KN/Prabhupada 0222 - ಈ ಆಂದೋಲನವನ್ನು ಮುಂದುವರಿಸುವುದನ್ನು ಕೈಬಿಡಬೇಡಿ



His Divine Grace Srila Bhaktisiddhanta Sarasvati Gosvami Prabhupada's Disappearance Day, Lecture -- Los Angeles, December 9, 1968

ಹಾಗಾಗಿ ಇದೊಂದು ಉತ್ತಮ ಚಳುವಳಿ. ಅಹಂ ತ್ವಂ ಸರ್ವ-ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ (ಭ.ಗೀ 18.66). ಭಗವದ್ಗೀತೆ ಹೇಳುತ್ತದೆ, ಭಗವಂತ ಹೇಳುತ್ತಾನೆ, ಜನರ ಕಷ್ಟಗಳು ಅವನ ಪಾಪ ಕಾರ್ಯಗಳಿಂದಾಗಿವೆ. ಅಜ್ಞಾನ. ಅಜ್ಞಾನವೇ ಪಾಪಕಾರ್ಯಗಳಿಗೆ ಕಾರಣ. ಒಬ್ಬ ವ್ಯಕ್ತಿಗೆ ಅರಿವಿರುವುದಿಲ್ಲ. ನನ್ನಂತಹ ಒಬ್ಬ ವಿದೇಶಿ ಅಮೇರಿಕ ಬಂದರೆ ಅವನಿಗೆ ತಿಳಿದಿರುವುದಿಲ್ಲ... ಏಕೆಂದರೆ ಭಾರತದಲ್ಲಿ... ನಿಮ್ಮ ದೇಶದಲ್ಲಿ ಕಾರನ್ನು ರಸ್ತೆಯ ಬಲಭಾಗದಲ್ಲಿ ಓಡಿಸಲಾಗುತ್ತದೆ. ಭಾರತದಲ್ಲಿ, ಹಾಗು ಲಂಡನ್‌ನಲ್ಲಿಯೂ ಸಹ, ನಾನು ಕಾರನ್ನು ಎಡಭಾಗದಲ್ಲಿ ಓಡಿಸುವುದನ್ನು ನೋಡಿದ್ದೇನೆ. ಅವನು ತಿಳಿಯದೆ ಕಾರನ್ನು ಎಡಭಾಗದಲ್ಲಿ ಚಲಾಯಿಸಿ ಅಪಘಾತಕ್ಕೀಡಾದರೆ, ಅವನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಾರೆ. ಅವನು, "ಸರ್, ಇಲ್ಲಿ ಕಾರನ್ನು ರಸ್ತೆಯ ಬಲಭಾಗದಲ್ಲಿ ಓಡಿಸಲಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ", ಎಂದು ಹೇಳಿದರೆ ಅವನನ್ನು ಕ್ಷಮಿಸುವುದಿಲ್ಲ. ಕಾನೂನು ಅವನನ್ನು ಶಿಕ್ಷಿಸುತ್ತದೆ. ಆದ್ದರಿಂದ, ಅಜ್ಞಾನವು ಕಾನೂನನ್ನು ಉಲ್ಲಂಘಿಸಲು ಅಥವಾ ಪಾಪಕೃತ್ಯಗಳಿಗೆ ಕಾರಣವಾಗಿದೆ. ನೀವು ಯಾವುದೇ ಪಾಪಕೃತ್ಯವನ್ನು ಮಾಡಿದ ತಕ್ಷಣ ಅದರ ಫಲಿತಾಂಶವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ, ಇಡೀ ಜಗತ್ತು ಅಜ್ಞಾನದಲ್ಲಿದೆ, ಮತ್ತು ಅಜ್ಞಾನದಿಂದಾಗಿ ಅವನು ಹಲವಾರು ಒಳ್ಳೆಯ ಅಥವಾ ಕೆಟ್ಟ ಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳಲ್ಲಿ ಸಿಲುಕಿದ್ದಾನೆ. ಈ ಭೌತಿಕ ಜಗತ್ತಿನಲ್ಲಿ ಒಳ್ಳೆಯದು ಏನೂ ಇಲ್ಲ; ಎಲ್ಲವೂ ಕೆಟ್ಟದ್ದೇ. ಆದ್ದರಿಂದ, ನಾವು ಒಳ್ಳೆಯದು ಮತ್ತು ಕೆಟ್ಟದ್ದನ್ನು ಸೃಷ್ಟಿಸಿದ್ದೇವೆ. ಏಕೆಂದರೆ ಭಗವದ್ಗೀತೆಯಲ್ಲಿ ಈ ಸ್ಥಳವು ದುಃಖಾಲಯಮ್ ಅಶಾಶ್ವತಮ್ (ಭ.ಗೀ 8.15) ಎಂದು ತಿಳಿದೆವು. ಈ ಸ್ಥಳವು ದುಃಖಕ್ಕಾಗಿರುವುದು. ಹಾಗಾದರೆ ನೀವು ಈ ದುಃಖಕರ ಸ್ಥಿತಿಯಲ್ಲಿ, "ಇದು ಒಳ್ಳೆಯದು" ಅಥವಾ "ಇದು ಕೆಟ್ಟದು", ಎಂದು ಹೇಗೆ ಹೇಳುತ್ತೀರಿ. ಎಲ್ಲವೂ ಕೆಟ್ಟದು. ಆದ್ದರಿಂದ, ಭೌತಿಕ, ಬದ್ಧ ಜೀವನದ ಬಗ್ಗೆ ಅರಿವಿಲ್ಲದರು, “ಇದು ಒಳ್ಳೆಯದು, ಇದು ಕೆಟ್ಟದು”, ಎಂದು ತಯಾರಿಸುತ್ತಾರೆ. ಏಕೆಂದರೆ ಅವರಿಗೆ ಇಲ್ಲಿ ಎಲ್ಲವೂ ಕೆಟ್ಟದು, ಒಳ್ಳೆಯದೇನೂ ಇಲ್ಲ ಎಂದು ತಿಳಿದಿಲ್ಲ. ಈ ಭೌತಿಕ ಪ್ರಪಂಚದ ಬಗ್ಗೆ ನಾವು ತುಂಬಾ ನಿರಾಶಾವಾದಿಯಾಗಿರಬೇಕು. ಆಗ ಅವನು ಆಧ್ಯಾತ್ಮಿಕ ಜೀವನದಲ್ಲಿ ಮುನ್ನಡೆಯಬಹುದು. ದುಃಖಾಲಯಮ್ ಅಶಾಶ್ವತಮ್ (ಭ.ಗೀ 8.15). ಈ ಸ್ಥಳವು ದುಃಖಗಳಿಂದ ತುಂಬಿದೆ, ಮತ್ತು ನೀವು ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡಿದರೆ, ನೀವು ಕೇವಲ ಶೋಚನೀಯ ಸ್ಥಿತಿಯನ್ನು ಕಾಣುತ್ತೀರಿ. ಆದ್ದರಿಂದ, ಇಡೀ ಸಮಸ್ಯೆಯೆಂದರೆ ನಾವು ನಮ್ಮ ಭೌತಿಕ ಬದ್ಧ ಜೀವನವನ್ನು ತ್ಯಜಿಸಬೇಕು ಮತ್ತು ಕೃಷ್ಣ ಪ್ರಜ್ಞೆಯಲ್ಲಿ ನಾವು ನಮ್ಮನ್ನು ಆಧ್ಯಾತ್ಮಿಕ ನೆಲೆಗೆ ಏರಿಸಿಕೊಳ್ಳಲು ಪ್ರಯತ್ನಿಸಿ ದೇವೋತ್ತಮನ ರಾಜ್ಯಕ್ಕೆ ಬಡ್ತಿ ಪಡೆಯಬೇಕು. ಯದ್ ಗತ್ವಾ ನ ನಿವರ್ತಂತೇ ತದ್ ಧಾಮಂ ಪರಮಂ ಮಮ (ಭ.ಗೀ 15.6): ಅಲ್ಲಿಗೆ ಹೋದರೆ ಯಾರೂ ಈ ದುಃಖಕರ ಜಗತ್ತಿಗೆ ಹಿಂತಿರುಗುವುದಿಲ್ಲ. ಮತ್ತು ಅದು ಭಗವಂತನ ಪರಮ ವಾಸಸ್ಥಾನ.

ಭಗವದ್ಗೀತೆಯಲ್ಲಿ ವಿವರಣೆಗಳಿವೆ. ಈ ಕೃಷ್ಣ ಪ್ರಜ್ಞೆ ಚಳುವಳಿ ಅಧಿಕೃತ ಮಾತ್ರವಲ್ಲದೆ ಮಹತ್ತರವಾದದ್ದು ಕೂಡ. ಈಗ, ಈ ಆಂದೋಲನವನ್ನು ಸ್ವೀಕರಿಸಿರುವ ಅಮೇರಿಕನ್ ಹುಡುಗರು ಮತ್ತು ಹುಡುಗಿಯರೆ ನೀವು ದಯವಿಟ್ಟು ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಮತ್ತು... ಅದು ಚೈತನ್ಯ ಮಹಾಪ್ರಭು ಮತ್ತು ನನ್ನ ಗುರು ಮಹಾರಾಜರ ಧ್ಯೇಯವಾಗಿದ್ದು, ನಾವು ಕೂಡ ಶಿಷ್ಯ ಪರಂಪರೆಯ ಮೂಲಕ ಸಂಕಲ್ಪವನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನೀವು ನನಗೆ ಸಹಾಯ ಮಾಡಲು ಮುಂದೆ ಬಂದಿದ್ದೀರಿ. ನಿಮ್ಮೆಲ್ಲರನ್ನೂ ಬೇಡಿಕೊಳ್ಳುತ್ತೇನೆ, ನಾನು ಮರೆಯಾಗುತ್ತೇನೆ ಆದರೆ ನೀವಿರುತ್ತೀರಿ. ಈ ಆಂದೋಲನವನ್ನು ಮುಂದುವರಿಸುವುದನ್ನು ಕೈಬಿಡಬೇಡಿ. ಆಗ ನೀವು ಚೈತನ್ಯ ಮಹಾಪ್ರಭು ಹಾಗು ಶ್ರೀ ಶ್ರೀಮದ್‌ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ ಪ್ರಭುಪಾದರಿಂದ ಆಶೀರ್ವದಿಸಲ್ಪಡುತ್ತೀರಿ.

ತುಂಬಾ ಧನ್ಯವಾದಗಳು.