KN/Prabhupada 1077 - ಭಗವಂತ ಪೂರ್ಣವ್ಯಕ್ತಿಯಯಾದುದರಿಂದ ಅವನಿಗೂ ಅವನ ನಾಮಗಳಿಗೂ ವ್ಯತ್ಯಾಸವಿಲ್ಲ



660219-20 - Lecture BG Introduction - New York

ಶ್ರೀಮದ್ ಭಾಗವತವನ್ನು ಭಾಷ್ಯೋಯಂ ಬ್ರಹ್ಮಸೂತ್ರಾಣಾಂ ಎನ್ನುತ್ತಾರೆ. ಅದು ವೇದಾಂತ ಸೂತ್ರದ ಮೇಲಿನ ಸಹಜ ವ್ಯಾಖ್ಯಾನ. ನಾವು ನಮ್ಮ ಯೋಚನೆಯನ್ನು ಈ ಕೃತಿಗಳ ಮೇಲೆ ವರ್ಗಾಯಿಸಿದರೆ, ಸದಾ ತದ್ ಭಾವ ಭಾವಿತಾ ಸದಾ ತದ್ ಭಾವ ಭಾವಿತಾ, (ಭ ಗೀತೆ 8.6), ಯಾರು ಯಾವಾಗಲೂ ತೊಡಗಿಸಿಕೊಂಡಿರುತ್ತಾರೋ ಲೌಕಿಕರು ವೃತ್ತ ಪತ್ರಿಕೆಗಳನ್ನೂ ನಿಯತಕಾಲಿಕೆಗಳನ್ನೂ, ಮತ್ತಿತ್ತರ ಎಷ್ಟೋ ಲೌಕಿಕ ಬರಹಗಳನ್ನೂ ಓದುವುದರಲ್ಲಿ ಮನಸ್ಸನ್ನು ತೊಡಗಿಸುವಂತೆ, ಇವು ಯೋಚನೆಯ ಬೇರೆ ಬೇರೆ ಹಂತಗಳು. ಹಾಗೆಯೇ ನಮ್ಮನ್ನು ನಾವು ವೇದವ್ಯಾಸರು ನಮಗೆ ಕೊಟ್ಟಿರುವ ಈ ಕೃತಿಗಳನ್ನು ಓದಲು ತೊಡಗಿಸಿಕೊಂಡರೆ ಆಗ ಮರಣ ಕಾಲದಲ್ಲಿ ಭಗವಂತನನ್ನು ಸ್ಮರಿಸುವುದು ನಮಗೆ ಸಾಧ್ಯವಾಗುತ್ತದೆ. ಇದು ಭಗವಂತ ಸೂಚಿಸಿರುವ ಮಾರ್ಗ. ಇದು ವಾಸ್ತವ. ನಾಸ್ತಿ ಅತ್ರ ಸಂಶಯಃ, ಇದರಲ್ಲಿ ಸಂದೇಹವಿಲ್ಲ. ತಸ್ಮಾತ್ ಸರ್ವೇಶು ಕಾಲೇಷು ಮಾಂ ಅನುಸ್ಮರ ಯುಧ್ಯ ಚ (ಭ ಗೀತೆ 8.7) ಭಗವಂತ ಅರ್ಜುನನಿಗೆ ಮಾಂ ಅನುಸ್ಮರ ಯುಧ್ಯ ಚ ಎಂದು ಸಲಹೆ ನೀಡಿದ್ದಾನೆ. ಭಗವಂತ ನೀನು ನನ್ನನ್ನು ಸ್ಮರಿಸಬೇಕು, ನಿನ್ನ ವೃತ್ತಿ ಕರ್ತವ್ಯವನ್ನು ಬಿಟ್ಟುಬಿಡು ಎಂದು ಹೇಳಿಲ್ಲ. ಇಲ್ಲ. ಕಾರ್ಯಸಾಧ್ಯವಲ್ಲದಿರುವುದನ್ನು ಭಗವಂತ ಸೂಚಿಸುವುದೇ ಇಲ್ಲ. ಐಹಿಕ ಜಗತ್ತಿನಲ್ಲಿ ದೇಹಪಾಲನೆಗಾಗಿ ಮನುಷ್ಯನು ಕೆಲಸ ಮಾಡಲೇ ಬೇಕು. ಕೆಲಸಕ್ಕೆ ಅನುಗುಣವಾಗಿ ಮಾನವ ಸಮಾಜವನ್ನು ನಾಲ್ಕು ವರ್ಗಗಳನ್ನಾಗಿ ವಿಭಾಗಿಸಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಬುದ್ಧಿವಂತ ವರ್ಗವು ಒಂದು ರೀತಿಯಲ್ಲಿ ಕೆಲಸ ಮಾಡುತ್ತದೆ. ಆಡಳಿತ ವರ್ಗವು ಇನ್ನೊಂದು ರೀತಿಯಲ್ಲಿ ಕೆಲಸ ಮಾಡುತ್ತದೆ. ವ್ಯಾಪಾರಿಗಳು ಮತ್ತು ಉತ್ಪಾದಕರು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಮತ್ತು ಕಾರ್ಮಿಕರು ಬೇರೆ ರೀತಿಯ ಕಾರ್ಯದಲ್ಲಿ ತೊಡಗಿದ್ದಾರೆ. ಮಾನವ ಸಮಾಜದಲ್ಲಿ ಒಬ್ಬ ಕಾರ್ಮಿಕನಾಗಿರಬಹುದು, ವ್ಯಾಪಾರಿಯಾಗಿರಬಹುದು, ಆಡಳಿತಗಾರನಾಗಿರಬಹುದು, ರೈತನಾಗಿರಬಹುದು, ಅಥವಾ ಅತ್ಯುಚ್ಚ ವರ್ಗಕ್ಕೆ ಸೇರಿದ ಸಾಹಿತಿ, ವಿಜ್ಞಾನಿ, ಧರ್ಮಶಾಸ್ತ್ರಜ್ಞನಾಗಿರಬಹುದು ಆದರೆ ಎಲ್ಲರೂ ಜೀವನ ನಿರ್ವಹಣೆಗಾಗಿ ಕೆಲಸ ಮಾಡಲೇಬೇಕು. ಆದ್ದರಿಂದ ಭಗವಂತ ನಿನ್ನ ವೃತ್ತಿಯನ್ನು ಬಿಡಬೇಕಾಗಿಲ್ಲ, ಅದರ ಜೊತೆ ಅದೇ ಸಮಯದಲ್ಲಿ ನನ್ನನ್ನು ಸ್ಮರಿಸು ಎನ್ನುತ್ತಾನೆ, ಮಾಂ ಅನುಸ್ಮರ ಅದು ನಮ್ಮನ್ನು ಮರಣ ಕಾಲದಲ್ಲಿ ಕೃಷ್ಣನನ್ನು ಸ್ಮರಿಸುವಂತೆ ಮಾಡುತ್ತದೆ. ಆದರೆ ಜೀವನ ನಿರ್ವಹಣೆಗಾಗಿ ಶ್ರಮಿಸುತ್ತಿರುವಾಗ ನನ್ನನ್ನು ಸ್ಮರಿಸುವ ಅಭ್ಯಾಸವನ್ನು ನೀನು ಮಾಡಿಲ್ಲವೆಂದರೆ, ಮರಣಕಾಲದಲ್ಲಿ ಕೃಷ್ಣನನ್ನು ಸ್ಮರಿಸುವುದು ಸಾಧ್ಯವಿಲ್ಲ. ಚೈತನ್ಯ ಮಹಾಪ್ರಭುಗಳು ಇದನ್ನೇ ಉಪದೇಶಿಸಿದ್ದಾರೆ. ಕೀರ್ತನಿಯ ಸದಾ ಹರಿ (ಚೈ ಚ ಆದಿ 17.31) ಕೀರ್ತನಿಯ ಸದಾ. ಮನುಷ್ಯನು ಭಗವಂತನ ನಾಮವನ್ನು ಸದಾ ಜಪಿಸುವ ಅಭ್ಯಾಸವನ್ನು ಮಾಡಬೇಕು. ಭಗವಂತನ ನಾಮ ಭಗವಂತ ಅಭಿನ್ನ. ಇಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ನನನ್ನು ಸ್ಮರಿಸು, ಮಾಂ ಅನುಸ್ಮರ ಎಂದು ಉಪದೇಶಿಸುತ್ತಾನೆ. ಚೈತನ್ಯ ಮಹಾಪ್ರಭುಗಳು ಸದಾ ಭಗವಂತ ನಾಮಗಳನ್ನು ಹೇಳುವ ಉಪದೇಶ ನೀಡಿದ್ದಾರೆ. ಕೃಷ್ಣ ನನ್ನನ್ನು ಸ್ಮರಿಸು ಎನ್ನುತ್ತಾನೆ. ಚೈತನ್ಯ ಮಹಾಪ್ರಭುಗಳು ಕೃಷ್ಣನ ನಾಮವನ್ನು ಸದಾ ಜಪಿಸಿ ಎನ್ನುತ್ತಾರೆ. ಕೃಷ್ಣನಿಗೂ ಕೃಷ್ಣನ ನಾಮಗಳಿಗೂ ವ್ಯತ್ಯಾಸವಿಲ್ಲ. ಪರಿಪೂರ್ಣ ನೆಲೆಯಲ್ಲಿ ನಾಮ ಮತ್ತು ವ್ಯಕ್ತಿಗೆ ವ್ಯತ್ಯಾಸವಿಲ್ಲ. ಭಗವಂತ ಪರಿಪೂರ್ಣನಾದ್ದರಿಂದ ಅವನ ಹೆಸರಿಗೂ ಅವನಿಗೂ ವ್ಯತ್ಯಾಸವಿಲ್ಲ. ನಾವು ಹಾಗೆ ಅಭ್ಯಾಸ ಮಾಡಬೇಕು. ತಸ್ಮಾತ್ ಸರ್ವೇಶು ಕಾಲೇಷು ಭಗವಂತನನ್ನು 24 ಗಂಟೆಗಳೂ ಸ್ಮರಿಸುವಂತೆ ನಮ್ಮ ಬದುಕಿನ ಕರ್ಮಗಳನ್ನು ರೂಪಿಸಿಕೊಂಡು ಅಭ್ಯಾಸ ಮಾಡಬೇಕು. ಇದು ಹೇಗೆ ಸಾಧ್ಯ? ಹೌದು ಇದು ಸಾಧ್ಯ. ಈ ವಿಷಯದಲ್ಲಿ ಆಚಾರ್ಯರು ಉದಾಹರಣೆಯನ್ನು ಕೊಡುತ್ತಾರೆ. ಮದುವೆಯಾದ ಹೆಂಗಸು ಬೇರೊಬ್ಬನನ್ನು ಪ್ರೀತಿಸುತ್ತಿದ್ದರೆ ಗಂಡನಿದ್ದರೂ ಬೇರೊಬ್ಬರ ಮೇಲೆ ಪ್ರೀತಿ. ಈ ರೀತಿಯ ಪ್ರೀತಿ ಬಹಳ ಬಲವಾದದ್ದು, ಅದನ್ನು ಪರಕೀಯ ರಸ ಎನ್ನುತ್ತಾರೆ. ಗಂಡಸಾಗಲೀ, ಹೆಂಗಸಾಗಲೀ ಒಬ್ಬನಿಗೆ ಹೆಂಡತಿಯನ್ನು ಬಿಟ್ಟು ಬೇರೊಬ್ಬಳ ಮೇಲೆ ಪ್ರೀತಿಯಿದ್ದರೆ ಅಥವಾ ಹೆಂಡತಿಗೆ ಗಂಡನ ಬಿಟ್ಟು ಬೇರೊಬ್ಬನ ಮೇಲೆ ಪ್ರೀತಿಯಿದ್ದರೆ ಅಂತಹ ಪ್ರೀತಿ ಬಹಳ ಬಲವಾದದ್ದು. ಆಚಾರ್ಯರು ಕೆಟ್ಟ ನಡತೆಯ ಹೆಂಗಸಿನ ಉದಾಹರಣೆಯನ್ನು ಕೊಡುತ್ತಾರೆ. ಯಾರಿಗೆ ಬೇರೊಬ್ಬರ ಗಂಡನ ಮೇಲೆ ಪ್ರೀತಿಯಿದೆಯೋ ಅವಳು ಯಾವಾಗಲೂ ಅವರನ್ನು ಕುರಿತು ಯೋಚಿಸಿತ್ತಿರುತ್ತಾಳೆ. ಮತ್ತು ತನ್ನ ಗಂಡನಿಗೆ ಅನುಮಾನ ಬರದಿರಲೆಂದು ತನ್ನ ಮನೆಗೆಲಸವನ್ನು ಇನ್ನೂ ಎಚ್ಚರಿಕೆಯಿಂದ ಮಾಡುತ್ತಾಳೆ. ಯಾವ ರೀತಿಯಲ್ಲಿ ಅವಳು ಮನೆಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರೂ ತನ್ನ ಪ್ರಿಯನನ್ನು ರಾತ್ರಿ ಭೇಟಿಮಾಡುವ ಬಗ್ಗೆ ಯೋಚಿಸುತ್ತಿರುತ್ತಾಳೋ ಅದೇ ರೀತಿ ನಾವು ನಮ್ಮ ಐಹಿಕ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸುತ್ತಾ ಪರಮ ಪ್ರಿಯನಾದ ಶ್ರೀಕೃಷ್ಣನನ್ನು ಸದಾ ಸ್ಮರಿಸುತ್ತಿರಬೇಕು. ಇದು ಸಾಧ್ಯ. ಅದಕ್ಕೆ ಬಲವಾದ ಪ್ರೀತಿಯ ಪ್ರಜ್ಞೆ ಬೇಕು.