KN/Prabhupada 0210 - ಸಂಪೂರ್ಣ ಭಕ್ತಿಮಾರ್ಗವು ಭಗವಂತನ ಕರುಣೆಯ ಮೇಲೆ ಅವಲಂಬಿತವಾಗಿದೆ
Lecture on SB 1.15.30 -- Los Angeles, December 8, 1973
ನೀವು ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ನೇರವಾಗಿ ಕೇಳಿದ ವ್ಯಕ್ತಿಯಂತೆಯೇ ನಾವು ಅರ್ಥಮಾಡಿಕೊಳ್ಳಬೇಕು. ಇದನ್ನು ಪರಂಪರಾ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ನಾನು ನನ್ನ ಆಧ್ಯಾತ್ಮಿಕ ಗುರುಗಳಿಂದ ಏನನ್ನು ಆಲಿಸಿದ್ದೇನೋ, ಅದೇ ವಿಷಯವನ್ನು ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ. ಇದುವೇ ಪರಂಪರಾ ವ್ಯವಸ್ಥೆ. ನನ್ನ ಆಧ್ಯಾತ್ಮಿಕ ಗುರುಗಳು ಏನು ಹೇಳಿದರು ಎಂದು ನೀವು ಊಹಿಸಲು ಸಾಧ್ಯವಿಲ್ಲ. ಅಥವಾ ನೀವು ಕೆಲವು ಪುಸ್ತಕಗಳನ್ನು ಓದಿದರೂ ಅದನ್ನು ನನ್ನಿಂದ ಅರ್ಥಮಾಡಿಕೊಳ್ಳದ ಹೊರತು ನಿಮಗೆ ಅರ್ಥವಾಗುವುದಿಲ್ಲ. ಇದನ್ನು ಪರಂಪರಾ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಈಗಿನ ಆಚಾರ್ಯ, ಅಂದರೆ ತಕ್ಷಣದ ಆಚಾರ್ಯರನ್ನು ನಿರ್ಲಕ್ಷಿಸಿ ನೀವು ಉನ್ನತ ಗುರುವಿನ ಬಳಿಗೆ ಜಿಗಿಯಲು ಸಾಧ್ಯವಿಲ್ಲ. ನಮ್ಮ ಚೈತನ್ಯ ಮಹಾಪ್ರಭುಗಳ ಪಂಥದಂತೆಯೇ. ನಾವು ಚೈತನ್ಯ ಮಹಾಪ್ರಭುವನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ನಾವು ಗೋಸ್ವಾಮಿಗಳ ಮೂಲಕ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ನೀವು ಚೈತನ್ಯ-ಚರಿತಾಮೃತದಲ್ಲಿ, ಮತ್ತು ಪ್ರತಿ ಅಧ್ಯಾಯದ ಕೊನೆಯಲ್ಲಿ, ಲೇಖಕರು ಹೀಗೆ ಹೇಳುತ್ತಾರೆ, ರೂಪ-ರಘುನಾಥ-ಪದೇ… ಏನದು, ಕೃಷ್ಣದಾಸ?
- ಶ್ರೀ-ರೂಪ-ರಘುನಾಥ-ಪದೇ ಯಾರ ಆಶಾ
- ಚೈತನ್ಯ-ಚರಿತಾಮೃತ ಕಹೇ ಕೃಷ್ಣ-ದಾಸ
ಇದು ಪ್ರಕ್ರಿಯೆ. ಅವರು "ನಾನು ಭಗವಾನ್ ಚೈತನ್ಯ ಮಹಾಪ್ರಭುವನ್ನು ನೇರವಾಗಿ ಅರ್ಥಮಾಡಿಕೊಂಡಿದ್ದೇನೆ", ಎಂದು ಹೇಳುವುದಿಲ್ಲ. ಇಲ್ಲ. ಅದು ತಿಳುವಳಿಕೆಯಲ್ಲ. ಅದು ಮೂರ್ಖತನ. ಚೈತನ್ಯ ಮಹಾಪ್ರಭು ಎಂದರೇನು ಎಂದು ನಿಮಗೆ ಅರ್ಥವಾಗುವುದಿಲ್ಲ. ಆದ್ದರಿಂದ, ಅವರು ಪದೇ ಪದೇ ಹೇಳುತ್ತಾರೆ, ರೂಪ-ರಘುನಾಥ-ಪದೇ ಸದಾ ಯಾರ ಆಶ ಚೈತನ್ಯ-ಚರಿತಾಮೃತ ಕಹೇ ಕೃಷ್ಣ-ದಾಸ. "ನಾನು ಆ ಕೃಷ್ಣ ದಾಸ, ಕವಿರಾಜ, ಯಾವಾಗಲೂ ಗೋಸ್ವಾಮಿಗಳ ಅಧೀನದಲ್ಲಿರುವವನು." ಇದು ಪರಂಪರಾ ವ್ಯವಸ್ಥೆ. ಅದೇ ರೀತಿ, ನರೋತ್ತಮ ದಾಸ ಠಾಕೂರರು ಸಹ ಹೇಳುತ್ತಾರೆ, ಏ ಚೆ ಗೋಸಾಯಿ ಜಾರ್ ತಾರ್ ಮುಯಿ ದಾಸ್, ಈ ಆರು ಗೋಸ್ವಾಮಿಗಳನ್ನು ತನ್ನ ಸ್ವಾಮಿಯಾಗಿ ಸ್ವೀಕರಿಸಿದ ವ್ಯಕ್ತಿಯ ಸೇವಕ ನಾನು. ಈ ಮಾರ್ಗ ಮತ್ತು ವಿಧಾನಗಳನ್ನು ಸ್ವೀಕರಿಸದ ಬೇರೆ ಯಾವುದೇ ವ್ಯಕ್ತಿಯ ಸೇವಕನಾಗುವುದಿಲ್ಲ." ನಾವು ನಮ್ಮ ಆಧ್ಯಾತ್ಮಿಕ ಗುರುವಿಗೆ ‘ರೂಪಾನುಗ-ವರಾಯ ತೇ’ ಎಂದು ನಮ್ಮ ಪ್ರಾರ್ಥನೆಯನ್ನು ಅರ್ಪಿಸುತ್ತೇವೆ ಏಕೆಂದರೆ ಅವರು ರೂಪ ಗೋಸ್ವಾಮಿಯನ್ನು ಅನುಸರಿಸುತ್ತಾರೆ. ಆದ್ದರಿಂದ, ನಾವು ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸುತ್ತೇವೆ. ಒಬ್ಬರು ರೂಪ ಗೋಸ್ವಾಮಿಗಿಂತ ಹೆಚ್ಚಿನವರಾಗಿದ್ದಾರೆ ಎಂದು ಅರ್ಥವಲ್ಲ. ಅಲ್ಲ. ತಾಂದೇರ ಚರಣ-ಸೇಬಿ-ಭಕ್ತ-ಸನೇ ವಾಸ್. ಇದು ಪರಂಪರಾ ವ್ಯವಸ್ಥೆ.
ಈಗ ಇಲ್ಲಿ, ಅದೇ ವಿಷಯ ಪುನರಾವರ್ತನೆಯಾಗಿದೆ: ಕೃಷ್ಣನಿಂದ ನೇರವಾಗಿ ಕೇಳಿದ ಅರ್ಜುನ. ಕೆಲವೊಮ್ಮೆ ಕೆಲವರು ಹೀಗೆ ಕೇಳುತ್ತಾರೆ, "ಅರ್ಜುನನು ಕೃಷ್ಣನಿಂದ ನೇರವಾಗಿ ಕೇಳಿದನು. ಆದರೆ ಇಲ್ಲಿ ಕೃಷ್ಣ ಪ್ರತ್ಯಕ್ಷವಾಗಿಲ್ಲ. ಹಾಗಾದರೆ ನಾನು ಹೇಗೆ ಸ್ವೀಕರಿಸಲಿ?" ಇದು ಪ್ರತ್ಯಕ್ಷದ ಪ್ರಶ್ನೆಯಲ್ಲ. ನಿಮಗೆ ಪರಿಪೂರ್ಣ ಜ್ಞಾನದ ಅರಿವಿಲ್ಲ ಅಷ್ಟೆ. ಕೃಷ್ಣನ ಮಾತುಗಳಾದ ಭಗವದ್ಗೀತೆಯು ಕೃಷ್ಣನಿಂದ ಭಿನ್ನವಾಗಿಲ್ಲ. ಅದು ಕೃಷ್ಣನಿಂದ ಭಿನ್ನವಾಗಿಲ್ಲ. ನೀವು ಭಗವದ್ಗೀತೆಯನ್ನು ಕೇಳಿದಾಗ, ನೀವು ನೇರವಾಗಿ ಕೃಷ್ಣನಿಂದ ಕೇಳುತ್ತಿದ್ದೀರಿ ಏಕೆಂದರೆ ಕೃಷ್ಣನು ಬೇರೆಯಲ್ಲ. ಕೃಷ್ಣನು ಪರಿಪೂರ್ಣ. ಕೃಷ್ಣ, ಕೃಷ್ಣನ ಹೆಸರು, ಕೃಷ್ಣನ ರೂಪ, ಕೃಷ್ಣನ ಗುಣ, ಕೃಷ್ಣನ ಬೋಧನೆ, ಎಲ್ಲವೂ ಕೃಷ್ಣನದ್ದೇ, ಎಲ್ಲವೂ ಕೃಷ್ಣನೇ. ಅವರೆಲ್ಲರೂ ಕೃಷ್ಣರೇ. ಇದನ್ನು ಅರ್ಥಮಾಡಿಕೊಳ್ಳಬೇಕು. ಅವರು ಕೃಷ್ಣನಿಗಿಂತ ಭಿನ್ನವಾಗಿಲ್ಲ. ಆದ್ದರಿಂದ, ಇಲ್ಲಿ ಕೃಷ್ಣನ ರೂಪ, ಅವನು ಕೃಷ್ಣ. ಅವನು ಪ್ರತಿಮೆಯಲ್ಲ. "ಅವನು ಅಮೃತಶಿಲೆಯ ಪ್ರತಿಮೆ." ಅಲ್ಲ. ಅವನು ಕೃಷ್ಣ. ನೀವು ಕೃಷ್ಣನನ್ನು ನೋಡಲು ಸಾಧ್ಯವಿಲ್ಲದ ಕಾರಣ ಅವನು ನಿಮ್ಮ ಮುಂದೆ ಕಾಣಿಸಿಕೊಂಡಿದ್ದಾನೆ. ನೀವು ಕಲ್ಲು, ಮರವನ್ನು ನೋಡಬಹುದಾದ್ದರಿಂದ ಅವನು ಆ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ನೀವು ಅದು ಕಲ್ಲು ಮತ್ತು ಮರ ಎಂದು ಭಾವಿಸುತ್ತೀರಿ ಆದರೆ ಅವನು ಕಲ್ಲು ಮತ್ತು ಮರವಲ್ಲ. ಅವನು ಕೃಷ್ಣ. ಇದನ್ನು ಪರಾತ್ಪರ ಸತ್ಯ ಎಂದು ಕರೆಯಲಾಗುತ್ತದೆ. ಅದೇ ರೀತಿ, ಕೃಷ್ಣನ ಮಾತುಗಳು ಕೃಷ್ಣನಿಗಿಂತ ಭಿನ್ನವಲ್ಲ. ಭಗವದ್ಗೀತೆಯಲ್ಲಿರುವ ಕೃಷ್ಣನ ಮಾತುಗಳು, ಅದು ಕೃಷ್ಣನೇ.
ಆ ಒಬ್ಬ ದಕ್ಷಿಣ ಭಾರತೀಯ ಬ್ರಾಹ್ಮಣನಂತೆ. ಅವನು ತನ್ನ... ಅವನು ಅನಕ್ಷರಸ್ಥನಾಗಿದ್ದು ಭಗವದ್ಗೀತೆಯನ್ನು ಓದಲು ಸಾಧ್ಯವಾಗಲಿಲ್ಲ. ಆದರೆ ಅವನ ಗುರು ಮಹಾರಾಜರು ಹೀಗೆ ಆದೇಶಿಸಿದರು: "ನೀನು ಪ್ರತಿದಿನ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳನ್ನು ಓದಬೇಕು". ಆಗ ಅವನು, "ನಾನು ಅನಕ್ಷರಸ್ಥ. ನನಗೆ ಸಾಧ್ಯವಿಲ್ಲ”, ಎಂದು ಗೊಂದಲಕ್ಕೊಳಗಾದರು. ಆದರೂ, “ಸರಿ, ಭಗವದ್ಗೀತೆಯನ್ನು ಓದುವೇ", ಎಂದನು. ಅವನು ರಂಗನಾಥ ದೇವಾಲಯದಲ್ಲಿದ್ದನು. ಅವನು ಭಗವದ್ಗೀತೆಯನ್ನು ಓದಲು ಶುರುಮಾಡಿದನು. ಆದರೆ ಅವನಿಗೆ ಓದಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವನ ಸ್ನೇಹಿತರು, "ಬ್ರಾಹ್ಮಣ, ಭಗವದ್ಗೀತೆಯ ಅಧ್ಯಾಯನ ಹೇಗೆ ನಡೆಯುತ್ತಿದೆ?", ಎಂದು ತಮಾಷೆ ಮಾಡುತ್ತಿದ್ದರು. ಅವನು ಉತ್ತರಿಸಲಿಲ್ಲ. ಅವನ ಸ್ನೇಹಿತರು ಅವನಿಗೆ ಓದಲು ಗೊತ್ತಿಲ್ಲ, ಅನಕ್ಷರಸ್ಥ, ಎಂದು ಅವನನ್ನು ತಮಾಷೆ ಮಾಡುತ್ತಿದ್ದಾರೆ ಎಂದು ಅವನಿಗೆ ತಿಳಿದಿತ್ತು. ಚೈತನ್ಯ ಮಹಾಪ್ರಭು ಬಂದಾಗ ಅವರೂ ಕೂಡ ಗೊಂದಲಕ್ಕೊಳಗಾಗಿ, "ಬ್ರಾಹ್ಮಣ, ನೀನು ಭಗವದ್ಗೀತೆಯನ್ನು ಓದುತ್ತಿದ್ದೀಯಾ?", ಎಂದು ಕೇಳಿದರು. ಅವನು ಹೇಳಿದನು, "ಸ್ವಾಮಿ, ನಾನು ಅನಕ್ಷರಸ್ಥ. ನನಗೆ ಓದಲು ಬಾರದು. ಅದು ಸಾಧ್ಯವಿಲ್ಲ. ಆದರೆ ನನ್ನ ಗುರು ಮಹಾರಾಜರು ನನಗೆ ಓದಲು ಆದೇಶಿಸಿದರು. ನಾನೇನು ಮಾಡುವುದು? ಹಾಗಾಗಿ ನನ್ನ ಬಳಿ ಈ ಪುಸ್ತಕವಿದೆ." ಗುರುವಿನ ಮಾತನ್ನು ಅನುಸರಿಸಲು ಪ್ರಯತ್ನಿಸುವುದೆಂದರೆ ಇದೇ. ಅವನು ಅನಕ್ಷರಸ್ಥ. ಅವನಿಗೆ ಓದಲು ಸಾಧ್ಯವಿಲ್ಲ. ಯಾವುದೇ ಸಾಧ್ಯತೆಯಿಲ್ಲ. ಆದರೆ ಅವನ ಗುರು ಮಹಾರಾಜರು ಆದೇಶಿಸಿದರು, "ನೀನು ಪ್ರತಿದಿನ ಭಗವದ್ಗೀತೆಯನ್ನು ಓದಬೇಕು, ಹದಿನೆಂಟು ಅಧ್ಯಾಯಗಳು." ಇದೇನು? ಇದನ್ನು ವ್ಯವಸಾಯಾತ್ಮಿಕ ಬುದ್ಧಿಃ ಎನ್ನಲಾಗುತ್ತದೆ. ನಾನು ಬಹಳ ಅಪೂರ್ಣನಾಗಿರಬಹುದು. ಪರವಾಗಿಲ್ಲ. ಆದರೆ ನಾನು ನನ್ನ ಗುರು ಮಹಾರಾಜರ ಮಾತುಗಳನ್ನು ಅನುಸರಿಸಲು ಪ್ರಯತ್ನಿಸಿದರೆ, ನಾನು ಸಂಪೂರ್ಣನಾಗುತ್ತೇನೆ.
ಇದುವೇ ರಹಸ್ಯ. ಯಸ್ಯ ದೇವೇ ಪರಾ ಭಕ್ತಿರ್ ಯಥಾ ದೇವೇ ತಥಾ ಗುರೌ (ಶ್ವೇತಾಶ್ವತರ ಉಪನಿಷತ್ 6.23). ಒಬ್ಬ ವ್ಯಕ್ತಿಯು ದೇವೋತ್ತಮ ಪರಮ ಪುರುಷನಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದು, ಗುರುವಲ್ಲಿಯು ಕೂಡ ಅಷ್ಟೇ ನಂಬಿಕೆಯನ್ನು ಹೊಂದಿದ್ದರೆ, ಯಥಾ ದೇವೇ ತಥಾ ಗುರೌ, ಬಹಿರಂಗವಾದ ಗ್ರಂಥಗಳು ಪ್ರಕಟವಾಗುತ್ತವೆ. ಅದು ಶಿಕ್ಷಣವಲ್ಲ. ಅದು ಪಾಂಡಿತ್ಯವಲ್ಲ. ಅದು ಕೃಷ್ಣ ಮತ್ತು ಗುರುವಿನಲ್ಲಿರುವ ವಿಶ್ವಾಸ. ಆದ್ದರಿಂದ, ಚೈತನ್ಯ-ಚರಿತಾಮೃತವು ಹೇಳುತ್ತದೆ: ಗುರು-ಕೃಷ್ಣ-ಕೃಪಾಯ ಪಾಯ ಭಕ್ತಿ-ಲತಾ-ಬೀಜ (ಚೈ.ಚ ಮಧ್ಯ 19.151). ಶಿಕ್ಷಣದಿಂದಾಗಲಿ, ಪಾಂಡಿತ್ಯದಿಂದದಾಗಲಿ ಇದು ಸಾಧ್ಯ ಎಂದು ಹೇಳುವುದೇ ಇಲ್ಲ. ಚೈತನ್ಯ ಮಹಾಪ್ರಭು ಹೇಳುತ್ತಾರೆ, ‘ಗುರು-ಕೃಷ್ಣ-ಕೃಪಾಯ’, ಗುರುವಿನ ಕೃಪೆಯಿಂದ, ಕೃಷ್ಣನ ಕೃಪೆಯಿಂದ ಸಾಧ್ಯ. ಇದು ಕರುಣೆಯ ಪ್ರಶ್ನೆ. ಇದು ಪಾಂಡಿತ್ಯ ಅಥವಾ ಐಶ್ವರ್ಯ ಅಥವಾ ಶ್ರೀಮಂತಿಕೆಯ ಪ್ರಶ್ನೆಯಲ್ಲ. ಅಲ್ಲ. ಇಡೀ ಭಕ್ತಿ-ಮಾರ್ಗವು ಭಗವಂತನ ಕರುಣೆಯನ್ನು ಅವಲಂಬಿಸಿದೆ. ಆದ್ದರಿಂದ, ನಾವು ಕರುಣೆಯನ್ನು ಕೋರಬೇಕು. ಅಥಾಪಿ ತೇ ದೇವ ಪದಾಂಬುಜ-ದ್ವಯ-ಪ್ರಸಾದ-ಲೇಶಾನುಗೃಹೀತ ಏವ ಹಿ, ಜಾನಾತಿ ತತ್ವಮ್... (ಶ್ರೀ.ಭಾ 10.14.29). ಪ್ರಸಾದ-ಲೇಶ, ಲೇಶ ಎಂದರೆ ಭಾಗಾಂಶ. ಪರಮಾತ್ಮನ ಕರುಣೆಯ ಭಾಗಾಂಶವನ್ನು ಪಡೆದವನು ಅರ್ಥಮಾಡಿಕೊಳ್ಳಬಲ್ಲನು. ಇತರರು, ನ ಚಾನ್ಯ ಏಕೋ ಅಪಿ ಚಿರಂ ವಿಚಿನ್ವನ್. ಇತರರು ಲಕ್ಷಾಂತರ ವರ್ಷಗಳಿಂದ ಊಹಾಪೋಹದಲ್ಲಿ ಮಗ್ನರಾಗಿರುತ್ತಾರೆ. ಅವು ಅರ್ಥವಾಗುವುದಿಲ್ಲ. ಆದ್ದರಿಂದ, ಭಗವದ್ಗೀತಾ ಯಥಾರೂಪ. ಆದ್ದರಿಂದ, ನಾವು ಭಗವದ್ಗೀತೆಯನ್ನು ಅರ್ಜುನ ಅರ್ಥಮಾಡಿಕೊಂಡಂತೆ ಯಥಾರೂಪ ಪ್ರಸ್ತುತಪಡಿಸುತ್ತಿದ್ದೇವೆ. ನಾವು ಡಾ. ರಾಧಾಕೃಷ್ಣನ್, ಈ ವಿದ್ವಾಂಸ, ಆ ವಿದ್ವಾಂಸ, ಈ ಧೂರ್ತ, ಆ ಧೂರ್ತ... ಇಲ್ಲ. ನಾವು ಸ್ವೀಕರಿಸುವುದಿಲ್ಲ. ಅದು ನಮ್ಮ ವ್ಯವಹಾರವಲ್ಲ. ಅದುವೇ ಪರಂಪರಾ.