KN/Prabhupada 0208 - ಕೃಷ್ಣನ ಭಕ್ತನಾದ ವ್ಯಕ್ತಿಯ ಆಶ್ರಯ ಪಡೆಯಿರಿ



Lecture on SB 6.1.16 -- Denver, June 29, 1975

ಒಬ್ಬ ವೈಷ್ಣವನು ಯಾವತ್ತೂ ಯಾವುದೇ ಪಾಪಕಾರ್ಯಗಳನ್ನು ಮಾಡುವುದಿಲ್ಲ ಮತ್ತು ಅವನು ಹಿಂದೆ ಏನೇನು ಮಾಡಿದ್ದಾನೋ ಎಲ್ಲವು ಶೂನ್ಯವಾಗುತ್ತದೆ. ಇದನ್ನು ಕೃಷ್ಣ ಹೇಳಿದ್ದಾನೆ. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಭಗವಂತನ ಸೇವೆಯಲ್ಲಿ ಭಕ್ತಿಯಿಂದ ನಿಮ್ಮನ್ನು ತೊಡಗಿಸಿಕೊಂಡರೆ, ಖಂಡಿತವಾಗಿಯೂ ನೀವು ಎಲ್ಲಾ ಪಾಪ ಚಟುವಟಿಕೆಗಳಿಂದ ಮುಕ್ತರಾಗುತ್ತೀರಿ.

ಹಾಗಾದರೆ ಅದು ಹೇಗೆ ಸಾಧ್ಯ? ಯಥಾ ಕೃಷ್ಣಾರ್ಪಿತ-ಪ್ರಾಣಃ (ಶ್ರೀ.ಭಾ 6.1.16). ಪ್ರಾಣಃ, ಪ್ರಾಣೈರ್ ಅರ್ಥೈರ್ ಧಿಯಾ ವಾಚಾ (ಶ್ರೀ.ಭಾ 10.22.35). ಪ್ರಾಣ ಎಂದರೆ ಜೀವನ. ಕೃಷ್ಣನ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಂತಹ ವ್ಯಕ್ತಿ. ಕೃಷ್ಣನ ಸೇವೆಗಾಗಿ ಈ ಜೀವನ ಸಮರ್ಪಣೆ ಹೇಗೆ ಸಾಧ್ಯ? ಅದನ್ನು ಇಲ್ಲಿಯೂ ಹೇಳಲಾಗಿದೆ: ತತ್-ಪುರುಷ-ನಿಷೇವಯಾ (ಶ್ರೀ.ಭಾ 6.1.16). ನೀವು ಕೃಷ್ಣನ ಭಕ್ತನಾದ ವ್ಯಕ್ತಿಯ ಆಶ್ರಯವನ್ನು ಪಡೆದು ಅವರ ಸೇವೆ ಮಾಡಬೇಕು. ಅಂದರೆ ನೀವು ಒಬ್ಬ ಭಕ್ತನನ್ನು, ನಿಜವಾದ ಭಕ್ತನನ್ನು, ಶುದ್ಧ ಭಕ್ತನನ್ನು ನಿಮ್ಮ ಮಾರ್ಗದರ್ಶಕನಾಗಿ ಸ್ವೀಕರಿಸಬೇಕು. ಅದು ನಮ್ಮ ಪ್ರಕ್ರಿಯೆ. ರೂಪ ಗೋಸ್ವಾಮಿಯು ಭಕ್ತಿ-ರಸಾಮೃತ-ಸಿಂಧುವಿನಲ್ಲಿ ಹೀಗೆ ಹೇಳುತ್ತಾರೆ: "ಮೊದಲ ಪ್ರಕ್ರಿಯೆಯು, ಮೊದಲ ಹೆಜ್ಜೆ, ಗುರುವನ್ನು ಸ್ವೀಕರಿಸುವುದು, ಆದೌ ಗುರ್ವಾಶ್ರಯಮ್." ಗುರುವನ್ನು ಸ್ವೀಕರಿಸಿ, ಗುರು ಎಂದರೆ ಕೃಷ್ಣನ ಪ್ರತಿನಿಧಿ. ಕೃಷ್ಣನ ಪ್ರತಿನಿಧಿಯಲ್ಲದವನು ಗುರುವಾಗಲು ಸಾಧ್ಯವಿಲ್ಲ. ಗುರು ಎಂದರೆ ಯಾವುದೇ ಧೂರ್ತನು ಗುರುವಾಗಬಲ್ಲನು ಎಂದಲ್ಲ. ಇಲ್ಲ. ತತ್-ಪುರುಷ ಮಾತ್ರ. ತತ್-ಪುರುಷ ಎಂದರೆ ದೇವೋತ್ತಮ ಪರಮ ಪುರುಷನನ್ನು ಸರ್ವಸ್ವವೆಂದು ಸ್ವೀಕರಿಸಿದ ವ್ಯಕ್ತಿ ಎಂದರ್ಥ. ತತ್-ಪುರುಷ-ನಿಷೇವಯಾ (ಶ್ರೀ.ಭಾ 6.1.16). ಅಂದರೆ ವೈಷ್ಣವ, ಶುದ್ಧ ಭಕ್ತ. ಆದ್ದರಿಂದ, ಇದು ತುಂಬಾ ಕಷ್ಟವಲ್ಲ. ಕೃಷ್ಣನ ಅನುಗ್ರಹದಿಂದ ಶುದ್ಧ ಭಕ್ತರಿದ್ದು ನಾವು ಅವರ ಆಶ್ರಯವನ್ನು ಪಡೆಯಬೇಕು. ಅದೌ ಗುರ್ವಾಶ್ರಯಮ್. ನಂತರ ದುಃಖ-ಧರ್ಮ-ಪೃಚ್ಛಾತ್ (ಭ.ರ.ಸಿ 1.1.74). ಒಬ್ಬ ನಿಷ್ಠಾವಂತ ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸಿದ ನಂತರ ನಾವು ಕೃಷ್ಣನ ವಿಜ್ಞಾನವನ್ನು ಕಲಿಯಲು ಜಿಜ್ಞಾಸೆ ಹೊಂದಿರಬೇಕು. ಸದ್-ಧರ್ಮ-ಪೃಚ್ಛಾತ್ ಸಾಧು-ಮಾರ್ಗ-ಅನುಗಮನಮ್. ಮತ್ತು ಈ ಕೃಷ್ಣ ಪ್ರಜ್ಞೆ ಎಂದರೆ ನಾವು ಭಕ್ತರ ಹೆಜ್ಜೆಜಾಡಿಯನ್ನು ಅನುಸರಿಸಬೇಕು, ಸಾಧು-ಮಾರ್ಗ-ಅನುಗಮನಂ.

ಹಾಗಾದರೆ ಆ ಸಾಧುಗಳು ಯಾರು? ಇದನ್ನು ಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ ಮತ್ತು ನಾವು ಈಗಾಗಲೇ ಚರ್ಚಿಸಿದ್ದೇವೆ.

ಸ್ವಯಂಭೂರ್ ನಾರದಃ ಶಂಭುಃ
ಕುಮಾರಃ ಕಪಿಲೋ ಮನುಃ
ಪ್ರಹ್ಲಾದೋ ಜನಕೋ ಭೀಷ್ಮೋ
ಬಲಿರ್ ವೈಯಾಸಕಿರ್ ವಯಂ
(SB 6.3.20)

ಈ ಹನ್ನೆರಡು ವ್ಯಕ್ತಿಗಳನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಅವರು ಮಹಾಜನರು, ಅವರು ಅಧಿಕಾರಿಗಳು, ಪ್ರಾಮಾಣಿಕ ಗುರುಗಳು, ಮತ್ತು ನೀವು ಅವರ ಮಾರ್ಗವನ್ನು ಅನುಸರಿಸಬೇಕು. ಇದು ಕಷ್ಟವಲ್ಲ. ಸ್ವಯಂಭೂ ಎಂದರೆ ಬ್ರಹ್ಮ ದೇವರು. ಸ್ವಯಂಭೂಃ ನಾರದಃ ಶಂಭುಃ. ಶಂಭು ಎಂದರೆ ಭಗವಂತ ಶಿವ. ಅವರಲ್ಲಿ ಪ್ರತಿಯೊಬ್ಬರು… ಈ ಹನ್ನೆರಡು ಮಹಾಜನರಲ್ಲಿ ನಾಲ್ವರು ಬಹಳ ಪ್ರಮುಖ. ಸ್ವಯಂಭು ಎಂದರೆ ಬ್ರಹ್ಮ, ಮತ್ತು ಶಂಭುಃ, ಭಗವಾನ್ ಶಿವ, ಮತ್ತು ಕುಮಾರಃ. ಮತ್ತು ಲಕ್ಷ್ಮೀಜೀಯವರಿಂದ ಮತ್ತೊಂದು ಸಂಪ್ರದಾಯ, ಶ್ರೀ ಸಂಪ್ರದಾಯವಿದೆ. ಆದ್ದರಿಂದ, ನಾವು ಕಟ್ಟುನಿಟ್ಟಾಗಿ ಈ ನಾಲ್ಕು ಶಿಷ್ಯ ಪರಂಪರೆಯಲ್ಲಿ ಬಂದಿರುವ ಆಧ್ಯಾತ್ಮಿಕ ಗುರುವನ್ನು ಮಾತ್ರ ಸ್ವೀಕರಿಸಬೇಕು. ಆಗ ನಾವು ಲಾಭದಾಯಕರಾಗುತ್ತೇವೆ. ನಾವು ತಥಾಕಥಿತ ಗುರುವನ್ನು ಒಪ್ಪಿಕೊಂಡರೆ ಅದು ಲಾಭವಲ್ಲ. ನಾವು ಗುರುವನ್ನು ಗುರು- ಶಿಷ್ಯ ಪರಂಪರೆಯಲ್ಲಿ ಸ್ವೀಕರಿಸಬೇಕು. ಆದ್ದರಿಂದ, ಇಲ್ಲಿ ಶಿಫಾರಸು ಮಾಡಲಾಗಿದೆ, ತತ್-ಪುರುಷ-ನಿಷೇವಯಾ: ನಾವು ಅವನನ್ನು ನಿಷ್ಠೆಯಿಂದ ಮತ್ತು ಯಾವಾಗಲೂ ಪ್ರಾಮಾಣಿಕವಾಗಿ ಸೇವೆ ಮಾಡಬೇಕು. ಆಗ ನಮ್ಮ ಉದ್ದೇಶ ಈಡೇರುತ್ತದೆ. ಮತ್ತು ನೀವು ಈ ಕ್ರಮವನ್ನು ಕೈಗೊಂಡರೆ, ಅಂದರೆ ಜೀವನವನ್ನು ಕೃಷ್ಣನಿಗೆ ಅರ್ಪಿಸಿ ಯಾವಾಗಲೂ ತತ್-ಪುರುಷನ - ಕೃಷ್ಣ ಪ್ರಜ್ಞೆಯನ್ನು ಬೋಧಿಸುವುದನ್ನು ಬಿಟ್ಟು ಬೇರೆ ಯಾವುದೇ ವ್ಯವಹಾರವಿಲ್ಲದವನ - ನಿರ್ದೇಶನದಲ್ಲಿ ಕೃಷ್ಣನ ಸೇವೆಯಲ್ಲಿ ತೊಡಗಿದ್ದರೆ ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ. ನಾವು ಎಲ್ಲಾ ಪಾಪದ ಪ್ರತಿಕ್ರಿಯೆಯಿಂದ ಮುಕ್ತರಾಗುತ್ತೇವೆ ಮತ್ತು ಶುದ್ಧರಾಗದೆಯೇ... ಏಕೆಂದರೆ ಕೃಷ್ಣ, ಅಥವಾ ಭಗವಂತನು, ಶುದ್ಧ. ಅರ್ಜುನನು ಹೇಳಿದನು, ಪರಂ ಬ್ರಹ್ಮ ಪರಂ ಬ್ರಹ್ಮ ಪವಿತ್ರಂ ಪರಮಂ ಭಾವನ್ (ಭ.ಗೀ 10.12-13): "ನನ್ನ ಪ್ರಭು ಕೃಷ್ಣ, ನೀನು ಪರಮ ಪರಿಶುದ್ಧನು." ಆದ್ದರಿಂದ, ನಾವು ಶುದ್ಧರಾಗದ ಹೊರತು ಕೃಷ್ಣನನ್ನು ಸಮೀಪಿಸಲು ಸಾಧ್ಯವಿಲ್ಲ. ಅದು ಶಾಸ್ತ್ರದಲ್ಲಿರುವ ಹೇಳಿಕೆ. ಬೆಂಕಿಯಾಗದೆ ನೀವು ಬೆಂಕಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ. ಹಾಗೆಯೇ, ಸಂಪೂರ್ಣವಾಗಿ ಶುದ್ಧರಾಗದೆ ನೀವು ದೇವರ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಇದನ್ನು ಎಲ್ಲಾ ಧಾರ್ಮಿಕ ವ್ಯವಸ್ಥೆಗಳು ಒಪ್ಪಿಕೊಂಡಿವೆ. ಕ್ರಿಶ್ಚಿಯನ್ ವ್ಯವಸ್ಥೆಯು ಸಹ ಹಾಗೆ, ಶುದ್ಧರಾಗದೆ ನೀವು ದೇವರ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.