KN/Prabhupada 1068 - ಪ್ರಕೃತಿಯ ಗುಣಗಳಿಗೆ ಅನುಸಾರವಾಗಿ 3 ರೀತಿಯ ಕ್ರಿಯೆಗಳಿವೆ
660219-20 - Lecture BG Introduction - New York
ಭಗವಂತನು ಪೂರ್ಣನು, ಪರಿಪೂರ್ಣನು. ಅವನು ಐಹಿಕ ಪ್ರಕೃತಿಯ ನಿಯಮಗಳಿಗೆ ಒಳಗಾಗುವ ಸಾಧ್ಯತೆಯೇ ಇಲ್ಲ. ಆದುದರಿಂದ ಭಗವಂತನನ್ನು ಬಿಟ್ಟು ಬೇರೆ ಯಾರು ಈ ಜಗತ್ತಿನಲ್ಲಿರುವ ವಸ್ತುಗಳ ಒಡೆಯನಾಗಲು ಸಾಧ್ಯವಿಲ್ಲ ಎಂದು ತಿಳಿಯುವಷ್ಟು ಬುದ್ಧಿ ನಮಗಿರಬೇಕು. ಇದನ್ನು ಭಗವದ್ಗೀತೆಯಲ್ಲಿ ವಿವರಿಸಿದ್ದಾರೆ. ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ಥತೆ ಇತಿ ಮತ್ವಾ ಭಜಂತೆ ಮಾಂ ಬುಧಾ ಭಾವಾ ಸಮನ್ವಿತಃ (ಭ ಗೀತೆ 10.8)
ಭಗವಂತ ಮೂಲ ಸೃಷ್ಟಿಕರ್ತ. ಅವನು ಬ್ರಹ್ಮನನ್ನು ಸೃಷ್ಟಿಸಿದಾತ. ಅವನು ಬ್ರಹ್ಮನನ್ನು ಸೃಷ್ಟಿಸಿದಾತ ಎಂದು ವಿವರಿಸಲಾಗಿದೆ. 11ನೇ ಅಧ್ಯಾಯದಲ್ಲಿ ಭಗವಂತನನ್ನು ಪ್ರಪಿತಾಮಹಾ ಎಂದಿದ್ದಾರೆ (ಭ ಗೀತೆ 11.39). ಏಕೆಂದರೆ ಬ್ರಹ್ಮನನ್ನು ಪಿತಾಮಹಾ ಎಂದಿದ್ದಾರೆ. ಮತ್ತು ಭಗವಂತ ಪಿತಾಮಹನ ಸೃಷ್ಟಿಕರ್ತ. ಆದುದರಿಂದ ಯಾರೂ ಯಾವುದೇ ವಸ್ತುವಿಗೂ ತಾನು ಒಡೆಯ ಎಂದು ಹೇಳಿಕೊಳ್ಳಬಾರದು. ತನ್ನ ಜೀವನ ನಿರ್ವಹಣೆಗಾಗಿ ತನ್ನ ಭಾಗ ಎಂದು ಭಗವಂತನು ಪ್ರತ್ಯೇಕ ತೆಗೆದಿಟ್ಟದ್ದು ಎಂದೇ ವಸ್ತುಗಳನ್ನು ಸ್ವೀಕರಿಸಬೇಕು. ಭಗವಂತನ ವಸ್ತುಗಳನ್ನು ಹೇಗೆ ಉಪಯೋಗಿಸಬೇಕೆಂಬುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಿದ್ದಾರೆ. ಅರ್ಜುನನು ಮೊದಲಿಗೆ ತಾನು ಯುದ್ಧ ಮಾಡುವುದಿಲ್ಲವೆಂದು ನಿರ್ಧರಿಸಿದ, ಅದು ಅವನದೇ ನಿರ್ಣಯ. ತನ್ನ ಬಂಧುಗಳನ್ನು ಕೊಂದ ನಂತರ ರಾಜ್ಯವನ್ನು ಸಂತೋಷದಿಂದ ಅನುಭವಿಸಲು ಸಾಧ್ಯವಿಲ್ಲ ಎಂದನು. ಇದು ದೇಹದ ಆಧಾರದ ಮೇಲೆ ಮಾಡಿದ ನಿರ್ಣಯ. ಏಕೆಂದರೆ ಅರ್ಜುನನು ನಾನು ಈ ದೇಹ, ಮತ್ತು ದೇಹದ ಸಂಬಂದಿಕರು, ಸಹೋದರ, ಭಾವಂದಿರು, ಮಾವಂದಿರು, ತನ್ನ ತಾತ, ಇವರೆಲ್ಲ ದೇಹದ ವಿಸ್ತರಣೆಗಳು, ಆದ್ದರಿಂದ ತನ್ನ ದೇಹದ ಬೇಡಿಕೆಗಳನ್ನು ಈಡೇರಿಸಲು ಬಯಸಿದ. ಈ ಅಭಿಪ್ರಾಯವನ್ನು ಬದಲಾಯಿಸಲು ಇಡೀ ಭಗವದ್ಗೀತೆಯನ್ನು ಹೇಳಲಾಯಿತು. ನಂತರ ಅರ್ಜುನನು ಭಗವಂತನ ನಿರ್ದೇಶನದಲ್ಲಿ ಕೆಲಸ ಮಾಡಲು ಒಪ್ಪಿಕೊಂಡನು. ಕರಿಷ್ಯೇ ವಚನಂ ತವ ಎಂದನು (ಭ ಗೀತೆ 18.73).
ಮನುಷ್ಯರು ಈ ಜಗತ್ತಿನಲ್ಲಿರುವುದು ಬೆಕ್ಕು ನಾಯಿಗಳಂತೆ ಜಗಳವಾಡುವುದಕ್ಕಲ್ಲ. ಈ ಮನುಷ್ಯ ಜನ್ಮದ ಮುಖ್ಯತೆಯನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತನಾಗಿರಬೇಕು. ಪ್ರಾಣಿಗಳಂತೆ ಇರಬಾರದು. ಮನುಷ್ಯ ಜನ್ಮದ ಉದ್ದೇಶವನ್ನು ತಿಳಿಯಬೇಕು. ಇದನ್ನು ಎಲ್ಲಾ ವೈದಿಕ ಸಾಹಿತ್ಯಗಳಲ್ಲಿ ಹೇಳಿದೆ ಮತ್ತು ಭಗವದ್ಗೀತೇ ಇದರ ಸಾರ. ವೈದಿಕ ಸಾಹಿತ್ಯ ಇರುವುದು ಮನುಷ್ಯರಿಗೆ, ಬೆಕ್ಕು ನಾಯಿಗಳಿಗಲ್ಲ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲಬಹುದು, ಇದರಲ್ಲಿ ಪಾಪದ ಪ್ರಶ್ನೆಯೇ ಇಲ್ಲ. ಆದರೆ ಮನುಷ್ಯನು ತನ್ನ ರುಚಿಗೋಸ್ಕರ ಪ್ರಾಣಿಗಳನ್ನು ಕೊಂದರೆ ಅವನು ನಿಸರ್ಗದ ನಿಯಮಗಳನ್ನು ಮುರಿದುದರ ಹೊಣೆಯಾಗುತ್ತಾನೆ. ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಮೂರು ರೀತಿಯ ಕಾರ್ಯಗಳಿವೆ ಎಂದು ವಿವರಿಸಲಾಗಿದೆ. ಪ್ರಕೃತಿಯ ಗುಣಗಳಿಗೆ ಅನುಗುಣವಾಗಿ, ಸತ್ವಗುಣದ ಕೆಲಸಗಳು, ರಜೋಗುಣದ ಕೆಲಸಗಳು, ಮತ್ತು ತಮೋಗುಣದ ಕೆಲಸಗಳು. ಹಾಗೆಯೇ ಮೂರು ರೀತಿಯ ಆಹಾರ ಪದಾರ್ಥಗಳು ಇವೆ. ಸತ್ವಗುಣದ, ರಜೋಗುಣದ, ಮತ್ತು ತಮೋಗುಣದ ಆಹಾರ ಪದಾರ್ಥಗಳು. ಇದನ್ನೆಲ್ಲ ಸ್ಪಷ್ಟವಾಗಿ ವಿವರಿಸಿದ್ದಾರೆ. ನಾವು ಭಗವದ್ಗೀತೆಯ ಈ ನಿರ್ದೇಶನಗಳನ್ನು ಸರಿಯಾಗಿ ಪಾಲಿಸಿದರೆ, ಆಗ ನಮ್ಮ ಜೀವನ ಶುದ್ಧವಾಗಿರುತ್ತದೆ ಹಾಗೂ ನಾವು ನಮ್ಮ ಅಂತಿಮ ಗುರಿಯನ್ನು ಸಾಧಿಸಬಹುದು. ಯದ್ ಗತ್ವಾ ನ ನಿವರ್ತಂತೆ ತದ್ ಧಾಮ ಪರಮಂ ಮಮ (ಭ ಗೀತೆ 15.6).
ನಾವು ಈ ಭೌತಿಕ ಆಕಾಶದಾಚೆ ಇರುವ ಆಧ್ಯಾತ್ಮಿಕ (ಸನಾತನ) ಆಕಾಶವನ್ನು ಸೇರಬೇಕು ಎಂದು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಈ ಭೌತಿಕ ಆಕಾಶದಲ್ಲಿ ಎಲ್ಲವೂ ಅಶಾಶ್ವತ. ಇದು ಅಭಿವ್ಯಕ್ತವಾಗಿದೆ, ಸ್ವಲ್ಪ ಕಾಲ ಇರುತ್ತದೆ, ಉಪವಸ್ತುಗಳನ್ನು ಸೃಷ್ಟಿಸುತ್ತದೆ, ಕ್ಷಯಿಸುತ್ತದೆ ಮತ್ತು ಮಾಯವಾಗುತ್ತದೆ, ಇದು ಈ ಜಗತ್ತಿನ ನಿಯಮ. ಈ ದೇಹವನ್ನೇ ತೆಗೆದುಕೊಳ್ಳಬಹುದು, ಒಂದು ಹಣ್ಣನ್ನೇ ತೆಗೆದುಕೊಳ್ಳಬಹುದು, ಇಲ್ಲಿ ಸೃಷ್ಟಿಯಾಗಿರುವ ಎಲ್ಲದಕ್ಕೂ ಕೊನೆಯಿದೆ. ಈ ನಶ್ವರ ಜಗತ್ತಿನಾಚೆ ಬೇರೊಂದು ಜಗತ್ತಿದೆ, ಆದ ಬಗ್ಗೆ ಮಾಹಿತಿ ಕೂಡ ಇದೆ. ಪರಸ್ ತಸ್ಮಾತ್ ತು ಭಾವಃ ಅನ್ಯಃ (ಭ ಗೀತೆ 8.20), ಇನ್ನೊಂದು ರೀತಿಯ ಪ್ರಕೃತಿಯಿದೆ, ಅದು ಶಾಶ್ವತವಾದುದು, ಸನಾತನವಾದುದು. ಮತ್ತು ಜೀವಿಗಳು ಕೂಡ ಸನಾತನವಾದುದು. ಮಾಮೈವಾಂಶೋ ಜೀವ ಭೂತಾಹ ಜೀವ ಲೋಕೇ ಸನಾತನಃ (ಭ ಗೀತೆ 15.7). ಸನಾತನ ಎಂದರೆ ಶಾಶ್ವತ. 11ನೇ ಅಧ್ಯಾಯದಲ್ಲಿ ಭಗವಂತನನ್ನು ಸನಾತನ ಎನ್ನಲಾಗಿದೆ. ನಮಗೆ ಭಗವಂತನ ಜೊತೆ ನಿಕಟವಾದ ಬಾಂದವ್ಯವಿದೆ, ನಾವೆಲ್ಲ ಗುಣಾತ್ಮಕವಾಗಿ ಒಂದೇ. ಸನಾತನವಾದ ಧಾಮ, ಸನಾತನವಾದ ಪರಮ ಪುರುಷ ಹಾಗೂ ಸನಾತನವಾದ ಜೀವಿಗಳು. ಗುಣಾತ್ಮಕವಾಗಿ ಎಲ್ಲರೂ ಒಂದೇ. ಭಗವದ್ಗೀತೆಯ ಉದ್ದೇಶ ನಮ್ಮ ಸನಾಥನವೃತ್ತಿಯನ್ನು ಪುನಶ್ಚೇತನಗೊಳಿಸುವುದೇ ಆಗಿದೆ. ಇದನ್ನು ಸನಾತನ ಧರ್ಮವೆನ್ನುತ್ತಾರೆ. ಜೀವಿಗಳ ಶಾಶ್ವತ ವೃತ್ತಿ. ನಾವು ಈಗ ತಾತ್ಕಾಲಿಕವಾಗಿ ಬೇರೆ ಬೇರೆ ಕ್ರಿಯೆಗಳಲ್ಲಿ ನಿರತರಾಗಿದ್ದೇವೆ. ನಾವು ಯಾವಾಗ ಈ ಅಶಾಶ್ವತ ಕ್ರಿಯೆಗಳನ್ನು ಬಿಡುತ್ತೇವೋ, ಸರ್ವ ಧರ್ಮಾನ್ ಪರಿತ್ಯಾಜ್ಯ (ಭ ಗೀತೆ 18.66) ಮತ್ತು ಭಗವಂತನ ಇಚ್ಛೆಗೆ ಅನುಸಾರವಾಗಿ ಕೆಲಸ ಮಾಡುತ್ತೇವೋ ಆಗ ಅದು ಪರಿಶುದ್ಧ ಜೀವನ.