KN/Prabhupada 0058 - ಆಧ್ಯಾತ್ಮಿಕ ದೇಹವೆಂದರೆ ಶಾಶ್ವತ ಜೀವನ
Lecture on BG 2.14 -- Mexico, February 14, 1975
ವಾಸ್ತವಿಕವಾಗಿ, ಆಧ್ಯಾತ್ಮಿಕ ದೇಹವೆಂದರೆ ಆನಂದ ಹಾಗು ಜ್ಞಾನದ ಶಾಶ್ವತ ಜೀವನ. ನಮಗಿರುವ ಈಗಿನ ದೇಹವು, ಭೌತಿಕ ದೇಹವು, ಅದು ಅಮರವೂ ಅಲ್ಲ, ಆನಂದ ಹಾಗು ಜ್ಞಾನದಿಂದ ಕೂಡಿರುವುದೂ ಅಲ್ಲ. ನಮ್ಮೆಲ್ಲರಿಗೂ ಗೊತ್ತು ಈ ದೇಹವು ಕೊನೆಯಾಗುತ್ತದೆ ಎಂದು. ಹಾಗು ಇದು ಅಜ್ಞಾನದಿಂದ ತುಂಬಿದೆ. ಈ ಗೋಡೆಯಿಂದ ಆಚೆಗೆ ಏನಿದೆಯೆಂದು ನಮಗೆ ಹೇಳಲಾಗುವುದಿಲ್ಲ. ನಮಗೆ ಇಂದ್ರಿಯಗಳಿವೆ ಆದರೆ ಅವೆಲ್ಲವು ಸೀಮಿತ ಮತ್ತು ಅಪರಿಪೂರ್ಣ. ಕೆಲವೊಮ್ಮೆ ನಮ್ಮ ದೃಷ್ಟಿಯ ಗರ್ವದಿಂದ ಸವಾಲು ಹಾಕುತ್ತೇವೆ, “ನನಗೆ ದೇವರನ್ನು ತೋರಿಸಬಲ್ಲೆಯಾ?” ಎಂದು. ಆದರೆ ಬೆಳಕು ಹೋಯಿತೆಂದರೆ ನಮ್ಮ ದೃಷ್ಟಿಯ ಶಕ್ತಿಯೂ ಹೋಗುತ್ತದೆ ಎಂಬುದನ್ನು ನಾವು ಮರೆಯುತ್ತೇವೆ. ಆದ್ದರಿಂದ ನಮ್ಮ ಇಡಿ ದೇಹವು ಅಪರಿಪೂರ್ಣವಾಗಿದೆ ಹಾಗು ಅಜ್ಞಾನದಿಂದ ತುಂಬಿದೆ. ಇದಕ್ಕೆ ತದ್ವಿರುದ್ದವಾಗಿ, ಆಧ್ಯಾತ್ಮಿಕ ದೇಹವು ಜ್ಞಾನದಿಂದ ತುಂಬಿದೆ. ಅಂತಹ ದೇಹವನ್ನು ನಾವು ಮರುಜನ್ಮದಲ್ಲಿ ಪಡೆಯಬಹುದು, ಮತ್ತು ಹೇಗೆ ಅಂತಹ ದೇಹವನ್ನು ಪಡೆಯಬಹುದೆಂದು ನಮ್ಮನು ನಾವೇ ವಿಕಸಿಸಿಕೊಳ್ಳಬೇಕು. ನಾವು ನಮ್ಮ ಮುಂದಿನ ದೇಹ ಉನ್ನತ ಲೋಕಗಳಲ್ಲಿ ಸಿಗುವಹಾಗೆ ವಿಕಸಿಸಿಕೊಳ್ಳಬಹುದು, ಅಥವ ಮುಂದಿನ ದೇಹ ನಾಯಿಗಳು ಬೆಕ್ಕುಗಳಂತಹ ದೇಹವನ್ನು ಪಡೆಯಬಹುದು, ಅಥವ ಸತ್, ಚಿತ್, ಆನಂದದ ದೇಹವನ್ನು ಪಡೆಯಬಹುದು. ಆದ್ದರಿಂದ ಉತ್ತಮ ಬುದ್ದಿವಂತನಾದವನು ಸತ್, ಚಿತ್, ಆನಂದದಿಂದ ಕೂಡಿರುವ ದೇಹವನ್ನು ಪಡೆಯಲು ಪ್ರಯತ್ನಿಸುತ್ತಾನೆ. ಭಗವದ್ಗೀತೆಯಲ್ಲಿ ಇದನ್ನು ವಿವರಿಸಲಾಗಿದೆ. ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ (ಭ.ಗೀ 15.6). ಆ ಸ್ಥಳಕ್ಕೆ, ಆ ಗ್ರಹಕ್ಕೆ, ಅಥವ ಆ ಆಕಾಶಕ್ಕೆ ನೀನು ಹೋದರೆ ಮತ್ತೆ ಈ ಐಹಿಕ ಲೋಕಕ್ಕೆ ಎಂದೂ ಮರಳಿ ಬರುವುದಿಲ್ಲ. ಈ ಐಹಿಕ ಲೋಕದಲ್ಲಿ, ನೀವು ಅತಿ ಉನ್ನತವಾದ ಲೋಕಗಳಿಗೆ ಮೇಲೆರಿದರೂ ಕೂಡ, ಅಂದರೆ ಬ್ರಹ್ಮ ಲೋಕಕ್ಕೆ, ಮತ್ತೆ ಇಲ್ಲಿಗೆ ಮರಳಿ ಬರಬೇಕು. ಆದ್ದರಿಂದ ನೀವು ಆಧ್ಯಾತ್ಮಿಕ ಲೋಕಕ್ಕೆ ಸೇರಬೇಕೆಂದು ನಿಮ್ಮ ಶಕ್ತಿಗೆ ಮೀರಿ ಪ್ರಯತ್ನಿಸಿದರೆ, ಮರಳಿ ಮನೆಗೆ ಹೋಗಬೇಕೆಂದು, ಮರಳಿ ಭಗವದ್ಧಾಮಕ್ಕೆ, ಆಗ ನೀವು ಈ ಭೌತಿಕ ದೇಹವನ್ನು ಇನ್ನೆಂದಿಗೂ ಪಡೆಯುವುದಿಲ್ಲ.