KN/Prabhupada 0209 - ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು ಹೇಗೆ



Lecture on SB 6.1.16 -- Denver, June 29, 1975

ಮಾನವ ಜೀವನವು ಈ ಶುದ್ಧೀಕರಣಕ್ಕಾಗಿಯೇ ಇರುವುದು. ನಾವು ನಮ್ಮ ದೈನಂದಿನ ಆಹಾರವನ್ನು ಪಡೆಯಲು ತುಂಬಾ ಶ್ರಮಿಸುತ್ತಿದ್ದೇವೆ. ಜನರು ತಮ್ಮ ಆಹಾರವನ್ನು ಸುಮ್ಮನೆ ಕುಳಿತು ಪಡೆಯುತ್ತಿಲ್ಲ. ಅದು ಸಾಧ್ಯವಿಲ್ಲ. ಅವರು ತುಂಬಾ ಶ್ರಮಿಸುತ್ತಿದ್ದಾರೆ. ಈದು ಸುಂದರವಾದ ಡೆನ್ವರ್ ನಗರ. ಇದು ಕಾಡಿನಿಂದ ಅಥವಾ ಮರುಭೂಮಿಯಿಂದ ಹುಟ್ಟಿಕೊಂಡಿಲ್ಲ. ಈ ನಗರವನ್ನು ಇಷ್ಟು ಸುಂದರವಾಗಿ, ಪರಿಪೂರ್ಣವಾಗಿ ಸ್ಥಾಪಿಸಲು ತುಂಬಾ ಶ್ರಮಿಸಬೇಕಾಗಿತ್ತು. ಆದ್ದರಿಂದ, ನಾವು ಕೆಲಸ ಮಾಡಬೇಕು. ನಮಗೆ ಸಂತೋಷ ಬೇಕಾದರೆ, ನಾವು ಕೆಲಸ ಮಾಡಬೇಕು. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಕೃಷ್ಣನು ಹೇಳುತ್ತಾನೆ: ಯಾಂತಿ ದೇವ-ವ್ರತಾ ದೇವಾನ್ (ಭ.ಗೀ 9.25). ಕೆಲವರು ಈ ಭೌತಿಕ ವಾತಾವರಣದಲ್ಲಿ ಸಂತೋಷವಾಗಿರಲು ಈ ಜಗತ್ತಿನಲ್ಲಿ ಬಹಳ ದೊಡ್ಡ ವ್ಯಕ್ತಿಯಾಗಲು ಅಥವಾ ಸ್ವಲ್ಪ ಹೆಚ್ಚು ಬುದ್ಧಿವಂತರಾಗಲು ಕೆಲಸ ಮಾಡುತ್ತಿದ್ದಾರೆ. ಅವರು ಈ ಜೀವನದಲ್ಲಿ ಸಂತೋಷವಾಗಿರುವುದಿಲ್ಲ, ಆದರೆ ಮುಂದಿನ ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಾರೆ. ಕೆಲವೊಮ್ಮೆ ಅವರು ಉನ್ನತ ಲೋಕಗಳಿಗೆ ಹೋಗುತ್ತಾರೆ. ಯಾಂತಿ ದೇವ-ವ್ರತಾ ದೇವಾನ್ ಪಿತೃನ್ ಯಾಂತಿ ಪಿತೃ-ವ್ರತಾಃ (ಭ.ಗೀ 9.25). ಆದ್ದರಿಂದ, ನಿಮ್ಮ ಕಾರ್ಯಾನುಸಾರವಾಗಿ ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ಆದರೆ ಕೊನೆಯ ಸಾಲಿನಲ್ಲಿ, ಕೃಷ್ಣನು ಹೇಳುತ್ತಾನೆ: ಮದ್-ಯಾಜಿನೋ'ಪಿ ಯಾಂತಿ ಮಾಮ್, "ನೀವು ನನಗಾಗಿ ಕೆಲಸ ಮಾಡಿದರೆ ಅಥವಾ ನನ್ನನ್ನು ಪೂಜಿಸಿದರೆ, ನೀವು ನನ್ನ ಬಳಿಗೆ ಬರುತ್ತೀರಿ." ಹಾಗಾದರೆ ಕೃಷ್ಣನ ಬಳಿಗೆ ಹೋಗುವುದಕ್ಕೂ ಈ ಭೌತಿಕ ಜಗತ್ತಿನಲ್ಲಿಯೇ ಇರುವುದಕ್ಕೂ ವ್ಯತ್ಯಾಸ ಎಲ್ಲಿದೆ? ವ್ಯತ್ಯಾಸವೆಂದರೆ ಆಬ್ರಹ್ಮ-ಭುವನಾಲ್ ಲೋಕಾಃ ಪುನರ್ ಆವರ್ತಿನೋ'ರ್ಜುನ (ಭ.ಗೀ 8.16). ಈ ಭೌತಿಕ ಜಗತ್ತಿನಲ್ಲಿ ನೀವು ಅತ್ಯುನ್ನತ ಗ್ರಹವಾದ ಬ್ರಹ್ಮಲೋಕಕ್ಕೆ ಹೋದರೂ ಸಹ, ಜನನ, ಮರಣ, ವೃದ್ಧಾಪ್ಯ, ಮತ್ತು ರೋಗ ಇರುತ್ತದೆ. ಅಥವಾ ನೀವು ಮತ್ತೆ ಭೂಮಿಗೆ ಹಿಂತಿರುಗಬೇಕು. ಈ ಜನರು ಚಂದ್ರ ಗ್ರಹಕ್ಕೆ ಹೋಗಿ ಮರಳಿ ಬರುವಂತೆ. ಆದ್ದರಿಂದ, ಈ ರೀತಿಯ ಓಡಾಟ ಒಳ್ಳೆಯದಲ್ಲ. ಯದ್ ಗತ್ವಾ ನ ನಿವರ್ತಂತೆ (ಭ.ಗೀ 15.6). ನೀವು ಈ ಭೌತಿಕ ಜಗತ್ತಿಗೆ ಮತ್ತೆ ಹಿಂತಿರುಗಬೇಕಾಗಿಲ್ಲದ ಗ್ರಹಕ್ಕೆ ಹೋದರೆ, ಅದು ಅತ್ಯುನ್ನತ ಪರಿಪೂರ್ಣತೆ. ಅದುವೇ ಕೃಷ್ಣಲೋಕ.

ಕೃಷ್ಣನು ಹೇಳುತ್ತಾನೆ: "ಈ ಭೌತಿಕ ಜಗತ್ತಿನಲ್ಲಿ ಸಂತೋಷವಾಗಿರಲು ನೀವು ತುಂಬಾ ಶ್ರಮಿಸುತ್ತಿದ್ದೀರಿ. ಅದೇ ಶ್ರಮವನ್ನು, ಕೃಷ್ಣನ, ಅಂದರೆ ನನ್ನನ್ನು ಪೂಜಿಸುವುದರಲ್ಲಿ ತೊಡಗಿಸಿದರೆ ನೀವು ನನ್ನ ಬಳಿಗೆ ಬರುತ್ತೀರಿ". ಮದ್-ಯಾಜಿನೋ 'ಪಿ ಯಾಂತಿ ಮಾಮ್. ವಿಶೇಷವಾಗಿ ಏನು ಲಾಭ ಪಡೆಯುವಿರಿ? ಮಾಮ್ ಉಪೇತ್ಯ ಕೌಂತೇಯ ದುಃಖಾಲಯಂ ಅಶಾಶ್ವತಮ್ ನಾಪ್ನುವಂತಿ (ಭ.ಗೀ 8.15): "ನನ್ನ ಬಳಿಗೆ ಬರುವ ಯಾರಾದರೂ ಸರಿ, ಅವರು ಮತ್ತೆ ಈ ಭೌತಿಕ ಜಗತ್ತಿಗೆ ಹಿಂತಿರುಗಬೇಕಾಗಿಲ್ಲ." ಆದ್ದರಿಂದ, ನಮ್ಮ ಕೃಷ್ಣ ಪ್ರಜ್ಞೆ ಚಳುವಳಿಯು ಜನರಿಗೆ ದೇವೋತ್ತಮ ಪರಮ ಪುರುಷನಾದ ಕೃಷ್ಣನ ಬಳಿ, ಮರಳಿ ಭಗವದ್ಧಾಮಕ್ಕೆ ಹೇಗೆ ಹಿಂತಿರುಗಬೇಕೆಂದು ಕಲಿಸುತ್ತಿದೆ. ಅದು ಜನರನ್ನು ಶಾಶ್ವತವಾಗಿ ಸಂತೋಷಪಡಿಸುತ್ತದೆ. ಆದ್ದರಿಂದ, ಈ ಜೀವನದಲ್ಲಿಯೂ ಸಹ, ಕೃಷ್ಣ ಪ್ರಜ್ಞೆಯುಳ್ಳ ಜನರು ಅತೃಪ್ತರಲ್ಲ. ನೀವು ವಾಸ್ತವಿಕವಾಗಿ ನೋಡಬಹುದು. ನಾವು ಒಂದು ಒಳ್ಳೆಯ ಕೋಣೆಯಲ್ಲಿ ಕುಳಿತು ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಾ ಪ್ರಸಾದ ಸೇವಿಸುತ್ತಿದ್ದೇವೆ. ಅತೃಪ್ತಿ ಎಲ್ಲಿದೆ? ಯಾವುದೇ ಅತೃಪ್ತಿ ಇಲ್ಲ. ಮತ್ತು ಇತರ ಪ್ರಕ್ರಿಯೆಗಳಲ್ಲಿ, ಅವರು ಹಲವಾರು ಅತೃಪ್ತಿ ಪ್ರಕ್ರಿಯೆಗಳಿಗೆ ಒಳಗಾಗಬೇಕಾಗುತ್ತದೆ. ಇಲ್ಲಿ, ಕೃಷ್ಣ ಪ್ರಜ್ಞೆಯಲ್ಲಿ, ಏನೂ ಅತೃಪ್ತಿ ಇಲ್ಲ. ಅದು ಭಗವದ್ಗೀತೆಯಲ್ಲಿ ಹೇಳಲಾಗಿದೆ: ಸುಸುಖಂ ಕರ್ತುಮ್ ಅವ್ಯಯಂ (ಭ.ಗೀ 9.2). ಸುಸುಖಂ. ನೀವು ಭಕ್ತಿಸೇವೆಯನ್ನು ಸಲ್ಲಿಸುವಾಗ, ಅದು ಸುಖಂ ಮಾತ್ರವಲ್ಲ - ಸುಖಂ ಎಂದರೆ ಸಂತೋಷ - ಆದರೆ ಇನ್ನೊಂದು ಪದವನ್ನು ಸೇರಿಸಲಾಗುತ್ತದೆ, ಸುಸುಖಂ, "ತುಂಬಾ ಆರಾಮದಾಯಕ, ತುಂಬಾ ಸಂತೋಷ." ಕರ್ತುಂ, ಭಕ್ತಿಸೇವೆಯನ್ನು ಮಾಡುವುದು ದೊಡ್ಡ ಆನಂದ, ದೊಡ್ಡ ಸಂತೋಷ. ಮತ್ತು ಅವ್ಯಯಂ. ಅವ್ಯಯಂ ಎಂದರೆ ನೀವು ಏನು ಮಾಡಿದರೂ ಅದು ನಿಮ್ಮ ಶಾಶ್ವತ ಆಸ್ತಿ. ಇತರ ವಿಷಯಗಳು ನಶ್ವರ. ನೀವು ಮಹಾವಿದ್ಯಾವಂತನೆಂದು ಭಾವಿಸೋಣ. ನೀವು ಎಂ.ಎ., ಪಿಎಚ್‌ಡಿ ಮತ್ತು ಏನೇನೋ ಪಾಸಾಗಿದ್ದೀರಿ. ಆದರೆ ಅದು ಅವ್ಯಯವಲ್ಲ; ಅದು ವ್ಯಾಯಮ್. ವ್ಯಯಂ ಎಂದರೆ ಅದು ಕೊನೆಗೊಳ್ಳುವಂತಹದ್ದು. ನಿಮ್ಮ ಮರಣನದ ತಕ್ಷಣ, ನಿಮ್ಮ ತಥಾಕಥಿತ ಪದವಿಗಳೆಲ್ಲವೂ ಶೂನ್ಯಗೊಳ್ಳುತ್ತವೆ. ನಂತರ ಮುಂದಿನ ಜನ್ಮದಲ್ಲಿ ನೀವು ಮನುಷ್ಯನಾದರೆ, ಖಂಡಿತವಾಗಿಯೂ ಮತ್ತೆ ಎಂ.ಎ., ಪಿಎಚ್‌ಡಿ ಆಗುವ ಅವಕಾಶವಿದೆ, ಆದರೆ ಈ ಜನ್ಮದಲ್ಲಿ ಪಡೆದ ಎಂ.ಎ., ಪಿಎಚ್‌ಡಿ, ಅವು ಕೊನೆಗೊಳ್ಳುತ್ತವೆ.

ಆದ್ದರಿಂದ, ನಾವು ಇಲ್ಲಿ ಏನನ್ನು ಸಂಪಾದಿಸುತ್ತಿದ್ದೇವೋ ಅದು ಅವ್ಯಯವಲ್ಲ. ವ್ಯಯಂ ಎಂದರೆ ಖರ್ಚು, ಮತ್ತು "ಅ" ಎಂದರೆ ‘ಇಲ್ಲ’, ಖರ್ಚು ಆಗದಿರುವುದು. ನಿಮ್ಮ ಬಳಿ ಸ್ವಲ್ಪ ಹಣವಿದ್ದರೆ, ನೀವು ಖರ್ಚು ಮಾಡಿದರೆ, ಅದು ವ್ಯಯಂ, ಸ್ವಲ್ಪ ಸಮಯದ ನಂತರ ಖಾಲಿಯಾಗುತ್ತದೆ. ಅವ್ಯಯ ಎಂದರೆ ನೀವು ಎಷ್ಟೇ ಖರ್ಚು ಮಾಡಿದರು ಅದು ಖಾಲಿಯಾಗುವುದಿಲ್ಲ. ಅದೇ ಅವ್ಯಯ. ಆದ್ದರಿಂದ, ಕೃಷ್ಣನ ಭಕ್ತಿಸೇವೆಯನ್ನು ‘ಸುಸುಖಂ ಕರ್ತುಂ ಅವ್ಯಯಂ’ ಎಂದು ವಿವರಿಸಲಾಗಿದೆ. ನೀವು ಏನೇ ಮಾಡಿದರೂ, ನೀವು ಹತ್ತು ಪ್ರತಿಶತ ಯಶಸ್ಸನ್ನು ಪಡೆದಿದ್ದರೆ, ಆ ಹತ್ತು ಪ್ರತಿಶತ ನಿಮಗೆ ಶಾಶ್ವತವಾಗಿ ಸೇರಿರುತ್ತದೆ. ಆದ್ದರಿಂದ, ಭಗವದ್ಗೀತೆಯಲ್ಲಿ ಹೇಳಲಾಗಿದೆ, ಶುಚಿನಾಂ ಶ್ರೀಮತಾಂ ಗೇಹೇ ಯೋಗ-ಭ್ರಷ್ಟೋ ಸಂಜಾಯತೇ (ಭ.ಗೀ 6.41). ಈ ಜನ್ಮದಲ್ಲಿ ಭಕ್ತಿ-ಯೋಗವನ್ನು ಪೂರ್ಣಗೊಳಿಸಲು ಸಾಧ್ಯವಾಗದವರು ಮಾನವ ಜನ್ಮದ ಮತ್ತೊಂದು ಅವಕಾಶವನ್ನು ಪಡೆಯುತ್ತಾರೆ. ಮಾನವ ಜನ್ಮ ಮಾತ್ರವಲ್ಲ, ಅವರು ಸ್ವರ್ಗಕ್ಕೆ ಹೋಗುತ್ತಾರೆ, ಅಲ್ಲಿ ಆನಂದಿಸುತ್ತಾರೆ, ನಂತರ ಮತ್ತೆ ಈ ಗ್ರಹಕ್ಕೆ ಹಿಂತಿರುಗುತ್ತಾರೆ ಎಂದು ಹೇಳಲಾಗಿದೆ. ಮತ್ತು ಸಾಮಾನ್ಯ ಮನುಷ್ಯನಾಗಿ ಅಲ್ಲ. ಶುಚಿನಾಂ ಶ್ರೀಮತಾಂ ಗೇಹೇ: ಅವನು ಬಹಳ ಪವಿತ್ರ ಕುಟುಂಬದಲ್ಲಿ ಜನಿಸುತ್ತಾನೆ, ಬ್ರಾಹ್ಮಣ-ವೈಷ್ಣವನಾಗಿ, ಶುಚಿನಾಂ ಮತ್ತು ಶ್ರೀಮತಂ, ಬಹಳ ಶ್ರೀಮಂತ ಕುಟುಂಬ. ಆಗ ಅದು ಅವನ ಕರ್ತವ್ಯ. ಆದ್ದರಿಂದ ಶ್ರೀಮಂತರಾಗಿ ಜನಿಸಿದವರು... ನೀವು ಅಮೆರಿಕನ್ನರೇ, ನೀವು ಶ್ರೀಮಂತರಾಗಿ ಹುಟ್ಟಬೇಕು. ವಾಸ್ತವವಾಗಿ ಅದು ಹಾಗೆಯೇ. ಆದ್ದರಿಂದ, ನೀವು ಈ ರೀತಿ ಯೋಚಿಸಬೇಕು, "ನಮ್ಮ ಹಿಂದಿನ ಭಕ್ತಿ ಸೇವೆಯಿಂದಾಗಿ, ಕೃಷ್ಣನ ಅನುಗ್ರಹದಿಂದ ನಾವು ಈ ದೇಶದಲ್ಲಿ ಜನಿಸಿದ್ದೇವೆ. ಬಡತನವಿಲ್ಲ," ಶ್ರೀಮತಾಂ. ಆದ್ದರಿಂದ, ನೀವು ಕೃಷ್ಣ ಪ್ರಜ್ಞೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ನಿಮಗೆ ಅವಕಾಶ ಸಿಕ್ಕಿದೆ. ನೀವು ಬಡತನದಿಂದ ಬಳಲುತ್ತಿಲ್ಲ. ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ, "ಆಹಾರ ಎಲ್ಲಿದೆ? ಆಹಾರ ಎಲ್ಲಿದೆ? ಆಹಾರ ಎಲ್ಲಿದೆ?" ಎಂದು. ಇತರ ಬಡತನದಿಂದ ಬಳಲುತ್ತಿರುವ ದೇಶಗಳಂತೆ, ಅವರು ಆಹಾರವನ್ನು ಗಳಿಸಲು ಪರದಾಡುತ್ತಾರೆ. ಆದರೆ ನೀವು ತುಂಬಾ ಅದೃಷ್ಟವಂತರು, ಆದ್ದರಿಂದ, ಹಿಪ್ಪಿಗಳಾಗಲು ಈ ಅವಕಾಶವನ್ನು ವ್ಯರ್ಥ ಮಾಡಬೇಡಿ. ವ್ಯರ್ಥ ಮಾಡಬೇಡಿ. ಭಕ್ತನಾಗಿ, ಕೃಷ್ಣನ ಭಕ್ತ. ಕೃಷ್ಣ ಪ್ರಜ್ಞೆ ಚಳುವಳಿ ಇದೆ, ಮತ್ತು ನಮ್ಮ ಬಹಳ ಕೇಂದ್ರಗಳಿವೆ. ಈ ಕೃಷ್ಣ ಪ್ರಜ್ಞೆ ವಿಜ್ಞಾನವನ್ನು ಕಲಿಯಲು ಪ್ರಯತ್ನಿಸಿ ಮತ್ತು ನಿಮ್ಮ ಜೀವನವನ್ನು ಪರಿಪೂರ್ಣಗೊಳಿಸಿ. ಅದು ನಮ್ಮ ವಿನಂತಿ.

ತುಂಬಾ ಧನ್ಯವಾದಗಳು. (ಅಂತ್ಯ)