KN/Prabhupada 1080 - ಕೃಷ್ಣನೊಬ್ಬನೇ ದೇವರು. ಕೃಷ್ಣ ಪಂಥೀಯ ದೇವರಲ್ಲ



660219-20 - Lecture BG Introduction - New York

ಭಗವದ್ಗೀತೆಯ ಕಡೆಯ ಭಾಗದಲ್ಲಿ ಕೃಷ್ಣನು ಉಚ್ಚಸ್ವರದಲ್ಲಿ ಹೀಗೆ ಹೇಳುತ್ತಾನೆ. ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ (ಭ ಗೀತೆ 18.66) ಭಗವಂತ ಹೊಣೆಯನ್ನು ವಹಿಸಿಕೊಳ್ಳುತ್ತಾನೆ. ಭಗವಂತನಿಗೆ ಯಾರು ಶರಣಾಗುತ್ತಾರೋ ಅವರನ್ನು ಪಾಪಕರ್ಮಗಳ ಫಲದಿಂದ ಕಾಪಾಡುವ ಹೊಣೆಯನ್ನು ಭಗವಂತ ತೆಗೆದುಕೊಳ್ಳುತ್ತಾನೆ. ಮಲಿನೇ ಮೋಚನಂ ಪುಂಸಾ ಜಲಸ್ನಾನಂ ದಿನೇ ದಿನೇ ಸಕೃತ್ ಗೀತಾಮೃತ ಸ್ನಾನಂ ಸಂಸಾರ ಮಲ ನಾಶನಮ್ ಒಬ್ಬನು ಪ್ರತಿನಿತ್ಯ ನೀರಿನಲ್ಲಿ ಸ್ನಾನಮಾಡಿ ತನ್ನನ್ನು ಶುದ್ಧಿಗೊಳಿಸಬಹುದು, ಆದರೆ ಭಗವದ್ಗೀತೆಯ ಪವಿತ್ರ ಗಂಗಾಜಾಲದಲ್ಲಿ ಒಮ್ಮೆಯಾದರೂ ಸ್ನಾನ ಮಾಡಿದರೆ ಅಂತಹವನ ಐಹಿಕ ಜೀವನದ ಕೊಳೆಯೆಲ್ಲಾ ಸಂಪೂರ್ಣವಾಗಿ ನಾಶವಾಗುತ್ತದೆ. ಗೀತಾ ಸು-ಗೀತಾ ಕರ್ತವ್ಯಾ ಕಿಮನ್ಯೆ ಶಾಸ್ತ್ರ ವಿಸ್ತರೈ ಯಾ ಸ್ವಯಂ ಪದ್ಮನಾಭಾಸ್ಯ ಮುಖಪದ್ಮಾದ್ ವಿನಿಸ್ಮೃತಾ ಭಗವದ್ಗೀತೆಯನ್ನು ದೇವೋತ್ತಮ ಪರಮ ಪುರುಷನೇ ಹೇಳಿರುವುದರಿಂದ ಜನರು ಬೇರೆ ಯಾವುದೇ ವೈಧಿಕ ರಚನೆಯನ್ನು ಓದುವ ಅಗತ್ಯವಿಲ್ಲ. ಗಮನವಿಟ್ಟು ಭಗವದ್ಗೀತೆಯನ್ನು ಸದಾ ಕೇಳಿದರೆ ಮತ್ತು ಓದಿದರೆ, ಗೀತಾ ಸು-ಗೀತಾ ಕರ್ತವ್ಯಾ ಮತ್ತು ಎಲ್ಲಾ ರೀತಿಯಲ್ಲೂ ಇದನ್ನು ಅಳವಡಿಸಿಕೊಂಡರೆ ಗೀತಾ ಸು-ಗೀತಾ ಕರ್ತವ್ಯಾ ಕಿಮನ್ಯೆ ಶಾಸ್ತ್ರ ವಿಸ್ತರೈ ಇಂದಿನ ಯುಗದಲ್ಲಿ ಜನರು ಎಷ್ಟೊಂದು ಕಾರ್ಯಗಳಲ್ಲಿ ತಲ್ಲೀನರಾಗಿದ್ದಾರೆಂದರೆ ಅವರಿಗೆ ಎಲ್ಲಾ ವೈದಿಕ ಸಾಹಿತ್ಯವನ್ನು ಓದಲು ಸಾಧ್ಯವಿಲ್ಲ. ಈ ಒಂದು ಕೃತಿ ಸಾಕು, ಏಕೆಂದರೆ ಇದು ವೈದಿಕ ಸಾಹಿತ್ಯದ ಸಾರ. ಇದನ್ನು ದೇವೋತ್ತಮ ಪರಮ ಪುರುಷನೇ ಹೇಳಿದ್ದಾನೆ. ಭಾರತಾಮೃತ ಸರ್ವಸ್ವಂ ವಿಷ್ಣುವಕ್ತ್ರಾದ್ವಿನಿಃ ಸ್ಮೃತಂ ಗೀತಾಗಂಗೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ ಗಂಗಾಜಲವನ್ನು ಕುಡಿದವನಿಗೆ ಮುಕ್ತಿಯು ದೊರೆಯುತ್ತದೆ ಎಂದ ಮೇಲೆ ಭಗವದ್ಗೀತೆಯ ಅಮೃತವನ್ನು ಕುಡಿದವನ ವಿಷಯ ಹೇಳುವುದೇನಿದೆ? ಭಗವದ್ಗೀತೆಯು ಮಹಾಭಾರತದ ಅಮೃತ ಸರ್ವಸ್ವ. ಕೃಷ್ಣನೇ ಮೂಲ ವಿಷ್ಣು. ವಿಷ್ಣುವಕ್ತ್ರಾದ್ವಿನಿಃ ಸ್ಮೃತಂ ಗೀತೆಯು ದೇವೋತ್ತಮ ಪರಮ ಪುರುಷನ ಬಾಯಿಂದ ಬಂದಿದೆ. ಗಂಗೆಯು ಭಗವಂತನ ಪಾದಕಮಲಗಳಿಂದ ಹರಿದಿದೆ ಎಂದು ಹೇಳಲಾಗಿದೆ. ಗೀತೆಯು ಭಗವಂತನ ಬಾಯಿಂದ ಬಂದಿದೆ. ಭಗವಂತನ ಬಾಯಿಗೂ ಪಾದಗಳಿಗೂ ವ್ಯತ್ಯಾಸವಿಲ್ಲ. ಆದರೂ ನಿಷ್ಪಕ್ಷಪಾತದಿಂದ ನೋಡಿದಾಗ ಭಗವದ್ಗೀತೆಯು ಗಂಗಾಜಲಕ್ಕಿಂತ ಮಹತ್ವದ್ದು ಎಂದು ಅರಿಯಬಹುದು. ಸರ್ವೊಪನಿಷದೋ ಗಾವೋ ದೋಗ್ಡ ಗೋಪಾಲ ನಂದನ ಪಾರ್ಥೊ ವತ್ಸಃ ಸುಧಿರ್ಭೋಕ್ತಾ ದುಗ್ದಂ ಗೀತಾಮೃತಂ ಮಹತ್. ಗೀತೋಪನಿಷತ್ ಗೋವಿನಂತಿದೆ. ಗೋಪಾಲನಂದನನಾಗಿರುವ ಕೃಷ್ಣನು ಈ ಹಸುವಿನ ಹಾಲನ್ನು ಕರೆಯುತ್ತಿದ್ದಾನೆ. ಸರ್ವೊಪನಿಷದೋ, ಗೀತೆಯು ಎಲ್ಲಾ ಉಪನಿಷತ್ ಗಳ ಸಾರವಾಗಿದೆ. ಗೋಪಾಲನಂದನನಾಗಿರುವ ಕೃಷ್ಣನು ಈ ಹಸುವಿನ ಹಾಲನ್ನು ಕರೆಯುತ್ತಿದ್ದಾನೆ. ಪಾರ್ಥೊ ವತ್ಸಃ, ಅರ್ಜುನನು ಕರುವಿನಂತಿದ್ದಾನೆ. ಸುಧಿರ್ಭೋಕ್ತಾ, ಎಲ್ಲಾ ವಿದ್ವಾಂಸರೂ ಪರಿಶುದ್ಧ ಭಕ್ತರೂ ಈ ಹಾಲಿನ ಅಮೃತವನ್ನು ಕುಡಿಯುತ್ತಾರೆ. ಸುಧಿರ್ಭೋಕ್ತಾ ದುಗ್ದಂ ಗೀತಾಮೃತಂ ಮಹತ್. ಗೀತಾಮೃತ ವಿದ್ವಾಂಸರಾದ ಭಕ್ತರಿಗಾಗಿ ಇದೆ. ಏಕಂ ಶಾಸ್ತ್ರಂ ದೇವಕೀಪುತ್ರ ಗೀತಂ ಏಕೋ ದೇವೋ ದೇವಕೀಪುತ್ರ ಏವ ಏಕೋ ಮಂತ್ರಸ್ ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ಏಕಂ ತಸ್ಯ ದೇವಸ್ಯ ಸೇವಾ ಈಗ ನಾವೆಲ್ಲಾ ಗೀತೆಯಿಂದ ಪಾಠವನ್ನು ಕಲಿಯಬೇಕು. ಏಕಂ ಶಾಸ್ತ್ರಂ ದೇವಕೀಪುತ್ರ ಗೀತಂ ಇಡೀ ಜಗತ್ತಿಗೆ ಒಂದೇ ಒಂದು ಧರ್ಮಗ್ರಂಥ ಭಗವದ್ಗೀತೆ ಇರಲಿ. ಜಗತ್ತಿನ ಎಲ್ಲಾ ಜನರಿಗೂ ಈ ಭಗವದ್ಗೀತೆ ಇರಲಿ. ಏಕೋ ದೇವೋ ದೇವಕೀಪುತ್ರ ಏವ, ಇಡೀ ಜಗತ್ತಿಗೆ ಒಬ್ಬನೇ ದೇವರು - ಶ್ರೀ ಕೃಷ್ಣ ಇರಲಿ. ಮತ್ತು ಏಕೋ ಮಂತ್ರಸ್ ತಸ್ಯ ನಾಮಾನಿ ಒಂದೇ ಮಂತ್ರ, ಒಂದೇ ಪ್ರಾರ್ಥನೆ ಇರಲಿ ಅವನ ನಾಮ ಸಂಕೀರ್ತನೆ - ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇಹರೇ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಏಕೋ ಮಂತ್ರಸ್ ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ಒಂದೇ ಕೆಲಸವಿರಲಿ, ಅದು ದೇವೋತ್ತಮ ಪರಮ ಪುರುಷನ ಸೇವೆ. ಇಂದಿನ ದಿನದಲ್ಲಿ ಜನರು ಒಂದು ಧರ್ಮಶಾಸ್ತ್ರ, ಒಬ್ಬ ದೇವರು, ಒಂದು ಧರ್ಮ, ಒಂದು ಕಾರ್ಯ ಇವು ಬೇಕೆಂದು ಹಂಬಲಿಸುತ್ತಾರೆ. ಇದನ್ನು ಗೀತೆಯಲ್ಲಿ ಸಾರಾಂಶವಾಗಿ ನೀಡಲಾಗಿದೆ. ಕೃಷ್ಣನೊಬ್ಬನೇ ದೇವರು. ಕೃಷ್ಣ ಯಾವುದೋ ಪಂಥಕ್ಕೆ ಸೇರಿದ ದೇವರಲ್ಲ. ಕೃಷ್ಣ ಎಂದರೆ ಅತ್ಯುನ್ನತ ಆನಂದ.