KN/Prabhupada 0059 - ನಿನ್ನ ವಾಸ್ತವಿಕ ವ್ಯವಹಾರವನ್ನು ಮರೆಯಬೇಡಿ



Lecture on BG 2.14 -- Mexico, February 14, 1975

ಹಾಗಾದರೆ ಪ್ರಶ್ನೆ ಏನೆಂದರೆ, “ನಾವು ಸನಾತನರಾದರೆ, ಬದುಕಲ್ಲಿ ಇಷ್ಟು ಸಂಕಷ್ಟಕರ ಸ್ಥಿತಿಗಳೇಕಿವೇ? ಹಾಗು ನಾವೇಕೆ ಬಲವಂತವಾಗಿ ಮೃತರಾಗಬೇಕು?” ಆದ್ದರಿಂದ ಇದು ಒಂದು ಬುದ್ದಿವಂತ ಪ್ರಶ್ನೆ, ”ನಾವು ಸನಾತನರಾದರೆ ಜನ್ಮ, ಮೃತ್ಯು, ಜರ, ವ್ಯಾದಿಗೆ ಒಳಗಾಗಿರುವ ಈ ಭೌತಿಕ ಶರೀರದಲ್ಲಿ ಏಕೆ ಉಳಿಯಬೇಕು?” ಆದ್ದರಿಂದ ಭೌತಿಕ ದೇಹವೇ ಈ ಬದುಕಿನ ಸಂಕಷ್ಟಕರ ಸ್ಥಿತಿಗೆ ಕಾರಣವೆಂದು ಕೃಷ್ಣನು ಬೋಧಿಸುತ್ತಾನೆ. ಯಾರು ಕರ್ಮಿಗಳೋ, ಅಂದರೆ ಯಾರು ಇಂದ್ರಿಯ ತೃಪ್ತಿಯಲ್ಲಿ ತೊಡಗಿರುವರೋ ಅವರೇ ಕರ್ಮಿಗಳು. ಕರ್ಮಿಗಳಿಗೆ ಭವಿಷ್ಯದ ಚಿಂತೆಯಿಲ್ಲ; ಅವರಿಗೆ ಜೀವನದ ತಕ್ಷಣ ಸೌಲಭ್ಯಗಳುಬೇಕು. ಪೋಷಕರ ಗಮನವಿಲ್ಲದ ಮಗು ಹೇಗೆ ಇಡಿ ದಿವಸ ಆಟವಾಡುತ್ತಿರುತ್ತಾನೋ, ಹಾಗು ಭವಿಷ್ಯದ ಬಗ್ಗೆ ಚಿಂತಿಸದೆ, ಶಿಕ್ಷಣ ಪಡೆಯುದಿಲ್ಲವೋ ಹಾಗೆ. ಆದರೆ ಮಾನವ ರೂಪದಲ್ಲಿ, ನಾವು ನಿಜವಾಗಿಯು ಅರಿವುಳ್ಳವರಾಗಿದ್ದರೆ, ಯಾವ ಜೀವನದಲ್ಲಿ ಅಥವ ದೇಹಕ್ಕೆ ಇನ್ನೆಂದಿಗು ಜನ್ಮ, ಮೃತ್ಯು, ಜರ, ವ್ಯಾದಿ ಇಲ್ಲವೋ ಅದನ್ನು ಪಡೆಯಲು ನಾವು ಉತ್ತಮ ಪ್ರಯತ್ನ ಮಾಡಬೇಕು.

ಆದ್ದರಿಂದ ಜನರಿಗೆ ಆ ಉದ್ದೇಶವನ್ನು ತಿಳಿಸಲೆಂದೇ ಈ ಕೃಷ್ಣ ಪ್ರಜ್ಞೆ ಆಂದೋಲನ. ಒಬ್ಬ ಕೇಳಬಹುದು, “ನಾನು ಕೃಷ್ಣ ಪ್ರಜ್ಞೆಗೆಂದು ಸಮರ್ಪಿಸಿಕೊಂಡರೆ, ನನ್ನ ಭೌತಿಕ ಅವಶ್ಯಕತೆಗಳು ಹೇಗೆ ಈಡೆರುತ್ತವೆ?” ಅದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ. ಯಾರು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿರುವರೋ ಅವರ ಜೀವನದ ಅವಶ್ಯಕತೆಗಳನ್ನು ಕೃಷ್ಣನೇ ಈಡೆರಿಸುತ್ತಾನೆ. ಎಲ್ಲರ ಪೋಷಣೆಯನ್ನು ಕೃಷ್ಣನು ಮಾಡುತ್ತಿದ್ದಾನೆ. ಏಕೋ ಯೋ ಬಹೂನಾಮ್ ವಿದಧಾತಿ ಕಾಮಾನ್: “ಆ ಒಬ್ಬ ಪರಮಪುರುಷ ಎಲ್ಲ ಜೀವಾತ್ಮಗಳ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾನೆ.” ಆದ್ದರಿಂದ ಯಾವ ಭಕ್ತನು ಮರಳಿ ತನ್ನ ಮನೆಗೆ, ಮರಳಿ ಭಗವದ್ಧಾಮಕ್ಕೆ, ಹಿಂತಿರುಗಲು ಪ್ರಯತ್ನಿಸುತ್ತಿದ್ದಾನೋ, ಅವನಿಗೆ ಯಾವ ಅಭಾವವವೂ ಇರುವುದಿಲ್ಲ. ಭರವಸೆಯಿಡು. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ ತೇಷಾಂ ಸತತ ಯುಕ್ತಾನಾಮ್ ಯೋಗ ಕ್ಷೇಮಂ ವಹಾಮಿ ಅಹಮ್ (ಭ.ಗೀ 9.22): “ಸದಾ ನನ್ನ ಸೇವೆಯಲ್ಲಿ ತೊಡಗಿರುವ ಭಕ್ತನ ಜೀವನದ ಎಲ್ಲಾ ಅವಶ್ಯಕತೆಗಳನ್ನು ನಾನು ಪೂರೈಸುತ್ತೇನೆ.” ಒಂದು ವ್ಯವಹಾರಿಕ ಉದಾಹರಣೆಯೆಂದರೆ ಈ ಕೃಷ್ಣ ಪ್ರಜ್ಞೆ ಆಂದೋಲನಕ್ಕೆ ಸೇರಿದ ನೂರು ಕೇಂದ್ರಗಳಿವೆ ಹಾಗು ಪ್ರತಿ ದೇವಸ್ಥಾನದಲ್ಲು, ಕಡಿಮೆಯೆಂದರೆ 25ರಿಂದ 250 ಭಕ್ತಾದಿಗಳಿದ್ದಾರೆ. ಆದರೆ ನಮಗೆ ಸ್ಥಿರ ಆದಾಯವಿಲ್ಲ, ಆದರೂ ಪ್ರತಿ ಶಾಖೆಯಲ್ಲಿ ತಿಂಗಳಿಗೆ ಎಂಬತ್ತು ಸಾವಿರ ಡಾಲರ್ ಖರ್ಚುಮಾಡುತ್ತೇವೆ. ಕೃಷ್ಣನ ಅನುಗ್ರಹದಿಂದ ನಮಗೆ ಯಾವ ಅಭಾವವೂ ಇಲ್ಲ. ಪ್ರತಿಯೊಂದೂ ಪೂರೈಸಲಾಗಿದೆ. ಕೆಲವೊಮ್ಮೆ ಜನರಿಗೆ ಆಶ್ಚರ್ಯವಾಗುತ್ತದೆ, “ಇವರು ಕೆಲಸ ಮಾಡುವುದ್ದಿಲ್ಲ, ಯಾವ ವೃತ್ತಿಯನ್ನೂ ಸ್ವೀಕರಿಸಿಲ್ಲ, ಕೇವಲ ಹರೇ ಕೃಷ್ಣ ಜಪಿಸುತ್ತಿರುತ್ತಾರೆ. ಹೇಗೆ ಜೀವನ ನಡೆಸುತ್ತಾರೆ?” ಅದು ಪ್ರಶ್ನೆಯೇ ಅಲ್ಲ. ಬೆಕ್ಕು ಹಾಗು ನಾಯಿಗಳೂ ಕೂಡ ದೈವಾನುಗ್ರಹದಿಂದ ಬಾಳುತ್ತಿರಬೇಕಾದರೆ, ಭಕ್ತರು ಕೂಡ ದೈವಾನುಗ್ರಹದಿಂದ ಅತಿ ಆರಾಮದಾಯಕವಾಗಿ ಬದುಕಬಹುದು.

ಅಂತ ಪ್ರಶ್ನೆಯೇಯಿಲ್ಲ. ಆದರೆ ಯಾರಾದರು, “ನಾನು ಕೃಷ್ಣ ಪ್ರಜ್ಞೆಯಲ್ಲಿದ್ದೇನೆ, ಆದರೂ ಬಹಳ ಸಂಕಷ್ಟಟಗಳಿಂದ ನರಳುತ್ತಿದ್ದೇನೆ” ಎಂದು ಆಲೋಚಿಸಿದರೆ ಅವರೆಲ್ಲರಿಗು, ಹಾಗು ನಮಗೂ, ಬೋಧನೆ ಏನೆಂದರೆ, “ಮಾತ್ರಾ-ಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖ-ದು:ಖ-ದಾಹ (ಭ.ಗೀ 2.14).” ಈ ಸುಖ ಹಾಗು ದುಃಖ ಬೇಸಿಗೆಕಾಲ ಮತ್ತು ಶೀತಕಾಲದ ಹಾಗೆ. ಶೀತಕಾಲದಲ್ಲಿ ನೀರು ಬಹಳ ಯಾತನೆ ಕೊಡುತ್ತದೆ, ಆದರೆ ಬೇಸಿಗೆಕಾಲದಲ್ಲಿ ತಣಿಸುತ್ತದೆ. ಹಾಗಾದರೆ ನೀರಿನ ಪ್ರಭಾವವೇನು? ಯಾತನೆಯೋ ತಂಪೋ? ಅದು ಯಾತನೆಯೂ ಅಲ್ಲ, ತಂಪೂ ಅಲ್ಲ, ಆದರೆ ಕೆಲ ಋತುಗಳಲ್ಲಿ ಚರ್ಮದ ಸಂರ್ಪಕದಿಂದ ಅದು ಯಾತನೆಯೋ ಅಥವ ತಂಪಾಗಿಯೋ ಅನಿಸುತ್ತದೆ. ಇಂಥಹ ಯಾತನೆ ಅಥವ ತಂಪನ್ನು ಇಲ್ಲಿ ವಿವರಿಸಲಾಗಿದೆ: “ಅವು ಬಂದು ಹೋಗುತ್ತವೆ. ಅವು ಶಾಶ್ವತವಲ್ಲ.” ಆಗಮ ಅಪಾಯಿನಹ ಅನಿತ್ಯಹ (ಭ.ಗೀ 2.14), “ಅವು ಬಂದು ಹೋಗುತ್ತವೆ. ಅವು ಶಾಶ್ವತವಲ್ಲ.” ಆದ್ದರಿಂದ ಕೃಷ್ಣನು ಉಪದೇಶಿಸುತ್ತಾನೆ: “ತಾಮ್ಸ್ ತಿತಿಕ್ಷಸ್ವ ಭಾರತ” (ಭ.ಗೀ 2.14). ಸುಮ್ಮನೆ ಸಹಿಸಿಕೋ. ಆದರೆ ನಿನ್ನ ವಾಸ್ತವಿಕ ವ್ಯವಹಾರವನ್ನು ಮರೆಯಬೇಡಿ, ಕೃಷ್ಣ ಪ್ರಜ್ಞೆ. ಈ ಭೌತಿಕ ಯಾತನೆ ಹಾಗು ವಿನೋದಗಳಿಗೆ ಗಮನ ಕೊಡಬೇಡ.