KN/Prabhupada 0224 - ನಿಮ್ಮ ದೊಡ್ಡ ಕಟ್ಟಡವನ್ನು ದೋಷಯುಕ್ತ ಅಡಿಪಾಯದ ಮೇಲೆ ನಿರ್ಮಿಸುತ್ತಿದ್ದೀರಿ



Arrival Address -- Mauritius, October 1, 1975

ತತ್ವಶಾಸ್ತ್ರವು ಮಾನಸಿಕ ಊಹೆಯಲ್ಲ. ಇತರ ಎಲ್ಲಾ ವಿಜ್ಞಾನಗಳನ್ನು ಉದ್ಭವಿಸುವ ಪ್ರಮುಖ ವಿಜ್ಞಾನವೇ ತತ್ವಶಾಸ್ತ್ರ. ಅದೇ ತತ್ವಶಾಸ್ತ್ರ. ಆದ್ದರಿಂದ, ನಮ್ಮ ಕೃಷ್ಣ ಪ್ರಜ್ಞೆಯು ಈ ವಿಜ್ಞಾನಗಳ ವಿಜ್ಞಾನವಾದ ತತ್ವಶಾಸ್ತ್ರದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಮೊದಲು, “ನೀವು ಏನಾಗಿದ್ದೀರಿ? ನೀವು ಈ ದೇಹನಾ ಅಥವಾ ಈ ದೇಹದಿಂದ ಭಿನ್ನರಾಗಿದ್ದೀರಾ?”, ಎಂದು ತಿಳಿಯುವುದು. ಇದು ಅತ್ಯಗತ್ಯ. ಮತ್ತು ನೀವು ನಿಮ್ಮ ದೊಡ್ಡ ಕಟ್ಟಡವನ್ನು ದೋಷಯುಕ್ತ ಅಡಿಪಾಯದ ಮೇಲೆ ನಿರ್ಮಿಸುವುದನ್ನು ಮುಂದುವರಿಸಿದರೆ ಅದು ಉಳಿಯುವುದಿಲ್ಲ. ಅಪಾಯವಿರುತ್ತದೆ. ಆದ್ದರಿಂದ, ಆಧುನಿಕ ನಾಗರಿಕತೆಯು, “ನಾನು ಈ ದೇಹ”, ಎಂಬ ದೋಷಯುಕ್ತ ಕಲ್ಪನೆಯನ್ನು ಆಧರಿಸಿದೆ. ನಾನು ಭಾರತೀಯ, ನಾನು ಅಮೇರಿಕನ್, ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ - ಇವೆಲ್ಲವೂ ದೈಹಿಕ ಪರಿಕಲ್ಪನೆಯಾಗಿದೆ. “ನಾನು ಈ ದೇಹವನ್ನು ಕ್ರಿಶ್ಚಿಯನ್ ತಂದೆ ತಾಯಿಯಿಂದ ಪಡೆದಿರುವುದರಿಂದ, ನಾನು ಕ್ರಿಶ್ಚಿಯನ್.” ಆದರೆ ನಾನು ಈ ದೇಹವಲ್ಲ. "ನಾನು ಈ ದೇಹವನ್ನು ಹಿಂದೂ ತಂದೆ ತಾಯಿಯಿಂದ ಪಡೆದಿರುವುದರಿಂದ, ನಾನು ಹಿಂದೂ." ಆದರೆ ನಾನು ಈ ದೇಹವಲ್ಲ. ಆದ್ದರಿಂದ, ಆಧ್ಯಾತ್ಮಿಕ ಅರಿವಿನ ಮೂಲ ತತ್ವವೆಂದರೆ, “ನಾನು ಈ ದೇಹವಲ್ಲ; ನಾನು ಆತ್ಮ”, ಅಹಂ ಬ್ರಹ್ಮಾಸ್ಮಿ. ಇದೇ ವೇದದ ಆದೇಶ: “ನೀನು ಆತ್ಮ ಎಂದು ತಿಳಿಯಲು ಪ್ರಯತ್ನಿಸು; ನೀನು ಈ ದೇಹವಲ್ಲ.” ಇದನ್ನು ಅರಿಯಲು ಯೋಗಾಭ್ಯಾಸ ಮಾಡಲಾಗುತ್ತದೆ. ಯೋಗ ಇಂದ್ರಿಯ ಸಂಯಮಃ. ಇಂದ್ರಿಯಗಳನ್ನು, ವಿಶೇಷವಾಗಿ ಮನಸ್ಸನ್ನು, ನಿಯಂತ್ರಿಸುವ ಮೂಲಕ... ಮನಸ್ಸು ಇಂದ್ರಿಯಗಳ ಮುಖ್ಯಸ್ಥ ಅಥವಾ ನಾಯಕ. ಮನಃ-ಷಷ್ಠಾನೀಂದ್ರಿಯಾಣಿ ಪ್ರಕೃತಿ-ಸ್ಥಾನಿ ಕರ್ಷತಿ (ಭ.ಗೀ 15.7). ದೇಹಾಭಿಮಾನದ ತಪ್ಪು ಕಲ್ಪನೆಯಲ್ಲಿ ನಾವು ಈ ಮನಸ್ಸು ಮತ್ತು ಇಂದ್ರಿಯಗಳೊಂದಿಗೆ ಅಸ್ತಿತ್ವದ ಹೋರಾಟಕ್ಕೆ ಒಳಗಾಗುತ್ತಿದ್ದೇವೆ. ಆದ್ದರಿಂದ, ನಾವು ಇಂದ್ರಿಯಗಳನ್ನು ನಿಯಂತ್ರಿಸುವ ಮೂಲಕ ನಮ್ಮ ಮನಸ್ಸನ್ನು ಕೇಂದ್ರೀಕರಿಸಿದರೆ ಕ್ರಮೇಣ ತಿಳಿಯಬಹುದು. ಧ್ಯಾನಾವಸ್ಥಿತ-ತದ್-ಗತೇನ ಮನಸಾ ಪಶ್ಯಂತಿ ಯಮ್ ಯೋಗಿನಃ (ಶ್ರೀ.ಭಾ 12.13.1). ಯೋಗಿಗಳು ಪರಮಾತ್ಮನಾದ ವಿಷ್ಣುವನ್ನು ಧ್ಯಾನಿಸುವ ಪ್ರಕ್ರಿಯೆಯ ಮೂಲಕ ಆತ್ಮವನ್ನು ಅರಿತುಕೊಳ್ಳುತ್ತಾರೆ. ಆತ್ಮಸಾಕ್ಷಾತ್ಕಾರವು ಮಾನವ ಜೀವನದ ಪ್ರಮುಖ ಗುರಿಯು. ಆದ್ದರಿಂದ, ಆತ್ಮಸಾಕ್ಷಾತ್ಕಾರದ ಆರಂಭವೆಂದರೆ, “ನಾನು ಈ ದೇಹವಲ್ಲ; ನಾನು ಆತ್ಮ”, ಎಂದು ತಿಳಿಯುವುದು. ಅಹಂ ಬ್ರಹ್ಮಾಸ್ಮಿ.

ಈ ವಿಷಯಗಳನ್ನು ಭಗವದ್ಗೀತೆಯಲ್ಲಿ ಉತ್ತಮವಾಗಿ ವಿವರಿಸಲಾಗಿದೆ. ನಾವು ಭಗವದ್ಗೀತೆಯನ್ನು ಎಚ್ಚರಿಕೆಯಿಂದ, ಸರಿಯಾದ ಮಾರ್ಗದರ್ಶನದಲ್ಲಿ ಓದಿದರೆ ಯಾವುದೇ ತೊಂದರೆಯಿಲ್ಲದೆ, "ನಾನು ಈ ದೇಹವಲ್ಲ, ನಾನು ಆತ್ಮ” ಎಂಬುದು ಸ್ಪಷ್ಟವಾಗುತ್ತದೆ. ನನ್ನ ವ್ಯವಹಾರವು ಈ ದೈಹಿಕ ಪರಿಕಲ್ಪನೆಗಿಂತ ಭಿನ್ನವಾಗಿದೆ. ನಾನು ಈ ದೇಹವನ್ನು ಆತ್ಮ ಎಂದು ಸ್ವೀಕರಿಸಿ ಎಂದಿಗೂ ಆನಂದಿಸುವುದಿಲ್ಲ. ಅದು ಜ್ಞಾನದ ತಪ್ಪು ಅಡಿಪಾಯ", ಎಂಬುದು ಸ್ಪಷ್ಟವಾಗುತ್ತದೆ. ಈ ರೀತಿಯಾಗಿ ನಾವು ಪ್ರಗತಿ ಸಾಧಿಸಿದರೆ, ಅಹಂ ಬ್ರಹ್ಮಾಸ್ಮಿ, "ನಾನು ಆತ್ಮ", ಎಂದು ಅರಿವಾಗುತ್ತದೆ. ಹಾಗಾದರೆ ನಾನು ಎಲ್ಲಿಂದ ಬಂದಿದ್ದೇನೆ? ಭಗವದ್ಗೀತೆಯಲ್ಲಿ ಎಲ್ಲವನ್ನೂ ವಿವರಿಸಲಾಗಿದೆ. ಭಗವಂತ ಕೃಷ್ಣ ಹೇಳುತ್ತಾನೆ, ಮಾಮೈವಾಂಶೋ ಜೀವ-ಭೂತಃ (ಭ.ಗೀ 15.7): “ಈ ಜೀವಿಗಳು ನನ್ನ ಭಾಗಾಂಶ, ತುಣುಕು, ಅಥವಾ ಸೂಕ್ಷ್ಮ ಕಿಡಿಗಳು.” ದೊಡ್ಡ ಬೆಂಕಿ ಮತ್ತು ಸಣ್ಣ ಬೆಂಕಿಯಂತೆ, ಇವೆರಡೂ ಬೆಂಕಿ, ಆದರೆ ದೊಡ್ಡ ಬೆಂಕಿ ಮತ್ತು ಸಣ್ಣ ಬೆಂಕಿ... ಇಲ್ಲಿಯವರೆಗೆ ಬೆಂಕಿಯ ಗುಣಕ್ಕೆ ಸಂಬಂಧಿಸಿದಂತೆ, ಭಗವಂತ ಮತ್ತು ನಾವು ಒಂದೇ. ಸ್ವ-ಅಧ್ಯಯನ ಮುಖಾಂತರ ಭಗವಂತನ ಅಧ್ಯಯನ ಸಾಧ್ಯ ಎಂದು ನಾವು ಅರಿತುಕೊಳ್ಳಬಹುದು. ಅದು ಕೂಡ ಮತ್ತೊಂದು ಧ್ಯಾನ. ಆದರೆ, ಪರಿಪೂರ್ಣ ಅರಿವೆಂದರೆ, "ಗುಣಾತ್ಮಕವಾಗಿ ನಾನು ಭಗವಂತನ ಮಾದರಿ, ಅಥವಾ ಅದೇ ಗುಣ, ಆದರೆ ಅವನು ಶ್ರೇಷ್ಠ, ನಾನು ಅಲ್ಪ”, ಎಂಬುದು. ಅದೇ ಪರಿಪೂರ್ಣ ಅರಿವು. ಅಣು, ವಿಭು; ಬ್ರಹ್ಮನ್, ಪರ-ಬ್ರಹ್ಮನ್; ಈಶ್ವರ- ಪರಮೇಶ್ವರ, ಇದು ಪರಿಪೂರ್ಣ ಅರಿವು. ಗುಣಾತ್ಮಕವಾದ ಏಕತ್ವವಿದ್ದರೂ ನಾನು ಪರಮಾತ್ಮನಲ್ಲ. ವೇದಗಳಲ್ಲಿ ಹೇಳಲಾಗಿದೆ, ನಿತ್ಯೋ ನಿತ್ಯಾನಾಂ ಚೇತನಶ್‌ ಚೇತನಾನಾಂ (ಕಠ ಉಪನಿಷತ್ತು 2.2.13). ನಾವು ನಿತ್ಯ, ಸನಾತನ; ಭಗವಂತನೂ ಸನಾತನ. ನಾವು ಜೀವಿಗಳು; ಭಗವಂತನೂ ಜೀವಿ. ಆದರೆ ಅವನು ಪರಮ ಜೀವಿ; ಅವನು ಪರಮ ಸನಾತನ. ನಾವು ಸನಾತನರು, ಆದರೆ ನಾವು ಪರಮ ಅಲ್ಲ. ಏಕೆ? ಏಕೋ ಯೋ ಬಹುನಾಂ ವಿದಧಾತಿ ಕಾಮಾನ್. ನಮಗೆ ನಾಯಕನ ಅಗತ್ಯವಿರುವಂತೆ, ಅವನು ಸರ್ವೋಚ್ಚ ನಾಯಕ. ಅವನು ಪಾಲಕ. ಅವನು ಜಗತ್-ಪೋಷಕ. ಅವನು ಎಲ್ಲರ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾನೆ. ಆಫ್ರಿಕಾದಲ್ಲಿ ಆನೆಗಳನ್ನು ಕಾಣಬಹುದು. ಅವುಗಳಿಗೆ ಯಾರು ಆಹಾರವನ್ನು ಒದಗಿಸುತ್ತಿದ್ದಾರೆ? ನಿಮ್ಮ ಕೋಣೆಯ ರಂಧ್ರದೊಳಗೆ ಲಕ್ಷಾಂತರ ಇರುವೆಗಳಿವೆ. ಅವುಗಳಿಗೆ ಯಾರು ಉಣಿಸುತ್ತಿದ್ದಾರೆ? ಏಕೋ ಯೋ ಬಹುನಾಂ ವಿದಧಾತಿ ಕಾಮಾನ್. ಈ ರೀತಿಯಾಗಿ ನಮ್ಮನ್ನು ನಾವು ಅರಿತುಕೊಂಡರೆ ಅದುವೇ ಆತ್ಮಸಾಕ್ಷಾತ್ಕಾರ.