KN/Prabhupada 0197 - ನೀವು ಭಗವದ್ಗೀತೆಯನ್ನು ಯಥಾರೂಪ ಪ್ರಸ್ತುತಪಡಿಸಬೇಕು
Lecture on SB 5.5.30 -- Vrndavana, November 17, 1976
ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸಿದರೆ, ಕೃಷ್ಣನು ನಿಮಗೆ ಶಕ್ತಿಯನ್ನು ನೀಡುತ್ತಾನೆ. ನೀವು ಕೃಷ್ಣನ ಸಹಾಯವನ್ನು ಬಯಸಿದರೆ ಅವನು ನಿಮಗೆ ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುತ್ತಾನೆ. ಅವನು ಸಿದ್ಧನಾಗಿದ್ದಾನೆ. ಅವನು ನಿಮಗೆ ಸಹಾಯ ಮಾಡಲು ಬಂದಿದ್ದಾನೆ. ಇಲ್ಲವಾದರೆ ಕೃಷ್ಣನು ಇಲ್ಲಿಗೆ ಬಂದು ಸರ್ವಧರ್ಮ ಪರಿತ್ಯಜ್ಯ ಮಾಮ್ ಏಕಂ (ಭ.ಗೀ 18.66) ಎಂದು ಪ್ರಚಾರ ಮಾಡುವುದರಿಂದ ಏನು ಪ್ರಯೋಜನ? ಅದು ನಮ್ಮ ಹಿತಕ್ಕಾಗಿ. ನೀವು ಕೃಷ್ಣನಿಗೆ ಶರಣಾಗಿರಿ ಅಥವಾ ಶರಣಾಗಬೇಡಿ, ಅದು ಕೃಷ್ಣನಿಗೆ ಮುಖ್ಯವಲ್ಲ. ಕೃಷ್ಣ ನಿಮ್ಮ ಸೇವೆಯನ್ನು ಅವಲಂಬಿಸಿಲ್ಲ. ಅವನು ಸಂಪೂರ್ಣವಾಗಿ ಪರಿಪೂರ್ಣ. ಅವನು ಕ್ಷಣಮಾತ್ರದಲ್ಲಿ ನಿನ್ನಂತಹ ದಶಲಕ್ಷಾಂತರ ಸೇವಕರನ್ನು ಸೃಷ್ಟಿಸಬಲ್ಲನು. ಹಾಗಾದರೆ ಆತನಿಗೆ ನಿಮ್ಮ ಸೇವೆ ಏಕೆ ಬೇಕು? ಅವನು ನಿಮ್ಮ ಸೇವೆಗಾಗಿ ಏಕೆ ಪ್ರಚಾರ ಮಾಡಬೇಕು? ನಿಮ್ಮ ಕೊರತೆಯಿಂದ ಅವನ ಸೇವೆಯಲ್ಲಿ ಎನೂ ಬಾಧೆಯಿಲ್ಲ. ಆದರೆ ಆತನಿಗೆ ಶರಣಾಗುವುದು ನಿಮಗೆ ಹಿತಕರ. ಇದು ನಿಮ್ಮ ಹಿತ. ಕೃಷ್ಣನು ಇದನ್ನು, ಅಂದರೆ ನೀವು ಅವನಿಗೆ ಶರಣಾಗಿ, ಪರಿಪೂರ್ಣರಾಗಿ, ಮರಳಿ ಮನೆಗೆ, ಭಗವದ್ಧಾಮಕ್ಕೆ ಹಿಂತಿರುಗುವುದನ್ನು ನೋಡಲು ಬಯಸುತ್ತಾನೆ. ಅದುವೇ ಕೃಷ್ಣನ ಧ್ಯೇಯ.
ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನವು ಅದೇ ಧ್ಯೇಯವಾಗಿದೆ: ಪ್ರಚಾರ ಮಾಡುವುದು.
- ದಂತೆ ನಿಧಾಯ ತೃಣಕಂ ಪದಯೋರ್ ನಿಪತ್ಯ
- ಕಾಕು-ಶತಂ ಕೃತ್ವಾ ಚಾಹಂ ಬ್ರವೀಮಿ
- ಹೇ ಸಾಧವಃ ಸಕಲಮ್ ಏವ ವಿಹಾಯ ದೂರಾದ್
- ಚೈತನ್ಯ-ಚಂದ್ರ-ಚರಣೆ ಕುರುತಾನುರಾಗಮ್
ಇದು ನಮ್ಮ ಧ್ಯೇಯ, ಚೈತನ್ಯ ಮಹಾಪ್ರಭುಗಳ ಧ್ಯೇಯ. ಪ್ರಬೋಧಾನಂದ ಸರಸ್ವತಿಯವರು ಚೈತನ್ಯ-ಚಂದ್ರ-ಚರಣೆ ಕುರುತಾನುರಾಗಂ: “ನೀವು ಚೈತನ್ಯರ ಪಾದಕಮಲಗಳ ಸೇವೆ ಮಾಡಲು ಒಲವು ತೋರಿಸಿ”, ಎಂದು ಏಕೆ ವಿನಂತಿಸುತ್ತಿದ್ದಾರೆ? ಏಕೆಂದರೆ ಮಹಾಪ್ರಭುಗಳು ಸ್ವಯಂ ಕೃಷ್ಣನು, ಮತ್ತು ಕೃಷ್ಣನನ್ನು ಹೇಗೆ ಸಮೀಪಿಸಬೇಕೆಂದು ನಮಗೆ ಕಲಿಸಲು ಅವರು ಬಂದಿದ್ದಾರೆ. ಅವರೇ ಚೈತನ್ಯ. ಕೃಷ್ಣಾಯ ಕೃಷ್ಣ-ಚೈತನ್ಯ-ನಾಮ್ನೇ ಗೌರ-ತ್ವಿಷೇ ನಮಃ. ಶ್ರೀಲ ರೂಪ ಗೋಸ್ವಾಮಿಯವರು ಅರ್ಥಮಾಡಿಕೊಂಡರು. ಸಾರ್ವಭೌಮ ಭಟ್ಟಾಚಾರ್ಯರು ಅರ್ಥಮಾಡಿಕೊಂಡರು.
- ವೈರಾಗ್ಯ ವಿದ್ಯಾ-ನಿಜ-ಭಕ್ತಿ-ಯೋಗ-
- ಶಿಕ್ಷಾರ್ಥಂ ಏಕಃ ಪುರುಷಃ ಪುರಾಣಃ
- ಶ್ರೀ-ಕೃಷ್ಣ-ಚೈತನ್ಯ-ಶರೀರ-ಧಾರಿ
- ಕೃಪಾಂಬುಧಿರ್ ಯಸ್ ತಮ್ ಅಹಂ ಪ್ರಪದ್ಯೇ
- (ಚೈ.ಚ ಮಧ್ಯ 6.254)
ನಾವು ಚೈತನ್ಯ ಮಹಾಪ್ರಭುಗಳ ಮೂಲಕ ಕೃಷ್ಣನನ್ನು ಅರ್ಥಮಾಡಿಕೊಂಡರೆ... ಚೈತನ್ಯ ಮಹಾಪ್ರಭುಗಳು, "ನೀವು ಗುರುಗಳಾಗಿರಿ", ಎಂದು ಹೇಳುತ್ತಾರೆ. ಹೇಗೆ? ಯಾರೇ ದೇಖ, ತಾರೇ ಕಹ 'ಕೃಷ್ಣ'-ಉಪದೇಶ (ಚೈ.ಚ ಮಧ್ಯ 7.128). ಬದಲಾಯಿಸಬೇಡಿ, ಪರಿವರ್ತಿಸಬೇಡಿ. ನೀವು ಕೇವಲ ಕೃಷ್ಣನು ಹೇಳಿದನ್ನು ಬೋಧಿಸಲು ಪ್ರಯತ್ನಿಸಿ. ಇದು ಚೈತನ್ಯ ಮಹಾಪ್ರಭುಗಳ ಸೂಚನೆ. ನೀವು ಈ ಸೂಚನೆಯನ್ನು ಅನುಸರಿಸಿದರೆ... ನಿಮ್ಮ ತಥಾಕಥಿತ ವಿದ್ವತನ್ನು ಉಪಯೋಗಿಸಿ ಯಾವುದೇ ಸೇರ್ಪಡೆ ಅಥವಾ ಬದಲಾವಣೆಯನ್ನು ಮಾಡಬೇಡಿ. ಅದು ನಿಮಗೆ ಸಹಾಯ ಮಾಡುವುದಿಲ್ಲ. ನೀವು ಭಗವದ್ಗೀತೆಯನ್ನು ಯಥಾರೂಪ ಪ್ರಸ್ತುತಪಡಿಸಬೇಕು. ಯಾರೇ ದೇಖ, ತಾರೇ ಕಹ 'ಕೃಷ್ಣ'-ಉಪದೇಶ. ಎಲ್ಲವೂ ಇದೆ, ಬಹಳ ಸುಲಭವಾಗಿ ಮಾಡಬಹುದು, ಆದರೆ ನಾವು ಪರಂಪರಾ ವ್ಯವಸ್ಥೆಯನ್ನು ಅನುಸರಿಸಿದರೆ ಮಾತ್ರ.
ಆದ್ದರಿಂದ, ನಮ್ಮ ಕೃಷ್ಣ ಪ್ರಜ್ಞೆಯ ಆಂದೋಲನವನ್ನು ಅತ್ಯಂತ ವಿನಮ್ರತೆಯಿಂದ ಮುನ್ನಡೆಸಬೇಕು.
- ತೃಣಾದ್ ಅಪಿ ಸುನೀಚೇನ
- ತರೋರ್ ಅಪಿ ಸಹಿಷ್ಣುನಾ
- ಅಮಾನಿನಾ ಮಾನದೇನ
- ಕೀರ್ತನೀಯಃ ಸದಾ ಹರಿಃ
- (ಚೈ.ಚ ಆದಿ 17.31)
ಕೀರ್ತನೀಯ. ಈ ಉಪದೇಶವು ಕೂಡ ಕೀರ್ತನೆ ಎಂದರ್ಥ, ಕೇವಲ ಮೃದಂಗದಿಂದ ನಾವು ಸಂಗೀತ ಕೀರ್ತನೆಯನ್ನು ಮಾಡಬಹುದು ಎಂದಲ್ಲ. ಇಲ್ಲ. ಉಪದೇಶವು ಕೂಡ ಕೀರ್ತನೆ. ಅಭವದ್ ವೈಯಾಸಕಿ-ಕೀರ್ತನೆ. ವ್ಯಾಸದೇವನ ಮಗ ವೈಯಾಸಕಿ, ಶುಕದೇವ ಗೋಸ್ವಾಮಿ, ಅವರು ಶ್ರೀಮದ್-ಭಾಗವತವನ್ನು ಕೇವಲ ಬೋಧಿಸಿ ಪರಿಪೂರ್ಣರಾದರು. ಅಭವದ್ ವೈಯಾಸಕಿ-ಕೀರ್ತನೆ. ಶ್ರೀ-ವಿಷ್ಣು-ಶ್ರವಣೇ ಪರೀಕ್ಷಿತ್. ಪರೀಕ್ಷಿತ್ ಮಹಾರಾಜ ಕೇವಲ ಆಲಿಸಿ ಪರಿಪೂರ್ಣನಾದನು. ಮತ್ತು ಶುಕದೇವ ಗೋಸ್ವಾಮಿ ಕೇವಲ ಬೋಧಿಸಿದರು. ಅದು ಕೂಡ ಕೀರ್ತನೆ. ಇದು ಕೂಡ ಕೀರ್ತನೆ. ಪ್ರಬೋಧಾನಂದ ಸರಸ್ವತಿಯವರು ನಮಗೆ ಬೋಧಿಸುತ್ತಿರುವಂತೆ, ಹೇ ಸಾಧವಃ ಸಕಲಮ್ ಏವ ವಿಹಾಯ ದೂರಾದ್ ಚೈತನ್ಯ-ಚಂದ್ರ-ಚರಣೇ ಕುರುತಾನುರಾಗಮ್: "ನೀವು ಸಾಧು, ಉತ್ತಮರು, ಶ್ರೇಷ್ಠರು, ಆದರೆ ಇದು ನನ್ನ ವಿನಂತಿ." ಇದು ನಮ್ರತೆ. "ಅಯ್ಯೋ ನೀನೊಬ್ಬ ಕರ್ಮಿ, ನೀನು ಮೂಢ..." ಎಂದು ಹೇಳಿದರೆ… ವಾಸ್ತವವಾಗಿ ಅವನು ಮೂಢನೇ, ಆದರೆ ಬೇಡ… ಆರಂಭದಲ್ಲಿ ಹೇಳಿದರೆ ಮಾತನಾಡಲು ಅವಕಾಶವೇ ಇರುವುದಿಲ್ಲ. ಅವನು ಮೂಢನೇ, ಇಲ್ಲ ಎಂದು... ಹಂದಿಗಳು ಮತ್ತು ನಾಯಿಗಳಂತೆ ಇಂದ್ರಿಯ ತೃಪ್ತಿಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಾನೆ. ಖಂಡಿತವಾಗಿಯೂ ಅವನು ಮೂಢ, ಕರ್ಮಿ. ಹಾಗೆಯೇ, ಜ್ಞಾನಿ, ಅವರು ಸುಮ್ಮನೆ ಊಹೆ ಮಾಡುತ್ತಿದ್ದಾರೆ. ಆ ತರ್ಕ, ಅಂದರೆ ಕಾಕ-ತಳಿಯ ನ್ಯಾಯ: "ಕಾಗೆ ಮೊದಲು ತಾಳೆ ಹಣ್ಣಿನ ಮೇಲೆ ಕುಳಿತುಕೊಂಡಿದರಿಂದ ತಾಳೆ ಹಣ್ಣು ಕೆಳಗೆ ಬಿತ್ತೆ? ಅಥವಾ ಮೊದಲು ತಾಳೆ ಹಣ್ಣು ಕೆಳಗೆ ಬಿದಿದ್ದರಿಂದ ಕಾಗೆ ತಾಳೆ ಹಣ್ಣಿನ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲವೇ?" ತರ್ಕ. ಒಬ್ಬ ಪಂಡಿತನು, "ಇಲ್ಲ, ಇಲ್ಲ. ಮೊದಲು, ತಾಳೆ ಹಣ್ಣು ಕೆಳಗೆ ಬಿದ್ದಿತು, ಕಾಗೆ ಅದರ ಮೇಲೆ ಕುಳಿತುಕೊಳ್ಳಲು ಬಯಸಿತು ಆದರೆ ಸಾಧ್ಯವಾಗಲಿಲ್ಲ." ಈಗ ಮತ್ತೊಬ್ಬ ಪಂಡಿತನು ಹೇಳುತ್ತಾನೆ, "ಇಲ್ಲ, ಇಲ್ಲ. ತಾಳೆ ಹಣ್ಣು ಇತ್ತು, ಕಾಗೆ ಅದರ ಮೇಲೆ ಕುಳಿತಿದ್ದರಿಂದ ಅದು ಕೆಳಗೆ ಬಿದ್ದಿತು." ಈಗ ಈ ತರ್ಕ. ಅವರು ಊಹಾಪೋಹದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಕಾಕ-ತಲಿಯ ನ್ಯಾಯ. ಕೂಪ-ಮಂಡೂಕ-ನ್ಯಾಯ.