KN/Prabhupada 0195 - ದೃಢ ದೇಹ, ದೃಢ ಮನಸ್ಸು, ದೃಢ ನಿಶ್ಚಯ



Lecture on SB 7.6.5 -- Toronto, June 21, 1976

ಪ್ರದ್ಯುಮ್ನ: (ಪಠಣ ಇತ್ಯಾದಿ) ಅನುವಾದ: “ಆದ್ದರಿಂದ, ಭೌತಿಕ ಅಸ್ತಿತ್ವದಲ್ಲಿದ್ದಾಗ (ಭವಂ ಆಶ್ರೀತಃ), ಸರಿಯಿಂದ ತಪ್ಪನ್ನು ಪ್ರತ್ಯೇಕಿಸಲು ಸಂಪೂರ್ಣ ಸಮರ್ಥನಾದ ವ್ಯಕ್ತಿಯು, ತನ್ನ ದೇಹವು ಕ್ಞೀಣಿಸಿ ನಿರುಪಯೋಗವಾಗುವ ಮುನ್ನ, ದೃಢವಾಗಿ ಮತ್ತು ಬಲವಾಗಿರುವಾಗಲೆ, ಜೀವನದ ಅತ್ಯುನ್ನತ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು.”

ಪ್ರಭುಪಾದ:

ತತೋ ಯತೇತ ಕುಶಲಃ
ಕ್ಷೇಮಾಯ ಭಾವಂ ಆಶ್ರಿತಃ
ಶರೀರಂ ಪೌರುಷಂ ಯಾವನ್
ನ ವಿಪದ್ಯೇತ ಪುಷ್ಕಲಂ
(ಶ್ರೀ.ಭಾ 7.6.5)

ಆದ್ದರಿಂದ, ಶರೀರಂ ಪೌರುಷಂ ಯಾವನ್ ನ ವಿಪದ್ಯೇತ ಪುಷ್ಕಲಂ, ಇದು ಮಾನವ ಚಟುವಟಿಕೆಯಾಗಿರಬೇಕು. ಎಷ್ಟು ದಿನ ನಾವು ಗಟ್ಟಿಮುಟ್ಟಾಗಿ ಮತ್ತು ಬಲಶಾಲಿಯಾಗಿದ್ದು ತುಂಬಾ ಚೆನ್ನಾಗಿ ಕೆಲಸ ಮಾಡಬಹುದೋ, ಆರೋಗ್ಯವು ಸರಿಯಾಗಿದೆಯೋ, ಅದರ ಪ್ರಯೋಜನವನ್ನು ಪಡೆದುಕೊಳ್ಳಿ. ಈ ಕೃಷ್ಣ ಪ್ರಜ್ಞೆ ಆಂದೋಲನವು ಸೋಮಾರಿಗಳಿಗಲ್ಲ. ಅಲ್ಲ. ಇದು ಬಲಿಷ್ಠರಿಗೆ ಮೀಸಲಾಗಿದೆ — ದೃಢ ದೇಹ, ದೃಢ ಮನಸ್ಸು, ದೃಢ ನಿಶ್ಚಯ — ಎಲ್ಲವೂ ಬಲಿಷ್ಠ, ದೃಢವಾದ ಮೇಧಾ ಶಕ್ತಿ. ಇದು ಅಂತವರಿಗೆ ಮಾತ್ರ ಮೀಸಲು. ಏಕೆಂದರೆ ನಾವು ಜೀವನದ ಅತ್ಯುನ್ನತ ಗುರಿಯನ್ನು ಕಾರ್ಯಗತಗೊಳಿಸಬೇಕು. ದುರದೃಷ್ಟವಶಾತ್, ಜೀವನದ ಅತ್ಯುನ್ನತ ಗುರಿ ಏನೆಂದು ಅವರಿಗೆ ತಿಳಿದಿಲ್ಲ. ಆಧುನಿಕ... ಆಧುನಿಕವಲ್ಲ, ಎಲ್ಲ ಸಮಯದಲ್ಲೂ ಸಹ. ಈಗ ಅದು ಬಹಳ ಎದ್ದುಕಾಣುತ್ತಿದೆ, ಜೀವನದ ಗುರಿ ಏನು ಎಂದು ಜನರಿಗೆ ತಿಳಿದಿಲ್ಲ. ಈ ಭೌತಿಕ ಜಗತ್ತಿನಲ್ಲಿ ಇರುವವನು ಮಾಯೆಯಲ್ಲಿದ್ದಾನೆ, ಅಂದರೆ ಅವನಿಗೆ ಜೀವನದ ಗುರಿ ಏನೆಂದು ತಿಳಿದಿಲ್ಲ. ನ ತೇ ವಿದುಃ, ಅವರಿಗೆ ಗೊತ್ತಿಲ್ಲ, ಸ್ವಾರ್ಥ- ಗತಿಂ ಹೀ ವಿಷ್ಣು (ಶ್ರೀ.ಭಾ 7.5.31). ಸ್ವಾರ್ಥ-ಗತಿ. ಪ್ರತಿಯೊಬ್ಬರೂ ಸ್ವಹಿತಾಸಕ್ತಿ ಹೊಂದಿರಬೇಕು. ಸ್ವಹಿತಾಸಕ್ತಿಯು ಪ್ರಕೃತಿಯ ಮೊದಲ ನಿಯಮ ಎಂದು ಅವರು ಹೇಳುತ್ತಾರೆ. ಆದರೆ ಅವರಿಗೆ ಸ್ವಹಿತಾಸಕ್ತಿ ಏನು ಎಂದು ತಿಳಿದಿಲ್ಲ. ಅವನು, ಮನೆಗೆ ಹಿಂದಿರುಗುವ ಬದಲು, ಮರಳಿ ಭಗವದ್ಧಾಮಕ್ಕೆ — ಅದೇ ಅವನ ನಿಜವಾದ ಸ್ವಹಿತಾಸಕ್ತಿ — ಆದರೆ ಅವನು ಮುಂದಿನ ಜನ್ಮದಲ್ಲಿ ನಾಯಿಯಾಗಲಿದ್ದಾನೆ. ಅದು ಸ್ವಹಿತಾಸಕ್ತಿಯೇ? ಆದರೆ ಅದು ಅವರಿಗೆ ಗೊತ್ತಿಲ್ಲ. ಪ್ರಕೃತಿಯ ನಿಯಮವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ನ ತೇ ವಿದುಃ. ಅದಾಂತ-ಗೋಭಿರ್ ವಿಶತಾಂ ತಮಿಸ್ರಂ. ಮತಿರ್ ನ ಕೃಷ್ಣೇ ಪರತಃ ಸ್ವತೋ ವಾ.

ಮತಿರ್ ನ ಕೃಷ್ಣೇ ಪರತಃ ಸ್ವತೋ ವಾ
ಮಿಥೋ 'ಭಿಪದ್ಯೇತ ಗೃಹ-ವ್ರತಾನಮ್
ಅದಾಂತ-ಗೋಭಿರ್ ವಿಶತಾಂ ತಮಿಸ್ರಂ
ಪುನಃ ಪುನಃ ಚರ್ವಿತ-ಚರ್ವಣಾನಾಂ
(ಶ್ರೀ.ಭಾ 7.5.30)

ಅದುವೇ ಕೃಷ್ಣ ಪ್ರಜ್ಞೆ, ಮತಿರ್ ನ ಕೃಷ್ಣೇ. ಜನರು ಕೃಷ್ಣ ಪ್ರಜ್ಞಾವಂತರಾಗಲು ಬಹಳ ಹಿಂಜರಿಯುತ್ತಾರೆ. ಏಕೆ? ಮತಿರ್ ನ ಕೃಷ್ಣೇ ಪರತಃ ಸ್ವತೋ ವಾ. ಇತರರ ಸೂಚನೆಯಿಂದ ನಾವು ಕೃಷ್ಣ ಪ್ರಜ್ಞೆಯನ್ನು ಪ್ರಪಂಚದಾದ್ಯಂತ ಹರಡಲು ಪ್ರಯತ್ನಿಸುತ್ತಿರುವಂತೆಯೇ, ಪರತಃ. ಸ್ವತೋ, ಸ್ವತೋ ಎಂದರೆ ವೈಯಕ್ತಿಕವಾಗಿ. ವೈಯಕ್ತಿಕ ಪ್ರಯತ್ನದಿಂದ. ನಾನು ಭಗವದ್ಗೀತೆ ಅಥವಾ ಶ್ರೀಮದ್-ಭಾಗವತಂ ಮತ್ತು ಇತರ ವೈದಿಕ ಸಾಹಿತ್ಯವನ್ನು ಓದುತ್ತಿದ್ದೇನೆ ಅಂದುಕೊಳ್ಳಿ. ಆದ್ದರಿಂದ, ಮತಿರ್ ನ ಕೃಷ್ಣೇ ಪರತಃ ಸ್ವತೋ ವಾ. ‘ಮಿಥೋ ವಾ’, ಮಿಥೋ ವಾ ಎಂದರೆ "ಸಮ್ಮೇಳನದ ಮೂಲಕ." ಇಂದಿನ ದಿನಗಳಲ್ಲಿ ಸಮ್ಮೇಳನಗಳನ್ನು ನಡೆಸುವುದು ಬಹಳ ಜನಪ್ರಿಯ ವಿಷಯವಾಗಿದೆ. ಆದ್ದರಿಂದ, ಒಬ್ಬನು ತನ್ನ ವೈಯಕ್ತಿಕ ಪ್ರಯತ್ನದಿಂದ ಅಥವಾ ಇತರ ಕೆಲವು ವ್ಯಕ್ತಿಗಳ ಸಲಹೆಯಿಂದ, ಅಥವಾ ದೊಡ್ಡ ದೊಡ್ಡ ಸಮ್ಮೇಳನಗಳನ್ನು ನಡೆಸುವ ಮೂಲಕ ಕೃಷ್ಣ ಪ್ರಜ್ಞೆಯನ್ನು ಹೊಂದಲು ಸಾಧ್ಯವಿಲ್ಲ. ಏಕೆ? ಗೃಹ-ವ್ರತಾನಾಂ, ಏಕೆಂದರೆ ಅವನ ಜೀವನದ ನಿಜವಾದ ಗುರಿ, “ನಾನು ಈ ಮನೆಯಲ್ಲಿ ಉಳಿಯುತ್ತೇನೆ.” ಗೃಹ-ವ್ರತಾನಾಂ. ಗೃಹ ಎಂದರೆ ಗೃಹಸ್ಥ ಜೀವನ, ಗೃಹ ಎಂದರೆ ಈ ದೇಹ, ಗೃಹ ಎಂದರೆ ಈ ವಿಶ್ವ. ದೊಡ್ಡ ಮತ್ತು ಚಿಕ್ಕ ಅನೇಕ ಗೃಹಗಳಿವೆ.