KN/Prabhupada 0218 - ಗುರು ಕಣ್ಣುಗಳನ್ನು ತೆರೆಯುತ್ತಾನೆ
Lecture on SB 6.1.55 -- London, August 13, 1975
ಜೀವಿಗಳಾದ ನಾವು ಕೃಷ್ಣನ ಭಾಗಾಂಶ. ನಮ್ಮ ಸ್ಥಾನವು ಬೆಂಕಿ ಮತ್ತು ಬೆಂಕಿಯ ಸಣ್ಣ ತುಣುಕುಗಳು, ಕಿಡಿಗಳಂತೆ. ಸೂರ್ಯ ಮತ್ತು ಹೊಳೆಯುವ ಅಂಶಗಳ ಸಣ್ಣ ಕಣಗಳು ಒಟ್ಟಿಗೆ ಸೇರಿ ಸೂರ್ಯನ ಬೆಳಕಾಗುತ್ತದೆ. ನಾವು ಪ್ರತಿದಿನ ನೋಡುವ ಸೂರ್ಯನ ಬೆಳಕು ಏಕರೂಪದ ಮಿಶ್ರಣವಲ್ಲ. ಬಹಳ ಸಣ್ಣ, ಹೊಳೆಯುವ ಕಣಗಳಾದ ಅಣುಗಳಿಂದ ಕೂಡಿದೆ. ನಾವೂ ಹಾಗೆ, ಅತಿ ಸೂಕ್ಷ್ಮ. ಯಾರೂ ಎಣಿಸಲಾಗದ ಭೌತಿಕ ಪರಮಾಣುಗಳಂತೆ ನಾವೂ ಸಹ ದೇವರ ಪರಮಾಣು ಕಿಡಿಗಳು. ನಮ್ಮ ಸಂಖ್ಯೆ ಎಷ್ಟೆಂದರೆ ಅದು ಅಗಣ್ಯ. ಅಸಂಖ್ಯಾ. ಅಸಂಖ್ಯಾ ಎಂದರೆ ನಾವು ಎಣಿಸಲು ಸಾಧ್ಯವಿಲ್ಲ. ಅಷ್ಟೊಂದು ಜೀವಿಗಳು. ಆದ್ದರಿಂದ, ನಾವು ಅತಿ ಸೂಕ್ಷ್ಮ ಕಣವಾಗಿದ್ದು ಈ ಭೌತಿಕ ಜಗತ್ತನ್ನು ತಲುಪಿದ್ದೇವೆ. ವಿಶೇಷವಾಗಿ ಯುರೋಪಿಯನ್ನರು ತಮ್ಮ ಇಂದ್ರಿಯ ತೃಪ್ತಿಗಾಗಿ ಭೌತಿಕ ಸಂಪನ್ಮೂಲಗಳನ್ನು ಬಳಸಲು ವಸಾಹತುಶಾಹಿ ಮಾಡಲು ಇತರ ದೇಶಗಳಿಗೆ ಹೋಗುತ್ತಾರೆ. ಅಮೆರಿಕವನ್ನು ಕಂಡುಹಿಡಿದು ಯುರೋಪಿಯನ್ನರು ಅಲ್ಲಿಗೆ ಹೋದರು. ಅಲ್ಲಿಗೆ ಹೋಗುವುದು ಮತ್ತು... ಈಗ ಏನಾದರು ಅನುಕೂಲಗಳು ಸಿಗಬಹುದೆ ಎಂದು ಚಂದ್ರ ಗ್ರಹಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇದು ಬದ್ದ ಆತ್ಮದ ಪ್ರವೃತ್ತಿ. ಆದ್ದರಿಂದಲೆ ಅವರು ಈ ಭೌತಿಕ ಜಗತ್ತಿಗೆ ಬಂದಿದ್ದಾರೆ. ಕೃಷ್ಣ ಭೂಲಿಯ ಜೀವ ಭೋಗ ವಾಂಚಾ ಕರೇ. ಪುರುಷ ಎಂದರೆ ಭೋಕ್ತ.
ಭೋಕ್ತಾ. ಕೃಷ್ಣ ವಾಸ್ತವವಾಗಿ ಭೋಕ್ತಾ. ಭೋಕ್ತಾರಂ ಯಜ್ಞ-ತಪಸಾಂ (ಭ.ಗೀ 5.29). ಆದ್ದರಿಂದ, ನಾವು ಕೃಷ್ಣನನ್ನು ಅನುಕರಿಸುತ್ತಿದ್ದೇವೆ. ಇದು ನಮ್ಮ ನಿಲುವು. ಎಲ್ಲರೂ ಕೃಷ್ಣನಾಗಲು ಪ್ರಯತ್ನಿಸುತ್ತಿದ್ದಾರೆ. ಮಾಯಾವಾದಿಗಳು ತಪಸ್ಸು ಮತ್ತು ವೃತಗಳನ್ನು ಆಚರಿಸಿ ಆಧ್ಯಾತ್ಮಿಕ ಜೀವನದ ತತ್ವಗಳನ್ನು ಬಹಳ ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಆದರೆ ಅವರು ಮಾಯೆಗೆ ಒಳಗಾಗಿ ಕೊನೆಯಲ್ಲಿ, "ನಾನು ಭಗವಂತ, ಪುರುಷ", ಎಂದು ಯೋಚಿಸುತ್ತಾರೆ. ಅದೇ ರೋಗ, ಪುರುಷ. ಪುರುಷ ಎಂದರೆ ಭೋಕ್ತಾ. "ನಾನು ಕೃಷ್ಣ..." ಭೋಕ್ತಾರಂ ಯಜ್ಞ. ವೃತಗಳು ಮತ್ತು ತಪಸ್ಸುಗಳನ್ನು, ಹಾಗು ನಿಯಂತ್ರಕ ತತ್ವಗಳನ್ನು ಅನುಸರಿಸಿ ಇಷ್ಟೆಲ್ಲಾ ಮುಂದುವರೆದ ನಂತರವೂ, ಮಾಯಾ ಎಷ್ಟು ಬಲಶಾಲಿಯೆಂದರೆ ಅವನು, "ನಾನು ಪುರುಷ", ಎಂಬ ಭಾವನೆಯಲ್ಲಿದ್ದಾನೆ. ಅದರಲ್ಲೂ ಸಾಮಾನ್ಯ ಪುರುಷನಲ್ಲ, ಭಗವದ್ಗೀತೆಯಲ್ಲಿ ವಿವರಿಸಿರುವ ಪರಮಪುರುಷನಾದ ಕೃಷ್ಣನೆಂದು ಭಾವನೆ. ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್, ಪುರುಷಂ ಶಾಶ್ವತ (ಭ.ಗೀ 10.12): "ನೀನು ಪುರುಷ." ಮಾಯಾ ಎಷ್ಟು ಬಲಶಾಲಿಯೆಂದರೆ, ಹಲವಾರು ಜೀವಗಳನ್ನು, ಜೀವನದುದ್ದಕ್ಕೂ ಒದೆದ ನಂತರವೂ, ಅವನು, "ನಾನು ಪುರುಷ. ನಾನು ಆನಂದದಾಯಕ", ಎಂದು ಯೋಚಿಸುತ್ತಿದ್ದಾನೆ. ಇದೇ ಆ ರೋಗ.
ಆದ್ದರಿಂದ, ಇಲ್ಲಿ ಈಶ ಪ್ರಕೃತಿ-ಸಂಗೇನ ಪುರುಷಸ್ಯ ವಿಪರ್ಯಯಃ (ಶ್ರೀ.ಭಾ 6.1.55) ಎಂದು ಹೇಳಲಾಗಿದೆ. ಅವನ ಭೌತಿಕ ಜೀವನವು, "ನಾನು ಪುರುಷ. ನಾನು ಅನುಭವಿಸುವವನು", ಎಂಬ ಈ ಪರಿಕಲ್ಪನೆಯಿಂದ ಪ್ರಾರಂಭವಾಯಿತು. ಮತ್ತು ‘ನಾನು ಅನುಭವಿಸುವವನು’ ಎಂಬ ಕಲ್ಪನೆಯನ್ನು ಅವನು ಬಿಡಲು ಸಾಧ್ಯವಿಲ್ಲದ ಕಾರಣ, ಜೀವನದುದ್ದಕ್ಕೂ ಅವನು ವಿಪರ್ಯಯಃ, ಹಿಮ್ಮುಖ ಸ್ಥಿತಿ. ಹಿಮ್ಮುಖ ಸ್ಥಿತಿ ಎಂದರೆ... ಜೀವಿಯು ಭಗವಂತನ ಭಾಗಾಂಶ ಮತ್ತು ಭಗವಂತ ಸತ್-ಚಿತ್-ಆನಂದ-ವಿಗ್ರಹಃ (ಬ್ರಹ್ಮ.ಸಂ 5.1)ನಾಗಿರುವ ಕಾರಣ ನಾವೂ ಕೂಡ ಸತ್-ಚಿತ್-ಆನಂದ-ವಿಗ್ರಹಃ, ಒಂದು ಚಿಕ್ಕ ಸತ್-ಚಿತ್-ಆನಂದ-ವಿಗ್ರಹಃ. ಆದರೆ ನಮ್ಮ ಸ್ಥಾನವು ಪ್ರಕೃತಿ, ಪುರುಷನಲ್ಲ. ರಾಧಾ ಮತ್ತು ಕೃಷ್ಣರಂತೆ. ಅವರು ಒಂದೇ ಗುಣವನ್ನು ಹೊಂದಿದ್ದಾರೆ. ರಾಧಾ-ಕೃಷ್ಣ-ಪ್ರಣಯ-ವಿಕೃತಿರ್ ಹ್ಲಾದಿನೀ-ಶಕ್ತಿರ್ ಅಸ್ಮಾತ್ (ಚೈ.ಚ ಆದಿ 1.5). ಅವರು ಒಂದೇ. ಆದರೂ, ರಾಧಾ ಪ್ರಕೃತಿ ಮತ್ತು ಕೃಷ್ಣ ಪುರುಷ. ಅದೇ ರೀತಿ, ನಾವು ಕೃಷ್ಣನ ಭಾಗಾಂಶವಾಗಿದ್ದರೂ, ನಾವು ಪ್ರಕೃತಿ ಮತ್ತು ಕೃಷ್ಣ ಪುರುಷ. ಆದ್ದರಿಂದ, ತಪ್ಪಾಗಿ ನಾವು ಪುರುಷನಾಗುವ ಬಗ್ಗೆ ಯೋಚಿಸಿದಾಗ, ಇದನ್ನು ಮಾಯಾ ಅಥವಾ ವಿಪರ್ಯಯಃ ಎನ್ನಲಾಗುತ್ತದೆ. ಅದನ್ನು ಇಲ್ಲಿ ಹೇಳಲಾಗಿದೆ. ಏವಂ ಪ್ರಕೃತಿ-ಸಂಗೇನ ಪುರುಷಸ್ಯ ವಿಪರ್ಯಯಃ. ವಿಪರ್ಯಯಃ ಎಂದರೆ ಪುರುಷನೊಂದಿಗೆ ಆನಂದಿಸುವುದು. ಪುರುಷ ಮತ್ತು ಪ್ರಕೃತಿ, ಗಂಡು ಮತ್ತು ಹೆಣ್ಣು, ಆನಂದಿಸಿದಾಗ, ಅವರು ಒಂದೇ ರೀತಿಯ ಆನಂದವನ್ನು ಪಡೆಯುತ್ತಾರೆ. ಆದರೆ ಒಬ್ಬರು ಪುರುಷ; ಒಬ್ಬರು ಪ್ರಕೃತಿ. ಅದೇ ರೀತಿ, ಕೃಷ್ಣ ಪುರುಷ, ಮತ್ತು ನಾವು ಪ್ರಕೃತಿ. ನಾವು ಕೃಷ್ಣನೊಂದಿಗೆ ಆನಂದಿಸಿದರೆ, ಆನಂದ, ಸಚ್ಚಿದಾನಂದವಿರುತ್ತದೆ. ಅದನ್ನು ನಾವು ಮರೆತಿದ್ದೇವೆ. ನಾವು ಪುರುಷನಾಗಲು ಬಯಸುತ್ತೇವೆ. ಆದ್ದರಿಂದ, ಯಾವುದೋ ರೀತಿಯಲ್ಲಿ, ಪುರುಷನಾಗುವ, ಭೋಗಿಸುವವನಾಗುವ ತಪ್ಪು ಪರಿಕಲ್ಪನೆಯ ಸ್ಥಿತಿ ಅಸ್ತಿತ್ವಕ್ಕೆ ಬಂದಿದೆ. ಹಾಗಾದರೆ ಫಲಿತಾಂಶವೇನು? ಫಲಿತಾಂಶವೆಂದರೆ ನಾವು ಜೀವನದುದ್ದಕ್ಕೂ ಆನಂದಿಸಲು ಪ್ರಯತ್ನಿಸುತ್ತಿದ್ದೇವೆ, ಆದರೆ ನಾವು ಆನಂದಿಸಲ್ಪಡುತ್ತಿದ್ದೇವೆ; ನಾವು ಆನಂದಿಸುವವರಲ್ಲ. ನಾವು ಆನಂದಿಸುವವರಾಗಲು ಹೆಣಗಾಡುತ್ತಿದ್ದೇವೆ. ಇದು ನಮ್ಮ ಸ್ಥಾನ.
ಹಾಗಾದರೆ ನೀವು ಈ ಪರದಾಟವನ್ನು ಹೇಗೆ ನಿಲ್ಲಿಸಬಹುದು ಮತ್ತು ನಿಮ್ಮ ಮೂಲ ಸ್ಥಾನಕ್ಕೆ ಹೇಗೆ ಬರಬಹುದು? ಅದನ್ನು ಇಲ್ಲಿ ಹೇಳಲಾಗಿದೆ. ಸ ಏವ ನ ಚಿರಾದ್ ಈಶ-ಸಂಗಾದ್ ವಿಲೀಯತೇ (ಶ್ರೀ.ಭಾ 6.1.55). "ನಾನು ಪುರುಷ", ಎಂಬ ಜೀವನದ ಈ ತಪ್ಪು ಕಲ್ಪನೆಯನ್ನು ಸಂಪೂರ್ಣವಾಗಿ ಸೋಲಿಸಬಹುದು. ಹೇಗೆ? ಈಶ-ಸಂಗ, ಭಗವಂತನ ಸಂಬಂಧದಿಂದ. ಈಶ. ಈಶ ಎಂದರೆ ಸರ್ವೋಚ್ಚ ನಿಯಂತ್ರಕ. ಈಶ-ಸಂಗ. "ಹಾಗಾದರೆ ಈಶ ಎಲ್ಲಿದ್ದಾನೆ? ನಾನು ಈಶನನ್ನು ನೋಡಲಾರೆ. ನನಗೆ ನೋಡಲು ಸಾಧ್ಯವಿಲ್ಲ... ಕೃಷ್ಣ ಕೂಡ ಈಶ, ಪರಮಾತ್ಮ, ಆದರೆ ನಾನು ಅವನನ್ನು ನೋಡಲು ಸಾಧ್ಯವಿಲ್ಲ." ಕೃಷ್ಣನಿದ್ದಾನೆ. ನೀವು ಅವನನ್ನು ಏಕೆ ನೋಡಲಾಗುವುದಿಲ್ಲ? ನೀವು ಕುರುಡರು. ಆದ್ದರಿಂದ ನೀವು ನೋಡಲು ಸಾಧ್ಯವಿಲ್ಲ. ನೀವು ನಿಮ್ಮ ಕಣ್ಣುಗಳನ್ನು ತೆರೆಯಬೇಕು, ಮುಚ್ಚಬಾರದು. ಅದು ಗುರುವಿನ ಕೆಲಸ. ಗುರು ಕಣ್ಣುಗಳನ್ನು ತೆರೆಯುತ್ತಾನೆ.
- ಅಜ್ಞಾನ-ತಿಮಿರಾಂಧಸ್ಯ
- ಜ್ಞಾನಾಂಜನ-ಶಲಾಕಯಾ
- ಚಕ್ಷುರ್ ಉನ್ಮೀಲಿತಂ ಯೇನ
- ತಸ್ಮೈ ಶ್ರೀ-ಗುರವೇ ನಮಃ
- (ಗೌತಮೀಯ ತಂತ್ರ)
ಹಾಗಾದರೆ ಕೃಷ್ಣನು ಕಣ್ಣುಗಳನ್ನು ಹೇಗೆ ತೆರೆಯುತ್ತಾನೆ? ಜ್ಞಾನಾಂಜನ-ಶಲಾಕಯಾದಿಂದ. ಕತ್ತಲೆಯಲ್ಲಿ ನಮಗೆ ಏನನ್ನೂ ನೋಡಲು ಸಾಧ್ಯವಿಲ್ಲ. ಆದರೆ ಬೆಂಕಿಕಡ್ಡಿಗಳು ಅಥವಾ ಮೇಣದಬತ್ತಿ ಇದ್ದು, ಮೇಣದಬತ್ತಿಯನ್ನು ಹೊತ್ತಿಸಿದಾಗ ನಾವು ನೋಡಬಹುದು. ಅದೇ ರೀತಿ, ಗುರುವಿನ ಕೆಲಸವೆಂದರೆ ಕಣ್ಣುಗಳನ್ನು ತೆರೆಯುವುದು. ಕಣ್ಣುಗಳನ್ನು ತೆರೆಯುವುದು ಎಂದರೆ "ನೀನು ಪುರುಷನಲ್ಲ. ನೀನು ಪ್ರಕೃತಿ. ನಿನ್ನ ದೃಷ್ಟಿಕೋನಗಳನ್ನು ಬದಲಾಯಿಸು", ಎಂಬ ಜ್ಞಾನವನ್ನು ನೀಡುವುದು. ಅದುವೇ ಕೃಷ್ಣ ಪ್ರಜ್ಞೆ.