KN/Prabhupada 0217 - ದೇವಹೂತಿಯದು ಒಬ್ಬ ಪರಿಪೂರ್ಣ ಮಹಿಳೆಯ ಸ್ಥಾನ
Lecture on SB 3.28.1 -- Honolulu, June 1, 1975
ಈ ರಾಜಕುಮಾರಿ, ಮನುವಿನ ಮಗಳು, ಕರ್ದಮ ಮುನಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದಳು. ಆದರೆ ಯೋಗ ಆಶ್ರಮವು ಒಂದು ಗುಡಿಸಲಾಗಿತ್ತು, ಮತ್ತು ಉತ್ತಮ ಆಹಾರವಿರಲಿಲ್ಲ, ಸೇವಕಿ ಇರಲಿಲ್ಲ, ಅಂತಹದ್ದೇನೂ ಇರಲಿಲ್ಲ. ಆದ್ದರಿಂದ, ಆ ಅತ್ಯಂತ ಸುಂದರವಾದ ರಾಜಕುಮಾರಿ ಕ್ರಮೇಣ ತುಂಬಾ ಕೃಶ ಮತ್ತು ತೆಳ್ಳಗಾದಳು. ಕರ್ದಮ ಮುನಿಯು ಯೋಚಿಸಿದನು: "ಅವಳ ತಂದೆ ಅವಳನ್ನು ನನಗೆ ಒಪ್ಪಿಸಿದರು, ಆದರೆ ಅವಳ ಆರೋಗ್ಯ ಹಾಗು ಸೌಂದರ್ಯ ಕ್ಷೀಣಿಸುತ್ತಿದೆ. ಆದ್ದರಿಂದ, ಅವಳ ಪತಿಯಾಗಿ ನಾನು ಅವಳಿಗಾಗಿ ಏನಾದರೂ ಮಾಡಬೇಕು.” ಅವನು ತನ್ನ ಯೋಗ ಶಕ್ತಿಯಿಂದ ಒಂದು ದೊಡ್ಡ ನಗರ ವಿಮಾನವನ್ನು ನಿರ್ಮಿಸಿದನು. ಅದೇ ಯೋಗ ಶಕ್ತಿ. 747 ಅಲ್ಲ. (ನಗು) ಅಷ್ಟು ದೊಡ್ಡ ನಗರದಲ್ಲಿ ಸರೋವರ, ಉದ್ಯಾನ, ಸೇವಕಿಯರು, ಬೃಹತಾದ ಅರಮನೆಗಳಿದ್ದವು. ಇಡೀ ನಗರವು ಆಕಾಶದಲ್ಲಿ ತೇಲುತ್ತಿತ್ತು. ಅವನು ಅವಳಿಗೆ ಎಲ್ಲಾ ವಿಭಿನ್ನ ಗ್ರಹಗಳನ್ನು ತೋರಿಸಿದನು. ಇದನ್ನು ನಾಲ್ಕನೇ ಅಧ್ಯಾಯದಲ್ಲಿ ಹೇಳಲಾಗಿದೆ. ನೀವು ಅದನ್ನು ಓದಬಹುದು. ಈ ರೀತಿ, ಯೋಗಿಯಾಗಿ ಅವನು ಅವಳನ್ನು ಎಲ್ಲಾ ವಿಷಯಗಳಲ್ಲಿಯೂ ತೃಪ್ತಿಪಡಿಸಿದನು. ತದನಂತರ ಅವಳು ಮಕ್ಕಳನ್ನು ಬಯಸಿದ್ದಳು. ಕರ್ದಮ ಮುನಿಯು ತನ್ನ ಪತ್ನಿಯಲ್ಲಿ ಒಂಬತ್ತು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿಗೆ ಜನ್ಮ ಕೊಟ್ಟರು, ಆದರೆ ಹೀಗೆ ಒಂದು ಭರವಸೆ ಪಡೆದ ನಂತರ: "ನೀನು ಮಕ್ಕಳನ್ನು ಪಡೆದ ತಕ್ಷಣ ನಾನು ಹೊರಟು ಹೋಗುತ್ತೇನೆ. ನಾನು ನಿನ್ನೊಂದಿಗೆ ಶಾಶ್ವತವಾಗಿ ಬದುಕುವುದಿಲ್ಲ.” ಅವಳು ಒಪ್ಪಿಕೊಂಡಳು. ಅವಳ ಮಕ್ಕಳಲ್ಲಿ ಈ ಕಪಿಲದೇವನು ಒಬ್ಬ ಮಗನಾಗಿದ್ದ. ಅವನು ದೊಡ್ಡವನಾದಾಗ, "ನನ್ನ ಪ್ರೀತಿಯ ತಾಯಿ, ನನ್ನ ತಂದೆ ಮನೆ ಬಿಟ್ಟು ಹೋಗಿದ್ದಾರೆ. ನಾನು ಸಹ ಮನೆ ಬಿಟ್ಟು ಹೋಗುತ್ತೇನೆ. ನೀವು ನನ್ನಿಂದ ಏನಾದರೂ ಬೋಧನೆಯನ್ನು ಪಡೆಯಲು ಬಯಸಿದರೆ ನೀವು ಪಡೆಯಬಹುದು. ಅದರ ನಂತರ ನಾನು ಹೋಗುತ್ತೇನೆ", ಎಂದು ಹೇಳಿದನು. ಆದ್ದರಿಂದ, ಹೋಗುವ ಮೊದಲು ಅವನು ತನ್ನ ತಾಯಿಗೆ ಬೋಧಿಸಿದನು.
ಈಗ, ದೇವಹೂತಿಯು ಒಬ್ಬ ಪರಿಪೂರ್ಣ ಮಹಿಳೆಯ ಸ್ಥಾನವನ್ನು ಪಡೆದಳು. ಅವಳು ಒಳ್ಳೆಯ ತಂದೆಯನ್ನು ಪಡೆದಳು, ಒಳ್ಳೆಯ ಗಂಡನನ್ನು ಪಡೆದಳು, ಮತ್ತು ಅತ್ಯುತ್ತಮ ಮಗನನ್ನು ಪಡೆದಳು. ಒಬ್ಬ ಮಹಿಳೆಯ ಜೀವನದಲ್ಲಿ ಮೂರು ಹಂತಗಳಿರುತ್ತದೆ. ಪುರುಷನಿಗೆ ಹತ್ತು ಹಂತಗಳಿವೆ. ಈ ಮೂರು ಹಂತಗಳು ಏನೆಂದರೆ ಮೊದಲೆನೆಯದಾಗಿ ಅವಳು ಚಿಕ್ಕವಳಿದ್ದಾಗ ತಂದೆಯ ರಕ್ಷಣೆಯಲ್ಲಿ ಬದುಕಬೇಕು, ದೇವಹೂತಿಯಂತೆ. ಅವಳು ಬೆಳೆದು ಯುವತಿಯಾದಾಗ, ತನ್ನ ತಂದೆಗೆ ಹೀಗೆ ಪ್ರಸ್ತಾಪಿಸಿದಳು: “ನಾನು ಆ ಸಜ್ಜನನನ್ನು, ಆ ಯೋಗಿಯನ್ನು, ಮದುವೆಯಾಗಲು ಬಯಸುತ್ತೇನೆ.” ತಂದೆಯೂ ಸಹ ಅವಳನ್ನು ಯೋಗಿಗೆ ಅರ್ಪಿಸಿದನು. ಆದ್ದರಿಂದ, ಅವಳು ಮದುವೆಯಾಗದಷ್ಟು ಕಾಲ ತಂದೆಯ ರಕ್ಷಣೆಯಲ್ಲಿಯೇ ಇದ್ದಳು. ಎರಡನೆಯದಾಗಿ, ಅವಳು ಮದುವೆಯಾದಾಗ ಯೋಗಿ ಗಂಡನೊಂದಿಗೆ ಇದ್ದಳು. ಅವಳು ರಾಜನ ಮಗಳು, ರಾಜಕುಮಾರಿಯಾಗಿರುವ ಕಾರಣ ಬಹಳ ರೀತಿಯಲ್ಲಿ ತೊಂದರೆಗೊಳಗಾದಳು. ಈ ಯೋಗಿಯು, ಅವನು ಒಂದು ಗುಡಿಸಲಿನಲ್ಲಿದ್ದನು, ಆಹಾರವಿಲ್ಲ, ಆಶ್ರಯವಿಲ್ಲ, ಅಂತಹದ್ದೇನೂ ಇಲ್ಲ. ಹಾಗಾಗಿ ಅವಳು ಬಳಲಬೇಕಾಯಿತು. ಅವಳು ಎಂದಿಗೂ "ನಾನು ರಾಜನ ಮಗಳು. ನಾನು ತುಂಬಾ ಶ್ರೀಮಂತ ಸ್ಥಿತಿಯಲ್ಲಿ ಬೆಳೆದಿದ್ದೇನೆ. ಆದ್ದರಿಂದ, ನನಗೆ ಒಳ್ಳೆಯ ಅಪಾರ್ಟ್ಮೆಂಟ್, ಒಳ್ಳೆಯ ಆಹಾರವನ್ನು ನೀಡಲು ಸಾಧ್ಯವಾಗದ ಗಂಡನಿಗೆ ವಿಚ್ಛೇದನ ನೀಡುತ್ತೇನೆ", ಎಂದು ಅವಳು ಎಂದಿಗೂ ಹೇಳಲಿಲ್ಲ. ಇಲ್ಲ. ಹಾಗೆ ಎಂದಿಗೂ ಮಾಡಲಾಗಿಲ್ಲ. ಅದು ಒಳ್ಳೆಯ ನಿಲುವಲ್ಲ. "ನನ್ನ ಗಂಡ ಹೇಗೇ ಇರಲಿ, ಅವನು ಏನೇ ಆಗಿರಲಿ, ನಾನು ಒಬ್ಬ ಸಜ್ಜನ ವ್ಯಕ್ತಿಯನ್ನು ನನ್ನ ಪತಿಯಾಗಿ ಸ್ವೀಕರಿಸಿರುವ ಕಾರಣ, ನಾನು ಅವನ ಸೌಕರ್ಯಗಳನ್ನು ನೋಡಬೇಕು ಮತ್ತು ಅವನು ಯಾವದೇ ಸ್ಥಾನದಲ್ಲಿರಲಿ ಅದು ಅಮುಖ್ಯ." ಇದು ಮಹಿಳೆಯ ಕರ್ತವ್ಯ. ಅದು ವೇದದ ಆದೇಶ. ಇತ್ತೀಚಿನ ದಿನಗಳಲ್ಲಿ, ಸ್ವಲ್ಪ ಭೇದ, ಭಿನ್ನಾಭಿಪ್ರಾಯ ಉಂಟಾದರೆ ತಕ್ಷಣ ವಿಚ್ಛೇದನೆ. ಇನ್ನೊಬ್ಬ ಗಂಡನನ್ನು ಹುಡುಕುವುದು. ಇಲ್ಲ. ಅವಳು ಪತಿಯೊಂದಿಗೆ ಉಳಿದಳು. ಮೂರನೆಯದಾಗಿ,, ಅವಳು ಅತ್ಯಂತ ಒಳ್ಳೆಯ ಮಗುವನ್ನು, ದೇವೋತ್ತಮ ಪರುಷನಾದ ಕಪಿಲನನ್ನು ಪಡೆದಳು. ಇವು ಮೂರು ಹಂತಗಳು. ಒಬ್ಬ ಮಹಿಳೆಯು ಪ್ರಥಮವಾಗಿ ತನ್ನ ಕರ್ಮದಿಂದ ಸೂಕ್ತ ತಂದೆಯಲ್ಲಿ, ನಂತರ ಸೂಕ್ತ ಗಂಡನಲ್ಲಿ ಆಶ್ರಯ ಪಡೆಯಬೇಕು, ನಂತರ ಕಪಿಲದೇವನಂತಹ ಒಳ್ಳೆಯ ಮಗುವನ್ನು ಪಡೆಯಬೇಕು ಎಂದು ಆಶಿಸಬೇಕು.