KN/Prabhupada 0188 - ಜೀವನದ ಎಲ್ಲಾ ಸಮಸ್ಯೆಗಳಿಗೆ ಅಂತಿಮ ಪರಿಹಾರ



Lecture on SB 2.3.17 -- Los Angeles, July 12, 1969

ವಿಷ್ಣುಜನ: ಪ್ರಭುಪಾದ, ಭಗವಂತನೇ ಕಾರಣ, ಮೂಲ ಕಾರಣ ಎಂದು ನೀವು ವಿವರಿಸಿದ್ದೀರಿ ಮತ್ತು ಯಾರೂ ಭಗವಂತನನ್ನು ತಿಳಿದಿಲ್ಲದ ಕಾರಣ, ಜನರು ಹೇಗೆ ನಿಯಂತ್ರಿಸಲ್ಪಡುತ್ತಾರೆ ಎಂದು ತಿಳಿಯುವುದು ಹೇಗೆ? ಕೃಷ್ಣನನ್ನು ತಿಳಿಯದೆ, ಮತ್ತು ಅವನೇ ಮೂಲ ಕಾರಣವೆಂದು ತಿಳಿಯದೆ, ಜನರು ಹೇಗೆ ನಿಯಂತ್ರಿಸಲ್ಪಡುತ್ತಾರೆ ಎಂದು ಅವರು ಹೇಗೆ ತಿಳಿಯಬಹುದು? ಅದು ಕೃಷ್ಣನಿಂದಲೇ ಆಗುತ್ತಿದೆ ಎಂದು ಅವರಿಗೆ ಹೇಗೆ ತಿಳಿಯುತ್ತದೆ?

ಪ್ರಭುಪಾದ: ನೀವು ರಾಜ್ಯದಿಂದ ನಿಯಂತ್ರಿಸಲ್ಪಡುತ್ತೀರಿ ಎಂದು ನಿಮಗೆ ಹೇಗೆ ತಿಳಿದಿದೆ?

ವಿಷ್ಣುಜನ: ರಾಜ್ಯವು ಒಂದು ಕಾನೂನು ಪುಸ್ತಕವನ್ನು ಹೊಂದಿದೆ.

ಪ್ರಭುಪಾದ: ಹಾಗೆಯೇ ನಮಗೂ ಕಾನೂನು ಪುಸ್ತಕಗಳಿವೆ. ಅನಾದಿ ಬಹಿರ್ಮುಖ ಜೀವ ಕೃಷ್ಣ ಭೂಲಿ ಗೆಲಾ, ಅತಯೇವ ಕೃಷ್ಣ ವೇದ-ಪುರಾಣೇ ಕರಿಲಾ. ನೀವು ಕೃಷ್ಣನನ್ನು ಮರೆತಿರುವ ಕಾರಣ ಅವನು ನಿಮಗೆ ಅನೇಕ ಪುಸ್ತಕಗಳನ್ನು, ವೈದಿಕ ಸಾಹಿತ್ಯವನ್ನು ನೀಡಿದ್ದಾನೆ. ಆದ್ದರಿಂದ, ನಾನು ಒತ್ತಿ ಹೇಳುತ್ತಿದ್ದೇನೆ, ಅಸಂಬದ್ಧ ಸಾಹಿತ್ಯವನ್ನು ಓದುವುದರಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಈ ವೈದಿಕ ಸಾಹಿತ್ಯದಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಆಗ ನಿಮಗೆ ತಿಳಿಯುತ್ತದೆ. ಈ ಪುಸ್ತಕಗಳು ಏಕೆ ಇವೆ? ಕಾನೂನುಬದ್ಧವಾಗಿರಿ ಎಂದು ನಿಮಗೆ ನೆನಪಿಸಲು. ಆದರೆ ನೀವು ಆ ಪ್ರಯೋಜನವನ್ನು ಬಳಸಿಕೊಳ್ಳದಿದ್ದರೆ ನಿಮ್ಮ ಜೀವನವನ್ನು ದುರುಪಯೋಗಪಡಿಸಿಕೊಳ್ಳುವಿರಿ. ಈ ಪ್ರಚಾರದ ಕೆಲಸ, ಪುಸ್ತಕಗಳ ಪ್ರಕಟಣೆ, ಸಾಹಿತ್ಯ, ಪತ್ರಿಕೆಗಳು, ಕೃಷ್ಣ ಪ್ರಜ್ಞೆಯ ಚಳುವಳಿ… ಇವೆಲ್ಲವೂ ನಾವು ಹೇಗೆ ನಿಯಂತ್ರಿಸಲ್ಪಡುತ್ತೇವೆ, ಯಾರು ಸರ್ವೋಚ್ಚ ನಿಯಂತ್ರಕ, ನಿಮ್ಮ ಜೀವನವು ಹೇಗೆ ಯಶಸ್ವಿಯಾಗಬಹುದು, ಈ ನಿಯಂತ್ರಣದಿಂದ ನೀವು ಹೇಗೆ ಮುಕ್ತರಾಗಬಹುದು, ನೀವು ಸ್ವತಂತ್ರ ಜೀವನವನ್ನು ಹೇಗೆ ಪಡೆಯಬಹುದು ಎಂಬುದನ್ನು ನಿಮಗೆ ನೆನಪಿಸಲು ನಡೆಯುತ್ತಿದೆ. ಇದೇ ಚಳುವಳಿಯ ಗುರಿ. ಈ ಕೃಷ್ಣ ಪ್ರಜ್ಞೆಯ ಆಂದೋಲನವು ಆ ಉದ್ದೇಶಕ್ಕಾಗಿ; ಇಲ್ಲದಿದ್ದರೆ, ಈ ಚಳುವಳಿಯ ಪ್ರಯೋಜನವೇನು? ಸ್ವಲ್ಪ ತಾತ್ಕಾಲಿಕ ಸಮಾಧಾನ ನೀಡುವ ಒಂದು ‘ಇಜ಼ಮ್" ಅಲ್ಲ. ಈ ಕೃಷ್ಣ ಪ್ರಜ್ಞೆ ಚಳುವಳಿಯು ಜೀವನದ ಎಲ್ಲಾ ಸಮಸ್ಯೆಗಳಿಗೆ ಅಂತಿಮ ಪರಿಹಾರವಾಗಿದೆ. ಮತ್ತು ಈ ಸಂದೇಶವನ್ನು ಸ್ವೀಕರಿಸಲು ಈ ಜಪವು ನಿಮ್ಮ ಹೃದಯದ ಹಾದಿಯಾಗಿದೆ. ಚೇತೋ-ದರ್ಪಣ-ಮಾರ್ಜನಂ (ಚೈ.ಚ ಅಂತ್ಯ 20.12), ಹೃದಯವನ್ನು ಶುದ್ಧೀಕರಿಸುವುದು. ಆಗ ನೀವು ಸಂದೇಶವನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ನಮ್ಮ ಪ್ರಕ್ರಿಯೆಯು ತುಂಬಾ ವೈಜ್ಞಾನಿಕವಾಗಿದೆ, ಅಧಿಕೃತವಾಗಿದೆ, ಮತ್ತು ಯಾರಾದರೂ ಅದನ್ನು ಸ್ವೀಕರಿಸಿದರೆ ಅವನು ಕ್ರಮೇಣ ಜಾಗೃತನಾಗಿ ಉನ್ನತಿ ಹೊಂದುತ್ತಾನೆ. ಅದರಲ್ಲಿ ಯಾವುದೇ ಸಂಶಯವಿಲ್ಲ.