್ರಾಣಿಗಳಿಗೆ ಆಹಾರ ನೀಡಲು ಸಾಕಷ್ಟು ಆಹಾರ ಧಾನ್ಯವಿದ್ದರೆ ಆಗ ಎಲ್ಲವೂ ತಕ್ಷಣ ಶಾಂತಿಯುತವಾಗಿರುತ್ತದೆ. ಏಕೆಂದರೆ ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯು ವಿಚಲಿತನಾಗುತ್ತಾನೆ. ಆದ್ದರಿಂದ, ಮೊದಲು ಅವನಿಗೆ ಆಹಾರವನ್ನು ನೀಡಿ. ಅದು ಕೃಷ್ಣನ ಆಜ್ಞೆ. ಅದು ಅಸಾಧ್ಯವೇ, ಅಪ್ರಾಯೋಗಿಕವೇ? ಇಲ್ಲ. ನೀವು ಹೆಚ್ಚು ಆಹಾರವನ್ನು ಬೆಳೆದು ವಿತರಿಸಿ. ಅಷ್ಟೊಂದು ಭೂಮಿ ಇದೆ, ಆದರೆ ನಾವು ಆಹಾರವನ್ನು ಬೆಳೆಯುತ್ತಿಲ್ಲ. ನಾವು ಉಪಕರಣಗಳು ಮತ್ತು ಮೋಟಾರು ಟೈರ್ಗಳನ್ನು ತಯಾರಿಸುವಲ್ಲಿ ಕಾರ್ಯನಿರತರಾಗಿದ್ದೇವೆ. ಹಾಗಾದರೆ ಈಗ ಮೋಟರ್ ಟೈರ್ಗಳನ್ನು ತಿನ್ನಿ. ಆದರೆ ಕೃಷ್ಣನು, “ನೀನು ಅನ್ನವನ್ನು ಬೆಳೆ" ಎಂದು ಹೇಳುತ್ತಾನೆ. ಆಗ ಕೊರತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದ್ ಅನ್ನ-ಸಂಭವಃ. ಆದರೆ ಸಾಕಷ್ಟು ಮಳೆಯಾದಾಗ ಅನ್ನವನ್ನು ಉತ್ಪಾದಿಸಲಾಗುತ್ತದೆ. ಪರ್ಜನ್ಯಾದ್ ಅನ್ನ-ಸಂಭವಃ. ಮತ್ತು ಯಜ್ಞಾದ್ ಭವತಿ ಪರ್ಜನ್ಯಃ (ಭ.ಗೀ 3.14). ಮತ್ತು ನೀವು ಯಜ್ಞವನ್ನು ಮಾಡಿದರೆ, ನಿಯಮಿತವಾಗಿ ಮಳೆಯಾಗುತ್ತದೆ. ಇದೇ ದಾರಿ. ಆದರೆ ಯಜ್ಞದಲ್ಲಿ ಯಾರಿಗೂ ಆಸಕ್ತಿ ಇಲ್ಲ, ಆಹಾರ ಧಾನ್ಯದ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ, ಮತ್ತು ನೀವು ನಿಮ್ಮದೇ ಆದ ಕೊರತೆಯನ್ನು ಸೃಷ್ಟಿಸಿದರೆ, ಅದು ದೇವರ ತಪ್ಪಲ್ಲ; ಅದು ನಿಮ್ಮ ತಪ್ಪು.
ಆದ್ದರಿಂದ, ನೀವು ಯಾವುದೇ ಪ್ರಶ್ನೆಯನ್ನು ತೆಗೆದುಕೊಳ್ಳಿ — ಸಾಮಾಜಿಕ, ರಾಜಕೀಯ, ತಾತ್ವಿಕ, ಧಾರ್ಮಿಕ —ಅದಕ್ಕೆ ಪರಿಹಾರವಿದೆ. ಉದಾಹರಣೆಗೆ, ಭಾರತವು ಈ ಜಾತಿ ವ್ಯವಸ್ಥೆ ಪದ್ದತ್ತಿಯನ್ನು ಎದುರಿಸುತ್ತಿದೆ. ಅನೇಕರು ಜಾತಿ ವ್ಯವಸ್ಥೆಯ ಪರವಾಗಿದ್ದಾರೆ, ಅನೇಕರು ಅದರ ಪರವಾಗಿಲ್ಲ. ಆದರೆ ಕೃಷ್ಣನು ಪರಿಹಾರವನ್ನು ನೀಡಿದ್ದಾನೆ. ಆದ್ದರಿಂದ, ಅದರ ಪರವಾಗಿ ಅಥವಾ ಅದರ ವಿರುದ್ಧವಾಗಿ ಎಂಬ ಪ್ರಶ್ನೆಯೇ ಇಲ್ಲ. ಜಾತಿ ವ್ಯವಸ್ಥೆಯನ್ನು ಗುಣಕ್ಕೆ ಅನುಗುಣವಾಗಿ ಗೊತ್ತುಪಡಿಸಬೇಕು. ಚಾತುರ್-ವರ್ಣ್ಯಂ ಮಾಯಾ ಸೃಷ್ಟಂ ಗುಣ-ಕರ್ಮ (ಭ.ಗೀ 4.13). "ಹುಟ್ಟಿನಿಂದ", ಎಂದು ಎಂದಿಗೂ ಹೇಳುವುದಿಲ್ಲ. ಮತ್ತು ಶ್ರೀಮದ್-ಭಾಗವತಂನಲ್ಲಿ ಇದನ್ನು ದೃಢಪಡಿಸಲಾಗಿದೆ
- ಯಶ್ಯ ಯಲ್ ಲಕ್ಷಣಂ ಪ್ರೋಕ್ತಂ
- ಪುಂಸೋ ವರ್ಣಾಭಿವ್ಯಂಜಕಂ
- ಯದ್ ಅನ್ಯತ್ರಾಪಿ ದೃಶ್ಯೇತ
- ತತ್ ತೇನೈವ ವಿನಿರ್ದಿಶೇತ್
- (ಶ್ರೀ.ಭಾ 7.11.35)
ನಾರದ ಮುನಿಯ ಸ್ಪಷ್ಟವಾದ ಆದೇಶ.
ಆದ್ದರಿಂದ, ನಾವು ವೈದಿಕ ಸಾಹಿತ್ಯದಲ್ಲಿ ಎಲ್ಲವನ್ನೂ ಪರಿಪೂರ್ಣವಾಗಿ ಪಡೆದಿದ್ದೇವೆ, ಮತ್ತು ನಾವು ಅನುಸರಿಸಿದರೆ... ಕೃಷ್ಣ ಪ್ರಜ್ಞೆ ಚಳುವಳಿಯು ಈ ತತ್ವದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ನಾವು ಏನನ್ನೂ ತಯಾರಿಸುತ್ತಿಲ್ಲ. ಅದು ನಮ್ಮ ಕೆಲಸವಲ್ಲ. ಏಕೆಂದರೆ ನಾವು ಅಪರಿಪೂರ್ಣರು ಎಂದು ನಮಗೆ ತಿಳಿದಿದೆ. ನಾವು ಏನನ್ನಾದರೂ ತಯಾರಿಸಿದರೆ, ಅದು ಕೂಡ ಅಪರಿಪೂರ್ಣವಾಗಿರುತ್ತದೆ. ನಮ್ಮ ಬದ್ಧ ಜೀವನದಲ್ಲಿ ನಾಲ್ಕು ದೋಷಗಳಿವೆ: ನಾವು ತಪ್ಪು ಮಾಡುತ್ತೇವೆ, ನಾವು ಭ್ರಮೆಗೆ ಒಳಗಾಗುತ್ತೇವೆ, ನಾವು ಇತರರಿಗೆ ಮೋಸ ಮಾಡುತ್ತೇವೆ ಮತ್ತು ನಮ್ಮ ಇಂದ್ರಿಯಗಳು ಅಪರಿಪೂರ್ಣವಾಗಿವೆ. ಹಾಗಾದರೆ ಈ ಎಲ್ಲಾ ದೋಷಗಳನ್ನು ಹೊಂದಿರುವ ವ್ಯಕ್ತಿಯಿಂದ ನಾವು ಪರಿಪೂರ್ಣ ಜ್ಞಾನವನ್ನು ಹೇಗೆ ಪಡೆಯುವುದು? ಆದ್ದರಿಂದ, ಈ ದೋಷಗಳಿಂದ ಬಾಧಿತರಾಗದ ಪರಮಾತ್ಮನಾದ ಮುಕ್ತಪುರುಷನಿಂದ ನಾವು ಜ್ಞಾನವನ್ನು ಪಡೆಯಬೇಕು. ಅದು ಪರಿಪೂರ್ಣ ಜ್ಞಾನ.
ಆದ್ದರಿಂದ, ನೀವು ಭಗವದ್ಗೀತೆಯಿಂದ ಜ್ಞಾನವನ್ನು ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ವರ್ತಿಸಬೇಕು ಎಂಬುದು ನಮ್ಮ ವಿನಂತಿ. ನೀವು ಏನಾಗಿದ್ದೀರಿ ಎಂಬುದು ಮುಖ್ಯವಲ್ಲ. ಭಗವಂತನು ಎಲ್ಲರಿಗೂ ಸೇರಿದವನು. ದೇವರು ದೇವರೇ. ಚಿನ್ನವು ಚಿನ್ನವೇ. ಚಿನ್ನವನ್ನು ಹಿಂದೂಗಳು ಉಪಯೋಗಿಸಿದರೆ, ಅದು ಹಿಂದೂ ಚಿನ್ನವಾಗುವುದಿಲ್ಲ. ಅಥವಾ ಚಿನ್ನವನ್ನು ಕ್ರಿಶ್ಚಿಯನ್ ಉಪಯೋಗಿಸಿದರೆ, ಅದು ಕ್ರಿಶ್ಚಿಯನ್ ಚಿನ್ನವಾಗುವುದಿಲ್ಲ. ಚಿನ್ನವು ಚಿನ್ನವೇ. ಅಂತೆಯೇ, ಧರ್ಮವು ಒಂದೇ. ಧರ್ಮ ಒಂದೇ. ಹಿಂದೂ ಧರ್ಮ, ಮುಸ್ಲಿಂ ಧರ್ಮ, ಕ್ರಿಶ್ಚಿಯನ್ ಧರ್ಮ ಇರಲು ಸಾಧ್ಯವಿಲ್ಲ. ಅದು ಎಲ್ಲವೂ ಕೃತಕ. "ಹಿಂದೂ ಚಿನ್ನ", "ಮುಸ್ಲಿಂ ಚಿನ್ನ"ದಂತೆ. ಅದು ಸಾಧ್ಯವಿಲ್ಲ. ಚಿನ್ನವು ಚಿನ್ನವೇ. ಅದೇ ರೀತಿ ಧರ್ಮ. ಧರ್ಮ ಎಂದರೆ ದೇವರು ಕೊಟ್ಟ ಕಾನೂನು. ಅದೇ ಧರ್ಮ. ಧರ್ಮಂ ತು ಸಾಕ್ಷಾದ್ ಭಾಗವತ್-ಪ್ರಣೀತಂ ನ ವೈ ವಿದುರ್ ಋಷಯೋ ಮನುಷ್ಯಾಹ (ಶ್ರೀ.ಭಾ 6.3.19), "ಧರ್ಮ, ಧರ್ಮದ ತತ್ವವಾದ ಧಾರ್ಮಿಕ ವ್ಯವಸ್ಥೆ, ಭಗವಂತನಿಂದ ವಿಧಿಸಲ್ಪಟ್ಟಿದೆ ಅಥವಾ ನೀಡಲ್ಪಟ್ಟಿದೆ". ದೇವರು ಒಬ್ಬನೇ; ಆದ್ದರಿಂದ, ಧರ್ಮ ಅಥವಾ ಧಾರ್ಮಿಕ ವ್ಯವಸ್ಥೆ ಒಂದೇ ಆಗಿರಬೇಕು. ಎರಡು ಇರಲು ಸಾಧ್ಯವಿಲ್ಲ.