KN/Prabhupada 0190 - ಈ ಭೌತಿಕ ಜೀವನದ ಕಡೆ ನಿರ್ಲಿಪ್ತತೆಯನ್ನು ಹೆಚ್ಚಿಸಿ
Lecture on SB 7.6.11-13 -- New Vrindaban, June 27, 1976
ನಾವು ಭಕ್ತಿ-ಮಾರ್ಗದ ಈ ತತ್ವಗಳನ್ನು ಅನುಸರಿಸಿದರೆ ನಾವು ಹೇಗೆ ನಿರ್ಲಿಪ್ತರಾಗಬಹುದೆಂದು ಪ್ರತ್ಯೇಕವಾಗಿ ಪ್ರಯತ್ನಿಸುವ ಅಗತ್ಯವಿಲ್ಲ. ನಿರ್ಲಿಪ್ತತೆ ತಂತಾನೆ ಬರುತ್ತದೆ. ವಾಸುದೇವೆ ಭಗವತಿ ಭಕ್ತಿ-ಯೋಗಃ ಪ್ರಯೋಜಿತಃ ಜನಯತಿ ಆಶು ವೈರಾಗ್ಯಮ್ (ಶ್ರೀ.ಭಾ 1.2.7). ವೈರಾಗ್ಯಂ ಎಂದರೆ ನಿರ್ಲಿಪ್ತತೆ. ಭಕ್ತಿ-ಯೋಗವನ್ನು ವೈರಾಗ್ಯ ಎಂದೂ ಕರೆಯುತ್ತಾರೆ. ವೈರಾಗ್ಯ. ಸಾರ್ವಭೌಮ ಭಟ್ಟಾಚಾರ್ಯರು ಈ ವೈರಾಗ್ಯದ ಬಗ್ಗೆ ಶ್ಲೋಕಗಳನ್ನು ಬರೆದಿದ್ದಾರೆ.
- ವೈರಾಗ್ಯ-ವಿದ್ಯಾ-ನಿಜ-ಭಕ್ತಿ-ಯೋಗ-
- ಶಿಕ್ಷಾರ್ಥಂ ಏಕಃ ಪುರುಷಃ ಪುರಾಣಃ
- ಶ್ರೀ-ಕೃಷ್ಣ-ಚೈತನ್ಯ-ಶರೀರ-ಧಾರಿ
- ಕೃಪಾಂಬುಧಿರ್ ಯಸ್ ತಮ್ ಅಹಂ ಪ್ರಪದ್ಯೇ
- (ಚೈ.ಚ ಮಧ್ಯ 6.254)
ಸ್ವತಃ ಕೃಷ್ಣನೇ ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುರವರು. ಅವರು ನಮಗೆ ವೈರಾಗ್ಯ-ವಿದ್ಯೆಯನ್ನು ಕಲಿಸಲು ಬಂದಿದ್ದಾರೆ. ಇದು ಸ್ವಲ್ಪ ಕಷ್ಟ. ಈ ವೈರಾಗ್ಯ-ವಿದ್ಯೆಯನ್ನು ಅರ್ಥಮಾಡಿಕೊಳ್ಳುವುದು ಸಾಮಾನ್ಯ ವ್ಯಕ್ತಿಗಳಿಗೆ ತುಂಬಾ ಕಷ್ಟ. ಈ ದೇಹಕ್ಕೆ ಹೇಗೆ ಬಾಂಧವ್ಯವನ್ನು ಹೆಚ್ಚಿಸುವುದು ಎಂದು ಅವರ ವ್ಯವಹಾರವಾದರೆ, ಕೃಷ್ಣ ಪ್ರಜ್ಞೆಯ ಆಂದೋಲನವು ಈ ಭೌತಿಕ ಜೀವನದ ಕಡೆ ನಿರ್ಲಿಪ್ತತೆಯನ್ನು ಹೇಗೆ ಹೆಚ್ಚಿಸುವುದು ಎಂದು. ಆದ್ದರಿಂದ, ಇದನ್ನು ವೈರಾಗ್ಯ-ವಿದ್ಯೆ ಎಂದು ಕರೆಯಲಾಗುತ್ತದೆ. ವಾಸುದೇವೆ ಭಗವತಿ ಭಕ್ತಿ-ಯೋಗಃ ಪ್ರಯೋಜಿತಃ ಜನಯತಿ ಆಶು ವೈರಾಗ್ಯಮ್ (ಶ್ರೀ.ಭಾ 1.2.7), ಎಂದು ಆದೇಶಿಸಿರುವಂತೆ, ಬಹಳ ಬೇಗ, ಅತಿ ಶೀಘ್ರದಲ್ಲಿ, ವೈರಾಗ್ಯ-ವಿದ್ಯೆಯನ್ನು ಬಹಳ ಸುಲಭವಾಗಿ ಸಾಧಿಸಬಹುದು. ಜನಯತಿ ಆಶು ವೈರಾಗ್ಯಂ ಜ್ಞಾನಂ ಚ. ಮಾನವ ಜೀವನದಲ್ಲಿ ಎರಡು ವಿಷಯಗಳು ಅತ್ಯವಶಕ. ಒಂದು ವಿಷಯವೆಂದರೆ ಜ್ಞಾನಂ, ಜ್ಞಾನಂ-ವಿಜ್ಞಾನಂ ಆಸ್ತಿಕ್ಯಂ ಬ್ರಹ್ಮ-ಕರ್ಮ ಸ್ವ-ಭಾವ-ಜಮ್. ಈ ಜ್ಞಾನ ಎಂದರೆ, ಜ್ಞಾನದ ಆರಂಭ ಎಂದರೆ, “ನಾನು ಈ ದೇಹವಲ್ಲ. ನಾನು ಆತ್ಮ.” ಅದೇ ಜ್ಞಾನ. ಮತ್ತು ಜ್ಞಾನದ ಆ ಮಟ್ಟದಲ್ಲಿ ಒಬ್ಬರು ನೆಲೆಗೊಂಡ ತಕ್ಷಣ, ಅದು ಸುಲಭವಾಗುತ್ತದೆ. ಈ ದೇಹದ ಪ್ರಯೋಜನಕ್ಕಾಗಿ ಜನರು ಎಲ್ಲೆಡೆ ತೊಡಗಿಸಿಕೊಂಡಿದ್ದಾರೆ. ಆದರೆ ಒಬ್ಬರು ಅರ್ಥಮಾಡಿಕೊಂಡರೆ, ಅವರು ಜ್ಞಾನದ ನೆಲೆಗೆ ಬರುತ್ತಾರೆ, ಆಗ ಅವರು ಸ್ವಾಭಾವಿಕವಾಗಿ ನಿರ್ಲಿಪ್ತರಾಗುತ್ತಾರೆ, "ನಾನು ಈ ದೇಹವಲ್ಲ. ನಾನು ಈ ದೇಹಕ್ಕಾಗಿ ಏಕೆ ಶ್ರಮಿಸುತ್ತಿದ್ದೇನೆ?" ಜ್ಞಾನಂ ಚ ಯದ್ ಅಹೈತುಕಮ್ (ಶ್ರೀ.ಭಾ 1.2.7). ಸ್ವಯಂಚಾಲಿತವಾಗಿ... ಎರಡು ವಿಷಯಗಳ ಅಗತ್ಯವಿದೆ. ಚೈತನ್ಯ ಮಹಾಪ್ರಭುಗಳು ಅವರ ಜೀವನಕ್ರಮದಿಂದ, ಅವರು ಜ್ಞಾನ ಮತ್ತು ವೈರಾಗ್ಯವನ್ನು ಕಲಿಸುತ್ತಿದ್ದಾರೆ ಎಂದು ಅನೇಕ ಸ್ಥಳಗಳಲ್ಲಿ ಇದನ್ನು ಒತ್ತಿಹೇಳಿದ್ದಾರೆ. ಒಂದು ಕಡೆ ಜ್ಞಾನಂ — ಅಂದರೆ ರೂಪ ಗೋಸ್ವಾಮಿ ಹಾಗು ಸನಾತನ ಗೋಸ್ವಾಮಿಗೆ ಬೋಧಿಸುವುದು, ಸಾರ್ವಭೌಮ ಭಟ್ಟಾಚಾರ್ಯ, ಪ್ರಕಾಶಾನಂದ ಸರಸ್ವತಿಯೊಂದಿಗೆ, ರಾಮಾನಂದ ರಾಯರೊಂದಿಗೆ ಮಾತನಾಡುವುದು. ನಾವು ‘ಭಗವಾನ್ ಚೈತನ್ಯರ ಬೋಧನೆಗಳು’, ಇದರಲ್ಲಿ ಈ ಎಲ್ಲಾ ವಿಷಯಗಳನ್ನು ನೀಡಿದ್ದೇವೆ. ಹಾಗಾಗಿ, ಅದುವೇ ಜ್ಞಾನ. ಮತ್ತು ಅವರ ಸ್ವಂತ ಜೀವನದಲ್ಲಿ ಅವರ ಉದಾಹರಣೆಯಿಂದ, ಅವರು ಸನ್ಯಾಸವನ್ನು ಸ್ವೀಕರಿಸಿ ವೈರಾಗ್ಯವನ್ನು ಕಲಿಸುತ್ತಿದ್ದಾರೆ. ಜ್ಞಾನ ಮತ್ತು ವೈರಾಗ್ಯ, ಈ ಎರಡು ವಿಷಯಗಳು ಬೇಕಾಗುತ್ತವೆ.
ಆದ್ದರಿಂದ, ಇದ್ದಕ್ಕಿದ್ದಂತೆ ಜ್ಞಾನ ಮತ್ತು ವೈರಾಗ್ಯದ ಮಟ್ಟದಲ್ಲಿ ನಾವು ನೆಲೆಗೊಳ್ಳಲು ಸಾಧ್ಯವಿಲ್ಲ. ಆದರೆ ನಾವು ಅಭ್ಯಾಸ ಮಾಡಿದರೆ ಅದು ಸಾಧ್ಯ. ಇದು ಸಾಧ್ಯ. ಅಸಾಧ್ಯವೆಂದಲ್ಲ. ಇದನ್ನು ಹೀಗೆ ಆದೇಶಿಸಲಾಗಿದೆ:
- ವಾಸುದೇ ಭಗವತಿ
- ಭಕ್ತಿ-ಯೋಗಃ ಪ್ರಯೋಜಿತಃ
- ಜನಯತ್ಯ ಆಶು ವೈರಾಗ್ಯಂ
- ಜ್ಞಾನಂ ಚ ಯದ್ ಅಹೈತುಕಮ್
- (ಶ್ರೀ.ಭಾ 1.2.7)
ಅದು ಅಗತ್ಯ. ಆದ್ದರಿಂದ, ಕೃಷ್ಣ ಪ್ರಜ್ಞೆಯ ಆಂದೋಲನವಿರುವುದೇ ಜ್ಞಾನ ಮತ್ತು ವೈರಾಗ್ಯವನ್ನು ಸಾಧಿಸುವುದುಕ್ಕಾಗಿ. ನಾವು ಈ ಭೌತಿಕ ಪ್ರಪಂಚಕ್ಕೆ ಮೋಹಗೊಂಡರೆ... ನಾವು ಹೇಗೆ ಮೋಹಗೊಳ್ಳುತ್ತೇವೆ? ಸ್ಪಷ್ಟವಾದ ವಿವರಣೆಯನ್ನು ಪ್ರಹ್ಲಾದ ಮಹಾರಾಜರು ನೀಡಿದ್ದಾರೆ. ಹೆಂಡತಿ, ಮಕ್ಕಳು, ಮನೆ, ಪ್ರಾಣಿಗಳು, ಸೇವಕರು, ಪೀಠೋಪಕರಣಗಳು, ಉಡುಗೆ, ಹೀಗೆ ಹಲವಾರು ವಿಷಯಗಳಿವೆ. ಜನರು ಹಗಲಿರುಳು ಕಷ್ಟಪಟ್ಟು ದುಡಿಯುತ್ತಿರುವುದು ಈ ವಿಷಯಗಳಿಗಾಗಿ ಮಾತ್ರ. ನಾವು ಸುಂದರವಾದ ಬಂಗಲೆ, ಸುಂದರವಾದ ಪ್ರಾಣಿ, ಸುಂದರವಾದ ವಸ್ತುಗಳನ್ನು ನೋಡುವುದಿಲ್ಲವೇ? ಯಾವುದಕ್ಕಾಗಿ? ಬಾಂಧವ್ಯ ಹೆಚ್ಚಿಸಲು. ನಾವು ಬಾಂಧವ್ಯವನ್ನು ಹೆಚ್ಚಿಸಿದರೆ, ಈ ಭೌತಿಕ ಬಂಧನದಿಂದ ಮುಕ್ತರಾಗುವ ಪ್ರಶ್ನೆಯೇ ಇಲ್ಲ. ಆದ್ದರಿಂದ, ನಾವು ಈ ನಿರ್ಲಿಪ್ತತೆಯನ್ನು ಅಭ್ಯಾಸ ಮಾಡಬೇಕು.